ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ದಶರಥನ ಅವಾಂತರ

Last Updated 26 ಜುಲೈ 2019, 12:47 IST
ಅಕ್ಷರ ಗಾತ್ರ

ಚಿತ್ರ: ದಶರಥ
ನಿರ್ಮಾಣ: ಅಕ್ಷಯ್‌ ಸಮರ್ಥ
ನಿರ್ದೇಶನ: ಎಂ.ಎಸ್. ರಮೇಶ್‌
ತಾರಾಗಣ: ರವಿಚಂದ್ರನ್, ಸೋನಿಯಾ ಅಗರವಾಲ್, ಅಭಿರಾಮಿ, ರಂಗಾಯಣ ರಘು, ಮೇಘಶ್ರೀ

ಪುತ್ರಿಯ ಮಾನಹಾನಿ ವಿರುದ್ಧ ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ ಅಪ್ಪ ಮಗಳೊಟ್ಟಿಗೆ ದೇಗುಲದ ಬಳಿ ಕುಳಿತ ಕೆಲವೇ ಕ್ಷಣಗಳಲ್ಲಿ ಖಳನಟ ಸಹಚರರೊಂದಿಗೆ ಹಾಜರಾಗುತ್ತಾನೆ. ಅವರೆಲ್ಲರನ್ನೂ ಅಪ್ಪ ಥಳಿಸುತ್ತಾನೆ. ಖಳನಟನದು ಅಸಹಾಯಕ ಸ್ಥಿತಿ. ‘ಹೆಣ್ಣಿನ ಶೀಲದ ಬೆಲೆಯನ್ನು ಆರೋಪಿಗೆ ಶಿಕ್ಷೆ ಕೊಡಿಸುವುದರಿಂದ ತುಂಬಲು ಆಗುತ್ತದೆಯೇ’ ಎಂದು ಪ್ರಶ್ನಿಸುತ್ತಾಳೆ ಮಗಳು.

‘ಕಾರಣ ಒಳ್ಳೆಯದಾಗಿರಬೇಕು ಅಷ್ಟೇ. ಕಾರ್ಯ ಕೆಟ್ಟದಾಗಿದ್ದರೂ ಪರವಾಗಿಲ್ಲ. ಆತ ಗಂಡಸಾಗಿ ಉಳಿಯಬಾರದು’ ಎಂದು ಉತ್ತರಿಸುತ್ತಾನೆ ಅಪ್ಪ.

ಹೆಣ್ತನದ ಮಹತ್ವ ಮತ್ತು ಅಪ್ಪನ ಕಾಳಜಿಯನ್ನು ಒಟ್ಟಿಗೇ ಕಟ್ಟಿಕೊಡುವ ‘ದಶರಥ’ ಚಿತ್ರದ ಈ ದೃಶ್ಯ ಸಿನಿಮಾದ ಕಥನ ಕೇಂದ್ರವೂ ಆಗಿದೆ. ಹೆಣ್ಣಿನ ಗೌರವ ಮತ್ತು ಆತ್ಮಾಭಿಮಾನವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಚಿತ್ರಿಸಿದ್ದಾರೆ ನಿರ್ದೇಶಕ ಎಂ.ಎಸ್. ರಮೇಶ್‌.

ಕೌಟುಂಬಿಕ ಬಾಂಧವ್ಯದ ಪರಿಧಿ ಮೀರಿದ ಸಾಮಾಜಿಕ ಆಯಾಮವೊಂದು ಸಿನಿಮಾದಲ್ಲಿದೆ. ತಾನು ಪ್ರೀತಿಸಿದ ಹುಡುಗನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ, ಅಪ್ಪ– ಅಮ್ಮನ ಮುಂದೆ ಆ ಯಾತನೆ ಹೇಳಿಕೊಳ್ಳಲಾಗದೆ ಒದ್ದಾಡುವ ಹೆಣ್ಣಿನ ಕಥೆಯೂ ಇಲ್ಲಿದೆ.

ಆದರೆ, ಚಿತ್ರದಲ್ಲಿ ಸಾಕಷ್ಟು ಕೊರಕಲುಗಳೂ ಇವೆ. ನಾಯಕ ದಶರಥ ಪ್ರಸಾದ್‌ ವೃತ್ತಿಯಲ್ಲಿ ವಕೀಲ.ಆತನ ಮೂಲಕ ಹೆದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಕನಸು ನಿರ್ದೇಶಕರದು. ಪ್ರತಿದಿನ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಪಟ್ಟಿ ಮಾಡುವ ಅವರು, ಈ ಸಿಕ್ಕುಗಳನ್ನು ಬಿಡಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವುದು ಹಗಲುಗನಸಿನ ಮಾರ್ಗ. ಕಾನೂನು ಕಾಪಾಡುವವನೇ ಕಾನೂನುಬಾಹಿರವಾಗಿ ನಡೆದುಕೊಳ್ಳುವುದು ವ್ಯಂಗ್ಯ. ಇದನ್ನು ನೋಡಿದಾಗ ವಾಸ್ತವದ ನೆಲೆಗಟ್ಟಿಗೂ ದಕ್ಕದ ಈ ಸಿನಿಮಾ, ವ್ಯಾಪಾರಿ ಸೂತ್ರಗಳಿಗೂ ಬದ್ಧವಾಗದೆ ಹಳಿ ತಪ್ಪಿರುವುದು ಸ್ಪಷ್ಟ.

ನಿರ್ದೇಶಕರಿಗೆ ನಾಯಕನ ಮಾತುಗಳ ಮೂಲಕ ಸಮಾಜ ತಿದ್ದುವ ಹಂಬಲವಿರುವುದು ಗೋಚರಿಸುತ್ತದೆ. ಚಿತ್ರದ ಕೆಲವೆಡೆ ನಾಟಕೀಯ ಸನ್ನಿವೇಶಗಳೂ ಇವೆ. ಚಿತ್ರದುದ್ದಕ್ಕೂ ನಾಯಕನ ನಿಲುವು ಏಕಮುಖವಾಗಿಯೇ ಪ್ರವಹಿಸುವುದು ಅನುಕೂಲ ಸಿಂಧು ಅನಿಸುತ್ತದೆ.

ಚಿತ್ರದಲ್ಲೊಂದು ದೃಶ್ಯವಿದೆ. ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆಯುತ್ತದೆ. ಪೊಲೀಸ್‌ ಠಾಣೆಗೆ ತೆರಳುವ ದಶರಥ, ಆರೋಪಿಗಳನ್ನು ಕೋರ್ಟ್‌ ಕಟಕಟೆಯ ಮಾದರಿಯಂತೆಯೇ ವಿಚಾರಣೆ ನಡೆಸುತ್ತಾನೆ. ಮರುಕ್ಷಣದಲ್ಲೇ ಠಾಣೆಯಲ್ಲಿ ಸಂತ್ರಸ್ತೆಯ ಕೊಲೆಗೆ ಆರೋಪಿಗಳು ಮುಂದಾಗುತ್ತಾರೆ. ಈ ದುಷ್ಕೃತ್ಯಕ್ಕೆ ಪೊಲೀಸರು ಠಾಣೆಯನ್ನೇ ಬಿಟ್ಟುಕೊಡುವುದು ಚೋದ್ಯ. ಇನ್ನು ಕೋರ್ಟ್‌ ಕಲಾಪದಲ್ಲಿಯೇ ಕುಡುಕನೊಬ್ಬ ಸೃಷ್ಟಿಸುವ ಅವಾಂತರಕ್ಕೆ ಕೊನೆ ಎಂಬುದಿಲ್ಲ. ಇದು ಚಿತ್ರದ ಇನ್ನೊಂದು ಅತಿರೇಕ.

‘ದೃಶ್ಯ’ ಚಿತ್ರದಲ್ಲಿ ಮಗಳ ರಕ್ಷಣೆಗೆ ನಿಂತ ತ್ಯಾಗಮಯಿ ಅಪ್ಪನಾಗಿ ರವಿಚಂದ್ರನ್ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಈ ಚಿತ್ರದಲ್ಲೂ ಅವರದು ಹಳೆಯ ವರಸೆ. ಇಲ್ಲಿ ಕರಿಕೋಟು ತೊಟ್ಟಿದ್ದಾರೆ ಅಷ್ಟೆ. ಸೋನಿಯಾ ಅಗರವಾಲ್, ಅಭಿರಾಮಿ ಅವರದು ಅಚ್ಚುಕಟ್ಟಾದ ನಟನೆ. ಮಗಳ ಪಾತ್ರದಲ್ಲಿ ಮೇಘಶ್ರೀ ಅಭಿನಯ ಚೆನ್ನಾಗಿದೆ. ಗುರುಕಿರಣ್‌ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ. ಜಿ.ಎಸ್.ವಿ. ಸೀತಾರಾಂ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೇ ಸಹನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT