ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ಬೇಸಿಗೆಯಲ್ಲೂ ಈ ಬಾರಿ ನೀರಿಗೆ ಬರವಿಲ್ಲ!

ಆಲಮಟ್ಟಿ ಜಲಾಶಯ: 40.78 ಟಿಎಂಸಿ ಅಡಿ ನೀರು ಸಂಗ್ರಹ
ಚಂದ್ರಶೇಖರ ಕೋಳೇಕರ
Published 27 ಮಾರ್ಚ್ 2024, 5:02 IST
Last Updated 27 ಮಾರ್ಚ್ 2024, 5:02 IST
ಅಕ್ಷರ ಗಾತ್ರ

ಆಲಮಟ್ಟಿ: ಪ್ರಸಕ್ತ ಸಾಲಿನಲ್ಲಿ ಹಿಂಗಾರು ಹಂಗಾಮಿಗೆ ನೀರು ಹರಿಸದಿದ್ದರೂ, ಹಿನ್ನೀರಿನ ಬಳಕೆ ಕೃಷಿ ಚಟುವಟಿಕೆಗಳಿಗೆ ಬಳಕೆ ಹೆಚ್ಚಿದ್ದರಿಂದ ಆಲಮಟ್ಟಿ ಜಲಾಶಯದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಆದರೂ ಸದ್ಯಕ್ಕೆ ನೀರಿನ ಕುಸಿತದ ಭೀತಿಯಿಲ್ಲ.

ಜಲಾಶಯದ ಹಿನ್ನೀರಿನಲ್ಲಿ ಪಂಪಸೆಟ್‌ಗಳ ಮೂಲಕ ಕೃಷಿ ಮತ್ತೀತರ ಚಟುವಟಿಕೆಗಳ ಬಳಕೆಯೂ ಹೆಚ್ಚುತ್ತಿದೆ. ಸೂರ್ಯನ ಪ್ರಖರತೆ ಹೆಚ್ಚಿದ್ದು, ನೀರಿನ ಭಾಷ್ಪಿಭವನವೂ ಹೆಚ್ಚಿದೆ. ಇದರಿಂದಾಗಿ ಜಲಾಶಯದ ಮಟ್ಟ ಕಡಿಮೆಯಾಗುತ್ತಿದೆ. ಆದರೂ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೆ ತೊಂದರೆಯಿಲ್ಲ. ಸದ್ಯ ಜಲಾಶಯದ ನೀರಿನ ನಿಯಂತ್ರಣ ಬೆಳಗಾವಿ ಪ್ರಾದೇಶಿಕ ಆಯುಕ್ತರ ನಿಯಂತ್ರಣದಲ್ಲಿದೆ.

ಮೇ ತಿಂಗಳಲ್ಲಿ ಮತ್ತೊಮ್ಮೆ ಕೆರೆಗೆ ನೀರು: ‘ಮಾರ್ಚ್ 21ರ ವರೆಗೂ ಕೆರೆಗಳ ಭರ್ತಿಗಾಗಿ ನಾನಾ ಕಡೆ ಕಾಲುವೆಯ ಮೂಲಕ ನೀರು ಹರಿಸಲಾಗಿದೆ. ಭರ್ತಿಯಾಗದ ಕೆರೆಗಳಿಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆಯಿದೆ. ಆದರೆ ಮೇ ತಿಂಗಳಲ್ಲಿ ಮತ್ತೊಮ್ಮೆ ಎಲ್ಲಾ ಕೆರೆಗಳ ಭರ್ತಿ ಮಾಡಲು 2 ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲಾಗಿದೆ. ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದರೆ ಕೆರೆಗಳ ಭರ್ತಿಗೆ ನೀರು ಹರಿಸಲಾಗುತ್ತದೆ’ ಎಂದು ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ತಿಳಿಸಿದರು.

ಆಲಮಟ್ಟಿ ಜಲಾಶಯದ ಮುಂಭಾಗದ ನದಿ ಪಾತ್ರ ಒಣಗುತ್ತಿದೆ. ಹೀಗಾಗಿ ನಿತ್ಯ ಅಲ್ಪ ನೀರನ್ನಾದರು ಜಲಾಶಯದಿಂದ ಹರಿಸಬೇಕೆಂಬ ಒತ್ತಡವೂ ಹೆಚ್ಚಿದೆ.

ನಾರಾಯಣಪುರಕ್ಕೆ ನೀರು ಹರಿಸಲು ಒತ್ತಡ: ನಾರಾಯಣಪುರ ಜಲಾಶಯದ ವ್ಯಾಪ್ತಿಯ ಇಂಡಿ ಶಾಖಾ ಕಾಲುವೆಯ ಮೂಲಕ ಕೆರೆಗಳ ಭರ್ತಿಗೆ ಮತ್ತಷ್ಟು ನೀರು ಹರಿಸಬೇಕೆಂಬ ಬೇಡಿಕೆ ಹಾಗೂ ಆ ಭಾಗದ ಜನಪ್ರತಿನಿಧಿಗಳ ಒತ್ತಡ ಹೆಚ್ಚುತ್ತಿದೆ, ಹೀಗಾಗಿ ಅವರ ಪಾಲಿನ ನೀರಿನ ಸಂಗ್ರಹದಲ್ಲಿ, ಸರ್ಕಾರ ಅನುಮತಿ ನೀಡಿದರೆ 2 ಟಿಎಂಸಿ ಅಡಿಯಷ್ಟು ನೀರನ್ನು ಆ ಭಾಗಕ್ಕೆ ಹರಿಸಲು ಉದ್ದೇಶಿಸಲಾಗಿದೆ.

ಜುಲೈನಲ್ಲಿ ಮಳೆಬಾರದಿದ್ದರೂ ನೀರಿನ ಸಮಸ್ಯೆಯಿಲ್ಲ:

ಈ ಬಾರಿ ಭೀಕರ ಬರಗಾಲದ ಹಿನ್ನಲೆಯಲ್ಲಿ ಕೃಷಿಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಮಾರ್ಚ್ 26 ರಂದು ಆಲಮಟ್ಟಿ ಜಲಾಶಯದಲ್ಲಿ ಇನ್ನೂ 40.78 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷವೂ ಈ ದಿನದಂದು ಜಲಾಶಯದಲ್ಲಿ ಬಹುತೇಕ ಇಷ್ಟೇ ಪ್ರಮಾಣದಲ್ಲಿ 41 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
2024 ರ ಜುಲೈನಲ್ಲಿಯೂ ಮಳೆಬಾರದಿದ್ದರೆ ಆಗಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೀರು ಸಂಗ್ರಹಿಸಲಾಗಿದೆ.

ಸದ್ಯ ಜಲಾಶಯದಲ್ಲಿ 40.78 ಟಿಎಂಸಿ ಅಡಿ ನೀರು ಸಂಗ್ರಹದಲ್ಲಿ, 23.166 ಟಿಎಂಸಿ ಅಡಿ ನೀರು ಬಳಕೆ ಯೋಗ್ಯ ನೀರಿದೆ. ಈ ಪೈಕಿ 6 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಕಾಲಕಾಲಕ್ಕೆ ಹರಿಸಲು ಇಲ್ಲಿ ಸಂಗ್ರಹಿಸಲಾಗಿದೆ. ನಂತರ ಉಳಿಯುವ 17 ಟಿಎಂಸಿ ಅಡಿ ನೀರಲ್ಲಿ ಭಾಷ್ಪಿಭವನ, ಕೈಗಾರಿಕೆ, ಎನ್‌ಟಿಪಿಸಿ, ಕೆರೆ ಭರ್ತಿ, ಜುಲೈವರೆಗೂ ಕುಡಿಯುವ ನೀರು ಮತ್ತೀತರ ಉದ್ದೇಶಗಳಿಗೆ ಮೀಸಲಿರಿಸಲಾಗಿದೆ.

‌ಮೊದಲೆಲ್ಲಾ ನೀರಿನ ಕೊರತೆ ಎದುರಾದಾಗ ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹವಿರುವ ಸುಮಾರು 17 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ನೀರಿನಲ್ಲಿಯೂ ಕೆಲ ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗಿದೆ. 2016-17 ರಲ್ಲಿ ಜಲಾಶಯದ ಮಟ್ಟ 505.13 ಮೀ ಎತ್ತರದವರೆಗೆ ಕುಸಿದಿತ್ತು. ಆಗ ಡೆಡ್ ಸ್ಟೋರೇಜ್ ನಲ್ಲಿನ 5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗಿತ್ತು.

ನೀರು ಎತ್ತುವ ಪರವಾನಗಿ ಸ್ಥಗಿತ: ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿಕೊಂಡು ನೀರಾವರಿ ಕೃಷಿಗೆ ಬಳಕೆ ಮಾಡುವುದನ್ನು ನಿಷೇಧಿಸಿದ್ದು, ಪಂಪಸೆಟ್‌ಗೆ ನೀಡಿದ ಅನುಮತಿಯನ್ನು ರದ್ದುಗೊಳಿಸಿದ್ದಾರೆ ಎಂದು ಅಣೆಕಟ್ಟು ವಲಯದ ಕಾರ್ಯನಿರ್ವಾಹಕ ಎಂಜಿನಿಯರ್ ಆದೇಶಿಸಿದ್ದಾರೆ.

ಆಲಮಟ್ಟಿ ಜಲಾಶಯದ ಹಿನ್ನೀರಿನ ನೀರಿನ ಸಂಗ್ರಹದ ಮಂಗಳವಾರ ತೆಗೆದ ಚಿತ್ರ
ಆಲಮಟ್ಟಿ ಜಲಾಶಯದ ಹಿನ್ನೀರಿನ ನೀರಿನ ಸಂಗ್ರಹದ ಮಂಗಳವಾರ ತೆಗೆದ ಚಿತ್ರ

ಕಳೆದ ಕೆಲ ವರ್ಷಗಳ ನೀರಿನ ಸಂಗ್ರಹಕ್ಕೆ ಹೋಲಿಸಿದರೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಕುಡಿಯುವ ನೀರಿಗಾಗಿ ಸಾಕಷ್ಟು ನೀರು ಜಲಾಶಯದಲ್ಲಿದೆ. ಮೇ ತಿಂಗಳಲ್ಲಿ ಪ್ರಾದೇಶಿಕ ಆಯುಕ್ತರ ಅನುಮತಿ ಪಡೆದು ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು

-ಎಚ್.ಎನ್. ಶ್ರೀನಿವಾಸ ಮುಖ್ಯ ಎಂಜಿನಿಯರ್ ಅಣೆಕಟ್ಟು ವಲಯ ಆಲಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT