ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ಕುಡಿಯುವ ನೀರಿಗೆ ಜಾನುವಾರುಗಳ ಪರದಾಟ

ನೀರಾವರಿ ಯೋಜನೆಗಳ ಬಳಕೆ ಮಾಡಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲ
ಬಿ.ಎ ನಂದಿಕೋಲಮಠ
Published 25 ಏಪ್ರಿಲ್ 2024, 6:15 IST
Last Updated 25 ಏಪ್ರಿಲ್ 2024, 6:15 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಗಡಿ ಪ್ರದೇಶದ ಉತ್ತರ ದಿಕ್ಕಿನಲ್ಲಿರುವ ಕೃಷ್ಣಾ ನದಿ ಬರಿದಾಗಿದೆ. ಹಳ್ಳ–ಕೊಳ್ಳ, ಕೆರೆ, ಕೃಷಿ ಹೊಂಡ, ಕಾಲುವೆಗಳು ನೀರಿಲ್ಲದೆ ಒಣಗಿ ನಿಂತಿವೆ. ಕುರಿ, ಮೇಕೆ, ಆಕಳು, ಎಮ್ಮೆ ಸೇರಿ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ಸಾಮಾನ್ಯವಾಗಿದೆ.

ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 141 ಕಂದಾಯ ಗ್ರಾಮಗಳು, 42 ತಾಂಡಾಗಳು, 249 ದೊಡ್ಡಿಗಳಲ್ಲಿ ಈಗಾಗಲೇ ಸಮಸ್ಯಾತ್ಮಕ ಹಳ್ಳಿ, ತಾಂಡಾಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 16 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆ ಹಳೆ ಕೊಳವೆಬಾವಿಗಳನ್ನು ಮರುಪೂರಣ ಮಾಡಿಸಲಾಗಿದೆ. ಆದರೆ, ಟಾಸ್ಕ್‌ಫೋರ್ಸ್‌ ಸಮಿತಿ ನಾರಾಯಣಪುರ ಬಲದಂಡೆ ಕಾಲುವೆ ಮೂಲಕ ನೀರು ಹರಿಸುವ‍ ವ್ಯವಸ್ಥೆ ಮಾಡಿಕೊಂಡಿಲ್ಲ.

ತಾಲ್ಲೂಕಿನಲ್ಲಿ 64 ಸಾವಿರ ಎಮ್ಮೆ–ಆಕಳು. 2.90 ಲಕ್ಷ ಕುರಿ–ಮೇಕೆಗಳಿವೆ. ಒಟ್ಟು 3.43 ಲಕ್ಷದಷ್ಟು ಜಾನುವಾರುಗಳಿವೆ. ಬೇಸಿಗೆಯಲ್ಲಿ ಎದುರಾಗಬಹುದಾದ ಮೇವಿನ ಸಮಸ್ಯೆ ಪರಿಹರಿಸಲು ಅಮರೇಶ್ವರ ಮತ್ತು ಮುದಗಲ್‌ನಲ್ಲಿ ಮೇವಿನ ಬ್ಯಾಂಕ್‍ ಸ್ಥಾಪಿಸಬೇಕು. ಹಳ್ಳಿಗಳಲ್ಲಿ ಜಾನುವಾರುಗಳಿಗೆ ಅಲ್ಲಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಬೇಕು ಎಂದು ಪಶು ಸಂಗೋಪನಾ ಇಲಾಖೆ, ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿದೆ.

ನಾರಾಯಣಪುರ ಬಲದಂಡೆ ಮುಖ್ಯನಾಲೆ ಮತ್ತು ರಾಂಪುರ ನವಲಿ ಜಡಿ ಶಂಕರಲಿಂಗ ಏತ ನೀರಾವರಿ ಯೋಜನೆಯ ನೀರು ಬಳಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಕಾಲುವೆಗೆ ನೀರು ಹರಿಸುವುದರಿಂದ ಶೇ 70ರಷ್ಟು ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ. ಈ ವ್ಯವಸ್ಥೆ ಬಳಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬಸವಸಾಗರ ಅಣೆಕಟ್ಟೆಯ ಹಿನ್ನೀರು ಬಳಸುವ ಉದ್ದೇಶದಿಂದಲೇ ಈ ಬಾರಿ ಎರಡನೇ ಬೆಳೆಗೆ ನೀರು ಹರಿಸಲಿಲ್ಲ. ಎರಡನೇ ಬೆಳೆಗೆ ನೀರು ಬಿಡಿಸಿಕೊಳ್ಳದಿದ್ದರೂ ಪರವಾಗಿಲ್ಲ. ಬೇಸಿಗೆ ದಿನಗಳಲ್ಲಿ ಕಾಲುವೆಗಳ ಮೂಲಕ ಹದಿನೈದು ದಿನಕ್ಕೊಮ್ಮೆ ನೀರು ಹರಿಸಿದ್ದರೆ ಜಾನುವಾರುಗಳ ಪರದಾಟ ನಿಲ್ಲಿಸಬಹುದಾಗಿತ್ತು. ಇದ್ಯಾವುದಕ್ಕೂ ಆಡಳಿತ ವ್ಯವಸ್ಥೆ ಮತ್ತು ಚುನಾಯಿತ ಪ್ರತಿನಿಧಿಗಳು ಸ್ಪಂದಿಸದಿರುವುದು ವಿಪರ್ಯಾಸ.

ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಪ್ರತ್ಯೇಕ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿಲ್ಲ. ಹೀಗಾಗಿ ಜಾನುವಾರುಗಳು ಅಲ್ಲಲ್ಲಿ ಅಳವಡಿಸಿದ ಗುಮ್ಮಿಗಳ ಮೊರೆ ಹೋಗುತ್ತಿವೆ. ಲಿಂಗಸುಗೂರು ಹೊರವಲಯದಲ್ಲಿ ನಾಗರಾಜ ನಾಯಕ ಎಂಬುವವರು ಪ್ರಾಣಿ, ಪಕ್ಷಿಗಳ ನೀರಿನ ದಾಹ ನೀಗಿಸಲು ಅರವಟಿಗೆ ಸ್ಥಾಪಿಸಿದ್ದಾರೆ. ನಿತ್ಯ ಸಾವಿರಾರು ಪಕ್ಷಿ, ಜಾನುವಾರು ನೀರಿನ ದಾಹ ತೀರಿಸಿಕೊಳ್ಳುತ್ತಿವೆ.

ಲಿಂಗಸುಗೂರು ಹೊರವಲಯದ ಯಗಲದಿನ್ನಿ ಗ್ರಾಮದ ಬಳಿ ಬಿ.ಆರ್.ಟ್ಯಾಂಕರ್ ಮಾಲೀಕರು ಆರಂಭಿಸಿರುವ ಅರವಟಿಗೆಯಲ್ಲಿ ನೀರು ಕುಡಿಯುತ್ತಿರುವ ಎಮ್ಮೆಗಳು
ಲಿಂಗಸುಗೂರು ಹೊರವಲಯದ ಯಗಲದಿನ್ನಿ ಗ್ರಾಮದ ಬಳಿ ಬಿ.ಆರ್.ಟ್ಯಾಂಕರ್ ಮಾಲೀಕರು ಆರಂಭಿಸಿರುವ ಅರವಟಿಗೆಯಲ್ಲಿ ನೀರು ಕುಡಿಯುತ್ತಿರುವ ಎಮ್ಮೆಗಳು
ಮಲ್ಲಪ್ಪ ಯರಗೋಳ
ಮಲ್ಲಪ್ಪ ಯರಗೋಳ
ನಾಗರಾಜ ನಾಯಕ
ನಾಗರಾಜ ನಾಯಕ

ಅರವಟಿಗೆ ಸ್ಥಾಪನೆ ‘ತಾಲ್ಲೂಕು ಕೇಂದ್ರದ ಹೊರಲಯದ ಎಂಟು ಸ್ಥಳಗಳಲ್ಲಿ ಪ್ರಾಣಿ–ಪಕ್ಷಿಗಳ ನೀರಿನ ದಾಹ ತೀರಿಸಲು ಅರವಟಿಗೆ ಸ್ಥಾಪಿಸಿರುವೆ. ಎರಡು ಟ್ಯಾಂಕರ್‌ಗಳ ಮೂಲಕ ಬೆಳಿಗ್ಗೆಯಿಂದ ರಾತ್ರಿವರೆಗೆ ನೀರು ತುಂಬಿಸಲಾಗುತ್ತದೆ. ಅರವಟಿಗೆ ಸ್ಥಾಪನೆ ತೃಪ್ತಿ ತಂದಿದೆ. ಮೂಕ ಪ್ರಾಣಿಗಳು ನೀರು ಕುಡಿದು ಚೆಲ್ಲಾಟವಾಡುತ್ತ ಹೋಗುವ ದೃಶ್ಯ ಕಂಡು ಸೇವೆ ಸಾರ್ಥಕ ಎಂಬ ಮನೋಭಾವ ಮೂಡಿದೆ’ ಎಂದು ನಾಗರಾಜ ನಾಯಕ ಅನುಭವ ಹಂಚಿಕೊಂಡಿದ್ದಾರೆ.

‘ಜಿಲ್ಲಾಧಿಕಾರಿಗೆ ಪತ್ರ’ ತಹಶೀಲ್ದಾರ್ ಮಲ್ಲಪ್ಪ ಯರಗೋಳ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ತಾಲ್ಲೂಕಿನಲ್ಲಿ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ. ನೀರು ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ. ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲು ಸೂಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT