ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗವರ್ಮನ ‘ಛಂದೋಂಬುಧಿ’ ಇಂಗ್ಲಿಷ್‌ಗೆ ಅನುವಾದ

ಕನ್ನಡದ ಮೊದಲ ಛಂದೋಗ್ರಂಥ, ಡಾ.ಆರ‍್ವಿಯಸ್‌ ಸುಂದರಂ ಅವರಿಂದ ಅನುವಾದ
Last Updated 8 ಜನವರಿ 2021, 19:30 IST
ಅಕ್ಷರ ಗಾತ್ರ

ಮೈಸೂರು: ಛಂದಸ್ಸಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಉಪಲಬ್ಧವಿರುವ ಮೊದಲ ಛಂದೋಗ್ರಂಥ, ನಾಗವರ್ಮನ ‘ಛಂದೋಂಬುಧಿ’ಯನ್ನು ಸಾಹಿತಿ ಡಾ.ಆರ‍್ವಿಯಸ್‌ ಸುಂದರಂ ಅವರು ಮಂಗಳೂರಿನ ಅಮ್ಮೆಲ್‌ ಶರೋನ್‌ ಅವರೊಟ್ಟಿಗೆ ಸೇರಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

‘ದ ಓಷನ್‌ ಆಫ್‌ ಪ್ರೋಸೊಡಿ’ ಹೆಸರಿನ ಗ್ರಂಥವನ್ನು, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಅಧ್ಯಯನ ಕೇಂದ್ರವು ಪ್ರಕಟಿಸಿದೆ.

ಕನ್ನಡದಲ್ಲಿ ಬಳಕೆಯಾಗಿರುವ ಛಂದಸ್ಸುಗಳ ಸ್ವರೂಪ ತಿಳಿಯಲು ‘ಛಂದೋಂಬುಧಿ ಗ್ರಂಥವನ್ನೇ ಇಂದಿಗೂ ಅವಲಂಬಿಸಲಾಗುತ್ತಿದೆ. ಇದೇ ಕಾರಣಕ್ಕೆ ಈ ಗ್ರಂಥವನ್ನು ‘ಛಂದ್ರಸ್ಸಿನ ಸಮುದ್ರ’ವೆಂತಲೂ ಕರೆಯುತ್ತಾರೆ. ಇಂಗ್ಲಿಷ್‌ ಅನುವಾದಿತ ಕೃತಿಗೂ ‘ದ ಓಷನ್‌ ಆಫ್‌ ಪ್ರೋಸೊಡಿ’ ಎಂಬ ಹೆಸರು ಇಡಲಾಗಿದೆ.

ಕನ್ನಡದ ಮೊದಲ ಉಪಲಬ್ಧವಿರುವ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಕಾರ್ಯವನ್ನು ಆರ‍್ವಿಯಸ್‌ ಸುಂದರಂ ಕಳೆದ ಎಂಟು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಶ್ರೀವಿಜಯನ ‘ಕವಿರಾಜಮಾರ್ಗ’, ರನ್ನನ ‘ಗದಾಯುದ್ಧ’, ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ’ ಹಾಗೂ ‘ಉದಯಾದಿತ್ಯಾಲಂಕಾರ’ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಈಗ 220 ಪುಟಗಳ ಛಂದೋಂಬುಧಿ ಗ್ರಂಥವು ಪ್ರಕಟಗೊಂಡಿದೆ.

ಸಾವಿರ ವರ್ಷಗಳ ಹಿಂದೆಯೇ ನಾಗವರ್ಮನು ಹಳಗನ್ನಡದಲ್ಲಿ ಛಂದೋಗ್ರಂಥವನ್ನು ರಚಿಸಿದ್ದಾನೆ. ಇದರಲ್ಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಪ್ರತಿಪಾದಿತವಾಗಿವೆ. ತ್ರಿಪದಿ, ಷಟ್ಪದಿ, ಅಕ್ಕರ, ಅಕ್ಕರಿಕೆ, ಛಂದೋವತಂಸ, ಏಳೆ, ಚೌಪದಿ, ಮದನವತಿ, ಗೀತಿಕೆ, ಉತ್ಸಾಹ ಮೊದಲಾದ ಮಟ್ಟುಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಈ ಗ್ರಂಥದಲ್ಲಿ ಸಂಜ್ಞಾಪ್ರಕರಣಂ, ಸಮವೃತ್ತಪ್ರಕರಣಂ, ಮಾಲಾವೃತ್ತಾರ್ಧ ಸಮವಿಷಮಾದಿವೃತ್ತ ಪ್ರಕರಣಂ, ಕಂದಾದಿಮಾತ್ರಾವೃತ್ತಪ್ರಕರಣಂ, ಕರ್ನಾಟವಿಷಯಜಾತಿವೃತ್ತ ಪ್ರಕರಣಂ, ಷಟ್ಪ್ರತ್ಯಯವಿವರಣಪ್ರಕರಣಂ ಎಂಬ ಆರು ಅಧ್ಯಾಯಗಳಿವೆ. ಕರ್ನಾಟವಿಷಯಜಾತಿವೃತ್ತಪ್ರಕರಣಂ ಅಧ್ಯಾಯವು ಅಚ್ಚಗನ್ನಡದ ಛಂದಸ್ಸಿಗೆ ಮೀಸಲಾಗಿದೆ.

‘ಹಳಗನ್ನಡದ ಮಹತ್ವದ ಕೃತಿಗಳ ಕುರಿತು ಜಗತ್ತಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದ ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದೇನೆ. ಹಳಗನ್ನಡ ಇಂದಿಗೂ ಅನೇಕರಿಗೆ ಅರ್ಥವಾಗುವುದಿಲ್ಲ. ಅದನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಸವಾಲೇ ಸರಿ. ಛಂದೋಂಬುಧಿಯಲ್ಲಿರುವ ಮೂಲ ಪದ್ಯ, ಅದೇ ಸಾಲುಗಳನ್ನು ಇಂಗ್ಲಿಷ್‌ನಲ್ಲಿ ಲಿಪ್ಯಂತರ ಹಾಗೂ ಅದರ ಅನುವಾದವನ್ನು ಈ ಕೃತಿಯಲ್ಲಿ ನೀಡಲಾಗಿದೆ. ಎಲ್ಲರಿಗೂ ಅರ್ಥವಾಗುವಂತೆ ಸುಲಭ ಇಂಗ್ಲಿಷ್‌ ಬಳಕೆ ಮಾಡಲಾಗಿದೆ’ ಎಂದು ಡಾ.ಆರ‍್ವಿಯಸ್‌ ಸುಂದರಂ ‘ಪ್ರಜಾವಾಣಿ’ಗೆ ತಿಳಿಸಿದರು.

10ನೇ ಶತಮಾನದ ವೇಳೆಗಾಗಲೇ ಕನ್ನಡದಲ್ಲಿ ನಮ್ಮದೇ ಆದ ಕೆಲವು ಛಂದಸ್ಸುಗಳಿದ್ದವು. ಮುಖ್ಯವಾಗಿ ತ್ರಿಪದಿ, ಷಟ್ಪದಿ, ಅಕ್ಕರ, ಅಕ್ಕರಿಕೆ, ಛಂದೋವತಂಸ– ಈ ಮಟ್ಟುಗಳನ್ನು ನಾಗವರ್ಮನು ಕರ್ನಾಟವಿಷಯಜಾತಿವೃತ್ತ ಪ್ರಕರಣಂನಲ್ಲಿ ವಿವರಿಸಿದ್ದಾನೆ. ಈ ಎಲ್ಲಾ ಛಂದಸ್ಸುಗಳಿಗೂ ಲಕ್ಷಣಗಳನ್ನು ಅದೇ ಪದ್ಯದಲ್ಲಿ ಹೇಳುತ್ತಾನೆ. ತನ್ನ ಹೆಂಡತಿಯನ್ನು ಕೂರಿಸಿಕೊಂಡು ಪದ್ಯ ಹಾಗೂ ಅದರ ಲಕ್ಷಣಗಳನ್ನು ವಿವರಿಸಿರುವುದು ನಿರೂಪಣಾ ತಂತ್ರಗಾರಿಕೆಯಿಂದಲೂ ಗಮನ ಸೆಳೆಯುತ್ತದೆ ಎಂದು ತಿಳಿಸಿದರು.

55ಕ್ಕೂ ಹೆಚ್ಚು ಕೃತಿಗಳ ರಚನೆ

ಮೈಸೂರಿನ ನಿವಾಸಿಯಾದ ಆರ‍್ವಿಯಸ್‌ ಸುಂದರಂ 55ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ಇಂಗ್ಲಿಷ್‌, ತೆಲುಗು ಭಾಷೆಯಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಸಂಸ್ಕಾರ, ಚಿದಂಬರ ರಹಸ್ಯ, ಆಕಾಶಗಂಗೆ ಸೇರಿದಂತೆ 10ಕ್ಕೂ ಹೆಚ್ಚು ಕೃತಿಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ.

ದಿಗಂಬರ ಕಾವ್ಯ, ಗೊರಿಲ್ಲಾ, ಸಂಗವಿಜಯ, ಪೋತನನ ಭಾಗವತ (8 ಸಂಪುಟಗಳು), ಪಿಟೀಲು ರಾಗಗಳ ಡಜನ್ ಸೇರಿದಂತೆ 10ಕ್ಕೂ ಹೆಚ್ಚಿನ ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅವರ ‘ಗದಾಯುದ್ಧ’, ‘ವಡ್ಡಾರಾಧನೆ’ ಇಂಗ್ಲಿಷ್‌ ಅವತರಣಿಕೆಯ ಎರಡನೇ ಮುದ್ರಣವನ್ನು, ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆ ‘ರೌಟ್ಲೆಡ್ಜ್‌’ನವರು ಹೊರತರುತ್ತಿದ್ದಾರೆ.

***

ಹರಿಹರನ ರಗಳೆಯ ಇಂಗ್ಲಿಷ್‌ ಅನುವಾದ ಕೃತಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಪಂಪಭಾರತವನ್ನು ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದೇನೆ.

–ಡಾ.ಆರ‍್ವಿಯಸ್‌ ಸುಂದರಂ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT