ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಐದು ವರ್ಷಗಳಲ್ಲಿ 453 ಬಾಲ್ಯ ವಿವಾಹಕ್ಕೆ ತಡೆ

Published 16 ಏಪ್ರಿಲ್ 2024, 5:06 IST
Last Updated 16 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ಕೊಪ್ಪಳ: ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಮತ್ತು ಸಾರ್ವಜನಿಕರ ಸಹಭಾಗಿತ್ವದ ಪರಿಣಾಮದಿಂದಾಗಿ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 453 ಬಾಲ್ಯವಿವಾಹಕ್ಕೆ ತಡೆಯೊಡ್ಡಲಾಗಿದೆ. ಹಿಂದಿನ ಒಂದು ತಿಂಗಳ ಅವಧಿಯಲ್ಲಿಯೇ 20ಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿದ್ದು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

ಕೊಪ್ಪಳ ತಾಲ್ಲೂಕಿನ ಜಿನ್ನಾಪುರ ತಾಂಡದ ಮರಿಯಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನಿಗದಿಯಾಗಿದ್ದ ಐದು ಬಾಲ್ಯವಿವಾಹವನ್ನು ಒಂದೇ ದಿನದಲ್ಲಿ ತಡೆಯಲಾಗಿದೆ. ಬಳಿಕ ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.

ಯಲಬುರ್ಗಾ ತಾಲ್ಲೂಕು, ಕೊಪ್ಪಳ ತಾಲ್ಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಹೀಗೆ ಹಲವು ಕಡೆ ಸರ್ಕಾರ ನಿಗದಿ ಪಡಿಸಿದ ವಯಸ್ಸಿಗೂ ಮೊದಲೇ ಮದುವೆ ಮಾಡಲು ಪೋಷಕರು ಮುಂದಾಗಿದ್ದರಿಂದ ಅವುಗಳಿಗೆ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.  ಮಕ್ಕಳ ರಕ್ಷಣಾ ಘಟಕದ ಅಂಕಿಅಂಶದ ಪ್ರಕಾರ 2019–20ರಲ್ಲಿ 144 ಬಾಲ್ಯವಿವಾಹಗಳಿಗೆ ಬ್ರೇಕ್‌ ಹಾಕಲಾಗಿದ್ದು, 12 ಎಫ್‌ಐಆರ್‌ ದಾಖಲಿಸಲಾಗಿದೆ.

ಹಳ್ಳಿಗಳ ಮಟ್ಟದಿಂದಲೇ ಬಾಲ್ಯವಿವಾಹ ತಡೆಗೆ ನಮ್ಮ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಕಾರಣ ನಿರಂತರವಾಗಿ ಪ್ರಕರಣಗಳು ಪತ್ತೆಯಾಗುತ್ತಿವೆ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯೂ ಆಗುತ್ತಿದೆ.
ಮಹಾಂತಸ್ವಾಮಿ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೊಪ್ಪಳ

ಬಾಲ್ಯ ವಿವಾಹ ನಿಗದಿಯಾಗಿದೆ ಅಥವಾ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ 1098/112 ಕರೆ ಮಾಡಿ ಮಾಹಿತಿ ನೀಡುತ್ತಿದ್ದಾರೆ. ಆಗ ಗ್ರಾಮ ಮಟ್ಟದಲ್ಲಿರುವ ಬಾಲ್ಯವಿವಾಹ ತಡೆಗಟ್ಟುವ ಅಧಿಕಾರಿಗಳ ತಂಡದವರು ಬಾಲಕಿ ಅಥವಾ ಬಾಲಕನ ಮನೆಗೆ ತೆರಳಿ ದಾಖಲೆ ಸಮೇತ ಮಕ್ಕಳ ಕಲ್ಯಾಣ ಸಮಿತಿಗೆ ವಹಿಸುತ್ತಾರೆ.

ಜಿಲ್ಲೆಯಲ್ಲಿ ಮೊದಲು ಮಕ್ಕಳ ಸಹಾಯವಾಣಿಯನ್ನು ಖಾಸಗಿಯಾಗಿ ನಿರ್ವಹಣೆ ಮಾಡಲಾಗುತ್ತಿತ್ತು. 2023ರ ಸೆಪ್ಟೆಂಬರ್‌ನಿಂದ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿಯೇ ಸಹಾಯವಾಣಿ ನಿರ್ವಹಣೆಯಾಗುತ್ತಿರುವ ಕಾರಣ ಅಧಿಕಾರಿಗಳಿಗೆ ವೇಗವಾಗಿ ಮಾಹಿತಿಯೂ ಲಭಿಸುತ್ತಿದೆ.  

ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಬಾಲ್ಯವಿವಾಹ ತಡೆ ಸಮಿತಿ ತಂಡದವರು ಮದುವೆ ನಿಲ್ಲಿಸಿ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸುತ್ತಾರೆ. ಕಲ್ಯಾಣ ಸಮಿತಿ ಮುಂದೆ ಬಂದವರಿಗೆ ಕಾನೂನು ಬಗ್ಗೆ ತಿಳಿವಳಿಕೆ ನೀಡುವ ಅಧಿಕಾರಿಗಳಿಗೆ ಮಕ್ಕಳು ಮತ್ತು ಅವರ ಪೋಷಕರಿಗೆ ಬಾಲ್ಯವಿವಾಹದ ಅಪಾಯದ ಕುರಿತು ಜಾಗೃತಿ ಮೂಡಿಸುತ್ತಾರೆ.

ಪೋಷಕರಿಗೂ ಇದರ ಬಗ್ಗೆ ತಿಳಿಹೇಳಲಾಗುತ್ತದೆ. ಮಕ್ಕಳಿಗೆ 18 ವರ್ಷವಾಗುವ ತನಕ ಅಧಿಕಾರಿಗಳೇ ನಿಗಾ ವಹಿಸಿ ಮಕ್ಕಳು ನಿರಂತರವಾಗಿ ಕಲ್ಯಾಣ ಸಮಿತಿಗೆ ಬಂದು ಹೋಗುವಂತೆ ಕ್ರಮ ವಹಿಸುತ್ತಿದ್ದಾರೆ. ಹೀಗಾಗಿ ಬಾಲ್ಯವಿವಾಹ ಪ್ರಕರಣಗಳು ವೇಗವಾಗಿ ಪತ್ತೆಯಾಗುತ್ತಿವೆ. ತಪ್ಪಿತಸ್ಥರಿಗೆ ಕಾನೂನು ರೀತಿಯ ಕ್ರಮವೂ ಆಗುತ್ತಿವೆ.

ಐದು ವರ್ಷಗಳಲ್ಲಿ ತಡೆಗಟ್ಟಿದ ಬಾಲ್ಯವಿವಾಹಗಳು (ವರ್ಷ;ತಡೆಗಟ್ಟಿದ ಪ್ರಕರಣ;ಬಾಲ್ಯವಿವಾಹ ಮಾಡಿದವರ ವಿರುದ್ಧ ದಾಖಲಾದ ಎಫ್‌ಐಆರ್‌)

2019–20;144;12

2020–21;71;11

2021–22;67;2

2022–23;69;2

2023–24;102;5

ಒಟ್ಟು;453;32

ಮದುವೆ ಮೇಲೆ ನಿಗಾ ವಹಿಸಲು ಸೂಚನೆ

ಕೊಪ್ಪಳ: ಅಕ್ಷಯ ತೃತೀಯ ಇತರ ದಿನಗಳಂದು ಸಾಮೂಹಿಕ ವೈಯಕ್ತಿಕ ಮತ್ತು ಬಾಲ್ಯವಿವಾಹ ಜರುಗುವ ಸಾಧ್ಯತೆ ಅಧಿಕವಾಗಿರುವುದರಿಂದ ಇವುಗಳ ಮೇಲೆ ಕಣ್ಗಾವಲು ವಹಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಸೂಚಿಸಿದ್ದಾರೆ. ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಮದುವೆಯ ಹೆಸರಿನಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲಾ ಹಂತಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಬಾಲ್ಯವಿವಾಹ ತಡೆಗಟ್ಟಲು ಕ್ರಮ ವಹಿಸಬೇಕು. ಅರಿವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದ್ದಾರೆ. ಮೇ 10ರಂದು ಅಕ್ಷಯ ತೃತೀಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT