ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾಯಕ’ರ ಮೇಲೆ ಹೆಚ್ಚಿದ ನಿರೀಕ್ಷೆ ಭಾರ

ರಾಯಚೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ಗೆ 14ನೇ ಬಾರಿಗೆ ಗೆದ್ದ ಶ್ರೇಯಸ್ಸು
Published 8 ಜೂನ್ 2024, 6:42 IST
Last Updated 8 ಜೂನ್ 2024, 6:42 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡ ಮೀಸಲು) ಕ್ಷೇತ್ರದ ಜನ ಹೊರಗಿನವರು, ಒಳಗಿನವರು ಎನ್ನದೇ ಅಭಿವೃದ್ಧಿಗಾಗಿ ಕಾಂಗ್ರೆಸ್‌ನ ಜಿ. ಕುಮಾರ ನಾಯಕ ಅವರನ್ನು ಆಯ್ಕೆ ಮಾಡಿದ್ದು, ಹೊಸ ಸಂಸದರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ಬಿಜೆಪಿ ಮುಖಂಡರು ಕಾಂಗ್ರೆಸ್‌ ಅಭ್ಯರ್ಥಿಯನ್ನು ‘ವಲಸಿಗ’ ಎಂದು ಜರಿದರೂ ಮತದಾರರು ಮಾತ್ರ ಬದಲಾವಣೆ ಬಯಸಿ ಅನುಭವಿ ಅಧಿಕಾರಿಗೆ ಅಧಿಕಾರ ಕೊಟ್ಟು ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಾಂಗ್ರೆಸ್‌ ಮುಖಂಡರು ಮತದಾರರ ಮೇಲೆ ಇಟ್ಟುಕೊಂಡಿದ್ದ ನಂಬಿಕೆಯನ್ನು ಹುಸಿಗೊಳಿಸಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ 14ನೇ ಬಾರಿಗೆ ಗೆಲುವು ಸಾಧಿಸಿದೆ. ಮತದಾರರ ಋಣ ತೀರಿಸುವ ದಿಸೆಯಲ್ಲಿ ಹೊಸ ಸಂಸದರು ಕಾರ್ಯನಿರ್ವಹಿಸಬೇಕಿದೆ. ಮತ್ತೆ ಬೆಂಗಳೂರಿಗೆ ಹೋಗಿ ಕುಳಿತರೆ ಲೆಕ್ಕಾಚಾರ ಬುಡಮೇಲಾಗಲಿದೆ.

ರಾಯಚೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಹತ್ತಿ ಉತ್ಪಾದನೆಯಾಗುತ್ತದೆ. 80 ಜಿನ್ನಿಂಗ್‌ ಫ್ಯಾಕ್ಟರಿಗಳು ಜಿಲ್ಲೆಯಲ್ಲಿವೆ. ಆದರೂ ಕೇಂದ್ರ ಸರ್ಕಾರ ಕಲಬುರಗಿಗೆ ಟೆಕ್ಸ್‌ಟೈಲ್‌ ಪಾರ್ಕ್ ಮಂಜೂರು ಮಾಡಿದೆ. ಹತ್ತಿ ಗಿರಿಣಿ ಮಾಲೀಕರು ಹಾಗೂ ರೈತರು ಕೇಂದ್ರಕ್ಕೆ ಮಾಡಿದ ಮನವಿಗೆ ಸ್ಪಂದನೆ ದೊರೆತಿಲ್ಲ. ರಾಯಚೂರಿಗೆ ಏಮ್ಸ್‌ ಮಂಜೂರು ಮಾಡಬೇಕು ಎನ್ನುವ ಹೋರಾಟಕ್ಕೆ 757 ದಿನಗಳು ಕಳೆದಿವೆ. ಪ್ರಮುಖವಾಗಿ ಏಮ್ಸ್‌ ಹಾಗೂ ಟೆಕ್ಸ್‌ಟೈಲ್‌ ಪಾರ್ಕ್ ತರುವ ದಿಸೆಯಲ್ಲಿ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ.

ಕೇಂದ್ರ ಸರ್ಕಾರ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯನ್ನು ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಗೆ ಸೇರಿಸಿ ಮೂಗಿಗೆ ತುಪ್ಪ ಹಚ್ಚಿದೆ. ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಶೈಕ್ಷಣಿಕ ಗುಣಮಟ್ಟ ಬಹಳ ಕಳಪೆಯಾಗಿದೆ. ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಪ್ರಯತ್ನಗಳು ನಡೆಯಬೇಕಿದೆ.

ಕೇಂದ್ರ ಸರ್ಕಾರ ಕೃಷ್ಣಾ ‘ಬಿ’ ಸ್ಕೀಮ್‌ ಯೋಜನೆಯ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಹೊರಡಿಸಿದರೆ ನಾರಾಯಣಪುರ ಜಲಾಶಯದ ಎತ್ತರವನ್ನು 519 ಅಡಿಯಿಂದ 524ಗೆ ಎತ್ತರಿಸಲು ಸಾಧ್ಯವಾಗಲಿದೆ. ಅಧಿಸೂಚನೆ ಹೊರಡಿಸುವ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಇದರಿಂದ ರಾಯಚೂರು ಅಷ್ಟೇ ಅಲ್ಲ, ಯಾದಗಿರಿ, ಬಾಗಲಕೋಟೆ ಜಿಲ್ಲೆಗೂ ಅನುಕೂಲವಾಗಲಿದೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ತುಂಗಭದ್ರಾ, ಕೃಷ್ಣಾ, ಭೀಮಾ ನದಿಗಳು ಹರಿದರೂ ನೀರಿನ ಬವಣೆ ಮುಂದುವರಿದಿದೆ. ಜಲ ಜೀವನ ಮಿಷನ್‌ ಯೋಜನೆ ನೆಲ ಕಚ್ಚಿದೆ. ಮಲೆಗಾಲ ಬಂದರೂ ಜನರ ಸಮಸ್ಯೆಗಳಿಗೆ ಜಿಲ್ಲೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳನ್ನು ಮಣಿಸಿ ಕೆಲಸ ತೆಗೆದುಕೊಳ್ಳಬೇಕಿದೆ.

ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ. ಕೃಷಿ ಅಭಿವೃದ್ಧಿಗೆ ಪೂರಕವಾದ ಉದ್ಯಮಗಳು ಜಿಲ್ಲೆಗೆ ಬಂದರೆ ಜನರ ಸಮಸ್ಯೆ ನಿವಾರಣೆಯಾಗಲಿದೆ.

ರೈಲು ಸಂಪರ್ಕ ಬಹುಮಟ್ಟಿಗೆ ಉತ್ತಮವಾಗಿದೆ. ವಿಮಾನಯಾನದಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ. ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ಕೃಷಿ ಉದ್ಯಮ ಇನ್ನಷ್ಟು ವಿಸ್ತರಣೆಯಾಗಲಿದೆ ಎನ್ನವುದು ವಾಣಿಜ್ಯೋದ್ಯಮಿಗಳ ನಂಬಿಕೆಯಾಗಿದೆ. ಹೊಸ ಸಂಸದರು ಹಂತ ಹಂತವಾಗಿಯಾದರೂ ಪರಿಹಾರ ಕಂಡುಕೊಂಡು ಜಿಲ್ಲೆಯ ಅಭಿವೃದ್ಧಿಗೆ ನೆರವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT