ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲಮಟ್ಟಿ | 235 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ

ಕೈಕೊಟ್ಟ ಮಳೆ; ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಕನಿಷ್ಟ ಉತ್ಪಾದನೆ
ಚಂದ್ರಶೇಖರ ಕೋಳೇಕರ
Published 9 ಏಪ್ರಿಲ್ 2024, 6:11 IST
Last Updated 9 ಏಪ್ರಿಲ್ 2024, 6:11 IST
ಅಕ್ಷರ ಗಾತ್ರ

ಆಲಮಟ್ಟಿ: ಮಳೆ ಕೈಕೊಟ್ಟ ಕಾರಣ, ಕೃಷ್ಣೆಯ ಅಬ್ಬರವೂ ಇಳಿಮುಖವಾಗಿತ್ತು. 2023-24 ನೇ ಆರ್ಥಿಕ ಸಾಲಿನಲ್ಲಿ ಆಲಮಟ್ಟಿ ಜಲಾಶಯದ ಬಲಭಾಗದ ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕೇವಲ 235 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.

ಕಳೆದ ವರ್ಷ ಈ ಘಟಕಕ್ಕೆ 510 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ನೀಡಲಾಗಿತ್ತು. ಆದರೆ ಅದರ ಅರ್ಧದಷ್ಟು ವಿದ್ಯುತ್ ಉತ್ಪಾದನೆ ಈ ವರ್ಷ ಈ ಘಟಕದಲ್ಲಿ ಉತ್ಪಾದನೆಯಾಗಿಲ್ಲ. ಈ ವರ್ಷ ಕೈಕೊಟ್ಟ ಮಳೆ, ಬರಗಾಲ, ಹಿಂಗಾರು ಕೃಷಿಗೆ ನೀರು ಸ್ಥಗಿತ, ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆ ಹೀಗಾಗಿ ನಿಗದಿತ ಗುರಿ ತಲುಪಲು ಈ ವಿದ್ಯುತ್ ಉತ್ಪಾದನೆ ಘಟಕಕ್ಕೆ ಸಾಧ್ಯವಾಗಿಲ್ಲ. ಕಳೆದ ಆರ್ಥಿಕ ವರ್ಷದಲ್ಲಿ ಈ ಘಟಕದಲ್ಲಿ 624 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿತ್ತು.

ಸದ್ಯ ವಿದ್ಯುತ್ ಉತ್ಪಾದನೆ ಸ್ಥಗಿತ: ನಾರಾಯಣಪುರ ಜಲಾಶಯಕ್ಕೆ ನೀರು ಅಗತ್ಯವಿದ್ದಾಗ, ಆಲಮಟ್ಟಿ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದ ಆಧಾರದ ಮೇಲೆ ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಸದ್ಯ ಏ.6 ರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಕೆಪಿಸಿಎಲ್ ಆಲಮಟ್ಟಿ ಘಟಕದ ಸೂಪರಿಂಟೆಂಡಿಂಗ್ ಎಂಜಿನಿಯರ್ ಚಂದ್ರಶೇಖರ ದೊರೆ ಹೇಳಿದರು.

55 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಐದು ಹಾಗೂ 15 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಒಂದು ಸೇರಿ ಆರು ಘಟಕಗಳು ಇಲ್ಲಿವೆ. ಆಲಮಟ್ಟಿ ಜಲಾಶಯದ ಮಟ್ಟ 511 ಮೀ. ಕ್ಕಿಂತ ಕಡಿಮೆಯಾದ ಕಾರಣ 55 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಐದೂ ಘಟಕಗಳು ಬಂದ್‌ ಆಗಿವೆ. ಸದ್ಯ ಜಲಾಶಯದಿಂದ ನೀರು ಬಿಟ್ಟರೂ ಕೇವಲ 15 ಮೆಗಾವ್ಯಾಟ್‌ನ ಒಂದು ಘಟಕದಲ್ಲಿ ಮಾತ್ರ ಕಾರ್ಯಾರಂಭ ಸಾಧ್ಯ ಎಂದರು.

ಜುಲೈ ವೇಳೆಗೆ ಪುನರಾರಂಭ: `ನಾರಾಯಣಪುರ ಜಲಾಶಯಕ್ಕೆ ನೀರು ಅಗತ್ಯ ಎನಿಸಿದಾಗ ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟಾಗ ಸದ್ಯ ಒಂದು ಘಟಕ (15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ) ಮಾತ್ರ ಕಾರ್ಯಾರಂಭ ಮಾಡಲಿದೆ. ಏಪ್ರಿಲ್ ತಿಂಗಳಲ್ಲಿ ಯಾವಾಗ ಬೇಕಾದರೂ ನೀರು ಹರಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ 15 ಮೆಗಾವ್ಯಾಟ್‌ನ ಘಟಕ ಬಿಟ್ಟು, ಉಳಿದ 55 ಮೆಗಾವ್ಯಾಟ್ ಸಾಮರ್ಥ್ಯದ ಐದು ಘಟಕಗಳ ವಾರ್ಷಿಕ ನಿರ್ವಹಣಾ ಕಾಮಗಾರಿ ಆರಂಭಗೊಂಡದೆ.

ಜೂನ್ ವೇಳೆಗೆ ನಿರ್ವಹಣೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪ್ರತಿ ವರ್ಷ ಆಲಮಟ್ಟಿ ಜಲಾಶಯಕ್ಕೆ ಜುಲೈ ವೇಳೆ ಹೆಚ್ಚು ನೀರು ಬರಲಿದ್ದು, ಆಗ ನಾರಾಯಣಪುರ ಜಲಾಶಯಕ್ಕೆ ನೀರು ಹರಿದು ಬಿಟ್ಟಾಗ ವಿದ್ಯುತ್ ಘಟಕ ಪೂರ್ಣ ಪ್ರಮಾಣದಲ್ಲಿ ಅಂದರೆ ಗರಿಷ್ಠ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ' ಎಂದು ಚಂದ್ರಶೇಖರ ದೊರೆ ತಿಳಿಸಿದರು.

ಜಲಾಶಯದ ಮಟ್ಟ 519.60 ಮೀ. ಇದ್ದಾಗ 45 ಸಾವಿರ ಕ್ಯುಸೆಕ್ ನೀರು ಹರಿಸಿದಾಗ ಎಲ್ಲಾ ಘಟಕಗಳು ಕಾರ್ಯಾರಂಭ ಮಾಡಿದರೆ 6 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ನಿತ್ಯ ಇಲ್ಲಿ ಮಾಡಬಹುದು ಎಂದು ಅವರು ತಿಳಿಸಿದರು.

ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕಗಳ ಚಿತ್ರ
ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಘಟಕಗಳ ಚಿತ್ರ

ನಿತ್ಯ 6 ದಶಲಕ್ಷ ಯುನಿಟ್ ಉತ್ಪಾದಿಸುವ ಘಟಕ ವಾರ್ಷಿಕ ನಿರ್ವಹಣೆ ಆರಂಭ ಸದ್ಯ ಸ್ಥಗಿತವಾಗಿರುವ ವಿದ್ಯುತ್ ಉತ್ಪಾದನೆ

ಈ ಬಾರಿ ಮಳೆಯ ಕೊರತೆಯ ಕಾರಣ ವಿದ್ಯುತ್ ಘಟಕ ಕನಿಷ್ಠ ವಿದ್ಯುತ್ ಉತ್ಪಾದಿಸಿದೆ ಸದ್ಯ ಘಟಕಗಳ ನಿರ್ವಹಣೆ ಕಾಮಗಾರಿ ಆರಂಭಗೊಂಡಿದೆ –
ಚಂದ್ರಶೇಖರ ದೊರೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಕೆಪಿಸಿಎಲ್ ಘಟಕ ಆಲಮಟ್ಟಿ

ಎರಡನೇ ಕನಿಷ್ಠ ಉತ್ಪಾದನೆ 2006 ರಿಂದ ಪೂರ್ಣ ಪ್ರಮಾಣದಲ್ಲಿ ಅಂದರೆ 290 ಮೆಗಾವ್ಯಾಟ್ ವಿದ್ಯುತ್ ಇಲ್ಲಿ ಉತ್ಪಾದನೆ ಆಗಿತ್ತು. ಕೃಷ್ಣಾ ನದಿಗೆ ನೀರು ಬಾರದ ಕಾರಣ 2015-16 ನೇ ಸಾಲಿನಲ್ಲಿ ಆಲಮಟ್ಟಿ ಜಲಾಶಯವೂ ಭರ್ತಿಯಾಗಿರಲಿಲ್ಲ. ಆ ವರ್ಷ ಮಾತ್ರ 147 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದ್ದು ಇಲ್ಲಿಯವರೆಗಿನ ಅತ್ಯಂತ ಕನಿಷ್ಠ ವಿದ್ಯುತ್ ಉತ್ಪಾದನೆ. ಈ ವರ್ಷ ಉತ್ಪಾದಿಸಿದ 235 ದಶಲಕ್ಷ ಯುನಿಟ್ ಈ ಘಟಕದ ಎರಡನೇ ಅತಿ ಕನಿಷ್ಠ ವಿದ್ಯುತ್ ಉತ್ಪಾದನೆ. 2007-08 ರಲ್ಲಿ 664 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದ್ದು ಇಲ್ಲಿಯವರೆಗಿನ ಗರಿಷ್ಠ ಉತ್ಪಾದನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT