ದುರ್ನಾತ ಬೀರುತ್ತಿದೆ ಮಾವಿನಕೆರೆ

ರಾಯಚೂರು: ನಗರದಲ್ಲಿ ದೂರದಿಂದ ನೋಡುವವರಿಗೆ ಆಕರ್ಷಣೀಯ ತಾಣವಾಗಿ ಗೋಚರಿಸುವ ಮಾವಿನಕೆರೆಯು ಈಗ ಸುತ್ತಮುತ್ತಲಿನ ಜನರಿಗೆ ದುರ್ನಾತ ಹರಡುವ ಕೇಂದ್ರವಾಗಿದೆ.
ಶುದ್ಧಗಾಳಿ ಸೇವಿಸಲು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕೆರೆದಂಡೆಗೆ ಹೋಗುತ್ತಿದ್ದ ಜನರು ದುರ್ನಾತವನ್ನೂ ಸೇವಿಸುವುದು ಅನಿವಾರ್ಯ. ಕೋವಿಡ್ ಸೋಂಕಿನಿಂದ ಪಾರಾಗಲು ಧರಿಸುವ ಮಾಸ್ಕ್, ಈಗ ದುರ್ನಾತ ಸಹಿಸಿಕೊಳ್ಳುವುದಕ್ಕೂ ಆಸರೆ ಆಗಿದೆ. ಇದೇ ಕಾರಣಕ್ಕಾಗಿ ಬಹುತೇಕ ಜನರು ವಾಯುವಿಹಾರಕ್ಕಾಗಿ ಕೆರೆದಂಡೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.
ಕೆರೆ ಅಭಿವೃದ್ಧಿ ಮಾಡುವುದಕ್ಕಾಗಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ಕೆರೆಯಲ್ಲಿದ್ದ ಹೂಳು ಹಾಗೂ ಇತರೆ ಕಲ್ಮಶವು ವಾಸನೆ ಹರಡಿದೆ ಎನ್ನುವುದು ಜನರ ಅನಿಸಿಕೆ. ಆಕಾಶವಾಣಿಯಿಂದ ಜಹೀರಾಬಾದ್ ಮಾರ್ಗವಾಗಿ ವೀರಣ್ಣ ವೃತ್ತ ತಲುಪುವವರು ಹಾಗೂ ಅಶೋಕ್ ಡಿಪೊ ವೃತ್ತದಿಂದ ಖಾಸಭಾವಿಕಡೆಗೆ ಬರುವವರು ಮೂಗು, ಬಾಯಿ ಮುಚ್ಚಿಕೊಂಡೆ ಬರಬೇಕು. ನಡೆದುಕೊಂಡು ಹೋಗುವವರಿಗೆ ನರಕದರ್ಶನ ಆಗುತ್ತದೆ.
ಕೆರೆಗೆ ಹೊಂದಿಕೊಂಡು ಕಸಾಯಿಖಾನೆ ಇದ್ದು, ಮೊದಲೇ ದುರ್ನಾತ ಬೀರುತ್ತಿತ್ತು. ಈಗ ಅಶೋಕ ಡಿಪೊ ಮಾರ್ಗದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಪಕ್ಕದ ಕೊಳೆಗೇರಿಗಳಲ್ಲಿ ವಾಸಿಸುವ ಜನರ ಆರೋಗ್ಯವೇ ಆಪಾಯದಲ್ಲಿದೆ. ಕೆರೆ ಆಸುಪಾಸು ಸೂಕ್ಷ್ಮ ಕ್ರಿಮಿಗಳು ಸದಾ ಹಾರಾಡಿಕೊಂಡಿರುತ್ತವೆ. ಬೈಕ್‌ನಲ್ಲಿ ಸಂಚರಿಸುವವರು ಇದರಿಂದ ತಾಪತ್ರಯ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಿಗಾ ವಹಿಸಿ ಫಾಗಿಂಗ್ ಮಾಡಿಸುವುದು ಹಾಗೂ ಇತರೆ ಪರಿಹಾರ ಕಲ್ಪಿಸಬೇಕಿದ್ದ ನಗರಸಭೆ ಅಧಿಕಾರಿಗಳು ಇನ್ನೂ ಗಮನ ಹರಿಸಿಲ್ಲ.
ಕಸಾಯಿಖಾನೆ ಸ್ಥಳಾಂತರ ಮಾಡುವ ವಿಷಯ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ
ಈಚೆಗೆ ಚರ್ಚೆಯಾಗಿದೆ. ಆದರೆ, ವಾಸ್ತವದಲ್ಲಿ ಯಾವುದೇ ಕ್ರಮ ಜಾರಿಗೆ ಬಂದಿಲ್ಲ. ಜನವಸತಿಗಳ ಮಧ್ಯದಲ್ಲಿರುವ ಕಸಾಯಿಖಾನೆ ವರ್ಷವಿಡೀ ದುರ್ಗಂಧ ಬೀರುತ್ತಿದೆ. ಇದನ್ನು ಸ್ಥಳಾಂತರಿಸುವಂತೆ ಅನೇಕ ಸಂಘ–ಸಂಸ್ಥೆಗಳು ಕೊಟ್ಟಿರುವ ಮನವಿಗಳನ್ನು ನಗರಸಭೆ ಅಧಿಕಾರಿಗಳು ಲೆಕ್ಕಿಸಿಲ್ಲ.
ಹಲವು ಕೋಟಿ ಅನುದಾನದಲ್ಲಿ ನಗರದಲ್ಲಿ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾಮಗಾರಿ ಪೂರ್ಣವಾಗುತ್ತಿಲ್ಲ. ಮಾವಿನಕೆರೆ ಅಭಿವೃದ್ಧಿ ಕೂಡಾ ಅದೇ ಪಟ್ಟಿಯಲ್ಲಿ ಸೇರಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಕೆರೆ ಅಭಿವೃದ್ಧಿಗೆ ಪ್ರಾಧಿಕಾರದಿಂದ ಬಂದಿರುವ ಅನುದಾನವಿದೆ. ಇದಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದಲೂ ಅನುದಾನ ದೊರೆಯುತ್ತಿದೆ. ಆದರೆ ವಾಸ್ತವದಲ್ಲಿ ಯಾವುದೇ ಕಾಮಗಾರಿ ಯೋಜಿಸಿದಂತೆ ಮುಗಿಯುತ್ತಿಲ್ಲ. ನಿರಂತರ ನೀರು ಪೂರೈಕೆ ಮತ್ತು ಒಳಚರಂಡಿ ಕಾಮಗಾರಿಗಳನ್ನು ಮಾಡುವುದಕ್ಕೆ ನೂರಾರು ಕೋಟಿ ಅನುದಾನ ಒದಗಿಸಲಾಗಿದೆ. ಆದರೆ, ವರ್ಷಗಳಿಂದ ಎರಡೂ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ.
ಕೆರೆ ಅಭಿವೃದ್ಧಿಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ₹ 10 ಕೋಟಿ ಅನುದಾನ ಒದಗಿಸಿದ್ದು, ಬೇಸಿಗೆಯಲ್ಲಿ ಕಾಮಗಾರಿ ಆರಂಭವಾಗುತ್ತದೆ ಎನ್ನುವ ಮುನ್ಸೂಚನೆಯನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ್ದರು. ಆದರೆ ಸಕಾಲಕ್ಕೆ ಕಾಮಗಾರಿ ಆರಂಭವಾಗಲಿಲ್ಲ. ಬೇಸಿಗೆಯಲ್ಲಿ ಕೋವಿಡ್ ಮಹಾಮಾರಿ ಹಾವಳಿ ಕಾರಣದಿಂದ ಅಭಿವೃದ್ಧಿ ನನೆಗುದಿಗೆ ಬೀಳುವಂತಾಗಿದೆ.
--
ಹೂಳು ಕಾಮಗಾರಿ ಸ್ಥಗಿತ
ರಾಯಚೂರು ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಭಾರತೀಯ ಜೈನ್ ಸಂಘಟನೆ ಮತ್ತು ಶಿಲ್ಪಾ ಫೌಂಡೇಷನ್‌ನಿಂದ ಜೂನ್ ಆರಂಭದಲ್ಲಿ ಕೆರೆ ಹೂಳು ತೆಗೆಯುವ ಕಾರ್ಯ ಆರಂಭಿಸಲಾಗಿತ್ತು. ಆದರೆ, ಕೆರೆ ಹೂಳು ಸಾಗಣೆ ಮತ್ತು ವಿಲೇವಾರಿ ಕುರಿತು ಪೂರ್ವಯೋಜನೆ ಮಾಡಿಕೊಳ್ಳದ ಕಾರಣ ಅದನ್ನು ಸ್ಥಗಿತಗೊಳಿಸಲಾಗಿದೆ. ಹೂಳು ತೆಗೆಯುವುದಕ್ಕೆ ಮಳೆ ಕೂಡಾ ಅಡ್ಡಿ ಮಾಡಿತು.
--
ಒತ್ತುವರಿ ತೆರವು ಸವಾಲು
ಕೆರೆ ಹೂಳೆತ್ತುವ ಮೊದಲು ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಹಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತದಿಂದ ಯಾವುದೇ ಬಿಗಿಕ್ರಮ ಜಾರಿಯಾಗಿಲ್ಲ. ಕೆರೆ ಹೂಳನ್ನು ಗಣಿಗಾರಿಕೆ ಪ್ರದೇಶಗಳಿಗೆ ಸಾಗಿಸುವ ಬಗ್ಗೆಯೂ ಜಿಲ್ಲಾಡಳಿತ ಚಿಂತನೆ ನಡೆಸಿದೆ.
--
ಒತ್ತುವರಿಗೆ ಕೊನೆಯಿಲ್ಲ
ಒಂದು ಕಡೆ ಕೆರೆಹೂಳು ತೆಗೆಯುವ ಕಾಮಗಾರಿಗೆ ಬಗ್ಗೆ ಯೋಜಿಸಲಾಗಿದೆ. ಆದರೆ, ಪ್ರತಿದಿನ ಕೆರೆಗೆ ಕಟ್ಟಡಗಳ ಅವಶೇಷ ತಂದು ಹಾಕುವುದನ್ನು ತಡೆಯುವುದಕ್ಕೆ ಸಾಧ್ಯವಾಗಿಲ್ಲ. ಕೆರೆ ಅಂಗಳವನ್ನು ಪ್ರತಿದಿನವೂ ಒತ್ತುವರಿ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಕಟ್ಟೆಚ್ಚರ ವಹಿಸುತ್ತಿಲ್ಲ.
-
ಕೆರೆ ಸಂರಕ್ಷಣೆ ಮಾಡಿದರೆ ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಹೊಸಲು ಕಸವನ್ನೆಲ್ಲ ತಂದು ಕೆರೆಗೆ ಹಾಕುವುದನ್ನು ತಡೆಯಲು ಆವರಣ ಗೋಡೆ ನಿರ್ಮಿಸಬೇಕು.
– ನರಸಿಂಹ ಆಚಾರ್ಯ, ಎನ್‌ಇಕೆಆರ್‌ಟಿಸಿ ನಿವೃತ್ತ ನೌಕರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.