ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯ ಕೂಗು: ಕೊಳಚೆ ತುಂಬಿಕೊಂಡ ‘ಗುಂಡ್ಲಮ್ಮ’

ಗುಂಡ್ಲಮ್ಮನ ಕೆರೆ ಕೋಡಿ ವ್ಯಾಪ್ತಿಯ ಜನರ ಗೋಳಾಟ, ಜನರ ಕಷ್ಟ ಕೇಳದ ಅಧಿಕಾರಿಗಳು
ಮೈಲಾರಿ ಲಿಂಗಪ್ಪ
Published 30 ಮೇ 2024, 6:08 IST
Last Updated 30 ಮೇ 2024, 6:08 IST
ಅಕ್ಷರ ಗಾತ್ರ

ತುಮಕೂರು: ‘ಊರಲ್ಲಿರುವ ಕೊಳಚೆಯೆಲ್ಲಾ ನಮ್ಮ ಮನೆ ಮುಂದೆ ಸೇರುತ್ತದೆ. ಕೆಟ್ಟ ವಾಸನೆಯಿಂದ ಊಟ ಮಾಡಲು ಸಹ ಆಗುವುದಿಲ್ಲ’.....

ಹೀಗೆಂದು ನಗರದ ಕ್ಯಾತ್ಸಂದ್ರ ನಿವಾಸಿ ಜಯಮ್ಮ ಬೇಸರದಲ್ಲಿಯೇ ಮಾತುಗಳನ್ನಾಡಿದರು.

ಕ್ಯಾತ್ಸಂದ್ರದ ಬಳಿ ಇರುವ ಗುಂಡ್ಲಮ್ಮನ ಕೆರೆಯ ಕೋಡಿ ಪ್ರದೇಶದ ನಿವಾಸಿಗಳ ಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ. ತುಂಬಾ ದಯನೀಯ ಸ್ಥಿತಿಯಲ್ಲಿ ಇಲ್ಲಿನ ಜನ ದಿನ ದೂಡುತ್ತಿದ್ದಾರೆ. ಸಿದ್ಧಗಂಗಾ ಮಠ ಸೇರಿದಂತೆ ವಿವಿಧ ಭಾಗಗಳ ತ್ಯಾಜ್ಯ ನೀರಿನಿಂದ ಗುಂಡ್ಲಮ್ಮನ ಕೆರೆ ಈಗಾಗಲೇ ಕಲುಷಿತಗೊಂಡಿದೆ. ಮಳೆ ಬಂದು ಕೋಡಿ ಹರಿದಾಗಲೆಲ್ಲ ಕೆರೆಯ ತ್ಯಾಜ್ಯದ ನೀರು ಮನೆಗಳಿಗೆ ನುಗ್ಗುತ್ತಿದೆ.

ಕೆರೆಯ ಕೋಡಿ ಪ್ರದೇಶದ ಮನೆಗಳಿಗೆ ನೀರು ಹೋಗದಂತೆ ತಡೆಗೋಡೆ ನಿರ್ಮಿಸಿಲ್ಲ. ಈ ಬಗ್ಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಇತ್ತ ಗಮನ ಹರಿಸಿಲ್ಲ. ಪಾಲಿಕೆಯ ಅಧಿಕಾರಿಗಳು ನಮಗೂ, ಈ ಸಮಸ್ಯೆಗೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಜಯ‌ಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ಗುಂಡ್ಲಮ್ಮನ ಕೆರೆ ಕೋಡಿ ವ್ಯಾಪ್ತಿಯ ಜನರ ಗೋಳು ಕೇಳುವ ಗೋಜಿಗೆ ಹೋಗುತ್ತಿಲ್ಲ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯದ ಜನರೇ ಹೆಚ್ಚಾಗಿ ವಾಸವಿದ್ದಾರೆ. ಅವರಿಗೆ ಸರ್ಕಾರದಿಂದ ಇದುವರೆಗೆ ಅಗತ್ಯ ಸೌಲಭ್ಯಗಳೇ ಸಿಕ್ಕಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾದರೂ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿಲ್ಲ. ಅವರಿಗೆ ಸ್ವಂತ ಜಾಗ, ಸೂರು ಒದಗಿಸಲು ಇದುವರೆಗೆ ಸಾಧ್ಯವಾಗಿಲ್ಲ.

ಗುಂಡ್ಲಮ್ಮನ ಕೆರೆಯಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ. ಕೆರೆ ಬತ್ತಿ ಹೋಗಿದ್ದ ಸಮಯದಲ್ಲಿ ಅಂಗಡಿಗಳ ತ್ಯಾಜ್ಯ, ಪ್ಲಾಸ್ಟಿಕ್‌ನಿಂದ ಕೆರೆ ತುಂಬಿಕೊಂಡಿತ್ತು. 2022ರಲ್ಲಿ ಸುರಿದ ಭಾರಿ ಮಳೆಯಿಂದ ಕೆರೆ ತುಂಬಿ, ಕೋಡಿ ಹರಿದಿತ್ತು. ಜೋರಾಗಿ ಮಳೆ ಸುರಿದ ಪ್ರತಿ ಬಾರಿಯೂ ಇಲ್ಲಿನ ಜನರು ಪಾಡು ಹೇಳತೀರದಾಗಿದೆ. ಕೆರೆಯ ನಿರ್ವಹಣೆಯತ್ತ ತಲೆ ಹಾಕದ ಅಧಿಕಾರಿಗಳು ಕೆರೆ ಕೋಡಿ ಬಳಿಯ ತಡೆಗೋಡೆ ನಿರ್ಮಿಸುವುದನ್ನು ಮರೆತಿದ್ದಾರೆ.

ಗುಂಡ್ಲಮ್ಮನ ಕೆರೆ 11 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 21.08 ಗುಂಟೆ ಒತ್ತುವರಿಯಾಗಿದ್ದು, ಇದರ ತೆರವು ಕಾರ್ಯವೂ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳಿಂದ ಕೆರೆಯ ಅಳತೆ ಮಾಡಿ, ಒತ್ತುವರಿ ತೆರವುಗೊಳಿಸುವ ಕೆಲಸ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದಷ್ಟೇ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೆರೆಯ ಕೋಡಿ ಜನರ ಜೀವನ ಸುಧಾರಣೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

ಗುಂಡ್ಲಮ್ಮನ ಕೆರೆಯ ಕೋಡಿ ಬಳಿಯ ಮನೆಗಳ ಮುಂದೆ ಹರಿಯುತ್ತಿರುವ ತ್ಯಾಜ್ಯ ನೀರು
ಗುಂಡ್ಲಮ್ಮನ ಕೆರೆಯ ಕೋಡಿ ಬಳಿಯ ಮನೆಗಳ ಮುಂದೆ ಹರಿಯುತ್ತಿರುವ ತ್ಯಾಜ್ಯ ನೀರು

ಗ್ರಾಮ ದೇವತೆ ‘ಗುಂಡ್ಲಮ್ಮ’

ಕ್ಯಾತ್ಸಂದ್ರ ಗ್ರಾಮ ದೇವತೆ ಗುಂಡ್ಲಮ್ಮ. ಇಲ್ಲಿನ ಕೆರೆಯನ್ನು ಇದೇ ಹೆಸರಿನಿಂದ ಕರೆಯಲಾಗುತ್ತಿದೆ. ಈ ಹಿಂದೆ ಕ್ಯಾತ್ಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲ ಸೇರಿಕೊಂಡು ಗುಂಡ್ಲಮ್ಮ ದೇವಿ ಜಾತ್ರೆ ಮಾಡುತ್ತಿದ್ದರು. ಪ್ರತಿ ವರ್ಷ ಜಾತ್ರಾ ಮಹೋತ್ಸವ ಆಗುತ್ತಿತ್ತು. ದಿನಗಳು ಕಳೆದಂತೆ ಆಚರಣೆಯೂ ಕಡಿಮೆಯಾಗಿದೆ. ಗುಂಡ್ಲಮ್ಮನ ಕೆರೆ ಅತೀ ಪುರಾತನವಾದದ್ದು ಇದೊಂದು ಪೂಜ್ಯನೀಯ ಸ್ಥಳವಾಗಿತ್ತು. ನಗರ ಬೆಳವಣಿಗೆಯಾದಂತೆ ಕೆರೆಯ ವಿಸ್ತೀರ್ಣ ಕಡಿಮೆಯಾಯಿತು. ಮನೆ ಅಂಗಡಿಗಳ ತ್ಯಾಜ್ಯ ಕೆರೆಯ ಒಡಲು ಸೇರಿತು. ಇದರಿಂದ ಕೆರೆಯ ನೀರು ಬಳಕೆಗೆ ಬಾರದಂತಾಗಿದ್ದು ಕಲುಷಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT