ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದಗಲ್: ಭಕ್ತರಿಗೆ ಬೆಳಕು ನೀಡಿದ ಅಂಕಲಗಿ ಮಠ

ವಿಶಿಷ್ಟಾದ್ವತ ಸಿದ್ಧಾಂತದ ತಳಹದಿಯ ಮೇಲೆ ರಚನೆಯಾದ ಮಠ: ಮೂರು ಶತಮಾನಗಳ ಇತಿಹಾಸ
ಶರಣಪ್ಪ ಆನೆಹೊಸೂರು
Published 29 ಮೇ 2024, 5:04 IST
Last Updated 29 ಮೇ 2024, 5:04 IST
ಅಕ್ಷರ ಗಾತ್ರ

ಮುದಗಲ್: ವಿಶಿಷ್ಟಾದ್ವತ ಸಿದ್ಧಾಂತದ ತಳಹದಿಯ ಮೇಲೆ ರಚನೆಯಾಗಿ ಮೂರು ಶತಮಾನಗಳ ಇತಿಹಾಸ ಹೊಂದಿದ ಸುಕ್ಷೇತ್ರ ಅಂಕಲಗಿಮಠ ಈ ಭಾಗದ ಭಕ್ತರು ಹಾಗೂ ದೀನ-ದಲಿತರ ಬೆಳಕಾಗಿದೆ.

ಶ್ರೀಮಠ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ವಾಸಿಯಾಗಿದೆ. ಅಂಕಲಗಿ ಮಠದ ಮೂಲ ಪುರುಷರಾದ ನಿರುಪಾದೇಶ್ವರ ಸ್ವಾಮೀಜಿ ತಮ್ಮ ಜೀವಿತಾವಧಿಯಲ್ಲಿಯೇ ಸುಮಾರು 12 ಮಠಗಳನ್ನು ಸ್ಥಾಪಿಸಿ ದೀನ-ದಲಿತರ ಬಾಳಿಗೆ ಬೆಳಕು ನೀಡಿದ್ದಾರೆ. ಮಠದಲ್ಲಿ ನಿತ್ಯ ತ್ರಿವಿಧ ದಾಸೋಹ ನಡೆಯುತ್ತದೆ. ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ಅಡವಿ ಸಿದ್ದೇಶ್ವರ ಸ್ವಾಮೀಜಿಯ ಶಿಷ್ಯ ನಿರುಪಾದೇಶ್ವರ ಸ್ವಾಮೀಜಿ ತಮ್ಮ ಗುರುಗಳಿಂದ ವಿಭೂತಿ, ಅಕ್ಕಿ ಹಾಗೂ ಕಾಯಿಗಳನ್ನು ತೆಗೆದುಕೊಂಡು ಅಂಕಲಗಿ ಮಠಕ್ಕೆ ಬಂದರು.

ಹಿಂದೆ ಅಂಕಲಗಿ ಮಠ ಶಿರಬಂದಪುರವಾಗಿತ್ತು. ಈಗ ಇರುವ ಅಂಕಲಗಿ ಮಠದ ಸ್ಥಳದಲ್ಲಿ ಆಗ ಮುಳ್ಳು, ಪಾಪಸ್ ಕಳ್ಳಿ ಬೆಳೆದು ನಿರ್ಜನ ಪ್ರದೇಶವಾಗಿತ್ತು. ಇಲ್ಲಿ ಮಹಾ ರಾಕ್ಷಸರು ವಾಸವಾಗಿದ್ದರು ಎನ್ನುವುದು ಪುರಾಣದಿಂದ ತಿಳಿದು ಬರುತ್ತದೆ. ನಿರುಪಾದೇಶ್ವರ ಸ್ವಾಮೀಜಿ ಮಠಕ್ಕೆ ಬಂದು ಅನೇಕ ಪವಾಡಗಳನ್ನು ಮಾಡಿ ನಡೆದಾಡುವ ದೇವರು ಎನಿಸಿಕೊಂಡರು.

ಈಗಿನ ಪೀಠಾಧಿಪತಿಗಳಾದ ಬ್ರಹ್ಮಶ್ರೀ ವೀರಭದ್ರ ಸ್ವಾಮೀಜಿ ಹಾಗೂ ಫಕಿರೇಶ್ವರ ಸ್ವಾಮೀಜಿ ಪವಾಡ ಪುರುಷರಾಗಿ ಭಕ್ತರನ್ನ ಪ್ರೀತಿ-ವಾತ್ಸಲ್ಯದಿಂದ ಆತ್ಮೀಯವಾಗಿ ಕಾಣುತ್ತಿದ್ದಾರೆ. ಮಠದಲ್ಲಿ ಮೇಲು-ಕೀಳು ಎನ್ನುವ ಬೇಧ-ಭಾವ ದೂರ ಮಾಡಿ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಿದ್ದಾರೆ.

ಇಂದಿನಿಂದ 31ರವರೆಗೆ ನಿರುಪಾದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ಮೇ 29ರ ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಟುಗಳಿಗೆ ಅಯ್ಯಾಚಾರ, ಎರಡು ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. 30ರಂದು ಶಿವಭಜನೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಶಿರಹಟ್ಟಿಯ ಜಗದ್ಗುರು ಭಾವೈಕ್ಯ ಸಂಸ್ಥಾನ ಪೀಠದ ಫಕೀರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜ್ಯರ ಗುರುವಂದನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

31ರಂದು ಶಿವಭಜನೆಯ ಸಮಾರೋಪ, 28ಕ್ಕೂ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗುತ್ತದೆ. ಪಲ್ಲಕ್ಕಿ ಉತ್ಸವ, ಉಚ್ಚಾಯ ಎಳೆಯಲಾಗುತ್ತದೆ. ಮಾತೋಶ್ರೀ ಪಾರ್ವತೆಮ್ಮನವರ ನೂತನ ಮಂಗಲ ಭವನ ಲೋಕಾರ್ಪಣೆ, ಧರ್ಮಸಭೆ, ಸಂಜೆ ರಥೋತ್ಸವ ನಡೆಯಲಿದೆ. ನಂತರ ಹಾಸ್ಯ ಸಂಜೆ ಕಾರ್ಯಕ್ರಮ ನಡೆಲಿದೆ ಎಂದು ಶ್ರೀಮಠದ ಬಸವರಾಜ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT