ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಚಾರಕ್ಕೆ ಬೆಂಕಿ ಬಿಸಿಲು, ಕ್ರಿಮಿ–ಕೀಟಗಳ ಕಾಟ

ಮೈದಾನದತ್ತ ಹರಿದು ಬರುತ್ತಿರುವ ಹಾವು, ಚೇಳುಗಳು: ಬಿಸಿಲಲ್ಲಿ ಪ್ರಚಾರಕ್ಕೆ ಬರಲು ಹಿಂದೇಟು ಹಾಕುತ್ತಿರುವ ಕಾರ್ಯಕರ್ತರು
ಚಂದ್ರಕಾಂತ ಮಸಾನಿ
Published 28 ಏಪ್ರಿಲ್ 2024, 5:09 IST
Last Updated 28 ಏಪ್ರಿಲ್ 2024, 5:09 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭಾ ಚುನಾವಣೆಗೆ ಒಂಬತ್ತು ದಿನಗಳು ಬಾಕಿ ಇದ್ದರೂ ಪ್ರಚಾರಕ್ಕೆ ಉಳಿದಿರುವುದು ಆರು ದಿನಗಳು ಮಾತ್ರ. ಸಮಯದ ಅಭಾವದಿಂದಾಗಿ ರಾಜಕೀಯ ಪಕ್ಷಗಳು ಹಗಲು–ರಾತ್ರಿ ಪ್ರಚಾರ ನಡೆಸಿವೆ. ಆದರೆ, ಹಗಲು ಬೆಂಕಿ ಬಿಸಿಲು, ರಾತ್ರಿ ಕ್ರಿಮಿ ಕೀಟಗಳ ಕಾಟ ಹೆಚ್ಚಾಗಿದೆ. ಇದರಿಂದ ಪ್ರಚಾರಕ್ಕೆ ತೊಡಕಾಗಿದೆ.

ಬೆಳಗಾಗುತ್ತಲೇ ಸೂರ್ಯ ಬೆಂಕಿ ಉಗುಳಲು ಶುರು ಮಾಡಿದ್ದಾನೆ. ರಣ ಬಿಸಿಲಿನಿಂದ ರಕ್ಷಣೆ ಪಡೆಯಲು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಬೆಳಗಾಗುವುದರಲ್ಲಿ ಮತದಾರರ ಮನೆ ಬಾಗಿಲಿಗೆ ಬಂದು ಕೈಮುಗಿದು ನಿಂತು ಮತ ಯಾಚಿಸುತ್ತಿದ್ದಾರೆ.

ಬಿಸಿಲಿನಿಂದಾಗಿ ಬೆಳಿಗ್ಗೆ ಜನರನ್ನು ಸೇರಿಸುವುದು ತುಂಬ ಕಷ್ಟವಾಗುತ್ತಿದೆ. ಕಾರ್ಯಕರ್ತರು ಸಹ ಬಿಸಿಲಲ್ಲಿ ಪ್ರಚಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಹುತೇಕ ಸಭೆ–ಸಮಾರಂಭಗಳು ಸಂಜೆ 5 ಗಂಟೆಯ ನಂತರವೇ ನಡೆಯುತ್ತಿವೆ.

ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳು ಗುಡ್ಡ–ಬೆಟ್ಟಗಳ ಸುತ್ತಮುತ್ತವೇ ಇವೆ. ಬಿಸಿಲಿಗೆ ಕಾದ ಬಂಡೆಗಳು ಸಂಜೆಯ ನಂತರ ಬಿಸಿ ಹಬೆ ಹೊರ ಸೂಸುತ್ತಿವೆ. ಇದರಿಂದ ಬಿಲ, ಕಲ್ಲು ಪೊಟರೆಗಳಲ್ಲಿ ಕುಳಿತ ಹಾವು–ಚೇಳುಗಳು ಹೊರ ಬರುತ್ತಿವೆ. ಮನೆಗಳಿಗೂ ನುಗ್ಗುತ್ತಿವೆ.

ಸಂಜೆ ಗ್ರಾಮಗಳಲ್ಲಿ ವೇದಿಕೆ ನಿರ್ಮಿಸಿ ಲೈಟ್‌ಗಳನ್ನು ಹಾಕಿ ಪ್ರಚಾರ ಸಭೆಗಳನ್ನು ನಡೆಸಲಾಗುತ್ತಿದೆ. ಲೈಟಿಗೆ ಅಪಾರ ಪ್ರಮಾಣದಲ್ಲಿ ಹುಳುಗಳು ಮುತ್ತಿಕ್ಕುತ್ತಿವೆ. ಭಾಷಣ ಮಾಡುವವರಿಗೂ ಕಿರಿಕಿರಿ ಉಂಟು ಮಾಡುತ್ತಿವೆ.

‌ಧ್ವನಿವರ್ಧಕ ಹಾಗೂ ಸೌಂಡ್‌ ಬಾಕ್ಸ್‌ಗಳ ಶಬ್ದದ ಅಬ್ಬರಕ್ಕೆ ಹಾವುಗಳು ದಿಕ್ಕಾಪಾಲಾಗಿ ಓಡುತ್ತಿವೆ. ಒಂದೊಮ್ಮೆ ಜನರು ಕುಳಿತ ಸ್ಥಳದಲ್ಲೇ ನುಗ್ಗಿ ಆತಂಕ ಸೃಷ್ಟಿಸುತ್ತಿವೆ. ಗ್ರಾಮಗಳಲ್ಲಿ ತಿಪ್ಪೆ ಗುಂಡಿಗಳು ಇರುವ ಸ್ಥಳಗಳಲ್ಲಿಯೇ ಸರಿಸೃಪಗಳು ಹೆಚ್ಚು ಹರಿದಾಡುತ್ತಿವೆ. ಪ್ರಚಾರ ಸಭೆಗಳಿಗೆ ಜನ ಆತಂಕದಲ್ಲೇ ಬಂದು ಕುಳಿತುಕೊಳ್ಳುವಂತಾಗಿದೆ.

ಕಳೆದ ವಾರ ರಾಯಚೂರಿನ ಮೈಲಾರ ನಗರದ ಮೈಲಾರಲಿಂಗ ದೇವಸ್ಥಾನದ ಆವರಣದಲ್ಲಿ ನಡೆದ ರಾಜಕೀಯ ಪಕ್ಷವೊಂದರ ಸಭೆಯಲ್ಲಿ ಲೈಟ್‌ ಹುಳುಗಳು ವೇದಿಕೆ ಮೇಲೆ ಕುಳಿತಿದ್ದ ಮುಖಂಡರಿಗೆ ಕಿರಿಕಿರಿ ಉಂಟು ಮಾಡಿದವು. ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಜನ ಕುತೂಹಲದಿಂದ ಭಾಷಣ ಆಲಿಸುತ್ತಿದ್ದ ಸಂದರ್ಭದಲ್ಲೇ ಬೆಟ್ಟದ ಮೇಲಿನ ಕಲ್ಲು ಹಾಗೂ ದೂಳಿನ ಮದ್ಯೆ ದೊಡ್ಡದಾದ ಹಾವೊಂದು ಸರ ಸರನೇ ಜನರ ಮಧ್ಯೆ ಹರಿದು ಆತಂಕ ಸೃಷ್ಟಿಸಿತು. ಎಷ್ಟು ವೇಗದಲ್ಲಿ ಬಂದಿತೋ, ಅಷ್ಟೇ ವೇಗದಲ್ಲಿ ಹೋಗಿ ಮಂದಿರದ ಆವರಣದಲ್ಲಿರುವ ಬಿಲ ಸೇರಿಕೊಂಡಿತು. ಪ್ರಚಾರ ಸಭೆ ಮುಗಿದ ನಂತರ ಮಹಿಳೆಯರು ಮಕ್ಕಳು ಭಯದಲ್ಲೇ ಹೆಜ್ಜೆಗಳನ್ನು ಇಡುತ್ತ ಮನೆಗಳನ್ನು ಸೇರಿದರು.

‘ಮೈಲಾರ ನಗರದಲ್ಲಿ ಕಲ್ಲು ಬಂಡೆಗಳು ಹಾಗೂ ಪೊದೆಗಳು ಇರುವ ಕಾರಣ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತವೆ. ದೊಡ್ಡದಾದ ಹಾವೊಂದು ಪ್ರಚಾರ ಸಭೆಯಲ್ಲೇ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಅದೃಷ್ಟವಶಾತ ಯಾರಿಗೂ ಏನೂ ಮಾಡಿಲ್ಲ’ ಎಂದು ಮೈಲಾರನಗರದ ಫಾತಿಮಾಬಿ ಹಾಗೂ ಶಾಂತಮ್ಮ ತಿಳಿಸಿದರು.

‘ನಗರದಲ್ಲಿ ಸೊಳ್ಳೆಗಳ ಕಾಟವೂ ಅಧಿಕವಾಗಿದೆ. ಬಿಸಿಲಿನ ಧಗೆ ತಾಳಲಾಗದೇ ಮನೆಯಿಂದ ಹೊರಗೆ ಬಂದು ನಿಂತರೆ ನೂರು ಸಂಖ್ಯೆಯಲ್ಲಿ ಸೊಳ್ಳೆಗಳು ಮುತ್ತಿಕ್ಕುತ್ತಿವೆ. ಸಂಜೆ ಕ್ರಿಮಿ ಕೀಟಗಳು ಹಾರಾಟ ಹೆಚ್ಚಿರುವ ಕಾರಣ ಅವುಗಳನ್ನು ಸೇವಿಸಲು ಹಾವುಗಳು ಹೊರ ಬರುತ್ತಿವೆ’ ಎಂದು ಹೇಳಿದರು.

Highlights - ಬೆಳಗಿನ ಜಾವ ಮಠ, ಮಂದಿರಗಳಲ್ಲಿ ಮತದಾರರ ಭೇಟಿ ಪ್ರಾರ್ಥನಾ ಸ್ಥಳಗಳಲ್ಲೇ ನಡೆಯುತ್ತಿರುವ ಪ್ರಚಾರ ಸಭೆಗಳು ರಾಜಕಾರಣಿಗಳನ್ನು ಹಿಂಡೆ ಹಿಪ್ಪೆ ಮಾಡಿದ ರಣ ಬಿಸಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT