ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳು ಬೆಳಗಿಸಿದ ಹಸಿ ಶುಂಠಿ

ಹೊಸ ಕೃಷಿ ಪದ್ಧತಿಗಳ ಕಡೆಗೆ ಗಮನ ಹರಿಸಲು ಸಲಹೆ
Last Updated 20 ಜನವರಿ 2023, 4:08 IST
ಅಕ್ಷರ ಗಾತ್ರ

ಕುಶಾಲನಗರ: ಕಳೆದ 25 ವರ್ಷಗಳಿಂದ ಶುಂಠಿ ಕೃಷಿಯನ್ನೇ ಕೈಗೊಂಡು ಯಶಸ್ವಿಯಾದವರು ತಾಲ್ಲೂಕಿನ ಹರಸಿನಗುಪ್ಪೆಯ ಪ್ರಗತಿಪರ ರೈತ ಎಂ.ಟಿ.ಬೇಬಿ.

ವಿರಾಜಪೇಟೆ ತಾಲ್ಲೂಕಿನ ಬಿಳೂರು ಗ್ರಾಮದಲ್ಲಿ ಜನಿಸಿದ ಅವರು 9ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಮೊದಲಿಗೆ ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ನಂತರ ತಮ್ಮ ತಂದೆಗೆ ಇದ್ದ 60 ಸೆಂಟ್ ಜಾಗದಲ್ಲಿ ಕೇರಳದ‌ ವಾಣಿಜ್ಯ ಬೆಳೆಯಾದ ಶುಂಠಿ ಕೃಷಿ ಆರಂಭಿಸಿದರು.

ನಂತರ ಅರಸಿನಗುಪ್ಪೆ ಗ್ರಾಮದಲ್ಲಿ 2001ರಲ್ಲಿ 18 ಎಕರೆ ಜಮೀನು ಖರೀದಿಸಿ ಅಲ್ಲಿಯೂ ಶುಂಠಿ ಬೆಳೆದರು. ಗಿಡಗಳು ಬೆಳೆದಿದ್ದ ಭೂಮಿಯನ್ನು ಸಮತಟ್ಟು ಮಾಡಿ ಸಮೃದ್ಧವಾಗಿ ಬೆಣ್ಣೆಹಣ್ಣಿನ ಗಿಡಗಳನ್ನು ಬೆಳೆದರು. ಜೊತೆಗೆ ಕಾಫಿ ಗಿಡಗಳನ್ನು ಬೆಳೆಸಿದರು.

ಶುಂಠಿ ಕೃಷಿ ಬೆಳೆಯಲು ಆರಂಭಿಸಿದ ಬೇಬಿ ಪ್ರಾರಂಭದ ನಾಲ್ಕಾರು ವರ್ಷ ಹಣ ಕಳೆದುಕೊಂಡರು. ಆದರೂ, ಬಿಡದೇ ಈ ಬೆಳೆಯಲ್ಲಿ ಅನುಭವಗಳನ್ನು ಪಡೆದು ನಂತರ ಬೇರೆಯವರ ಜಮೀನುಗಳನ್ನು ಗುತ್ತಿಗೆಗೆ ಪಡೆದು ಶುಂಠಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಅನುಭವಗಳು ಮೈಗೂಡಿದಂತೆಲ್ಲಾ ಬೇಬಿ ಅವರು ಶುಂಠಿ ಕೃಷಿಯಲ್ಲಿ ಹಿಡಿತ ಸಾಧಿಸಿದರು. ಮಾರುಕಟ್ಟೆ ಬೆಲೆಯ ಏರಿಳಿತದಲ್ಲೂ ಮುನ್ನುಗ್ಗುತ್ತಿರುವ ಇವರ ಧೈರ್ಯ ಗುಣ ಹಲವರಿಗೆ ಅಚ್ಚರಿ ಉಂಟು ಮಾಡಿದೆ. ಸಾಕಷ್ಟು ಹಣವನ್ನು ಗಳಿಸಿದ್ದರೂ ಹಾಗೂ ಕಳೆದುಕೊಂಡಿದ್ದರೂ ಶುಂಠಿ ಕೃಷಿಯನ್ನು ಬಿಡದೆ ಸಾಗುವಳಿ ಮಾಡುತ್ತ ಬರುತ್ತಿದ್ದಾರೆ.

ಕೊಡಗು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಹಲವು ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಪ್ರತಿವರ್ಷ ಶುಂಠಿ ಬೇಸಾಯ ಮಾಡುತ್ತಿದ್ದಾರೆ. ಬೀಜೋಪಚಾರ, ಭೂಮಿ ಸಿದ್ಧತೆ, ಕಳೆ ನಿರ್ವಹಣೆ, ನೀಡಬೇಕಾದ‌ ಗೊಬ್ಬರ, ರೋಗ, ಕೀಟಗಳ ಬಾಧೆ ಬಗ್ಗೆ ಸರಿಯಾದ ಅರಿವು ಹೊಂದಿರುವ ಬೇಬಿ ಅವರು ತಮ್ಮ ಜಮೀನಿಗೆ ಹತ್ತಾರು ವರ್ಷಗಳಿಂದ ಕೋಳಿಯ ಗೊಬ್ಬರವನ್ನೇ ಬಳಸುತ್ತಿದ್ದಾರೆ.

ಬೀಜ ಬಿತ್ತನೆಗೆ ಮುನ್ನ ಎಕರೆಗೆ 150 ಚೀಲ ಕೋಳಿ ಗೊಬ್ಬರವನ್ನು ಹಾಕಿದ ಬಳಿಕ 10 ದಿನಗಳ ನಂತರ ವೇಸ್ಟ್‌ ಡೀಕಾಂಪೋಸರ್ ಸಿಂಪಡಿಸುತ್ತಾರೆ. 2020ರಲ್ಲಿ 96 ಎಕರೆಯಲ್ಲಿ ಶುಂಠಿ ಕೃಷಿ ಮಾಡಿದ್ದರು. 2019ರಲ್ಲಿ 42 ಎಕರೆಯಲ್ಲಿ ಬೆಳೆದಿದ್ದ ಶುಂಠಿಗೆ 60 ಕೆ.ಜಿ ಚೀಲಕ್ಕೆ ₹ 6,300 ಬೆಲೆ ಸಿಕ್ಕಿತ್ತು. 1996ರಲ್ಲಿ ಎಕರೆಗೆ ₹ 56 ಸಾವಿರ ಶುಂಠಿ‌ ಬೆಳೆಯಲು ವೆಚ್ಚವಾಗುತ್ತಿತ್ತು. ಆದರೆ, ಈಗ ₹ 4 ರಿಂದ 5 ಲಕ್ಷ ರೂಪಾಯಿ ತಗಲುತ್ತದೆ ಎನ್ನುತ್ತಾರೆ ಅವರು. ನಿರಂತರವಾಗಿ ಬೇಬಿ ಅವರು ಶುಂಠಿ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರಿಶ್ರಮ ಹಾಕಿದ ಪರಿಣಾಮವಾಗಿ ಇದೀಗ ಆರ್ಥಿಕವಾಗಿ ಬೆಳವಣಿಗೆ ಹೊಂದಿದ್ದಾರೆ.

ಭತ್ತಕ್ಕೆ ದೊರೆಯದ ವೈಜ್ಞಾನಿಕ ಬೆಲೆಯಿಂದ ರೈತರ ಜೀವನ ಸ್ಥಿತಿ ತುಂಬ ಶೋಚನೀಯವಾಗಿದೆ. ಜತೆಗೆ ಭತ್ತ ಕೃಷಿಗೆ ಖರ್ಚು ಅಧಿಕ ಹಾಗೂ ಕಾರ್ಮಿಕರ‌ ಸಮಸ್ಯೆ ರೈತರನ್ನು ಕಂಗಾಲು ಮಾಡಿದೆ. ಇದರಿಂದ ಹೊರಬರಲು ಅನಿವಾರ್ಯವಾಗಿ ಜಿಲ್ಲೆಯ ರೈತರು ಶುಂಠಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT