ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರರ ಕಣಕ್ಕಿಳಿಸಿ ಎಲ್‌ಡಿಎಫ್‌ ಜೂಜು

ಎಡರಂಗ–ಯುಡಿಎಫ್‌ ನಡುವೆ ಜಿದ್ದಾಜಿದ್ದಿ ಟ್ವೆಂಟಿ–20
Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೇರಳದ ಸುದ್ದಿ ವಾಹಿನಿಯೊಂದು ತನ್ನ ಚುನಾವಣಾ ಪ್ರಸಾರಕ್ಕೆ ‘ಕೇರಳ ಟ್ವೆಂಟಿ–20’ ಎಂದು ಹೆಸರು ಇರಿಸಿದ್ದು ಸುಮ್ಮನೆ ಏನಲ್ಲ. ಇಲ್ಲಿನ 20 ಲೋಕಸಭಾ ಕ್ಷೇತ್ರಗಳಲ್ಲಿನ ಸ್ಪರ್ಧೆಯಲ್ಲಿ ಟ್ವೆಂಟಿ–20 ಕ್ರಿಕೆಟ್‌ ಪಂದ್ಯವೊಂದರ ಜಿದ್ದಾಜಿದ್ದಿನ ಸಂಪೂರ್ಣ ರೋಮಾಂಚನ ಇದೆ.

ಕಾಂಗ್ರೆಸ್‌ ನೇತೃತ್ವದ ಆಡಳಿತಾರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌) ಮತ್ತು ವಿರೋಧ ಪಕ್ಷ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ದೊಡ್ಡ ಮಟ್ಟದ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿವೆ. ಈ ಮಧ್ಯೆ, ರಾಜ್ಯದಲ್ಲಿ ಮರೀಚಿಕೆಯೇ ಆಗಿ ಉಳಿದಿರುವ ಚುನಾವಣಾ ಗೆಲುವಿನ ಬೆನ್ನಟ್ಟಿ ಬಿಜೆಪಿಯೂ ಬೆವರು ಸುರಿಸುತ್ತಿದೆ. ಲೋಕಸಭೆ ಚುನಾವಣೆಯ ಗೆಲುವು ರಾಜ್ಯ ಸರ್ಕಾರದ ಸಾಧನೆ­ಗಳ ಬಗೆಗಿನ ತೀರ್ಪು ಕೂಡ ಹೌದು ಎಂದು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹೇಳಿದ್ದಾರೆ.

ಇದು ಅವರ ಸಂಪುಟದ ಸಚಿವರು ಮೈಮುರಿದು ಕೆಲಸ ಮಾಡಲು ಕಾರಣವಾಗಿದೆ. ರಾಜ್ಯ ಸರ್ಕಾರ ಮತ್ತು ಪಕ್ಷ ಕಳೆದ 10 ತಿಂಗಳಿಂದ ಸ್ವಲ್ಪ ಮಟ್ಟಿನ ಸಂಕಷ್ಟಮಯ ಪರಿಸ್ಥಿತಿಯನ್ನೇ ಎದುರಿಸುತ್ತಿದೆ. ಅದಕ್ಕೆ ಮೊದಲನೇ ಕಾರಣ ಸೋಲಾರ್‌ ಹಗರಣವಾದರೆ ಇನ್ನೊಂದು ಪಕ್ಷದೊಳಗಿನ ಬಣ ರಾಜಕೀಯ.

ಚಾಂಡಿ ಅವರ ಉತ್ಸಾಹ ಇತರರ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ವಿ.ಎಂ. ಸುಧೀರನ್‌ ಅವರನ್ನು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಪಕ್ಷ­ದೊಳಗಿನ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ತಂದಿದೆ. ಕೇಂದ್ರ ಸಚಿವ ಎ.ಕೆ. ಆಂಟನಿ ಸೇರಿ ಹಲವು ನಾಯಕರು ಕೇರಳದಲ್ಲಿ ಹೆಚ್ಚಿನ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ. 2009ರಲ್ಲಿ ಯುಡಿಎಫ್‌ 16 ಸ್ಥಾನಗಳನ್ನು ಗಳಿಸಿತ್ತು.

ರಾಷ್ಟ್ರೀಯ, ಸ್ಥಳೀಯ ವಿಷಯಗಳು: ಕೊನೆಯ ಹಂತದಲ್ಲಿ ಆಂಟನಿ ಅವರು ಪ್ರಚಾರ­ವನ್ನು ರಾಷ್ಟ್ರೀಯ ವಿಚಾರಗಳ ಕಡೆಗೆ ತಿರುಗಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ‘ವಿಭಜಕ’ ಎಂದು ಟೀಕಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವುದಕ್ಕಾಗಿ ಕೊನೆಗೆ ಎಡರಂಗವೂ ಕಾಂಗ್ರೆಸ್‌ಗೇ ಬೆಂಬಲ ನೀಡಬೇಕಾಗುತ್ತದೆ ಎಂದು ಎಡರಂಗದ ಮತವನ್ನು ಕಸಿಯುವ ಯತ್ನ ಮಾಡಿದ್ದಾರೆ.

ರಾಜ್ಯದ ನಾಯಕರೂ ಆಂಟನಿ ಅವರ ನಿಲುವನ್ನೇ ಪ್ರತಿಪಾದಿಸುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದಕ್ಕಾಗಿ ತೃತೀಯ ರಂಗದ ಪ್ರಸ್ತಾಪ ಮಾಡಿರುವುದು ಕಾಂಗ್ರೆಸೇ ಹೊರತು ಎಡರಂಗವಲ್ಲ ಎಂದೂ ಅವರು ಹೇಳುತ್ತಿ­ದ್ದಾರೆ. ಆದರೆ,  ರಾಷ್ಟ್ರೀಯ ಮತ್ತು ಸ್ಥಳೀಯ ವಿಷಯ­ಗಳೆ­ರಡೂ ಈ ಚುನಾವಣೆ­ಯಲ್ಲಿ ಮುಖ್ಯವಾಗಲಿವೆ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ. 

ಕಾಂಗ್ರೆಸ್‌ ಇಲ್ಲಿನ 15 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಇಂಡಿಯನ್ ಯೂನಿಯನ್‌ ಮುಸ್ಲಿಂ ಲೀಗ್‌ ಎರಡು, ಕೇರಳ ಕಾಂಗ್ರೆಸ್‌, ಸೋಷಿಯಲಿಸ್ಟ್‌ ಜನತಾ ಡೆಮಾಕ್ರಟಿಕ್‌ ಮತ್ತು ರೆವಲೂಷನರಿ ಸೋಷಿಯಲಿಸ್ಟ್‌ ಪಾರ್ಟಿ (ಆರ್‌ಎಸ್‌ಪಿ) ತಲಾ ಒಂದು ಕ್ಷೇತ್ರಗಳಿಂದ ಸ್ಪರ್ಧಿಸು­ತ್ತಿವೆ. ಕಾಂಗ್ರೆಸ್‌ನ 13 ಹಾಲಿ ಸಂಸದರ ಪೈಕಿ 11 ಮಂದಿ ಮತ್ತೆ ಕಣಕ್ಕಿಳಿದಿದ್ದಾರೆ.

ದುರಾಡಳಿತವೇ ಎಲ್‌ಡಿಎಫ್‌ ಪ್ರಚಾರ ವಿಷಯ: ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಯುಪಿಎ ಮತ್ತು ರಾಜ್ಯದ ಯುಡಿಎಫ್‌ ಸರ್ಕಾರಗಳ ದುರಾಡಳಿತವೇ ಯುಡಿಎಫ್‌ ನೆಚ್ಚಿಕೊಂಡಿರುವ ವಿಷಯ. ಚುನಾವಣೆ ಘೋಷಣೆಯಾಗುವುದಕ್ಕೆ ಬಹಳ ಮೊದಲೇ ರಾಜ್ಯದಾದ್ಯಂತ ಯಾತ್ರೆ ನಡೆಸಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್‌ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಎರಡೂ ಸರ್ಕಾರಗಳ ವಿರುದ್ಧ ಕಿಡಿ ಕಾರಿದ್ದರು. ಈ ಮೂಲಕ ಚುನಾವಣೆಯ ವಿಷಯ ಯಾವುದು ಎಂಬುದನ್ನು ಸ್ಪಷ್ಟಪಡಿಸಿದ್ದರು.

ಹತ್ಯೆಯ ಪ್ರತಿಧ್ವನಿ: ರೆವಲೂಷನರಿ ಮಾರ್ಕ್ಸಿಸ್ಟ್‌ ಪಕ್ಷದ ಮುಖಂಡ ಟಿ.ಪಿ. ಚಂದ್ರ­ಶೇಖರನ್‌ ಅವರ ಹತ್ಯೆ ಪ್ರಕರಣದಲ್ಲಿ ಸಿಪಿಎಂನ ಮೂವರು ಕಾರ್ಯಕರ್ತರು ಜೀವಾ­ವಧಿ ಶಿಕ್ಷೆಗೆ ಒಳಗಾಗುವುದರೊಂದಿಗೆ ಪಕ್ಷಕ್ಕೆ ಈ ಜನವರಿಯಲ್ಲಿ ಹಿನ್ನಡೆ ಉಂಟಾಗಿದೆ. ಇವರಲ್ಲಿ ಒಬ್ಬನನ್ನು ಪಕ್ಷ ಮೊದಲೇ ಆಂತರಿಕ ತನಿಖೆ ನಡೆಸಿ ಉಚ್ಚಾಟನೆ ಮಾಡಿತ್ತು.

ಉತ್ತರದ ಕೊಯಿಕ್ಕೋಡ್‌ ಮತ್ತು ವಡಗರ ಕ್ಷೇತ್ರಗಳಲ್ಲಿ ಈ ಹತ್ಯೆ ಪ್ರಕರಣ ಪರಿಣಾಮ ಬೀರುತ್ತದೆ. ಈ ಎರಡೂ ಕ್ಷೇತ್ರಗಳನ್ನು 2009ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಆದರೆ ಉತ್ತರ ಕೇರಳದ ಕೊಯಿಕ್ಕೋಡ್‌, ಕಣ್ಣೂರು ಮತ್ತು ವಡಗರ ಕ್ಷೇತ್ರಗಳಲ್ಲಿ ಸಿಪಿಎಂ ಗೆಲ್ಲುವುದಾಗಿ ಸಮೀಕ್ಷೆಯೊಂದು ಹೇಳಿದೆ. ಸಾಂಪ್ರದಾಯಿಕವಾಗಿ ಇವು ಎಡರಂಗದ ಸುಭದ್ರ ನೆಲೆಗಳು. ಯುಡಿಎಫ್‌ಗೆ 11 ಮತ್ತು ಎಲ್‌ಡಿಎಫ್‌ಗೆ 9 ಸ್ಥಾನಗಳು ದೊರೆಯಬಹುದು ಎಂದು ಈ ಸಮೀಕ್ಷೆ ಅಂದಾಜಿಸಿದೆ.

ಪಕ್ಷೇತರರ ಕಣಕ್ಕಿಳಿಸಿದ ಕಾರ್ಯತಂತ್ರ: ಸಿಪಿಎಂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಪಕ್ಷ ಕಣಕ್ಕೆ ಇಳಿಸಿರುವುದು 10 ಅಭ್ಯರ್ಥಿ­ಗಳನ್ನು ಮಾತ್ರ. ಅವರಲ್ಲಿ ನಾಲ್ವರು ಹಾಲಿ ಸಂಸ­ದರು ಸೇರಿದ್ದಾರೆ. ಸಿಪಿಐ ನಾಲ್ಕು, ಜನತಾ ದಳ (ಎಸ್‌) ಒಂದು ಕ್ಷೇತ್ರಗಳಲ್ಲಿ ಎಲ್‌ಡಿಎಫ್‌ ಭಾಗವಾಗಿ ಸ್ಪರ್ಧಿಸು­ತ್ತಿವೆ.

ಐವರು ಪಕ್ಷೇತರ ಅಭ್ಯರ್ಥಿಗಳಿಗೆ ಎಲ್‌ಡಿಎಫ್‌ ಬೆಂಬಲ ನೀಡುತ್ತಿದೆ. ಪಕ್ಷೇತರರಿಗೆ ಎಲ್‌ಡಿಎಫ್‌ ಬೆಂಬಲ ನೀಡಿರುವುದನ್ನು ಲೇವಡಿ ಮಾಡಿರುವ ಕಾಂಗ್ರೆಸ್‌ ಇವರನ್ನು ‘ಅತಿಥಿ ಅಭ್ಯರ್ಥಿಗಳು’ ಎಂದಿದೆ. ಆದರೆ ರಾಜಕೀಯ ವಿಶ್ಲೇಷಕರ ಪ್ರಕಾರ ಇದು ಕೆಲವು ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಬಹುದು. ಇಡುಕ್ಕಿಯಲ್ಲಿ ಪಕ್ಷೇತರ ಅಭ್ಯರ್ಥಿ ಜಾಯ್ಸ್‌ ಜಾರ್ಜ್ ಅವರಿಗೆ ಎಡರಂಗ ಬೆಂಬಲ ನೀಡಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ಕಸ್ತೂರಿರಂಗನ್‌ ವರದಿಯ ಬಗ್ಗೆ ಕೇಂದ್ರದ ನಿಲುವಿನ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿರುವ ಕ್ಯಾಥೊಲಿಕ್‌ ಚರ್ಚ್‌ ಅವರಿಗೆ ಬೆಂಬಲ ನೀಡುತ್ತಿದೆ.

ಪೊನ್ನಾನಿ ಮತ್ತು ಪಟ್ಟನಂತಿಟ್ಟ ಕ್ಷೇತ್ರಗಳಲ್ಲಿ ಇಬ್ಬರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳನ್ನೇ ಎಲ್‌ಡಿಎಫ್ ಕಣಕ್ಕಿಳಿಸಿದೆ. ಚಾಲಕ್ಕುಡಿ ಕ್ಷೇತ್ರದಲ್ಲಿ ಎಐಸಿಸಿ ವಕ್ತಾರ ಪಿ.ಸಿ. ಚಾಕೊ ವಿರುದ್ಧ ಜನಪ್ರಿಯ ನಟ ಇನ್ನೊಸೆಂಟ್‌ ಅವರನ್ನು ಪಕ್ಷೇತರರಾಗಿ ಎಲ್‌ಡಿಎಫ್‌ ಕಣಕ್ಕಿಳಿಸಿದೆ.

ರಂಗ ಬದಲಿಸಿದ ಆರ್‌ಎಸ್‌ಪಿ: ಆರ್‌ಎಸ್‌ಪಿಯು ಎಲ್‌ಡಿಎಫ್‌ ತೊರೆದು ಯುಡಿಎಫ್‌ ಸೇರುವುದರೊಂದಿಗೆ ದಕ್ಷಿಣ ಕೇರಳದ ಕೊಲ್ಲಂ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಸಿಪಿಎಂನ ಹಿರಿಯ ನಾಯಕ ಎಂ.ಎ. ಬೇಬಿ ಅವರ ವಿರುದ್ಧ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಸ್ಪರ್ಧಿಸಿದ್ದಾರೆ. ಇದು ಆರ್‌ಎಸ್‌ಪಿಯ ಪ್ರಬಲ ನೆಲೆ.

ಇಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯ ನಿರೀಕ್ಷೆ ಇದೆ. ಆದರೆ ಈಗ ಸಿಪಿಎಂನ ಕೇರಳದ ಅತ್ಯುನ್ನತ ನಾಯಕ ವಿ.ಎಸ್‌. ಅಚ್ಯುತಾನಂದನ್‌ ಅವರು ಮತ ಯಾಚನೆಗೆ ಇಳಿದಿದ್ದಾರೆ. ಹಿರಿಯ ನಾಯಕನ ಪ್ರಚಾರ ಸಭೆಗಳಿಗೆ ಭಾರಿ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಮುಖ್ಯಮಂತ್ರಿ ಚಾಂಡಿ ಮತ್ತು ಯುಡಿಎಫ್‌ ವಿರುದ್ಧದ ಅವರ ವಾಗ್ದಾಳಿ ಎಲ್‌ಡಿಎಫ್‌ ಪ್ರಚಾರಕ್ಕೆ ಒಂದು ರೀತಿಯ ಕಸುವು ತುಂಬಿದೆ.

ಕಣದಲ್ಲಿ ಕಾಂಗ್ರೆಸ್‌ ಪ್ರಮುಖರು
ಕೇಂದ್ರ ಸಚಿವರಾದ ಶಶಿ ತರೂರ್‌ (ತಿರುವ­ನಂತಪುರ), ಕೋಡಿಕುನ್ನಿಲ್‌ ಸುರೇಶ್‌ (ಮಾವೇಲಿ­ಕ್ಕರ), ಕೆ.ಸಿ.ವೇಣುಗೋಪಾಲ್‌ (ಅಲೆಪ್ಪಿ), ಮುಲ್ಲಪಲ್ಲಿ ರಾಮಚಂದ್ರನ್‌ (ವಡಗರ), ಎಐಸಿಸಿ ವಕ್ತಾರ ಪಿ.ಸಿ.ಚಾಕೊ (ಚಾಲಕ್ಕುಡಿ) ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT