ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮೋಹನ್‍ ದಾಸ್‍ ಆಯೋಗದ ತನಿಖೆ ಚುರುಕು

ನಾರಾಯಣಪುರ ಬಲದಂಡೆ ನಾಲೆ ಅಧಿಕಾರಿಗಳು, ಗುತ್ತಿಗೆದಾರರಲ್ಲಿ ತಳಮಳ
ಬಿ.ಎ ನಂದಿಕೋಲಮಠ
Published 12 ಫೆಬ್ರುವರಿ 2024, 6:48 IST
Last Updated 12 ಫೆಬ್ರುವರಿ 2024, 6:48 IST
ಅಕ್ಷರ ಗಾತ್ರ

ಲಿಂಗಸುಗೂರು: ವಿವಿಧ ಇಲಾಖೆಗಳ ಗುತ್ತಿಗೆ ಪ್ರಕ್ರಿಯೆ ಮತ್ತು ಟೆಂಡರ್ ನೀಡುವಲ್ಲಿ ನಡೆದಿರುವ ಅವ್ಯವಹಾರ, ಕಾಮಗಾರಿ ಮಾಡದೆ ಬಿಲ್ ಪಾವತಿ ಸೇರಿದಂತೆ ಇತರೆ ಅಕ್ರಮಗಳ ದೂರುಗಳ ಕುರಿತು ವಿಚಾರಣೆ ನಡೆಸಲು ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್‍ ದಾಸ್‍ ನೇತೃತ್ವದ ಏಕಸದಸ್ಯ ಸಮಿತಿ ನೇತೃತ್ವ ತಂಡ ತಾಲ್ಲೂಕಿನಲ್ಲಿ ತನಿಖೆ ಚುರುಕುಗೊಳಿಸಿದೆ.

ಈಚೆಗೆ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಕಾಮಗಾರಿ ನಿರ್ವಹಿಸದೆ ಬಿಲ್‍ ಪಾವತಿ, ಶೇ 40 ಪರ್ಸೆಂಟ್ ಕಮಿಷನ್‍ ಕುರಿತ ಆರೋಪ, ದೂರುಗಳ ಹಿನ್ನಲೆಯಲ್ಲಿ ಭೇಟಿ ನೀಡಿದ್ದ ತಂಡ ಸಮಗ್ರ ಮಾಹಿತಿಯೊಂದಿಗೆ ಕೆಲವೆಡೆ ಕೋರ್ ಶ್ಯಾಂಪಲ್‍ ಪಡೆದುಕೊಂಡಿರುವುದನ್ನು ಮೂಲಗಳು ದೃಢಪಡಿಸಿವೆ.

ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಅಧುನೀಕರಣಕ್ಕೆ ₹980ಕೋಟಿ ಹಾಗೂ ವಿತರಣಾ ನಾಲೆ ಮತ್ತು ಹೊಲ ಗಾಲುವೆ ಆಧುನೀಕರಣಕ್ಕೆ ₹1,444 ಕೋಟಿ ಒಟ್ಟು ₹2,424 ಕೋಟಿ ಪ್ರತ್ಯೇಕ ಗುತ್ತಿಗೆದಾರಿಕೆ ನೀಡಲಾಗಿತ್ತು. ಕ್ರಿಯಾಯೋಜನೆ ಸಿದ್ಧಪಡಿಸುವಿಕೆ ಸೇರಿದಂತೆ ಬ್ಲಾಸ್ಟಿಂಗ್‍, ಮರಂ ಬಳಕೆ, ಕಬ್ಬಿಣ ಸರಳು ಬಳಸಿ ಕಾಂಕ್ರಿಟ್‍ ಲೈನಿಂಗ್‍ ಸರ್ವೀಸ್‍ ರಸ್ತೆಗಳ ಸುಧಾರಣ ಹೆಸರಲ್ಲಿ ನಡೆದಿರುವ ಲೂಟಿ ಕುರಿತಂತೆ ಹಲವು ಸಂಘಟನೆಗಳು, ವ್ಯಕ್ತಿಗಳು ದೂರು ನೀಡಿದ್ದರು.

‘ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಟೆಂಡರ್, ಕಳಪೆ ಕಾಮಗಾರಿ, ಕಾಮಗಾರಿ ನಡೆಸದೆ ಬಿಲ್‍ ಪಾವತಿ ಸೇರಿದಂತೆ ದೂರು ಸಲ್ಲಿಸಿದ್ದೇವು. ನ್ಯಾಯಮೂರ್ತಿ ನಾಗಮೋಹನ್‍ ದಾಸ್‍ ನೇತೃತ್ವ ತಂಡ ದೂರುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಾಖಲೆ ಪಡೆದು ತನಿಖೆ ನಡೆಸಬೇಕಿತ್ತು’ ಎಂದು ಸಿಪಿಐ(ಎಂಎಲ್‍) ರೆಡ್‍ ಸ್ಟಾರ್ ರಾಜ್ಯ ಅಧ್ಯಕ್ಷ ಆರ್. ಮಾನಸಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನ್ಯಾಯಮೂರ್ತಿಯೊಬ್ಬರ ನೇತೃತ್ವದ ತಂಡ ದೂರುದಾರರನ್ನು ದೂರವಿಟ್ಟು ವಿಚಾರಣೆ ನಡೆಸುವುದರಿಂದ ವಾಸ್ತವ ಹೊರತೆಗೆಯಲು ಹೇಗೆ ಸಾಧ್ಯ. ವಿಚಾರಣೆ ಹಂತದಲ್ಲಿ ಸಾಕಷ್ಟು ದಾಖಲೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವು. ದೂರು ಹಿಡಿದು ಕಾಲುವೆ ಮೇಲೆ ಪರಿಶೀಲನೆ ನಡೆಸುವುದರಿಂದ ಪ್ರಯೋಜನವಿಲ್ಲ. ದೂರುದಾರ ಖುದ್ದು ಪರಿಶೀಲಿಸಿ, ದಾಖಲೆ ಸಂಗ್ರಹಿಸಿದ್ದನ್ನು ಸ್ವೀಕರಿಸಿದ್ದರೆ ತನಿಖೆಗೆ ಅರ್ಥ ಬರುತ್ತಿತ್ತು’ ಎಂದರು.

ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಅವರನ್ನು ಸಂಪರ್ಕಿಸಿದಾಗ, ‘ವಿವಿಧ ಇಲಾಖೆಗಳಲ್ಲಿನ ಗುತ್ತಿಗೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ನ್ಯಾಯಮೂರ್ತಿ ನಾಗಮೋಹನ್‍ ದಾಸ್‍ ನೆತೃತ್ವದ ಏಕ ಸದಸ್ಯ ಆಯೋಗ ರಚನೆ ಮಾಡಿದ್ದು ಸ್ವಾಗತಾರ್ಹ. ತಾವು ಕೂಡ ಬಲದಂಡೆ ಮುಖ್ಯ ನಾಲೆ, ವಿತರಣಾ ನಾಲೆಗಳ ಟೆಂಡರ್, ಅಕ್ರಮ ಬಿಲ್‍ ಪಾವತಿ ಸೇರಿದಂತೆ ಇತರೆ ಅಂಶಗಳ ದೂರು ಸಲ್ಲಿಸಿದ್ದೆ. ನನ್ನನ್ನು ಆಹ್ವಾನಿಸಿ ದಾಖಲೆ ಪಡೆದುಕೊಳ್ಳಬೇಕಿತ್ತು’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT