ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಪ್ಪಿನ ಕಾಲದಲ್ಲಿ ಮೂಲೆಗುಂಪು

ಎಲ್ಲಿ ಹೋಗುವಿರಿ ನಿಲ್ಲಿ ಜೀವಗಳೇ ನಮ್ಮ ಮಾತು ಕೇಳಿ...
Last Updated 4 ಜನವರಿ 2016, 11:40 IST
ಅಕ್ಷರ ಗಾತ್ರ

ತುಮಕೂರು: ‘ನಂಗೂ ಸೊಸೆ, ಮೊಮ್ಮಕ್ಕಳು ಇದ್ದಾರೆ. ಅವ್ರು ಮನೇಲಿ ಬೆಚ್ಚಗಿದ್ದಾರೆ, ನಾನಿಲ್ಲಿ ರೋಡ್ ಪಕ್ಕ ಚಳೀಲಿ ನಡುಗ್ತಾ ಜವರಾಯನಿಗೆ ಕಾಯ್ತ ಇವ್ನಿ. ಅಷ್ಟೇ ವ್ಯತ್ಯಾಸ...’ ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ಹಣ್ಣಿನ ಅಂಗಡಿ ಎದುರಿನ ಚಿಕ್ಕ ಕಲ್ಲಿನ ಮೇಲೆ ಮುದುಡಿ ಕುಳಿತ ಅಜ್ಜಿಗೆ ತನ್ನ ಮಾತು ಕೇಳಿಸಿಕೊಳ್ಳುವ ಕಿವಿಯೊಂದು ಬೇಕಿತ್ತು. ಅಜ್ಜಿ ಸಣ್ಣ ಹನುಮಕ್ಕ ಹೇಳಿದ ಮಾತು ಪೂರ್ಣ ಕೇಳಿದ ನಂತರ ಇದು ಈ ಅಜ್ಜಿಯೊಬ್ಬರ ಕಥೆಯಷ್ಟೇ ಅಲ್ಲ ಎನಿಸಿತು. ನಗರದ  ಸಾಕಷ್ಟು ಬೀದಿಗಳಲ್ಲಿ ಅನಾಥ ಹಿರಿಯರು ನೋವಿನ ಕಥನಗಳು ತೆರೆದುಕೊಳ್ಳುತ್ತವೆ.

‘ನಂಗೆ ಈಗ 88 ವರ್ಷ ಆಯ್ತು. ಮಗ ಸತ್ತು ವರ್ಷ ಆಗೋದ್ರೊಳಗೆ ಸೊಸೆ– ಮೊಮ್ಮಕ್ಕಳು ಮನೆಯಿಂದ ಹೊರಗೆ ಹಾಕಿದ್ರು. ಎಲ್ರೂ ಇದ್ದೂ, ಯಾರೂ ಇಲ್ಲದ ಬದುಕು ನನ್ದು’ ಎನ್ನುತ್ತಾ ಇನ್ನೂ ಸಾವು ತಾರದ ದೇವರನ್ನು ಅಜ್ಜಿ ಶಪಿಸಿದರು. ಅಲ್ಲಿಗೆ ಬಂದ ದಾರಿ ಹೋಕರೊಬ್ಬರು ಅಜ್ಜಿಯನ್ನು ಕಂಡು, ‘ಯಾಕಜ್ಜೀ ಇಲ್ಲಿ ಕುಂತ್ಕಂಡೆ. ವಾಕ್‌ ಮಾಡಿ ಸುಸ್ತಾಯ್ತಾ? ಎಲ್ಲಿ ನಿಮ್ಮ ಮನೆ? ಮನೆವರೆಗೆ ಬಿಟ್ಟು ಬರ್ಲಾ?’ ಎಂದು ಕೇಳಿದರು.

‘ಇಲ್ಲ ಕಣಪ್ಪ, ನಾನು ಅನಾಥೆ. ನಂಗೆ ಅಡ್ರೆಸ್ಸೇ ಇಲ್ಲ. ಅಂಗಡಿ ಪಕ್ಕದ ಶೆಡ್‌ನಲ್ಲಿ ಮಲಗ್ತೀನಿ. ನಿಮ್ಮಂಥೋರೋ ಅಯ್ಯೋ ಮುದುಕಿ ಅಂತ ಏನಾರ ಕೊಟ್ರೆ ತಿಂತೀನಿ’ ಎಂದು ತಮ್ಮ ಜೀವನದ ವೃತ್ತಾಂತ ತೆರೆದಿಟ್ಟರು. ‘ಒಂದು ಬೆರಳಿಗೆ ಒಂದು ಉಗುರು ಅಡ್ಡ ಕಣಮ್ಮಾ. ನಮ್ಮದು ಅನ್ನೋ ಆಸ್ತಿ ಅಂತ ಇದ್ದ ಅವರೇ ಹೋದ್ಮೇಲೆ ಇನ್ನೇನು...’ ಎಂದು ಮಾತು ಆರಂಭಿಸಿದವರ ಹೆಸರು ಆನಂದಮ್ಮ.

ಅವರಿಗೆ ವಯಸ್ಸಾಗಿದೆ, ಜೀವನದಲ್ಲಿ ನೊಂದಿದ್ದಾರೆ ಎಂದು ಹೇಳಲು ಯಾವ ಪುರಾವೆಯೂ ಬೇಕಿಲ್ಲ. ಹೆಸರಿನಲ್ಲಿರೋ ಆನಂದ ಬದುಕಿನಲ್ಲಿ ಇಲ್ಲ. ‘ಇಬ್ಬರು ಹೆಣ್ಣುಮಕ್ಕಳು ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದರು. ಇಬ್ಬರು ಗಂಡು ಮಕ್ಕಳಿಗೆ ಮದುವೆಯಾಗಿ ಮೊಮ್ಮಕ್ಕಳು ಇದ್ದಾರೆ. ನನ್ನ ಗಂಡ ಇರೋವರೆಗೆ ದುಡಿದು ನನ್ನ ಸಾಕಿದ್ರು. ಮುಪ್ಪಿಡಿದು ಮೂಲೆ ಸೇರಿದ ಮೇಲೆ ಯಾರಿಗೂ ನಾವು ಬೇಡ. ಸೊಸೆ ಮಾತು ಕೇಳಿ ಮಗ ಹೊರಗೆ ಹಾಕಿದ. ಈಗ ದೇವಸ್ಥಾನದ ಹತ್ತಿರ ಭಿಕ್ಷೆ ಬೇಡಿ ಜೀವನ ಸಾಗಿಸ್ತಾ ಇದೀನಿ’ ಎಂದು ಜಿನುಗಿದ ಕಣ್ಣೀರನ್ನು ಸೆರಗ ತುದಿಯಿಂದ ಒರೆಸಿಕೊಂಡರು.
 
‘ಇಳಿ ವಯಸ್ಸಿನಲ್ಲಿ ಇಜ್ಜೋಡು ಆಗಬಾರದು’ ಎಂದು ಹೆಂಡತಿಯ ನೆನಪಿಗೆ ಕೈ ಮುಗಿದರು ವೆಂಕಟಪ್ಪ. ‘ನನಗಿಂತ 75 ವರ್ಷ. ಇಬ್ರು ಗಂಡು ಮಕ್ಕಳು ಗಾರೆ ಕೆಲಸ ಮಾಡ್ತಾರೆ. ನನ್ನ ಹೆಂಡತಿ ಇರೋವರೆಗೆ ಎಲ್ಲರೂ ಚೆನ್ನಾಗಿ ನೋಡಿಕೊಂಡರು. ಅವಳು ಹೋದ ಮೇಲೆ ನನ್ನ ತಾತ್ಸಾರ ಮಾಡಿದ್ರು. ಸೊಸೇರ ಮಾತು ಕೇಳಿ ಮಕ್ಕಳು ಮನೆಯಿಂದ ಹೊರೆಗೆ ಹಾಕಿದ್ರು. ಅಂಗಡಿ ಹತ್ರ ಹೋಗಿ ಕೂತಿರ್ತೀನಿ. ಬೆಳಿಗ್ಗೆ– ಸಂಜೆ ಒಂದು ಪೌಂಡ್ ಬ್ರೆಡ್ ಕೊಡ್ತಾರೆ.

ರಜೆ ಇದ್ದು ಬಾಗಿಲು ಹಾಕಿದ ದಿನ ಅದೂ ಸಿಗಲ್ಲ. ಕೈಕಾಲು ನಡುಗುತ್ತಿರುತ್ತಿವೆ. ಯಾರೂ ಕೂಲಿ ಕೆಲಸನೂ ಕೊಡಲ್ಲ. ದಯವಿಟ್ಟು ನನ್ನನ್ನು ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ’ ಎಂದು ದೊಡ್ಡ ದನಿಯಲ್ಲೇ ಅತ್ತು ಬಿಟ್ಟರು. ನಗರದ ವಿವಿಧೆಡೆ ಕಣ್ಣಿಗೆ ಬಿದ್ದ ವೃದ್ಧರಾದ ರಂಗಮ್ಮ, ಸುಶೀಲಮ್ಮ, ರಾಧಮ್ಮ, ಸಿದ್ದಣ್ಣ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮುಪ್ಪಿನ ಕಾಲಕ್ಕೆ ಹೆತ್ತವರು ನಮಗೆ ಇಷ್ಟು ಭಾರವಾದರೇ...?

ಕಠಿಣ ಕಾನೂನು
ವೃದ್ಧ ತಂದೆ–ತಾಯಿಯನ್ನು ಹೊರಗೆ ಹಾಕುವವರ ವಿರುದ್ಧ ಕಾನೂನು  ರೂಪಿಸಲಾಗಿದೆ. ತಂದೆ–ತಾಯಿಯನ್ನು ಹಿಂಸೆ ಮಾಡಿದರೆ ಅಥವಾ ಮನೆಯಿಂದ ಹೊರಗೆ ಹಾಕಿದರೆ ಅಂಥವರಿಗೆ ಶಿಕ್ಷೆ  ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಹಾಯವಾಣಿ ಇತ್ತು. ಆದರೆ ಈಗ ಅದು ಕೆಲಸ ಮಾಡುತ್ತಿಲ್ಲ. ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಅದು ಪುಸ್ತಕದಲ್ಲಿ ಮಾತ್ರ ಉಳಿದಿದೆ.
-ಎಸ್‌.ರಮೇಶ್‌, ವಕೀಲರು

***

ಸದ್ಯ, 23 ಜನ ಹಿರಿಯ ನಾಗರಿಕರನ್ನು ನೋಡಿಕೊಳ್ಳುತ್ತಿದ್ದೇನೆ. ಸ್ಥಳಾವಕಾಶದ ಕೊರತೆ ಇರುವುದರಿಂದ ಹೆಚ್ಚು ಜನರನ್ನು ತೆಗೆದುಕೊಳ್ಳಲಾಗುವುದಿಲ್ಲ.
-
ನಾಗೇಂದ್ರ, ಕೊಂಡನಾಯಕನಹಳ್ಳಿ ವೃದ್ಧಾಶ್ರಮದ ಮಾಲೀಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT