ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕಾರ: ರುಪ್ಸ

Published 20 ಮಾರ್ಚ್ 2024, 14:20 IST
Last Updated 20 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರು ನಿರ್ಧರಿಸಿದ್ದಾರೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೇಲ್ವಿಚಾರಣೆ ಕಾರ್ಯಗಳಿಂದ ಖಾಸಗಿ ಶಾಲಾ ಶಿಕ್ಷಕರನ್ನು ಶಿಕ್ಷಣ ಇಲಾಖೆ ಹೊರಗಿಟ್ಟಿದೆ. ಆ ಮೂಲಕ ಅವಮಾನಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳ ಶಿಕ್ಷಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದಿದ್ದಾರೆ.

‘ವಾರ್ಷಿಕ ಪರೀಕ್ಷೆಯ ಮೇಲ್ವಿಚಾರಕರಾಗಿ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಲಾಗಿದೆ. ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರನ್ನು ಈ ಪ್ರಕ್ರಿಯೆಯಿಂದ ಹೊರಗಿಡುವ ಮೂಲಕ ಕಡೆಗಣಿಸಲಾಗಿದೆ. ಇಲಾಖೆಯ ಈ ತಾರತಮ್ಯ ಧೋರಣೆ ಅರ್ಥವಾಗದ ವಿಷಯ. ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಎಲ್ಲ ಶಿಕ್ಷಕರನ್ನು ಸಮಾನವಾಗಿ ಕಾಣಬೇಕು. ಆದರೆ, ಸಮಾನತೆಯ ಡಂಗುರ ಸಾರುವ ಸರ್ಕಾರವೇ ಈ ನಿಯಮವನ್ನು ಉಲ್ಲಂಘಿಸಿದೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳು ರಾಜ್ಯದಲ್ಲಿರುವ ಖಾಸಗಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದಾರೆ. ಆದರೆ, ದ್ವೇಷ ಮತ್ತು ದುರುದ್ದೇಶದ ಕಾರಣಕ್ಕೆ ಖಾಸಗಿ ಶಾಲೆಗಳ ಶಿಕ್ಷಕರನ್ನು ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯಿಂದ ದೂರ ಇಡಲಾಗಿದೆ. ನಮ್ಮ ಸಂಘದ ಅಡಿಯಲ್ಲಿರುವ ಶಾಲೆಗಳ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಕಳುಹಿಸದಿರಲು ನಿರ್ಧರಿಸಿದ್ದೇವೆ. ಖಾಸಗಿ ಪ್ರೌಢ ಶಾಲಾ ಶಿಕ್ಷಕರ ಸಂಘ ಕೂಡ ಮೌಲ್ಯಮಾಪನ ಪ್ರಕ್ರಿಯೆಗೆ ಸಹಕರಿಸದಿರಲು ತೀರ್ಮಾನಿಸಿವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT