ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಎಂಟು ತಿಂಗಳಲ್ಲಿ 251 ಸೋಂಕಿತರು ಪತ್ತೆ, 113 ಸಾವು

ಎಚ್‌ಐವಿ ಸೋಂಕಿತರಿಗೆ ವಾರ್ಷಿಕ ₹ 10 ಸಾವಿರ ಖರ್ಚು
Published 1 ಡಿಸೆಂಬರ್ 2023, 4:43 IST
Last Updated 1 ಡಿಸೆಂಬರ್ 2023, 4:43 IST
ಅಕ್ಷರ ಗಾತ್ರ

ರಾಯಚೂರು: ಆರೋಗ್ಯ ಇಲಾಖೆ 14 ವರ್ಷಗಳಿಂದ ನಿರಂತವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ಸಕಾಲದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುತ್ತಿರುವುದರಿಂದ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಎಚ್‌ಐವಿ ತಪಾಸಣೆಗೆ ಒಳಪಡುವವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ.

2010–2011ರಲ್ಲಿ 20,497 ಶಂಕಿತರ ರಕ್ತತಪಾಸಣೆ ನಡೆಸಿದಾಗ 1900 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕಳೆದ ವರ್ಷ ಗರಿಷ್ಠ 82,553 ಜನರ ರಕ್ತ ತಪಾಸಣೆ ನಡೆಸಿದಾಗ 404ರಲ್ಲಿ ಎಚ್‌ಐವಿ ಸೋಂಕು ಕಂಡು ಬಂದಿತ್ತು. 2023ರ ಏಪ್ರಿಲ್‌ನಿಂದ ಈವರೆಗೆ 46,731 ಜನರ ರಕ್ತ ತಪಾಸಣೆ ಮಾಡಿದಾಗ 251 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ ರಾಯಚೂರು ತಾಲ್ಲೂಕಿನಲ್ಲಿ 1,58,845 ಜನರ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 486 ಸೋಂಕಿತರು ಪತ್ತೆಯಾಗಿದ್ದಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ 2.05,013 ಮಂದಿಯ ಎಚ್‌ಐವಿ ಪರೀಕ್ಷೆ ಮಾಡಿದಾಗ 1,581 ಸೋಂಕಿತರು ಕಂಡು ಬಂದಿದ್ದಾರೆ.

ಮಾನವಿ ತಾಲ್ಲೂಕಿನಲ್ಲಿ 1,43,040 ಜನರ ಎಚ್‌ಐವಿ ಪರೀಕ್ಷೆ ಮಾಡಿದಾಗ 614 ಸೋಂಕಿತರು, ಸಿಂಧನೂರು ತಾಲ್ಲೂಕಿನಲ್ಲಿ 1,43,461 ಮಂದಿಯ ಎಚ್‌ಐವಿ ಪರೀಕ್ಷೆ ಮಾಡಿದಾಗ 1,500 ಸೋಂಕಿತರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ 1,58,845 ಜನರ ಎಚ್‌ಐವಿ ಪರೀಕ್ಷೆ ಮಾಡಿದಾಗ 486 ಸೋಂಕಿತರು ಪತ್ತೆಯಾಗಿದ್ದಾರೆ.

2014-15ರಿಂದ 2023 ರವರೆಗಿನ ಅವಧಿಯಲ್ಲಿ ಜಿಲ್ಲೆಯ ಒಟ್ಟು 7165 ಸೋಂಕಿತರು ಇರುವುದು ಅಂಕಿಅಂಶಗಳು ಹೇಳುತ್ತಿವೆ. ಇದರಲ್ಲಿ 483 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎ.ಆರ್.ಟಿ ಕೇಂದ್ರದ ವರದಿಯ ಪ್ರಕಾರ ಒಂದು ವರ್ಷದ ಅವಧಿಯಲ್ಲಿ 113 ಎಚ್‌ಐವಿ ಸೋಂಕಿತರು ಮೃತಪಟ್ಟಿದ್ದಾರೆ.

‘10 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದ ಜಿಲ್ಲೆಗಳ ಸ್ಥಾನದಲ್ಲಿ ರಾಯಚೂರು 6ನೇ ಸ್ಥಾನದಲ್ಲಿದೆ. ಸೋಂಕಿತ ಗರ್ಭಿಣಿಯರ ಸಂಖ್ಯೆಯಲ್ಲಿ ರಾಯಚೂರು 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳುತ್ತಾರೆ.

‘ಸರ್ಕಾರ ಎಚ್‌ಐವಿ ಸೋಂಕಿತರ ಚಿಕಿತ್ಸೆಗೆ ಒಬ್ಬರಿಗೆ ವಾರ್ಷಿಕ ₹ 10 ಸಾವಿರ ಖರ್ಚು ಮಾಡುತ್ತಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ರಕ್ತ ಪರೀಕ್ಷೆಯೂ ನಿರಂತರವಾಗಿ ನಡೆದಿರುವ ಕಾರಣ ಸೋಂಕಿತರ ಪ್ರಮಾಣ ಇಳಿಯುತ್ತಿರುವುದು ಕಂಡು ಬಂದಿದೆ’ ಎಂದು ತಿಳಿಸುತ್ತಾರೆ.

14 ಎಚ್‌ಐವಿ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆ

ಜಿಲ್ಲೆಯಲ್ಲಿ 14 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಐ.ಸಿ.ಟಿ.ಸಿ, ಎಫ್.ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಲಾಗುತ್ತದೆ ಹಾಗೂ ಖಾಸಗಿ ಸಹಭಾಗಿತ್ವದ 12 ಆಸ್ಪತ್ರೆಗಳಲ್ಲಿ ಎಚ್‌ಐವಿ ಪರೀಕ್ಷಾ ಸೇವಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಶಾಕೀರ್ ಹೇಳುತ್ತಾರೆ.

2022-23ರಲ್ಲಿ 82,553 ಜನರ ರಕ್ತ ಪರೀಕ್ಷಿಸಿದಾಗ 404 ಸೋಂಕಿತರು ಪತ್ತೆಯಾಗಿದ್ದಾರೆ. 2022-23ರಲ್ಲಿ 58,191 ಗರ್ಭಿಣಿಯರ ಪರೀಕ್ಷೆ ನಡೆಸಿದಾಗ 20 ಗರ್ಭಿಣಿಯರಲ್ಲಿ ಎಚ್.ಐ.ವಿ ಸೋಂಕು ಕಂಡು ಬಂದಿದೆ.

2023 ಏಪ್ರಿಲ್ 1ರಿಂದ ಈವರೆಗೆ 46,731 ಜನರ ಪರೀಕ್ಷೆ ನಡೆಸಿದಾಗ 251 ಸೋಂಕಿತರು ಪತ್ತೆ ಆಗಿದ್ದಾರೆ. 33,535 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದಾಗ 14 ಗರ್ಭಿಣಿಯರಿಗೆ ಎಚ್‌ಐವಿ ಸೋಂಕು ತಗಲಿರುವುದು ದೃಢಪಟ್ಟಿದೆ. 36 ಸ್ತೀಯರ ಹೆರಿಗೆ ಆಗಿದ್ದು, ಅವರು ಜನ್ಮ ನೀಡಿದ ಶಿಶುಗಳಿಗೆ ಸೋಂಕು ತಗುಲಿಲ್ಲ ಎಂದು ವಿವರಿಸುತ್ತಾರೆ.

3100 ಲೈಂಗಿಕ ಅಲ್ಪಸಂಖ್ಯಾತರು

ರಾಯಚೂರು ಜಿಲ್ಲೆಯಲ್ಲಿ 3100 ಲೈಂಗಿಕ ಅಲ್ಪಸಂಖ್ಯಾತರು ಇದ್ದಾರೆ. 41 ಮಂದಿಗೆ ಎಚ್‌ಐವಿ ಇದೆ. ಕೆಲ ಪುರುಷರೇ ಪುರುಷರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡಿರುವ ಕಾರಣ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ‘ಆಪ್ತ ಮಿತ್ರ’ ಸರ್ಕಾರೇತರ ಸಂಸ್ಥೆಯ ಸದಸ್ಯ ಈರಣ್ಣ ನಾಯಕ ಹೇಳುತ್ತಾರೆ.

‘ಇಂಥವರಲ್ಲಿ ಕೆಲವರಿಗೆ ದಿನಕ್ಕೆ ಒಬ್ಬರೊಂದಿಗೆ ಲೈಂಗಿಕ ತೃಪ್ತಿ ದೊರೆಯದ ಕಾರಣ ಐದರಿಂದ ಗರಿಷ್ಠ 8 ಜನರೊಂದಿಗೆ ಪ್ರತ್ಯೇಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಇದುವೆ ಸೋಂಕು ಹರಡಲು ಕಾರಣವಾಗುತ್ತದೆ. ಸುರಕ್ಷಿಂತ ಲೈಂಗಿಕ ಕ್ರಿಯೆಯ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ತಿಳಿಸುತ್ತಾರೆ.

‘ಹೆಣ್ಣಿನ ಭಾವನೆಗಳನ್ನು ಹೊಂದಿರುವ ಅನೇಕ ಲೈಂಗಿಕ ಅಲ್ಪಸಂಖ್ಯಾತರು ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಕೆಲ ಲೈಂಗಿಕ ಅಲ್ಪಸಂಖ್ಯಾತರು ಗಂಡಾಗಿ ಪರಿವರ್ತನೆಯಾದ ಪ್ರಕರಣಗಳು ಬೆಂಗಳೂರು ದೆಹಲಿಯಲ್ಲಿ ಇವೆ. ಇಂಥವರಿಗೆ ಲೈಂಗಿಕ ಆಸಕ್ತಿ ಇನ್ನೂ ಹೆಚ್ಚು. ಹೀಗಾಗಿ ಅಂಥವರಿಗೂ ತಿಳಿವಳಿಕೆ ಕೊಡಲಾಗುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT