ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಇಳುವರಿ ಕುಸಿತದ ಆತಂಕ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೊಪ್ಪಳ: ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆ ಬಿದ್ದಿರುವುದು, ಉಪಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಅಸಮರ್ಪಕ ವಿದ್ಯುತ್ ಪೂರೈಕೆ ಪರಿಣಾಮ ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಇನ್ನೊಂದೆಡೆ, ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬೆಳೆಗಳ ಸ್ಥಿತಿಗತಿ ಕುರಿತಂತೆ ನಡೆಸಬೇಕಾದ ಸಮೀಕ್ಷೆ, ಮಾಹಿತಿ ಸಂಗ್ರಹ ಕಾರ್ಯಕ್ಕೂ ತೀವ್ರ ಹಿನ್ನಡೆಯಾಗಿದೆ.

ಕಡಿಮೆ ಮಳೆ: ಜನವರಿಯಿಂದ ಸೆ. 3ರ ವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 467.87 ಮಿ.ಮೀ. ನಷ್ಟು ಮಳೆ ಆಗಬೇಕಿತ್ತು. ಈ ಅವಧಿಯಲ್ಲಿ 384.88 ಮಿ.ಮೀ. ಮಳೆಯಾಗಿದೆ. ಅಂದರೆ, ಜಿಲ್ಲೆಯಲ್ಲಿ ಸರಾಸರಿ 82.99 ಮಿ.ಮೀ. ಮಳೆ ಕೊರತೆ ಕಂಡು ಬಂದಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ.

ಈ ಪೈಕಿ ಕೊಪ್ಪಳ ತಾಲ್ಲೂಕಿನಲ್ಲಿ  20.39 ಮಿ.ಮೀ., ಕುಷ್ಟಗಿ- 11 ಮಿ.ಮೀ., ಯಲಬುರ್ಗಾ- 74.30 ಮಿ.ಮೀ. ಹಾಗೂ ಗಂಗಾವತಿ ತಾಲ್ಲೂಕಿನಲ್ಲಿ 126.28 ಮಿ.ಮೀ. ಕಡಿಮೆ ಮಳೆ ಬಿದ್ದಿದೆ. ಹೀಗಾಗಿ ಈ ಮುಂಗಾರಿನಲ್ಲಿ ಒಟ್ಟು ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ 7,002 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ. 45,988 ಹೆ. ಪ್ರದೇಶದಲ್ಲಿ ಮೆಕ್ಕೆಜೋಳ, 65,719 ಹೆ.ಪ್ರದೇಶದಲ್ಲಿ ಸಜ್ಜೆ ಸೇರಿದಂತೆ ಒಟ್ಟು 1,63,072 ಹೆ. ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತಲಾಗಿದೆ. 10,381 ಹೆ. ಪ್ರದೇಶದಲ್ಲಿ ತೊಗರಿ, 1,953 ಹೆ. ಪ್ರದೇಶದಲ್ಲಿ ಹುರಳಿ, 18,182 ಹೆ.-ಹೆಸರು ಸೇರಿದಂತೆ 34,423 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆಯಾಗಿದೆ.

ಎಣ್ಣೆಕಾಳುಗಳ ಪೈಕಿ 17,648 ಹೆ. ಪ್ರದೇಶದಲ್ಲಿ ಶೇಂಗಾ, 22,543 ಹೆ.-ಸೂರ್ಯಕಾಂತಿ, 5,384 ಹೆ.- ಎಳ್ಳು ಸೇರಿದಂತೆ ಒಟ್ಟು 47,310 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಬಿತ್ತನೆಯೂ ಉತ್ತಮವಾಗಿತ್ತು. ಸೆಪ್ಟಂಬರ್‌ನಲ್ಲಿ 149.5 ಮಿ.ಮೀ.ನಷ್ಟು ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಕೇವಲ 28 ಮಿ.ಮೀ.ನಷ್ಟು ಮಳೆ ಬಿದ್ದಿರುವುದು ಈಗ ರೈತರನ್ನು ಕಂಗೆಡಿಸಿದೆ.

ಮಳೆಯಾಶ್ರಯ ಪ್ರದೇಶದ ಸ್ಥಿತಿ ಈ ರೀತಿಯಾದರೆ, ಕೊಳವೆಬಾವಿ, ಬಾವಿಗಳಿಂದ ನೀರಾವರಿ ಮಾಡುತ್ತಿದ್ದ ರೈತರು ಬೇರೊಂದು ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ, ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ಭಾರಿ ವಿದ್ಯುತ್ ನಿಲುಗಡೆ ಮಾಡಲಾಗಿದೆ. ಹೀಗಾಗಿ ನೀರು ಹಾಯಿಸಲಾಗದೇ ರೈತರು ಈಗ ಕೈಗೆ ಬಂದ ಬೆಳೆಯನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ರೈತರದ್ದು ಈ ಸ್ಥಿತಿಯಾದರೆ, ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ. ಇದರ ಪರಿಣಾಮವಾಗಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಪೈಕಿ ಯಾವ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗುವ ಹಂತದಲ್ಲಿದೆ, ಇಳುವರಿ ಪ್ರಮಾಣ ಎಷ್ಟು ಕಡಿಮೆಯಾಗಬಹುದು ಎಂಬಂತಹ ಮಾಹಿತಿ ಸಂಗ್ರಹ ಕಾರ್ಯವೇ ನಡೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಜಿಲ್ಲೆಯಲ್ಲಿ 24 ಜನ ಕೃಷಿ ಅಧಿಕಾರಿಗಳ ಹುದ್ದೆಗಳ ಖಾಲಿ ಇವೆ. ಹೊಲಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಅಧ್ಯಯನ ಮಾಡಬೇಕಾದ ಸಹಾಯಕ ಕೃಷಿ ಅಧಿಕಾರಿಗಳ 16 ಹುದ್ದೆಗಳು, ಕೃಷಿ ಸಹಾಯಕರ 36 ಹುದ್ದೆಗಳು ಭರ್ತಿಯಾಗಬೇಕಿದೆ.

ಜಿಲ್ಲೆಯಲ್ಲಿ ಒಂದೆಡೆ ಪ್ರಕೃತಿಯ ಮುನಿಸು, ಇನ್ನೊಂದೆಡೆ ಸರ್ಕಾರವೇ ಮಾಡಿರುವ ತಾರತಮ್ಯ ಹಾಗೂ ಮತ್ತೊಂದೆಡೆ ಕೃಷಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಜಿಲ್ಲೆಯ ಮಟ್ಟಿಗೆ ಕೃಷಿ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT