ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ರಸ್ತೆ ತಿರುವು ನಿರ್ಮಾಣ

ವಾಹನ ಸವಾರರಿಗೆ ಸಂಕಷ್ಟ
ಕೆ.ತ್ಯಾಗರಾಜ್ ಕೊತ್ತೂರು
Published 24 ಜನವರಿ 2024, 5:12 IST
Last Updated 24 ಜನವರಿ 2024, 5:12 IST
ಅಕ್ಷರ ಗಾತ್ರ

ಮುಳಬಾಗಿಲು: ಮುಳಬಾಗಿಲು ಹೊರವಲಯದ ಕೋಲಾರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಿಂದ ನಗರಕ್ಕೆ ಪ್ರವೇಶಿಸಲು ಮದರಸಾ ಹಾಗೂ ಬಾಲಾಜಿ ಭವನದ ಸಮೀಪ ನಿರ್ಮಿಸಿರುವ ತಿರುವು ಅಪಾಯಕಾರಿ ಮತ್ತು ಅವೈಜ್ಞಾನಿಕವಾಗಿದೆ ಎಂಬುದು ವಾಹನ ಸವಾರರ ಆರೋಪವಾಗಿದೆ.

ಕೋಲಾರದ ಕಡೆಯಿಂದ ಬರುವ ರಾಷ್ಟ್ರೀಯ ಹೆದ್ದಾರಿ 75ರಿಂದ ನಗರಕ್ಕೆ ಒಳ ಪ್ರವೇಶಿಸಲು ಸುಮಾರು ಒಂದು ವರ್ಷದ ಹಿಂದೆ ಹಳೆಯ ತಿರುವನ್ನು ಬೇರೆಡೆಗೆ ಬದಲಾಯಿಸಿ ನೂತನ ತಿರುವು ನಿರ್ಮಿಸಲಾಗಿದೆ. ಆದರೆ, ನೂತನ ತಿರುವಿಗೆ ಸರ್ವಿಸ್‌ ರಸ್ತೆ ಇಲ್ಲದೆ ಏಕಾಏಕಿ ಹೆದ್ದಾರಿಯಿಂದಲೇ ನಗರದ ಕಡೆಗೆ ಹೋಗಿ ಬರಲು ತಿರುವು ನಿರ್ಮಿಸಿರುವ ಕಾರಣ ದೊಡ್ಡ ವಾಹನಗಳು ತಿರುಗಿಸುವಾಗ ಬೀಳುವ ರೀತಿ ಬಗ್ಗುತ್ತವೆ. ಜತೆಗೆ ಬರಲು ಹಾಗೂ ಹೋಗಲು ಎರಡೂ ಕಡೆಗಳಿಗೆ ಒಂದೇ ತಿರುವು ಇರುವುದರಿಂದ ಒಂದಕ್ಕೊಂದು ಡಿಕ್ಕಿ ಹೊಡೆದುಕೊಳ್ಳುವ ಸಂಭವ ಇರುತ್ತದೆ ಎಂಬುದು ವಾಹನ ಸವಾರರ ಅಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ನಗರಕ್ಕೆ ಪ್ರವೇಶಿಸಲು ಹೆದ್ದಾರಿಯಿಂದ ಸುಮಾರು 500 ಮೀಟರ್ ಅಂತರದಲ್ಲಿಯೇ ಸರ್ವಿಸ್‌ ರಸ್ತೆ ನಿರ್ಮಿಸಿ ಹೆದ್ದಾರಿಯಿಂದ ತಿರುವನ್ನು ಬೇರ್ಪಡಿಸಿ ಸರ್ವಿಸ್ ರಸ್ತೆ ಮೂಲಕ ಹೆದ್ದಾರಿಯಿಂದ ಮುಳಬಾಗಿಲಿಗೆ ವಾಹನಗಳು ಬರುವಂತೆ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. ಜತೆಗೆ ನಗರದಿಂದ ಕೋಲಾರದ ಕಡೆಗೆ ವಾಹನಗಳು ಹೊರ ಹೋಗಲು ಪ್ರತ್ಯೇಕ ಮಾರ್ಗ ನಿರ್ಮಿಸಬೇಕಾಗಿತ್ತು. ಆದರೆ, ನಿರ್ಮಿಸದ ಕಾರಣ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ.

‌ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಹೆದ್ದಾರಿ ದಾಟಲು ಸಮಯ ವ್ಯರ್ಥವಾಗುತ್ತಿದೆ. ಜತೆಗೆ ಏಕಾಏಕಿ ತಿರುವು ಇರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತವೆ ಎಂಬುದು ಸವಾರರ ಅಳಲಾಗಿದೆ.

ರಸ್ತೆ ತಿರುವಿನಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸದ ಕಾರಣ ಸರ್ವಿಸ್‌ ರಸ್ತೆಯ ಮೂಲಕ ಹಳೆ ತಿರುವಿನಲ್ಲೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸವಾರರ ಆಗ್ರಹವಾಗಿದೆ. 

ಸಿಗ್ನಲ್ ಹಾಗೂ ಕ್ಯಾಟ್ ಐಸ್ ಅವಶ್ಯಕ: ತಿರುವು ಹತ್ತಿರ ಬರುತ್ತಿದ್ದಂತೆ ತಿರುವು ಸೂಚಿಸುವ ಸಿಗ್ನಲ್‌ಗಳಾಗಲಿ ಅಥವಾ ಕ್ಯಾಟ್ ಐಸ್ (ರೇಡಿಯಂ ಬೆಳಕಿನ ಸೂಚಕಗಳು) ಇಲ್ಲದೆ ಇರುವುದರಿಂದ ಹೊಸದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇದ್ದಕ್ಕಿದ್ದಂತೆ ತಿರುವಿನಲ್ಲಿ ಬ್ರೇಕ್ ಹೊಡೆಯಬೇಕಾಗಿದೆ. ಹೀಗಾಗಿ ತಿರುವಿನ ಸಮೀಪದಲ್ಲಿ ಕ್ಯಾಟ್ ಐಸ್ ಹಾಕುವುದು ಅವಶ್ಯಕವಾಗಿದೆ.

ಅಂಡರ್ ಪಾಸ್ ಅಥವಾ ಮೇಲ್ಸೇತುವೆ ಅವಶ್ಯಕ: ನಗರದಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಸಂಚಾರದ ಕಿರಿಕಿರಿ ತಪ್ಪಿಸಲು ತಿರುವಿನಲ್ಲಿ  ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸಿದರೆ ವಾಹನ ಸವಾರರಿಗೆ ಸಹಾಯವಾಗುತ್ತದೆ.

ನಗರದಿಂದ ಆಚೆ ಹೋಗಲು ಹಾಗೂ ಬರಲು ಇರುವ ಏಕೈಕ ತಿರುವಿನಿಂದ ಹೆದ್ದಾರಿಗೆ ಸಂಪರ್ಕ ಪಡೆಯುವಾಗ ಎರಡೂ ಕಡೆ ವಾಹನಗಳಿಂದ ದಟ್ಟಣೆ ಏರ್ಪಟ್ಟಿರುವುದು
ನಗರದಿಂದ ಆಚೆ ಹೋಗಲು ಹಾಗೂ ಬರಲು ಇರುವ ಏಕೈಕ ತಿರುವಿನಿಂದ ಹೆದ್ದಾರಿಗೆ ಸಂಪರ್ಕ ಪಡೆಯುವಾಗ ಎರಡೂ ಕಡೆ ವಾಹನಗಳಿಂದ ದಟ್ಟಣೆ ಏರ್ಪಟ್ಟಿರುವುದು

ಸರ್ವಿಸ್‌ ರಸ್ತೆ ನಿರ್ಮಿಸಿ 

11 ವರ್ಷಗಳ ಹಿಂದೆ ಹೆದ್ದಾರಿ ವಿಸ್ತರಿಸುವಾಗ ನಗರಕ್ಕೆ ಬರಲು ಹಾಗೂ ಹೊರಗೆ ಹೋಗಲು ಸರ್ವಿಸ್‌ ರಸ್ತೆಗಳಲ್ಲಿ ಎರಡು ಪ್ರತ್ಯೇಕ ಕವಲುಗಳಿದ್ದವು. ಇದರಿಂದ ಬಂದು ಹೋಗುವವರಿಗೆ ಅನುಕೂಲವಾಗುತ್ತಿತ್ತು. ಆದರೆ ಈಗ ಸರ್ವಿಸ್‌ ರಸ್ತೆ ಸಮೀಪದ ಶ್ರೀನಿವಾಸಪುರ ರಸ್ತೆಗೆ ಸಂಪರ್ಕ ಕಲ್ಪಿಸಲು ಅವಕಾಶ ಮಾಡಿ ಕೊಡಲಾಗಿದೆ. ಆದರೆ ಸರ್ವಿಸ್‌ ರಸ್ತೆ ಇಲ್ಲದೆ ತೊಂದರೆಯಾಗುತ್ತಿದೆ. ಹಾಗಾಗಿ ಸರ್ವಿಸ್‌ ರಸ್ತೆ ನಿರ್ಮಿಸಿದರೆ ಅನುಕೂಲವಾಗುತ್ತದೆ. ಮಂಜುನಾಥ್ ಸ್ಥಳೀಯ ವಾಹನ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT