ಚಿಕ್ಕಮಗಳೂರು ನಗರದ ಹೊಸಮನೆ ಬಡವಾಣೆಯಲ್ಲಿ ನಲ್ಲಿ ನೀರು ಗಲೀಜು; ಸಂಕಷ್ಟ

ಬುಧವಾರ, ಏಪ್ರಿಲ್ 24, 2019
32 °C

ಚಿಕ್ಕಮಗಳೂರು ನಗರದ ಹೊಸಮನೆ ಬಡವಾಣೆಯಲ್ಲಿ ನಲ್ಲಿ ನೀರು ಗಲೀಜು; ಸಂಕಷ್ಟ

Published:
Updated:
Prajavani

ಚಿಕ್ಕಮಗಳೂರು: ನಗರದ ಹೊಸಮನೆ ಬಡವಾಣೆಯ ಗುಂಡಿನಮ್ಮ ದೇಗುಲದ ಹಿಂಬದಿಯ ಕೆಲವೆಡೆ ಕೆಲದಿನಗಳಿಂದ ನಲ್ಲಿಗಳಲ್ಲಿ ಗಲೀಜು ನೀರು ಪೂರೈಕೆಯಾಗುತ್ತಿದ್ದು, ನಿವಾಸಿಗಳಿಗೆ ಸಂಕಷ್ಟ ತಂದೊಡ್ಡಿದೆ.

ನೀರಿನಲ್ಲಿ ಮಣ್ಣು, ಕಸ ಮಿಶ್ರಿತವಾಗಿರುತ್ತದೆ, ದುರ್ನಾತ ಬೀರುತ್ತದೆ. ಇಲ್ಲಿನ ನಿವಾಸಿಗಳು ಕುಡಿಯುವುದಕ್ಕೆ ತೊಂಬೆಗಳಿಂದ ತರುತ್ತಾರೆ, ಕೆಲವರು ಕ್ಯಾನು ನೀರು ಖರೀದಿಸುತ್ತಾರೆ. ನಲ್ಲಿ ನೀರನ್ನು ಬಟ್ಟೆ ತೊಳೆಯಲು ಮಾತ್ರ ಬಳಸುತ್ತಾರೆ. 

‘ನಲ್ಲಿ ನೀರಿನ ಪೈಪ್‌ಲೈನ್‌ಗೆ ಚರಂಡಿ ಕೊಳಚೆ ಸೇರುತ್ತಿದೆ. ಹೀಗಾಗಿ ನಲ್ಲಿಗಳಲ್ಲಿ ಗಲೀಜು ನೀರು ಬರುತ್ತಿದೆ. ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಒಯ್ಯಲು ಬಾಟಲಿಯಲ್ಲಿ ಸಂಗ್ರಹಿಸಿದ್ದೇನೆ. ನೀರು ರಭಸವಾಗಿ ಬರುವಾಗ ಗಲೀಜು ಕಾಣಿಸಲ್ಲ. ನಿಧಾನವಾದಾಗ ಕಸಕಡ್ಡಿ, ಮಣ್ಣು ಮಿಶ್ರಿತ ನೀರು ಬರುತ್ತದೆ’ ಎಂದು ನಿವಾಸಿ ನಜೀರ್‌ ದೂಷಿಸಿದರು.

ಈ ಭಾಗದಲ್ಲಿ ಮೂರು ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಬಿಡಲಾಗುತ್ತಿದೆ. ಕೆಲ ಮನೆಗಳಲ್ಲಿ ನಲ್ಲಿ ಗುಂಡಿಗಳು ನಾಲ್ಕೈದು ಅಡಿ ಆಳ ಇವೆ. ನಲ್ಲಿಗಳಲ್ಲಿ ಗಲೀಜು ನೀರು ಪೂರೈಕೆ, ಚರಂಡಿಗಳಲ್ಲಿ ಕಸಕಡ್ಡಿ–ಕೊಳಚೆ ತುಂಬಿಕೊಂಡಿರುವುದು, ಸೊಳ್ಳೆ ಕಾಟದಿಂದಾಗಿ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.

‘ಆಗೊಮ್ಮೆಈಗೊಮ್ಮೆ ಚರಂಡಿ ಕಸಕಡ್ಡಿ ತೆಗೆಯುತ್ತಾರೆ. ಗಟಾರ ಕಟ್ಟಿಕೊಂಡಾಗ ಸರಿ ಮಾಡುತ್ತಾರೆ. ಸರಿ ಮಾಡಿದ ದಿನ ನಲ್ಲಿ ನೀರು ಬಿಟ್ಟರೆ ಕಡ್ಡಾಯವಾಗಿ ಗಲೀಜು ನೀರು ಬರುತ್ತದೆ. ಕೆಟ್ಟ ವಾಸನೆ ಬೀರುತ್ತದೆ. ನಲ್ಲಿ ನೀರನ್ನು ಕೇವಲ ಬಟ್ಟೆ ತೊಳೆಯಲು ಬಳಸುತ್ತೇವೆ. ಈ ಬಗ್ಗೆ ನಗರ ಸಭೆ ಸದಸ್ಯರ (7ನೇ ವಾರ್ಡ್‌) ಗಮನಸೆಳೆದಿದ್ದೇವೆ’ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಶಾಂತಾ ವಾಳಿ ದೂರಿದರು.

ನಲ್ಲಿ ಪೈಪ್‌ಲೈನ್‌ ಮಾರ್ಗಕ್ಕೆ ಹೊಂದಿಕೊಂಡಂತೆಯೇ ಚರಂಡಿಗಳು ಇವೆ. ಈ ಚರಂಡಿಗಳ ದುಃಸ್ಥಿತಿಯಂತು ಹೇಳತೀರದಾಗಿದೆ. ಗಿಡಗಂಟಿಗಳು ಬೆಳೆದಿವೆ. ಚರಂಡಿ ಪಕ್ಕದಲ್ಲಿಯೇ ಕೆಲವು ಕಡೆ ತ್ಯಾಜ್ಯ ಸುರಿಯಲಾಗಿದೆ. ಕ್ರಿಮಿಕೀಟ, ಸೊಳ್ಳೆಗಳ ಆವಾಸ ತಾಣವಾಗಿವೆ.

‘ನಲ್ಲಿ ನೀರನ್ನು ಕುಡಿಯಲು ಮೊದಲು ಬಳಸುತ್ತಿದ್ದೆವು. ಈಗ ಬಿಟ್ಟಿದ್ದೇವೆ. ಕುಡಿಯಲು ಕ್ಯಾನ್‌ ನೀರು, ಬೊರ್‌ವೆಲ್‌ ನೀರು(ತೊಂಬೆ) ತರುತ್ತೇವೆ. ಇಲ್ಲಿನ ಬಹುತೇಕ ಎಲ್ಲ ಮನೆಗಳಿಗೂ ನಲ್ಲಿಯಲ್ಲಿ ಗಲೀಜು ನೀರೇ ಬರುತ್ತದೆ. ನೀರಿನ ಗೋಳು ಕೇಳುವವರಿಲ್ಲ’ ಎಂದು ಚಂದ್ರಕಲಾ ಅಲವತ್ತುಕೊಂಡರು.

‘ಕೆಲವೊಮ್ಮೆ ನಲ್ಲಿ ನೀರು ನೊರೆಯಾಗಿರುತ್ತದೆ. ಕುಡಿಯಲು ದುಡ್ಡು ಕೊಟ್ಟು ತರುವುದು ಅನಿವಾರ್ಯವಾಗಿದೆ. ಒಂದು ಕ್ಯಾನು ನೀರಿಗೆ ₹ 25 ಇದೆ. ಮೂರು ಕಾಸು ದುಡಿದು ನೀರಿಗೆ ಎರಡು ಕಾಸು ಇಡಬೇಕಾಗಿದೆ’ ಎಂದು ಗಾಯತ್ರಿ ಹೇಳುತ್ತಾರೆ.

* ಗಲೀಜು ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು.

–ಕೆ.ಪರಮೇಶಿ, ಆಯಕ್ತರು, ನಗರಸಭೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !