ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್: ಮೇ ತಿಂಗಳಲ್ಲೇ ಕೋರಲ್ ಕ್ರೀಪರ್ ಹೂಗಳ ವೈಭವ

ಕೃಷ್ಣಮೂರ್ತಿ
Published 26 ಮೇ 2024, 6:02 IST
Last Updated 26 ಮೇ 2024, 6:02 IST
ಅಕ್ಷರ ಗಾತ್ರ

ಕೆಜಿಎಫ್: ಮಳೆಗಾಲ ಬಂತೆಂದರೆ ಮೈನಿಂಗ್ ಪ್ರದೇಶದಲ್ಲಿ ಕೋರಲ್ ಕ್ರೀಪರ್ ಜಾತಿ ಬಳ್ಳಿಯ ಹೂ ಹಾಗೂ ನಗರದ ಹೊರಭಾಗದಲ್ಲಿ ಹಳದಿ ಬಣ್ಣದ ಲಿಲ್ಲಿ ಹೂಗಳ ಸಾಮ್ರಾಜ್ಯವೇ ಕಾಣುತ್ತದೆ.

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಿಜಿಎಂಎಲ್‌ ಮೈನಿಂಗ್ ಪ್ರದೇಶದಲ್ಲಿ ಗೋಡೆಗಳಲ್ಲಿ, ಗಣಿಯ ಬೇಲಿಗಳಲ್ಲಿ ಅರಳಿದ ಹೂವುಗಳು ಮನಸ್ಸನ್ನು ಸೆಳೆಯುತ್ತಿವೆ. ಚಾಂಪಿಯನ್ ರೀಫ್ಸ್, ಮಾರಿಕುಪ್ಪಂ ಪ್ರದೇಶದಲ್ಲಿ ಈ ಜಾತಿಯ ಹೂವುಗಳನ್ನು ಬಿಡುವ ಬಳ್ಳಿಗಳನ್ನು ನೋಡಬಹುದು. ವರ್ಷವಿಡೀ ಗಿಡದ ಹಸಿರು ಭಾಗ ನೋಡುಗರಿಗೆ ಕಾಣುತ್ತದೆ. ಆದರೆ, ಮಳೆಗಾಲದಲ್ಲಿ ಹೂವುಗಳು ಎಲೆಗಳನ್ನೇ ಮುಚ್ಚಿ ಬಿಡುತ್ತವೆ. ಅಷ್ಟೊಂದು ದಟ್ಟವಾಗಿ ಹೂವುಗಳು ಅರಳುತ್ತವೆ.

ಮೊದಲು ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿದ್ದಾಗ, ಈ ಬಳ್ಳಿಗಳನ್ನು ಮನೆಯ ಕಾಂಪೊಂಡಿಗೆ ಉಪಯೋಗಿಸಲಾಗುತ್ತಿತ್ತು. ಗಣಿ ಮುಚ್ಚಿದ ನಂತರ ಇದರ ವ್ಯಾಪ್ತಿ ಹಿಗ್ಗಿದೆ. ಎಲ್ಲೆಡೆ ಕೆಂಪು ಬಣ್ಣದ ಹೂವುಗಳ ರಾಶಿ ಎದ್ದು ಕಾಣುತ್ತಿವೆ. ಗಣಿಯಿಂದ ತೆಗೆದ ಕಲ್ಲುಗಳ ರಾಶಿಯನ್ನು ಕೂಡ ಈ ಬಳ್ಳಿಗಳು ಆಕ್ರಮಿಸಿಕೊಂಡಿವೆ.
ಗಡ್ಡೆಯಿಂದ ಬರುವ ಈ ಬಳ್ಳಿಗೆ ವಿಶೇಷ ಆರೈಕೆ ಏನೂ ಬೇಕಿಲ್ಲ. ಈ ಬಳ್ಳಿಗಳು ಗಿಡಗಳ ಇಲ್ಲವೇ ಇತರ ಮರಗಳ ಅಡಿಯಿಂದ ಬೆಳೆದು ಬರುತ್ತದೆ. ಕುಂಡಗಳಲ್ಲಿ ಬೆಳೆಯುವುದು ಅಪರೂಪ ಎಂದು ತೋಟಗಾರಿಕೆ ತಜ್ಞ ಆಂಜನೇಯ ರೆಡ್ಡಿ ಹೇಳುತ್ತಾರೆ.

ಕೋರಲ್ ಕ್ರೀಪ್ ಜತೆಗೆ ಮಳೆಗಾಲದ ವಿಶೇಷ ಎಂದರೆ ಹಳದಿ ಲಿಲ್ಲಿ. ಮೊದಲು ಮೈನಿಂಗ್ ಪ್ರದೇಶದ ಖಾಲಿ ಜಾಗದಲ್ಲಿ ಕಾಣಸಿಗುತ್ತಿದ್ದ ಲಿಲ್ಲಿ ಹೂಗಳು ನಗರದ ಹೊರವಲಯಕ್ಕೆ ತಮ್ಮ ವಾಸವನ್ನು ವರ್ಗಾಯಿಸಿಕೊಂಡಂತೆ ಕಾಣುತ್ತದೆ. ಹೊರವಲಯದ ಕೃಷಿ ಭೂಮಿಯಲ್ಲಿ, ಇಲ್ಲವೇ ನೀರು ಜಿನುಗುತ್ತಿರುವ ಪ್ರದೇಶದಲ್ಲಿ ಗುಂಪು ಗುಂಪಾಗಿ ಬೆಳೆಯುತ್ತದೆ. ಘಟ್ಟಕಾಮಧೇನಹಳ್ಳಿ, ಪಿಚ್ಚಹಳ್ಳಿ, ಬಂಗಾರಪೇಟೆ ರಸ್ತೆಗಳ ಕೃಷಿ ಭೂಮಿಯಲ್ಲಿ ಯಥೇಚ್ಚವಾದ ಲಿಲ್ಲಿ ಹೂಗಳು ಎರಡು ತಿಂಗಳ ಕಾಲ ತಮ್ಮ ಯೌವನವನ್ನು ನೋಡುಗರಿಗೆ ತೋರಿಸುತ್ತವೆ. ಟುಲಿಪ್ ರೀತಿಯ ಹೂವುಗಳ ಕಣ್ಣಿಗೆ ಮುದ ಕೊಡುತ್ತದೆ.

ಗಡ್ಡೆಯಲ್ಲಿ ಬೆಳೆಯುವ ಲಿಲ್ಲಿಯಲ್ಲಿ ಹಳದಿ ಜತೆಗೆ ಬಿಳಿ ಮತ್ತು ಕೆಂಪು ಬಣ್ಣದ ಲಿಲ್ಲಿಗಳು ಕೂಡ ಇವೆ. ಹಳದಿ ಸ್ವಾಭಾವಿಕವಾಗಿ ಜಮೀನಿನಲ್ಲಿ ಬೆಳೆದರೆ, ಇತರೆ ಬಣ್ಣದ ಹೂವುಗಳನ್ನು ಕುಂಡಗಳಲ್ಲಿ ಬೆಳೆಸಬೇಕು.

ಲಿಲ್ಲಿ ಹೂವಿನ ಗಡ್ಡೆಗಳನ್ನು ಸ್ಥಳೀಯ ತೆಲುಗು ಭಾಷೆಯಲ್ಲಿ ಗೊಡ್ಡುಗೆಡ್ಲು ಎಂದು ಹೇಳುತ್ತಾರೆ. ಗಡ್ಡೆಗಳನ್ನು ಬೇಯಿಸಿ ತಿನ್ನುವುದು ಸಹ ಉಂಟು. ಈ ಗಡ್ಡೆಗಳು ಕಾಡುಹಂದಿ ಸೇರಿದಂತೆ ಇತರ ಗಡ್ಡೆ ಪ್ರಿಯ ಪ್ರಾಣಿಗಳಿಗೆ ಇಷ್ಟ.

ಲಿಲ್ಲಿ ಹೂವುಗಳು ಮಳೆಗಾಲ ಮುಗಿಯುತ್ತಿದ್ದಂತೆಯೇ ಸಂಪೂರ್ಣವಾಗಿ ಮಾಯವಾಗುತ್ತವೆ. ಆದರೆ ಕೋರಲ್ ಕ್ರೀಪರ್ ಆಯಸ್ಸು ಕೊಂಚ ಜಾಸ್ತಿಯೇ ಇದೆ. ಆದರೆ ಬಿಸಿಲು ಜಾಸ್ತಿಯಾಗುತ್ತಿದ್ದಂತೆಯೇ ಎರಡೂ ಬಳ್ಳಿಗಳು ಹೂವುಗಳಿಂದ ವಂಚಿತವಾಗುತ್ತವೆ.

ಚಿನ್ನದ ಗಣಿಯೊಳಗಿಂದ ತೆಗೆದ ಕಲ್ಲುಗಳ ಮೇಲೆ ಹರಡಿರುವ ಕೋರಲ್ ಕ್ರೀಪರ್
ಚಿನ್ನದ ಗಣಿಯೊಳಗಿಂದ ತೆಗೆದ ಕಲ್ಲುಗಳ ಮೇಲೆ ಹರಡಿರುವ ಕೋರಲ್ ಕ್ರೀಪರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT