ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

ಅನಧಿಕೃತ ನಳ ಸಂಪರ್ಕ: ಬನೋಶಿ, ಗೋನಾಳ ಗ್ರಾಮಕ್ಕೆ ನೀರು ಸಂಪರ್ಕ ಸ್ಥಗಿತ
ಶಂಕರ ಈ.ಹೆಬ್ಬಾಳ
Published 14 ಮೇ 2024, 4:55 IST
Last Updated 14 ಮೇ 2024, 4:55 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಬನೋಶಿ ಹಾಗೂ ಗೋನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ನೀರು ದೊರೆಯದೇ ಗ್ರಾಮಸ್ಥರು ಪರದಾಡುವಂತಾಗಿದ್ದು, ತಾಲ್ಲೂಕಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಮುದ್ದೇಬಿಹಾಳ ತಾಲ್ಲೂಕಿನಿಂದ ದೇವೂರ ಗ್ರಾಮದ ಮೂಲಕ ಬನೋಶಿ ಹಾಗೂ ಗೋನಾಳ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ಅಲ್ಲಿಂದ ಎರಡೂ ಗ್ರಾಮಗಳ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ತುಂಬಿಸಿ ಗ್ರಾಮದ ಜನರು ಕುಡಿಯುವುದಕ್ಕೆ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇವೂರ ಗ್ರಾಮದಿಂದ ಸಂಪರ್ಕ ಕಲ್ಪಿಸಿರುವ ಮುಖ್ಯ ಕೊಳವೆ ಪೈಪ್‌ಗೆ ಕೆಲ ರೈತರು ಅನಧಿಕೃತವಾಗಿ ತಮ್ಮ ತೋಟಕ್ಕೆ ನೀರಿನ ಸಂಪರ್ಕ ತೆಗೆದುಕೊಂಡಿದ್ದರಿಂದ ಗ್ರಾಮದ ಟ್ಯಾಂಕರ್‌ಗಳಿಗೆ ನೀರು ಬರುತ್ತಿಲ್ಲ’ ಎಂದು ಗ್ರಾಮದ ಯುವಕ ಶಿವಾನಂದ ದೂರಿದರು.

ಬನೋಶಿ, ಗೋನಾಳ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಪೈಪ್‌ಗೆ ಒಂದೇ ದಿನ 10ಕ್ಕೂ ಹೆಚ್ಚು ಜನ ಸಂಪರ್ಕ ಪಡೆದುಕೊಂಡಿದ್ದಾರೆ. ಒಬ್ಬರು ಸಂಪರ್ಕ ಪಡೆದುಕೊಂಡಿದ್ದನ್ನು ನೋಡಿ, ಉಳಿದವರೂ ಅನಧಿಕೃತವಾಗಿ ಗುಂಡಿ ತೋಡಿ ಪೈಪ್‌ಲೈನ್ ಹಾಳು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.

ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಅನಧಿಕೃತ ನಳದ ಸಂಪರ್ಕ ಕಡಿತಗೊಳಿಸದ ಹೊರತು ತಮ್ಮ ಎರಡೂ ಊರುಗಳಿಗೆ ನೀರು ಬರುವುದಿಲ್ಲ. ಹೀಗಾಗಿ ಹನಿ ನೀರಿಗೂ ಗ್ರಾಮಸ್ಥರು ತೊಂದರೆ ಎದುರಿಸುವಂತಾಗಿದೆ ಎಂದು ಅಲವತ್ತುಕೊಂಡರು.

ಮಹಿಳೆಯರು, ವೃದ್ಧರು ಮಕ್ಕಳು ನಿತ್ಯವೂ ನೀರು ಬರುತ್ತವೆ ಎಂದು ಕಾದು ಕಾದು ಸುಸ್ತಾಗುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅನಧಿಕೃತವಾಗಿ ಕೆಲ ರೈತರು ನಳದ ಸಂಪರ್ಕ ಪಡೆದುಕೊಂಡ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅನಧಿಕೃತ ನೀರಿನ ಸಂಪರ್ಕ ಕಡಿತಗೊಳಿಸಿ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಲಾಗುವುದು
ಆನಂದ ಹಿರೇಮಠ, ಪಿಡಿಒ ಗ್ರಾ.ಪಂ ಕೋಳೂರು
ಮುದ್ದೇಬಿಹಾಳ ತಾಲ್ಲೂಕಿನ ಗೋನಾಳದಲ್ಲಿ ಖಾಲಿ ಕೊಡ ಹಿಡಿದು ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು
ಮುದ್ದೇಬಿಹಾಳ ತಾಲ್ಲೂಕಿನ ಗೋನಾಳದಲ್ಲಿ ಖಾಲಿ ಕೊಡ ಹಿಡಿದು ನೀರಿಗಾಗಿ ಕಾಯುತ್ತಿರುವ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT