ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಮೃತಪಟ್ಟ ಯಶ್ವಂತ್‌; ಕುಸಿದ ಆಧಾರ, ಅತಂತ್ರವಾದ ಕುಟುಂಬ

ಅವೈಜ್ಞಾನಿಕ ಹಂಪ್‌ ಬಳಿ ಸಂಭವಿಸಿದ ಅಪಘಾತ
ಶಿವಪ್ರಸಾದ್‌ ರೈ
Published 3 ಫೆಬ್ರುವರಿ 2024, 7:57 IST
Last Updated 3 ಫೆಬ್ರುವರಿ 2024, 7:57 IST
ಅಕ್ಷರ ಗಾತ್ರ

ಮೈಸೂರಿನ ಬೋಗಾದಿ ರಸ್ತೆಯಲ್ಲಿ ದಿಢೀರನೆ ಹಾಗೂ ಸೂಚನಾಫಲಕವೂ ಇಲ್ಲದೇ ಹಾಕಲಾಗಿದ್ದ ಅವೈಜ್ಞಾನಿಕ ಹಂಪ್‌ಗಳಿಂದಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ಆ ಕುಟುಂಬಗಳು ಅತಂತ್ರವಾಗಿದ್ದು, ಸಂಕಷ್ಟಕ್ಕೆ ಸಿಲುಕಿವೆ. ಹಲವರು ಗಾಯಗೊಂಡಿದ್ದೂ ವರದಿಯಾಗಿದೆ. ಘಟನೆ ನಡೆದು ಹಲವು ದಿನಗಳೇ ಕಳೆದಿದ್ದರೂ ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯವರಾಗಲಿ, ಜನಪ್ರತಿನಿಧಿಗಳಾಗಲಿ ನೊಂದ ಕುಟುಂಬಗಳಿಗೆ ನೆರವಾಗಿಲ್ಲ; ಸ್ಪಂದಿಸಿಲ್ಲ. ಆ ಕುಟುಂಬಗಳ ಕಣ್ಣೀರಿನ ಕತೆ ಹೇಳುವ ಸರಣಿಯನ್ನು ‘ಪ್ರಜಾವಾಣಿ’ ಇಂದಿನಿಂದ ಆರಂಭಿಸಿದೆ.

ಮೈಸೂರು: ಮನೆಯ ಮಗನ ದುಡಿಮೆಯಲ್ಲಿ ಬದುಕು ಕಟ್ಟಿಕೊಂಡು ನೆಮ್ಮದಿಯಿಂದಿದ್ದ ಕುಟುಂಬಕ್ಕೆ, ಆತ ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಆ ಮನೆಯಲ್ಲಿ ಮೌನ ಆವರಿಸಿದೆ. ಆತನನ್ನೇ ನಂಬಿದ್ದ ಜೀವಗಳು ಸಹಾಯದ ನಿರೀಕ್ಷೆಯಲ್ಲಿವೆ.

ಅವೈಜ್ಞಾನಿಕವಾದ ರಸ್ತೆ ಉಬ್ಬಿನಿಂದಾಗಿ ನಡೆದ ಅಪಘಾತದಲ್ಲಿ ಮೃತಪಟ್ಟ, ಬೋಗಾದಿ– ಗದ್ದಿಗೆ ರಸ್ತೆಯಲ್ಲಿರುವ ಮರಟಿ ಕ್ಯಾತನಹಳ್ಳಿ ನಿವಾಸಿ ಯಶ್ವಂತ್‌ ಆರ್‌. (27) ಅವರ ಮನೆಯವರ ವ್ಯಥೆ. ಅವರು ತನ್ನ ಕುಟುಂಬದೊಂದಿಗೆ ನೋವಿನಲ್ಲೂ ಸಂತಸದ ಜೀವನ ಕಂಡಿದ್ದರು. ಒಂದೂವರೆ ವರ್ಷದ ಮಗಳು ಆದ್ಯಾಳ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದರು.

ಶನಿವಾರ (ಜ.27) ಬೆಳಿಗ್ಗೆ ತನ್ನ ಏಜೆನ್ಸಿ ಕೆಲಸಕ್ಕಾಗಿ ತೆರಳಿದ್ದವರು ಮಧ್ಯಾಹ್ನವೂ ಹೊರಗಡೆ ಊಟ ಮಾಡಿದ್ದರು. ರಾತ್ರಿ ಊಟಕ್ಕೆ ಬರುತ್ತೇನೆಂದು ಮನೆಯವರಿಗೆ ತಿಳಿಸಿದ್ದರು. ಅವರಿಗಾಗಿ ಮನೆ ಮಂದಿ ಕಾದು ಕುಳಿತಿದ್ದರು. ಕೆಲಸದ ನಿಮಿತ್ತ ಹಣ ಸಂಗ್ರಹಕ್ಕೆಂದು ಬೈಕ್‌ನಲ್ಲಿ ಇಟ್ಟಿಗೆಗೂಡಿಗೆ ತೆರಳಿ ರಾತ್ರಿ 11ರ ಸುಮಾರಿಗೆ ವಾಪಸಾಗುತ್ತಿದ್ದಾಗ, ಬೋಗಾದಿ ರಸ್ತೆಯಲ್ಲಿ ಹಾಕಿದ್ದ ರಸ್ತೆ ಉಬ್ಬಿನಿಂದಾಗಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಕೆ.ಆರ್‌. ಆಸ್ಪತ್ರೆಗೆ ಸೇರಿಸಲಾಗಿತ್ತು.

ವಿಷಯ ತಿಳಿದ ತಂದೆ ರಾಜೇಂದ್ರ ಪ್ರಸಾದ್‌ ಆಸ್ಪತ್ರೆಗೆ ತೆರಳಿ, ಅಲ್ಲಿಂದ ಜೆಎಸ್‌ಎಸ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ದರು. ಚಿಕಿತ್ಸೆಗಾಗಿ ಭರಿಸಬೇಕಿದ್ದ ದೊಡ್ಡ ಮೊತ್ತವಿಲ್ಲದೆ ಕಂಗಾಲಾಗಿದ್ದ ತಂದೆಗೆ ಯಶ್ವಂತ್‌ ಸ್ನೇಹಿತರು ನೆರವಾದರು. ಆದರೂ ಅವರೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಯಶ್ವಂತ್‌ ಸೋಮವಾರ (ಜ.29) ಮೃತಪಟ್ಟರು.

ತಂದೆಯ ನೆನಪಿನಲ್ಲಿರುವ ಮಗಳು ಆದ್ಯಾ
ತಂದೆಯ ನೆನಪಿನಲ್ಲಿರುವ ಮಗಳು ಆದ್ಯಾ

ಪದವಿ ಶಿಕ್ಷಣ ಮುಗಿದ ಬಳಿಕ ಯಶ್ವಂತ್‌ ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಬಂದ ಹಣದಿಂದ ಎರಡು ಕುಟುಂಬಗಳಿಗೆ ಆಸರೆಯಾಗಿದ್ದರು. ಅಜ್ಜ, ಅಜ್ಜಿ, ತಂದೆ ರಾಜೇಂದ್ರ ಪ್ರಸಾದ್‌, ತಾಯಿ ಪ್ರತಿಮಾ, ತಂಗಿ ಮೋನಿಶಾಳ ಜವಾಬ್ದಾರಿ ಅವರಿಗಿತ್ತು.

24ನೇ ವರ್ಷಕ್ಕೆ ಮದುವೆಯಾಗಿದ್ದ ಅವರು, ಪತ್ನಿ ಸುಷ್ಮಾ ಬಿ. ಅವರ ಮನೆಯಲ್ಲೂ ಗಂಡು ಮಕ್ಕಳು ಇಲ್ಲದ್ದರಿಂದ ಅತ್ತೆ, ಮಾವನನ್ನೂ ನೋಡಿಕೊಳ್ಳಬೇಕಾಗಿ ಬಂತು. ಯಶ್ವಂತ್‌ ದುಡಿಮೆಯನ್ನು ಆಧರಿಸಿದ್ದ ಕುಟುಂಬವೀಗ ಬಡವಾಗಿದೆ. ಯಾರದ್ದೋ ತಪ್ಪಿನಿಂದ ಕುಟುಂಬವೊಂದು ಮನೆ ಮಗನನ್ನು ಕಳೆದುಕೊಂಡ ದುಃಖದಲ್ಲಿದೆ.

‘ಆಸ್ಪತ್ರೆಯಲ್ಲಿ ₹1.5 ಲಕ್ಷದಷ್ಟು ಖರ್ಚಾಯಿತು. ಆತನ ಅಪರ ಕಾರ್ಯಕ್ಕೆ ಹಣ ಹೊಂದಿಸಲು ಪರದಾಡುತ್ತಿದ್ದೇನೆ. ಸೊಸೆ ಹಾಗೂ ಮೊಮ್ಮಗಳ ಬಗ್ಗೆ ಚಿಂತೆ ಇದೆ. ಸರ್ಕಾರ ಅವರ ನೆರವಿಗೆ ನಿಲ್ಲಬೇಕು’ ಎಂದು ಯಶ್ವಂತ್‌ ತಂದೆ ರಾಜೇಂದ್ರ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಶ್ಚಿತಾರ್ಥಕ್ಕೆ ಸಿದ್ಧತೆ ನಡೆಸಿದ್ದ: ಯಶ್ವಂತ್‌ ಅವರ ತಂಗಿ ಮೋನಿಶಾ ಆರ್‌. ಅವರ ನಿಶ್ಚಿತಾರ್ಥವು ಮಂಡ್ಯದ ಯುವಕನೊಂದಿಗೆ ಫೆ.4ಕ್ಕೆ ನಿಗದಿಯಾಗಿತ್ತು. ‘ನಿಶ್ಚಿತಾರ್ಥ ಸಂಭ್ರಮದಲ್ಲಿ ಮಗ ತಿರುಗಾಡುತ್ತಿದ್ದ. ಒಂದು ವಾರ ಇದ್ದ ಕಾರಣ ತಯಾರಿಯಲ್ಲಿ ತೊಡಗಿದ್ದ. ಆದರೆ, ಆತನೇ ಬಾರದ ಲೋಕಕ್ಕೆ ತೆರಳಿದ್ದಾನೆ. ಆ ಕಾರ್ಯಕ್ರಮದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ’ ಎಂದು ರಾಜೇಂದ್ರ ಪ್ರಸಾದ್‌ ಕಣ್ಣೀರಾದರು.

‘ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’

‘ಪಾಲಿಕೆ ಅಧಿಕಾರಿಗಳು ಸಂಚಾರ ಪೊಲೀಸರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ ಮಗ ಮೃತಪಟ್ಟಿದ್ದಾನೆ. ನಮ್ಮ ಪಾಲಿನ ಆಧಾರಸ್ತಂಭವನ್ನು ಕಳೆದುಕೊಂಡಿದ್ದೇವೆ. ಆದರೆ ಯಾವೊಬ್ಬ ಜನಪ್ರತಿನಿಧಿ ಅಥವಾ ಅಧಿಕಾರಿ ಮನೆಗೆ ಬಂದು ಸಮಧಾನ ಹೇಳಿಲ್ಲ. ತಮ್ಮಿಂದಾದ ತಪ್ಪಿನ ಬಗ್ಗೆ ಅವರಾರಲ್ಲೂ ಪಶ್ಚಾತಾಪವಿಲ್ಲ. ಯಶ್ವಂತ್‌ ಪತ್ನಿಗೆ ಕೆಲಸ ಕೊಡಿಸಿ ನೆರವಾಗಬೇಕು. ಇಲ್ಲದಿದ್ದರೆ ಆತನ ಆಸರೆ ಪಡೆದಿದ್ದ ನಾವು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ’ ಎಂದು ರಾಜೇಂದ್ರ ಪ್ರಸಾದ್‌ ಹೇಳಿದರು.

ಪ್ರೀತಿಸಿ ಮದುವೆಯಾಗಿದ್ದರು

ಯಶ್ವಂತ್‌ ಹಾಗೂ ಸುಷ್ಮಾ ಬಿ. ಪ್ರೀತಿಸಿ ಮದುವೆಯಾಗಿದ್ದರು. ರಾಮಕೃಷ್ಣನಗರದಲ್ಲಿನ ವಿಶ್ವಮಾನವ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಪದವಿಯವರೆಗೆ ಜೊತೆಗೆ ಶಿಕ್ಷಣ ಪಡೆದು ಕೆಲಸ ದೊರೆತ ನಂತರ ಮದುವೆಯಾಗಿದ್ದರು. ಇವರಿಬ್ಬರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT