ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ | ಕಾಯಕಲ್ಪಕ್ಕೆ ಕಾಯುತ್ತಿದೆ ಕಾಳೇಗೌಡನದೊಡ್ಡಿ

ಗೋವಿಂದರಾಜು ವಿ.
Published 7 ಜನವರಿ 2024, 5:20 IST
Last Updated 7 ಜನವರಿ 2024, 5:20 IST
ಅಕ್ಷರ ಗಾತ್ರ

ಹಾರೋಹಳ್ಳಿ : ತಾಲೂಕಿನ ಕಾಳೆಗೌಡನದೊಡ್ಡಿ ಗ್ರಾಮ ಸೌಲಭ್ಯ ವಂಚಿತವಾಗಿದ್ದು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಹಾರೋಹಳ್ಳಿ ತಾಲೂಕಿನ ಚೀಲೂರು ಗ್ರಾಮ ಪಂಚಾಯಿತಿಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಕಾಳೇಗೌಡನದೊಡ್ಡಿ ಗ್ರಾಮ ಇದೆ.

ಕಾಳೇಗೌಡನದೊಡ್ಡಿ ಹಾಗೂ ವಾಟೆಗೌಡನದೊಡ್ಡಿ ಎರಡು ಗ್ರಾಮಗಳು ಸೇರಿ ಒಟ್ಟಾಗಿ 120 ಮನೆಗಳಿದ್ದು, 600 ಜನಸಂಖ್ಯೆ ಇದೆ. ಇಲ್ಲಿ ಸುಮಾರು 450ಕ್ಕೂ ಹೆಚ್ಚು ಮತದಾರರಿದ್ದಾರೆ. ಆದರೂ ಕೂಡ ಜನಪ್ರತಿನಿಧಿಗಳು ಅಧಿಕಾರಿಗಳು ಕನಿಷ್ಟ ಸೌಲಭ್ಯ ನೀಡುವ ಕೆಲಸ ಮಾಡಿಲ್ಲ.

ಹಾಳಾದ ಸಂಪರ್ಕ ರಸ್ತೆಗಳು: ಸಂಪರ್ಕ ರಸ್ತೆಗಳು ಪೂರ್ಣ ಹಾಳಾಗಿದ್ದು ಮಣ್ಣಿನ ರಸ್ತೆಯಲ್ಲಿಯೇ ಓಡಾಡಬೇಕು. ಜೊತೆಗೆ ರಸ್ತೆ ಪಕ್ಕದಲ್ಲಿ ಕಸದ ರಾಶಿ ಹಾಗೂ ಗಿಡಗೆಂಟೆಗಳು ಬೆಳೆದು ಜನರ ಓಡಾಟಕ್ಕೆ ತೊಂದರೆಯಾಗಿದೆ.

ಸಾರಿಗೆ ವ್ಯವಸ್ಥೆ ಇಲ್ಲ: ಬಹಳಷ್ಟು ವರ್ಷಗಳಿಂದ ಸಾರಿಗೆ ವ್ಯವಸ್ಥೆ ಇಲ್ಲ. ರಸ್ತೆಗಳು ಹದಗೆಟ್ಟಿರುವುದರಿಂದ ಬಸ್‌ಗಳು ಗ್ರಾಮಕ್ಕೆ ಬರುವುದಿಲ್ಲ ವಿವಿಧ ಗ್ರಾಮಗಳಿಗೆ ನಾನಾ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

ಸ್ವಚ್ಛತೆ ಮರೀಚಿಕೆ: ಗ್ರಾಮದಲಿ ಚರಂಡಿಗಳು ವಾಸನೆ ಬೀರುತ್ತಿವೆ. ಸೂಕ್ತ ರೀತಿಯ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಎಲ್ಲೆಂದರಲ್ಲಿ ನಿಂತು ಗಬ್ಬುವಾಸನೆ ಬೀರುತ್ತಿದೆ. ಇನ್ನು ಕೆಲವು ಗ್ರಾಮದ ಕೆಲವು ಕಡೆ ಚರಂಡಿ ವ್ಯವಸ್ಥೆಯೇ ಇಲ್ಲ.

ಕೆಟ್ಟು ನಿಂತ ಶುದ್ಧನೀರಿನ ಘಟಕ: ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 2-3 ವರ್ಷಗಳೇ ಕಳೆದರೂ ಇದೂವರೆಗೂ ಸರಿ ಮಾಡುವ ಕೆಲಸ ಮಾಡಿಲ್ಲ. ಜನರು ಚರಂಡಿ ಪಕ್ಕದಲ್ಲಿರುವ ಬೋರ್‌ವೆಲ್‌ನಿಂದ ಬರುವ ನೀರನ್ನು ಕುಡಿಯಬೇಕಾದ ಸ್ಥಿತಿಯಿದ್ದು ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿದರೂ ರಿಪೇರಿ ಮಾಡುವ ಕೆಲಸ ಮಾಡಿಲ್ಲ.

ಸಮರ್ಪಕ ಬೀದಿ ದೀಪಗಳಿಲ್ಲ:  ಬೀದಿದೀಪಗಳಿಲ್ಲದೇ ಜನ ರಾತ್ರಿ ವೇಳೆಯಲ್ಲಿ ಗ್ರಾಮದಲ್ಲಿ ಓಡಾಡಬೇಕಾದರೆ ಭಯ ಪಡುವಂಥ ವಾತಾವರಣ ಇದೆ. 

ತೆರಿಗೆ ಮಾತ್ರ ಬೇಕು: ಪ್ರತಿವರ್ಷ ಗ್ರಾಮ ಪಂಚಾಯಿತಿ ನಿಗದಿಪಡಿಸಿರುವ ಎಲ್ಲಾ ರೀತಿಯ ತೆರಿಗೆಗಳನ್ನು ಇಲ್ಲಿನ ನಿವಾಸಿಗಳು ತಪ್ಪದೇ ಕಟ್ಟುತ್ತಾ ಬರುತ್ತಿದ್ದಾರೆ. ಜನರಿಂದ ತೆರಿಗೆ ಭರಿಸಿಕೊಳ್ಳುವ ಗ್ರಾಮ ಪಂಚಾಯಿತಿ, ಪ್ರತಿವರ್ಷ ಸಿದ್ಧಪಡಿಸುವ ಕ್ರಿಯಾಯೋಜನೆಯಲ್ಲಿ ಮಾತ್ರ ಗ್ರಾಮಕ್ಕೆ ಸೌಲಭ್ಯ ನೀಡುತ್ತಿಲ್ಲ .

ಕೂಡಲೇ ಗ್ರಾಮಕ್ಕೆ ಸಂಬಂಧಪಟ್ಟ ಅವಶ್ಯಕವಿರುವ ಸೌಕರ್ಯಗಳನ್ನು ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡುವುದರ ಮೂಲಕ ಗ್ರಾಮಕ್ಕೆ ಕಾಯಕಲ್ಪ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಕೆಟ್ಟು ಹೋಗಿರುವ ಶುದ್ದ ಕುಡಿಯುವ ನೀರಿನ ಘಟಕ
ಕೆಟ್ಟು ಹೋಗಿರುವ ಶುದ್ದ ಕುಡಿಯುವ ನೀರಿನ ಘಟಕ
ಸ್ವಚ್ಚತೆಯಿಲ್ಲದೇ ಚರಂಡಿಯಲ್ಲಿ ಗಿಡಗಂಟೆಗಳು ಬೆಳೆದಿರುವುದು
ಸ್ವಚ್ಚತೆಯಿಲ್ಲದೇ ಚರಂಡಿಯಲ್ಲಿ ಗಿಡಗಂಟೆಗಳು ಬೆಳೆದಿರುವುದು
ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ
ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ

ಗ್ರಾಮ ಪಂಚಾಯಿತಿಗೆ ನಾನು ಬಂದು ಮೂರು ತಿಂಗಳಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಸಲಾಗುವುದು. - ಮಹದೇವ ಪಿಡಿಒ ಚೀಲೂರು ಗ್ರಾಮ ಪಂಚಾಯಿತಿ

ಗ್ರಾಮದಲ್ಲಿ ಸರಿಯಾದ ಬೀದಿದೀಪ ಸ್ವಚ್ಛತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ಜನರಿಗೆ ತೊಂದರೆಯಾಗಿದೆ.  ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ -ಗುರುಮೂರ್ತಿ ಗ್ರಾಮಸ್ಥ ಕಾಳೇಗೌಡನ ದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT