ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮುಗಿದ ಬಳಿಕ...

Last Updated 19 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಹತ್ತು ದಿನಗಳು ಹೇಗೆ ಕಳೆದುಹೋದವು ಎಂಬುದೇ ತಿಳಿಯದು. ವಿಶ್ವವಿಖ್ಯಾತ ದಸರಾ ಉತ್ಸವ ಮುಕ್ತಾಯಗೊಂಡಿದೆ. ದಸರಾ ನೋಡಲು ವಿವಿಧ ಕಡೆಗಳಿಂದ ನಗರಕ್ಕೆ ಬಂದಿದ್ದವರು ಮಧುರ ನೆನಪುಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಊರಿಗೆ ವಾಸಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ದಸರಾ ಬಂತೆಂದರೆ ಸಾಂಸ್ಕೃತಿಕ ನಗರಿಗೆ ಅದೇನೋ ಕಳೆ ಬಂದುಬಿಡುತ್ತದೆ. ಪ್ರವಾಸಿಗರ ದಂಡೇ ನಗರದಲ್ಲಿ ನೆರೆಯುತ್ತದೆ. ನಗರದ ಬಹುತೇಕ ಮನೆಗಳಲ್ಲಿ ಸಂಬಂಧಿಕರು, ಗೆಳೆಯರು ತುಂಬಿರುವುರದಿಂದ ಜನ ಜಾತ್ರೆಯನ್ನೇ ಕಾಣಬಹುದು. ಉದ್ಯೋಗದ ನಿಮಿತ್ತ ನಗರದಲ್ಲಿ ನೆಲೆಸಿದವರ ಮನೆಗಳೂ ಇದರಿಂದ ಹೊರತಾಗಿಲ್ಲ. ಅವರವರ ಊರಿನಿಂದ ಒಂದಷ್ಟು ಜನರು ದಸರಾ ವೇಳೆ ಹಾಜರಾಗುವರು. ಮನೆ ಎಷ್ಟೇ ಸಣ್ಣದಿರಲಿ, ದಸರಾ ಅವಧಿಯಲ್ಲಿ ಅಡ್ಜೆಸ್ಟ್‌ ಮಾಡಿಕೊಂಡು ಅತಿಥಿಗಳಿಗೆ ಅವಕಾಶ ನೀಡುತ್ತಾರೆ.

ಉದ್ಯೋಗ, ಕೆಲಸದ ನಿಮಿತ್ತ ಬೇರೆ ಬೇರೆ ಕಡೆ ನೆಲೆಸಿರುವ ಮೈಸೂರಿಗರು ದಸರಾ ವೇಳೆಗೆ ತಪ್ಪದೇ ತಮ್ಮೂರಿಗೆ ಬರುತ್ತಾರೆ. ಆಧುನಿಕ ಜೀವನದ ಜಂಜಾಟದ ನಡುವೆಯೂ ಅಲ್ಪ ಬಿಡುವು ಮಾಡಿಕೊಂಡು ದಸರಾ ಹಬ್ಬದ ಸಂಭ್ರಮ ಸವಿಯಲು ಬಂದೇ ಬಿಡುವರು.

ಶುಕ್ರವಾರ ನಡೆದ ಜಂಬೂ ಸವಾರಿ ಹಾಗೂ ರಾತ್ರಿ ನಡೆದ ಪಂಜಿನ ಕವಾಯತಿನೊಂದಿಗೆ ದಸರಾ ಉತ್ಸವಕ್ಕೆ ತೆರೆಬಿದ್ದಿದೆ. ಇನ್ನೆರಡು ದಿನ ರಜೆ ಇರುವುದರಿಂದ ಬಹುತೇಕ ಮಂದಿ ಭಾನುವಾರದರೆಗೂ ನಗರದಲ್ಲಿ ತಂಗುವ ಯೋಜನೆ ಹಾಕಿಕೊಂಡಿದ್ದಾರೆ. ದಸರಾ ಉತ್ಸವವನ್ನು ನೆಪವಾಗಿಟ್ಟುಕೊಂಡು ಹಲವರು ಪ್ರತಿವರ್ಷವೂ ತಪ್ಪದೇ ಮೈಸೂರಿಗೆ ಬರುವರು. ಇಲ್ಲಿನ ಬೀದಿಗಳು, ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ನಗರದ ಜತೆಗಿನ ನೆನಪನ್ನು ‘ನವೀಕರಿಸಿ’ ವಾಪಸಾಗುವರು.

‘ನಮಗೆ ದಸರಾ ಎಂದರೆ ದೊಡ್ಡ ಹಬ್ಬ. ಮನೆಯ ತುಂಬ ನೆಂಟರು ಇರುತ್ತಾರೆ. ವಾರಪೂರ್ತಿ ಬಗೆಬಗೆ ಊಟ, ತಿಂಡಿ ಮಾಡುವುದು ಸಂತೋಷ ನೀಡುತ್ತದೆ’ ಎಂಬುದು ಅಗ್ರಹಾರದ ನಿವಾಸಿ ಪರಮೇಶ್ವರ್‌ ಅವರ ಹೇಳಿಕೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಗಳಾಗಿವೆ. ಮಹಾರಾಜರ ಕಾಲದ ದಸರಾ ಚೆನ್ನಾಗಿತ್ತು ಎಂದು ಹಿರಿಯರು ಹೇಳುವರು. ಆದರೆ ಈಗಿನ ಕಾಲದ ಮಂದಿ ಥಳುಕು ಬಳುಕಿನ ದಸರಾವನ್ನು ಇಷ್ಟಪಡುವರು. ಬದಲಾವಣೆಯನ್ನು ಬಯಸುವರು ಎಂದು ನುಡಿದರು.

ಹೊಸತನಕ್ಕೆ ಪ್ರಾಮುಖ್ಯತೆ: ದಸರಾ ಬಂತೆಂದರೆ ಹಳೆಯ ಮೈಸೂರಿಗರಿಗೆ ಇಂದಿಗೂ ನಾಡಹಬ್ಬ. ದಶಕಗಳಿಂದ ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯ ಉಳಿದುಕೊಂಡಿದೆಯಾದರೂ ದಸರಾ ಆಚರಣೆಯ ಒಟ್ಟಾರೆ ಸ್ವರೂಪ ಬದಲಾಗಿದೆ. ದಸರಾ ನೋಡಲು ಬರುವವರಿಗೆ ಹೊಸತನ್ನು ನೀಡಬೇಕು ಎಂಬ ತುಡಿತವೇ ಇದಕ್ಕೆ ಕಾರಣ.

ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಬೇಕೆಂಬುದೇ ದಸರಾ ಉತ್ಸವದ ಉದ್ದೇಶವಾಗಿ ಬದಲಾಗಿದೆ. ಆದ್ದರಿಂದ ಪ್ರತಿವರ್ಷವೂ ದಸರಾ ಆಚರಣೆಗೆ ಹೊಸತನ ನೀಡಲು ಪ್ರಯತ್ನಿಸಲಾಗುತ್ತದೆ. ಉತ್ಸವದ ಮೂಲ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಹೊಸತನ ಅಳವಡಿಸುವ ಸವಾಲು ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಮುಂದಿದೆ.

ಕಳೆದ ವರ್ಷ ‘ಓಪನ್‌ಸ್ಟ್ರೀಟ್‌ ಫೆಸ್ಟಿವಲ್‌’ಅನ್ನು ದಸರಾ ಜತೆ ಸೇರಿಸಲಾಗಿತ್ತು. ಈ ಬಾರಿ ಗಾಳಿಪಟ ಉತ್ಸವ, ವಿಂಟೇಜ್‌ ಕಾರು ರ‍್ಯಾಲಿ, ಮತ್ಸ್ಯಮೇಳ... ಹೀಗೆ ಕೆಲವೊಂದು ಹೊಸ ಕಾರ್ಯಕ್ರಮಗಳು ನಡೆದವು. ಪ್ರತಿವರ್ಷವೂ ಅದೇ ಕಾರ್ಯಕ್ರಮ ಇದ್ದರೆ ಒಮ್ಮೆ ಭೇಟಿ ನೀಡಿದವರು ಮತ್ತೊಮ್ಮೆ ಬರುವುದಿಲ್ಲ. ಈ ವರ್ಷ ಬಂದವರನ್ನು ಮುಂದಿನ ವರ್ಷವೂ ಸೆಳೆಯಬೇಕು ಎಂಬ ಉದ್ದೇಶದಿಂದ ಹೊಸತನ್ನು ಸೇರಿಸಲಾಗುತ್ತದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದ ಕಲಾವಿದರಿಗಾಗಿ ಈ ಬಾರಿ ದಸರಾ ಸಾಂಸ್ಕೃತಿಕ ಮೆರವಣಿಗೆಯನ್ನೂ ಏರ್ಪಡಿಸಲಾಗಿತ್ತು. ಸಾಕಷ್ಟು ಮಂದಿ ಮೆರವಣಿಗೆ ವೀಕ್ಷಿಸಿ ಸಂಭ್ರಮಪಟ್ಟಿದ್ದರು. ಕಲಾವಿದರೂ ತಮಗೆ ದೊರೆತ ಅವಕಾಶಕ್ಕೆ ಖುಷಿಪಟ್ಟಿದ್ದರು.

‘ದಸರಾ ಆಚರಣೆಯಲ್ಲಿ ಭಾರಿ ಬದಲಾವಣೆಯಾಗಿದೆ. ಇಂದಿನ ದಸರಾ ಉತ್ಸವ ಥಳುಕಿನಿಂದ ಕೂಡಿದೆ. ಕೆಲ ವರ್ಷಗಳ ಹಿಂದಿನ ದಸರಾದಲ್ಲಿ ಕಂಡುಬರುತ್ತಿದ್ದ ವೈಭವವೇ ಬೇರೆ. ಈಗ ಅದನ್ನು ಕಾಣಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡಿದೆ. ಹೊಸದಾಗಿ ಸೇರಿಕೊಂಡಿರುವ ಓಪನ್‌ಸ್ಟ್ರೀಟ್‌ ಫೆಸ್ಟಿವಲ್‌ ಅದಕ್ಕೆ ಉತ್ತಮ ಉದಾಹರಣೆ’ ಎಂಬುದು ವಿ.ವಿ.ಮೊಹಲ್ಲಾ ನಿವಾಸಿ ಜನಾರ್ಧನ ಅವರ ಹೇಳಿಕೆ.

ಜಂಬೂ ಸವಾರಿ, ಆನೆಗಳು, ಅದರ ಮೇಲಿರುವ ಚಿನ್ನದ ಅಂಬಾರಿ, ಕಲಾ ತಂಡಗಳ ಪ್ರದರ್ಶನ, ಪಂಜಿನ ಕವಾಯತು ಮೈದಾನದಲ್ಲಿನ ಮೈನವಿರೇಳಿಸುವ ಕಸರತ್ತು... ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಒಳಗೊಂಡು ಮೈಸೂರನ್ನು ವಿಶ್ವದಲ್ಲೇ ಗುರುತಿಸುವಂತೆ ಮಾಡಿರುವ ದಸರಾ ಕೊನೆಗೊಂಡಿದೆ. ಕಳೆದ ಒಂದೂವರೆ ತಿಂಗಳಿನಿಂದ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳು ಮತ್ತೆ ಕಾಡಿಗೆ ಮರಳಲಿವೆ. ದಸರಾ ನೋಡಲು ಬಂದವರು ‘ಮುಂದಿನ ವರ್ಷ ಮತ್ತೆ ಬರುತ್ತೇವೆ’ ಎನ್ನುತ್ತಾ ಸಾಂಸ್ಕೃತಿಕ ನಗರಿಗೆ ಗುಡ್‌ಬೈ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT