ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: 25 ಸಾವಿರ ಹೆಕ್ಟೇರ್ ಬರ ಪೀಡಿತ

Published 22 ನವೆಂಬರ್ 2023, 4:57 IST
Last Updated 22 ನವೆಂಬರ್ 2023, 4:57 IST
ಅಕ್ಷರ ಗಾತ್ರ

ಸುರಪುರ: ಅನಾವೃಷ್ಟಿಯಿಂದ ತಾಲ್ಲೂಕಿನ 25,111 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೊಗರಿ ಹತ್ತಿ, ಸಜ್ಜೆ, ಇತರ ಬೆಳೆಗಳು ಒಣಗಿಹೋಗಿವೆ. ಮತ್ತೊಂದೆಡೆ ವಾರಬಂದಿಯಿಂದ ಕಾಲುವೆ ಕೊನೆ ಭಾಗಕ್ಕೆ ನೀರು ದೊರಕದೆ ರೈತರು ಸಂಕಷ್ಟ ಎದುರಿಸುವಂತಾಗಿದೆ.

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ನೀರಾವರಿ ಕ್ಷೇತ್ರದಲ್ಲಿ 43,275 ಹೆಕ್ಟೇರ್ ಮತ್ತು ಖುಷ್ಕಿ ಪ್ರದೇಶದಲ್ಲಿ 35,848 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಅದರಲ್ಲಿ ಭತ್ತ 28,536 ಹೆಕ್ಟೇರ್, ತೊಗರಿ 25,466, ಹತ್ತಿ 23,348, ಸಜ್ಜೆ 1,635 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಮಳೆ ಅಭಾವದಿಂದ ಸಮರ್ಪಕವಾಗಿ ಬೆಳೆಯದೆ ರೈತರು ನಷ್ಟ ಅನುಭವಿಸುವಂತಾಗಿದೆ.

ಸುರಪುರ ವಲಯದಲ್ಲಿ ಶೇ 31, ಕಕ್ಕೇರಾ ವಲಯದಲ್ಲಿ ಶೇ 30 ಮತ್ತು ಕೆಂಭಾವಿ ವಲಯದಲ್ಲಿ ಶೇ 15 ರಷ್ಟು ಮಳೆ ಕೊರತೆಯಾಗಿದೆ. ಅಲ್ಲದೇ ಮಳೆ ವಾಡಿಕೆಯಂತೆ ಅವಶ್ಯವಿದ್ದ ಸಮಯದಲ್ಲಿ ಬರದೆ ಒಂದೇ ಸಮಯದಲ್ಲಿ ಸುರಿದಿದ್ದು, ಬೆಳೆಗೆ ಪೂರಕವಾಗಲಿಲ್ಲ.

ಖಾನಾಪುರ ಮತ್ತು ಸೂಗೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನು ಕಾಲುವೆ ಕೊನೆ ಭಾಗಕ್ಕೆ ಬರುತ್ತವೆ. ನಿರಂತರ ನೀರು ಹರಿಸಿದರೆ ಸಮರ್ಪಕ ನೀರು ಪಡೆದುಕೊಳ್ಳಲು ರೈತರು ಪರದಾಡುತ್ತಾರೆ. ವಾರಬಂದಿ ಮಾಡಿದ್ದರಿಂದ ಈ ಭಾಗದ ಕಾಲುವೆಗೆ ನೀರು ಹರಿಯಲಿಲ್ಲ.

ಹೀಗಾಗಿ ಒಟ್ಟು 25 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಾಲುವೆಗೆ ನಿರಂತರ ನೀರು ಕೊಡದಿದ್ದರಿಂದ ಭತ್ತವೂ ಹುಲುಸಾಗಿ ಬೆಳೆಯಲಿಲ್ಲ. ಸಾಲದಕ್ಕೆ ಭತ್ತ ಕಟಾವಿನ ಬೆಲೆಯೂ ಹೆಚ್ಚಿದೆ. ಬೆಳೆಗೆ ಒಳ್ಳೆಯ ಬೆಲ ಸಿಗದಿದ್ದರೆ ರೈತನ ಸ್ಥಿತಿ ಚಿಂತಾಜನಕವಾಗುತ್ತದೆ.

ಸುರಪುರ ತಾಲ್ಲೂಕಿಗೆ ₹28.85 ಕೋಟಿ ಬೆಳೆ ಪರಿಹಾರ ಪರಿಹಾರ ಅಂದಾಜಿಸಲಾಗಿದೆ. ರೈತರು ಶೀಘ್ರದಲ್ಲಿ ಫ್ರೂಟ್ಸ್ ತಂತ್ರಜ್ಞಾನದಲ್ಲಿ ಎಫ್‌ಐಡಿ ನೋಂದಣಿ ಮಾಡಿಸಿದರೆ ಪರಿಹಾರ ಧನ ಖಾತೆಗೆ ಜಮೆಯಾಗುತ್ತದೆ
- ಭೀಮರಾಯ ಹವಾಲ್ದಾರ, ಸಹಾಯಕ ಕೃಷಿ ನಿರ್ದೇಶಕ
ಕಾಲುವೆ ಕೊನೆ ಭಾಗದ ರೈತರು ಕಾಲುವೆ ನೀರಿಗಾಗಿ ಹೋರಾಟ ಮಾಡಿ ಸುಸ್ತಾಗಿ ಹೋಗಿದ್ದಾರೆ. ಮಳೆರಾಯನೂ ಕೃಪೆ ತೋರಲಿಲ್ಲ. ಸಾಲ ಮಾಡಿರುವ ರೈತರು ಹತಾಶರಾಗಿದ್ದಾರೆ. ಸರ್ಕಾರ ನೆರವಿಗೆ ಬರಬೇಕು
- ಹಣಮಂತ್ರಾಯ ಮಡಿವಾಳ, ಕಾಲುವೆ ಕೊನೆ ಭಾಗದ ರೈತ

ಹಿಂಗಾರು ಬೆಳೆಗೆ ನೀರಿಲ್ಲ

ನೀರಾವರಿ ಸಲಹಾ ಸಮಿತಿ ಹಿಂಗಾರು ಹಂಗಾಮಿಗೆ ನೀರು ಕೊಡುವುದಿಲ್ಲ ಎಂದು ನಿರ್ಧರಿಸಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆ ಸೇರಿ ರೈತನಿಗೆ ಅಲ್ಪ ಸ್ವಲ್ಪ ಲಾಭವಾಗುತ್ತಿತ್ತು. ಹಿಂಗಾರು ಬೆಳೆ ಸಾಧ್ಯವಿಲ್ಲದಿದ್ದರಿಂದ ರೈತನಿಗೆ ಸಂಕಷ್ಟವೇ ಗತಿಯಾಗಿದೆ.

ಮಳೆ ಪ್ರಮಾಣ: (ಜೂನ್ 1 ರಿಂದ ನ. 15ರ ವರೆಗೆ)

ವಲಯ ವಾಡಿಕೆಯ ಮಳೆ; ಬಂದ ಮಳೆ

ಸುರಪುರ 643 ಮಿ.ಮೀ; 441 ಮಿ.ಮೀ

ಕಕ್ಕೇರಾ 503 ಮಿ.ಮೀ; 350 ಮಿ.ಮೀ

ಕೆಂಭಾವಿ 516 ಮಿ.ಮೀ; 440 ಮಿ.ಮೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT