ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ ಕಾಲೇಜಿಗೆ ವಿದ್ಯಾರ್ಥಿಗಳ ಬರ

ಜ್ಞಾನೇಶ್ವರ ದೇಸಾಯಿ
Published 18 ಮೇ 2024, 6:18 IST
Last Updated 18 ಮೇ 2024, 6:18 IST
ಅಕ್ಷರ ಗಾತ್ರ

ಜೊಯಿಡಾ: ತಾಲ್ಲೂಕಿನಲ್ಲಿ ವಿದ್ಯಾಭ್ಯಾಸಕ್ಕೆ ಶಾಲೆ– ಕಾಲೇಜುಗಳ ಕೊರತೆ ಇಲ್ಲ. ಆದರೆ, ಇಲ್ಲಿನ ಮಕ್ಕಳಲ್ಲಿ ಓದುವ ಅಥವಾ ಪಾಲಕರಲ್ಲಿ ಓದಿಸುವ ಹಂಬಲ ಮತ್ತು ಆಸಕ್ತಿ ಇಲ್ಲ ಎಂಬುದಕ್ಕೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿದರ್ಶನ.

2007 ರಲ್ಲಿ ಪ್ರಾರಂಭವಾದ ಜೊಯಿಡಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಂದಿಗೂ ವಿದ್ಯಾರ್ಥಿಗಳ ಕೊರತೆಯಿಂದ ಬಳಲುತ್ತಿದೆ. ಕೇವಲ 94 ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಪಡೆದಿದ್ದು ಅದರಲ್ಲಿ 86 ಮಂದಿ ಮಾತ್ರ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಹಚ್ಚ ಹಸಿರು ಕಾನನದ ನಡುವೆ ಇರುವ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹಚ್ಚ ಹಸಿರು ಕಾನನದ ನಡುವೆ ಇರುವ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

2017-18 ರಲ್ಲಿ ಬಿಕಾಂ ವಿಭಾಗವನ್ನು ಪ್ರಾರಂಭಿಸಲಾಗಿದೆ. ಬಿಬಿಎ ವಿಭಾಗ ಪ್ರಾರಂಭವಾದ ಮೂರೇ ವರ್ಷಕ್ಕೆ ಮುಚ್ಚಿಲ್ಪಟ್ಟಿದೆ. 2010 ರಲ್ಲಿ ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಪ್ರತ್ಯೇಕ ಕಂಪ್ಯೂಟರ್ ಕೊಠಡಿ, ಜಿಮ್ ಕೊಠಡಿ, ಲೈಬ್ರರಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತ್ಯೇಕ ಪುಸ್ತಕಗಳ ಭಂಡಾರವೇ ಈ ಕಾಲೇಜಿನಲ್ಲಿದೆ. ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

ಹಚ್ಚ ಹಸಿರು ಕಾನನದ ನಡುವೆ ಇರುವ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಹಚ್ಚ ಹಸಿರು ಕಾನನದ ನಡುವೆ ಇರುವ ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಕಾಲೇಜಿಗೆ ದಾಂಡೇಲಿ ಕಾಗದ ಕಾರ್ಖಾನೆಯವರು ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬಳಕೆಗೆ ಉಚಿತ ವೈಫೈ ಸೌಲಭ್ಯ, ಎಲ್ಲ ಬಗೆಯ ಕ್ರೀಡಾ ಸಾಮಗ್ರಿ ಸೇರಿದಂತೆ ಹಲವು ಸೌಲಭ್ಯಗಳು ಇದ್ದರೂ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ.

ಜೊಯಿಡಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಜೊಯಿಡಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.

2022-23 ರಲ್ಲಿ ಬಿಎ ವಿಭಾಗದಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗಿದ್ದರಿಂದ ಇಲ್ಲಿ ದಾಖಲಾತಿ ಪಡೆದವರನ್ನು ದಾಂಡೇಲಿಯ ಪ್ರಥಮ ದರ್ಜೆ ಕಾಲೇಜಿಗೆ ದಾಖಲಿಸಲಾಗಿದ್ದು ಸದ್ಯ ಬಿಎ 2ನೇ ಮತ್ತು 6 ನೇ ಸೆಮಿಸ್ಟರ್‌ನಲ್ಲಿ ಮಾತ್ರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಾಯಂ ಪ್ರಾಚಾರ್ಯರ ಜತೆಗೆ ನಾಲ್ವರು ಸಹಾಯಕ ಪ್ರಾಧ್ಯಾಪಕರು ಮತ್ತು 7 ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಕೊಠಡಿ
ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಕೊಠಡಿ

ಕಾಲೇಜಿನ ಆವರಣದಲ್ಲಿ ಸುಮಾರು 30 ಬಗೆಯ ಔಷಧ ಸಸ್ಯಗಳನ್ನು ಬೆಳೆಸಿ ತಪೋವನ ಎಂಬ ಉದ್ಯಾನವನ್ನು ನಿರ್ಮಾಣ ಮಾಡಿ, ಸ್ಪ್ರಿಂಕ್ಲರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.

ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ
ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ

‘ಕಳೆದ ವರ್ಷ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಶುಲ್ಕ ಭರಿಸಲು ಸಾಧ್ಯವಿಲ್ಲದ ಹಲವು ವಿದ್ಯಾರ್ಥಿಗಳ ಶುಲ್ಕವನ್ನು ನಾವೇ ಭರಿಸಿ ದಾಖಲಾತಿ ನೀಡಿದ್ದೆವು. ಆದರೆ ಆ ವಿದ್ಯಾರ್ಥಿಗಳು ಸ್ವಲ್ಪ ದಿನ ಬಂದು ಕಾಲೇಜಿಗೆ ಬರುವುದನ್ನು ಬಿಟ್ಟರು’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯೆ ಅಂಜಲಿ ರಾಣೆ.

ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯಾನದಲ್ಲಿ ಔಷಧ ಸಸ್ಯಗಳನ್ನು ನೆಡಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ
ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯಾನದಲ್ಲಿ ಔಷಧ ಸಸ್ಯಗಳನ್ನು ನೆಡಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ

‘ತಾಲ್ಲೂಕಿನಲ್ಲಿ ಪ್ರತಿವರ್ಷ ಸುಮಾರು 400 ವಿದ್ಯಾರ್ಥಿಗಳು ಪಿಯುಸಿ ಉತ್ತಿರ್ಣರಾಗುತ್ತಿದ್ದು ಕೆಲವರು ಡಿಪ್ಲೊಮಾ ಪ್ರವೇಶಾತಿ ಪಡೆಯುತ್ತಾರೆ. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ನೆರೆಯ ಗೋವಾದಲ್ಲಿ ಕಂಪನಿ ಕೆಲಸಗಳಿಗೆ ಹೋಗುತ್ತಾರೆ. ಕಾಲೇಜಿನಲ್ಲಿ ಬಿಎ ವಿಭಾಗದಲ್ಲಿ ರಾಜ್ಯಶಾಸ್ತ್ರ ವಿಷಯ ಇರಲಿಲ್ಲ ಎಂಬ ಕಾರಣಕ್ಕಾಗಿ ಕೆಲವು ವಿಧ್ಯಾರ್ಥಿಗಳು ದಾಂಡೇಲಿ ಕಾಲೇಜಿನಲ್ಲಿ ದಾಖಲಾತಿ ಪಡೆಯುತ್ತಾರೆ. ಪರೀಕ್ಷಾ ಕೇಂದ್ರ ಸಹ ದಾಂಡೇಲಿಯಲ್ಲಿರುವುದರಿಂದ ಜೊಯಿಡಾ ಕಾಲೇಜಿನಲ್ಲಿ ದಾಖಲಾತಿ ಪಡೆಯುವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಪದವಿ ಪೂರ್ವ ಕಾಲೇಜುಗಳಿಗೆ ಹೋಗಿ ಪದವಿ ಶಿಕ್ಷಣದ ಮಹತ್ವದ ಅರಿವು ಮೂಡಿಸಲಾಗುತ್ತಿದೆ
ಅಂಜಲಿ ರಾಣೆ, ಜೊಯಿಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ
ಬಿಬಿಎ ಕೋರ್ಸ್ ಪುನರಾರಂಭಕ್ಕೆ ಪ್ರಯತ್ನ
‘ಕಾಲೇಜು ಬಿಬಿಎ ಕೋರ್ಸ್ ಮೂಲಕವೇ ಆರಂಭಗೊಂಡಿತ್ತು. ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಈ ಕೋರ್ಸ್ ಸ್ಥಗಿತಗೊಂಡು ಹಲವು ವರ್ಷ ಕಳೆದಿದೆ. ಆದರೂ ಕೋರ್ಸ್ ಕಲಿಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದಾಖಲಾದರೆ ಕೋರ್ಸ್ ಪುನರಾರಂಭಿಸಲಾಗುವುದು. ಬಿ.ಎ ವಿಭಾಗಕ್ಕೆ ರಾಜ್ಯಶಾಸ್ತ್ರ ವಿಷಯ ಕಲಿಕೆಗೆ ಅವಕಾಶ ನೀಡಲು ಪ್ರಯತ್ನ ನಡೆದಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯೆ ಅಂಜಲಿ ರಾಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT