ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳಿಕೆನ್ನೆ ಬೆಡಗಿ ಹಿತಾ!

Last Updated 18 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಇವರು ಎಲ್ಲರೊಂದಿಗೆ ಹಿತ-ಮಿತವಾಗಿ ಬೆರೆಯುವ ಹಿತಾ. ಮುಖದಲ್ಲಿ ಮುಗ್ಧ ಸೌಂದರ್ಯ, ಮಾತನಾಟಿದರೆ ಮನಸ್ಸು ತಂಪಾಗುವ ಸರಳತೆ, ಸೌಜನ್ಯತೆ, ವಿನಮ್ರತೆಯಿಂದ ತುಂಬಿದ ಈ ಗುಳಿಕೆನ್ನೆ ಬೆಡಗಿ ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ತಾವು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಚಿತ್ರ ’ಒಂಥರಾ ಬಣ್ಣಗಳು’ ಪ್ರಮೋಷನ್‌ಗಾಗಿ ಹುಬ್ಬಳ್ಳಿಗೆ ಬಂದಾಗ ಮೆಟ್ರೊ ಜೊತೆ ಚಂದನವನಕ್ಕೆ ತಮ್ಮ ಆಗಮನದ ಬಗೆಯನ್ನು ವಿವರಿಸಿದರು.

ನಿಮ್ಮ ಪರಿಚಯ...

ನಾನು ಹಿತಾ ಚಂದ್ರಶೇಖರ್. ಮೂಲತಃ ಬೆಂಗಳೂರಿನವರು. ಇಡೀ ಕರ್ನಾಟಕದ ಜನತೆಗೆ ಸಿಹಿ-ಕಹಿ ಚಂದ್ರು ಮತ್ತು ಸಿಹಿ-ಕಹಿ ಗೀತಾ ಎಂದೇ ಪರಿಚಿತರಾದ ಚಂದ್ರಶೇಖರ್ ಮತ್ತು ಗೀತಾ ಅವರ ಮಗಳು ಎಂದು ಹೆಮ್ಮೆಯಿಂದ ಹೇಳುವೆ.ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಿಂದ ಬಿಬಿಎಮ್ (ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್) ಪದವಿ ಓದಿದ್ದೇನೆ. ಬಾಲ್ಯದಿಂದ ನಟನೆಯಲ್ಲಿ ಆಸಕ್ತಿ ಹೊಂದಿದ ನಾನು ಪದವಿಯ ನಂತರ ಮುಂಬೈ ಮೂಲದ ರೋಶನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್‌ನಲ್ಲಿ ನಾಲ್ಕು ತಿಂಗಳ ಡಿಪ್ಲೊಮಾ ಕೋರ್ಸ್ ಮಾಡಿದೆ. ನಂತರ ಚಂದನವನದಲ್ಲಿ ಪ್ರವೇಶಿಸಿದೆ. ಸದ್ಯ ನಿನ್ನೆ ತಾನೇ ಬಿಡುಗಡೆಯಾದ ’ಒಂಥರಾ ಬಣ್ಣಗಳು’ ಚಿತ್ರದ ಮೂಲಕ ಹೊಸ ಪಾತ್ರದಲ್ಲಿ ಕನ್ನಡದ ಜನತೆಯ ಮುಂದೆ ನಿಂತಿರುವೆ.

ನಟನೆಯಲ್ಲಿ ಆಸಕ್ತಿ ಬೆಳೆದ ಬಗೆ...

–ನಾನು ನನ್ನ ಬಾಲ್ಯದಿಂದ ಅಪ್ಪ-ಅಮ್ಮನ ನಟನೆಯನ್ನು ತುಂಬ ಹತ್ತಿರದಿಂದ ಕಂಡವಳು ಜೊತೆಗೆ ರಂಗಭೂಮಿಯಲ್ಲಿ ಗುರುತಿಸಿಕೊಂಡವಳು. ಹನುಮಂತ ನಗರದ ಸ್ಟೂಡೆಂಟ್ ಆಗಿ ಸುಮಾರು ಏಳು-ಎಂಟು ನಾಟಕಗಳಲ್ಲಿ ಅಭಿನಯಿಸಿದ್ದೆ. ಅದಾದ ನಂತರ ’ಪ್ರಕಾಶಂ’ ಎನ್ನುವ ಅಮೆಚ್ಯೂರ್ ಥಿಯೇಟರ್ ಗ್ರೂಪ್ ಮತ್ತು ’ಯು ಆಂಡ್ ಮೀ’ ಎನ್ನುವ ಗ್ರೂಪ್‌ನ ಸದಸ್ಯಳಾಗಿ ಹಲವಾರು ಪಾತ್ರಗಳಲ್ಲಿ ನಟಿಸಿದೆ. ಹೀಗೆ ರಂಗಭೂಮಿಯಿಂದ ಸಿನಿಮಾ ಪರದೆಯ ಮೇಲೆ ನಟಿಸುವಾಸೆ ಚಿಗುರೊಡೆದರ ಪರಿಣಾಮ ಇಂದು ಹೀಗಿದ್ದೇನೆ.

ಚಂದನವನಕ್ಕೆ ಪದಾರ್ಪಣೆ ಮಾಡಿದ್ದು ಯಾವಾಗ?

–ನಾನು 2014ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದೆ. ಆದರೆ ನಾನು ಅಭಿನಯಿಸಿದ ಮೊದಲ ಚಿತ್ರ ಅನೇಕ ಕಾರಣಾಂತರಗಳಿಂದ ಕಂಪ್ಲೀಟ್ ಆಗ್ಲಿಲ್ಲ. ಅದಾದ ಮೇಲೆ 2015ರಲ್ಲಿ ’1/4 ಕೆಜಿ ಪ್ರೀತಿ’ಯಲ್ಲಿ ನಟ ವಿಹಾನ್ ಗೌಡ ಅವರ ಜೊತೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡೆ. ನಟನೆಯ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ಸ್ಟಾರ್ ಸೀಸನ್-3, 2016ರಲ್ಲಿ ಭಾಗವಹಿಸಿ ವಿಜೇತಳಾದೆ. ಅದಾದ ಮೇಲೆ ’ಯೋಗಿ ದುನಿಯಾ’ ದಲ್ಲೂ ಲೀಡ್ ರೋಲ್ ಅಲ್ಲಿ ನಟಿಸಿದೆ. ಆ ಚಿತ್ರ ಮಾರ್ಚ್ ಅಲ್ಲಿ ಬಿಡುಗಡೆಯಾಗಿದೆ. ಈಗ ಪ್ರಸ್ತುತ ಒಂಥರಾ ಬಣ್ಣಗಳು ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡದ ಜನತೆಯ ಮುಂದೆ ಬಂದಿರುವೆ.

ನೀವು ಮುಂದಿನ ಪ್ರಾಜೆಕ್ಟ್...

–ನನ್ನ ಮುಂದಿನ ಚಿತ್ರ ಪ್ರಿಮೀಯರ್ ಪದ್ಮಿನಿ ಸದ್ಯ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ’ತುರ್ತು ನಿರ್ಗಮನ’ ದಲ್ಲಿ ನಟಿಸುತ್ತಿದ್ದೇನೆ.

ನಟನೆಯ ಜೊತೆ ನೀವು ಡಾನ್ಸರ್ ಆಗಿದ್ದು ಹೇಗೆ?

–ನಾನು ನಟನೆಗಿಂತ ಮೊದಲು ಕಲಿತದ್ದು ಡಾನ್ಸ್. ಹೀಗಾಗಿ ಡಾನ್ಸಿಂಗ್ ನನ್ನ ಸಂಗಾತಿಯೆಂದರೆ ತಪ್ಪಾಗದು. ಬೆಂಗಳೂರಿನಲ್ಲಿ ನಿರುಪಮಾ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಕಥಕ್ ಕಲಿತೆ. ಮೂಲವಾಗಿ ಕಲಿತದ್ದು ಕಥಕ್ ಆದರೆ ಅದರ ಜೊತೆ ಸುಮಾರು ಡಾನ್ಸ್ ಸ್ಟೈಲ್ಸ್ ಗೊತ್ತು--ಹಿಪ್ ಹಾಪ್, ಲಾಕಿಂಗ್, ಬಜಾಟಾ, ಟ್ಯಾಂಗೋ, ಕಂಟೆಂಪ್ರರಿ ಹೀಗೆ ನಾನಾ ವಿಧಗಳಲ್ಲಿ ಫರ್‌ಫಾರ್ಮ ಮಾಡ್ತೀನಿ. ನಟನೆಯಿಂದ ಬಿಡುವು ಸಿಕ್ಕಾಗ ಮೊದಲ ಆದ್ಯತೆ ಡಾನ್ಸಿಂಗ್‌ಗೆ ಮೀಸಲು.

ನಿಮ್ಮ ಹವ್ಯಾಸಗಳು...

–ನಟನೆ, ನೃತ್ಯದ ಜೊತೆಗೆ ರೋಡ್ ಟ್ರಿಪ್ ಹೋಗುವುದು, ಪ್ರಯಾಣ ಮಾಡುವುದು, ಸಿನಿಮಾ ನೋಡುವುದು ತುಂಬಾ ಇಷ್ಟ.

ಯಾವ ರೀತಿಯ ಸಿನಿಮಾ ಮತ್ತು ಪಾತ್ರಗಳಲ್ಲಿ ನಟಿಸುವಾಸೆ? ಯಾರ ಜೊತೆ ತೆರೆ ಹಂಚಿಕೊಳ್ಳುವಾಸೆ?

–ನನಗೆ ಚಾಲೆಂಜಿಂಗ್ ಮತ್ತು ಫರ್‌ಫಾರ್ಮೆನ್ಸ್ ಓರಿಯೆಂಟೆಡ್ ಪಾತ್ರಗಳಲ್ಲಿ ನಟಿಸುವ ಕನಸಿದೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸುವುದರಿಂದ ನಾನು ನನ್ನ ನಟನೆಯ ಗುಣಮಟ್ಟವನ್ನು ನಿರಂತರವಾಗಿ ಬೆಳೆಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ. ಅವಕಾಶ ಸಿಕ್ಕರೆ ಬಾಲಿವುಡ್ ಸ್ಟಾರ್ ಶಾರೂಕ್ ಖಾನ್ ಜೊತೆ ನಟಿಸುವಾಸೆ. ಭಾಷೆ ನಟನೆಗೆ ಅಡ್ಡಿ ಬರಲ್ಲ. ಅದಕ್ಕೆ ಕನ್ನಡದ ಜೊತೆ ಅನ್ಯ ಭಾಷೆಯ ಚಿತ್ರಗಳಲ್ಲಿ ನಟಿಸುವೆ.

ಒಂಥರಾ ಬಣ್ಣಗಳು ಚಿತ್ರ, ಮತ್ತು ನಿಮ್ಮ ಪಾತ್ರದ ತಿರುಳು...

–ಇದು ಮೊದಲ ಬಾರಿ ನಾನು ಈ ಚಿತ್ರದಲ್ಲಿ ಒಂದು ಪರದೆಯ ಮೇಲೆ ತುಂಬಾ ನಟ, ನಟಿಯರ ಜೊತೆ ನಟಿಸಿರುವುದು. ಒಂಥರಾ ಬಣ್ಣಗಳು ಚಿತ್ರದಲ್ಲಿ ನನ್ನ ಪಾತ್ರ ಒಬ್ಬ ಅನಾಥೆ ಹುಡುಗಿಯದ್ದು. ಪುರುಷರ ಮಧ್ಯೆ ಒಬ್ಬ ಮಹಿಳೆ ದುಡಿಯುವ ಪಾತ್ರ. ತನ್ನ ಭಾವನೆಗಳನ್ನು ಯಾರೊಂದಿಗೂ ತೋರ್ಪಡಿಸದ ಹುಡುಗಿ ಅನುಭವಿಸುವ ಸಂತೋಷ, ದು:ಖ ಎಲ್ಲವನ್ನೂ ಪ್ರೇಕ್ಷಕ ತನ್ನೊಳಗೆ ತಾನು ಅನುಭವಿಸುವಂತಿದೆ. ಚಿತ್ರದುದ್ದಕ್ಕೂ ಪ್ರಯಾಣದ ಸಮಯದಲ್ಲಿನ ಭಾವಗಳನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕರು.

ನಿಮ್ಮ ತಂದೆ-ತಾಯಿ ಅವರ ಬಗ್ಗೆ ಏನ್ ಹೇಳ್ತಿರಾ?

–ನನ್ನ ಅಪ್ಪ-ಅಮ್ಮನಿಗೆ ಕನ್ನಡ ಚಿತ್ರರಂಗದ ಆಳ-ಅಗಲ, ಅನೂಕೂಲ, ಅನಾನೂಕೂಲ ಎಲ್ಲವೂ ಗೊತ್ತು. ಆದರೆ ಅವರು ನನ್ನನ್ನು ಯಾವತ್ತು ಡಿಸ್‌ಕರೇಜ್ ಮಾಡಿಲ್ಲ. ತುಂಬಾನೇ ಸಪೋರ್ಟ್ ಮಾಡಿದ್ರು. ಅವರು ಯಾವತ್ತು ನನಗೆ ಒಬ್ಬಂಟಿಯಾಗಿರಲು ಬಿಡಲಿಲ್ಲ. ಸದಾ ನನ್ನ ಜೊತೆಯಿದ್ದು ನನ್ನನ್ನು ಹುರಿದಂಬಿಸಿದರು.

ಅಪ್ಪನ ಕೈ ರುಚಿ ಬಗ್ಗೆ ನಿಮ್ಮ ಅನಿಸಿಕೆ

–ಇಟ್ಸ್ ಯುನಿವರ್ಸಲ್ ಟ್ರುತ್ ದಾಟ್ ಅಪ್ಪ ಇಸ್ ಈ ಗ್ರೇಟ್ ಕುಕ್. ಅವರು ತಯಾರಿಸಿದ ಪ್ರತಿಯೊಂದು ರೆಸಿಪಿಗೆ 'ವಾವ್’ ಎಂದು ಹೇಳದೇ ಇರೋಕಾಗಲ್ಲ. ತುಂಬಾ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ ಅಡುಗೆಯಲ್ಲಿ. ಆದರೆ ನನಗೆ ಅಡುಗೆಯೆಂದರೆ ಅಷ್ಟಕಷ್ಟೆ. ತುಂಬಾ ಅವಶ್ಯಕತೆಯಿದ್ದಾಗ ಮಾತ್ರ ಏನಾದ್ರೂ ಮಾಡುವೆ. ಇಲ್ಲಾ ಇಂದ್ರೆ ಇಲ್ಲ.

ನಿಮ್ಮ ಫ್ಯಾಷನ್ ಸ್ಟೆಟ್‌ಮೆಂಟ್..

–ಬಿಯಿಂಗ್ ಕಂಫರ್ಟೇಬಲ್ ಎನ್ನುವುದು ನನ್ನ ಫ್ಯಾಷನ್ ಸ್ಟೆಟ್‌ಮೆಂಟ್. ನಾನು ಹೊಸ ಹೊಸ ವಸ್ತ್ರವಿನ್ಯಾಸಗಳನ್ನು ನನ್ನ ಕಂಫಂರ್ಟ್ ಜೋನ್‌ನಲ್ಲಿದ್ದುಕೊಂಡೇ ಟ್ರೈ ಮಾಡಲು ಇಷ್ಟಪಡ್ತೀನಿ. ಅದಕ್ಕೆ ಯಾವುದೇ ಬಟ್ಟೆಯಾಗಲಿ, ನಿಮ್ಮ ದೇಹಸಿರಿಗೆ ಒಪ್ಪುವಂತ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ತೊಡುಗೆಗಳಿಗೆ ಪ್ರಾಶಸ್ತ್ಯ ನೀಡುವುದು ಒಳಿತು. ನಾನು ಜಾಸ್ತಿ ಪ್ಲೇನ್ ಕಲರ್ ಬಳಸುತ್ತೇನೆ. ಪ್ರಿಂಟೆಡ್ ಡಿಸೈನ್ ಇಷ್ಟ ಆಗಲ್ಲ.

*ಚಂದನವನ ಪ್ರವೇಶಿಸುವವರಿಗೆ ನಿಮ್ಮ ಕಿವಿಮಾತು..

–ಚಂದನವನಕ್ಕೆ ಪ್ರವೇಶಿಸುವ ಎಲ್ಲರಿಗೂ ಬೇಸಿಕ್ ಲೆವಲ್ ಆಫ್ ಎಜುಕೇಶನ್ ತುಂಬಾ ಮುಖ್ಯವಾದದ್ದು. ನಟನೆಯನ್ನು ಅರಿತಿರಬೇಕು. ಗಟ್ಟಿ ಮನಸ್ಸಿನವರಾಗಿರಬೇಕು. ಅವಕಾಶ ಸಿಕ್ಕಾಗ ಆಗುವ ಖುಷಿ, ಅವಕಾಶ ಸಿಗದೇ ಹೋದಾಗ ನಿಮ್ಮನ್ನು ಕಾಡುವಂತಿರಬಾರದು. ನಟನೆಯಲ್ಲಿ ಪ್ರಾವಿಣ್ಯತೆ ಇದ್ದರೆ ಚಿತ್ರರಂಗ ಕಲಾವಿದರನ್ನು ಗುರುತಿಸುತ್ತದೆ ಮತ್ತು ಜನ ಮೆಚ್ಚುತ್ತಾರೆ ಎನ್ನುವುದು ನನ್ನ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT