ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ದೌರ್ಜನ್ಯ | ಪೊಲೀಸರ ನಿರ್ಲಕ್ಷ್ಯ: ಡಾ.ಸಿ.ಎನ್.ಮಂಜುನಾಥ್ ಆರೋಪ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್
Published 27 ಏಪ್ರಿಲ್ 2024, 14:11 IST
Last Updated 27 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಕಿಚ್ಚಾವಾಡಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರ ದೌರ್ಜನ್ಯವೇ ನೀರಗಂಟಿ ಚಂದ್ರಯ್ಯ ಆತ್ಮಹತ್ಯೆಗೆ ಕಾರಣವಾಗಿದೆ. ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಖಂಡಿಸಿದರು.

ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಕಿಚ್ಚಾವಾಡಿ ಗ್ರಾಮದ ಮೃತ ನೀರಗಂಟಿ ಚಂದ್ರಯ್ಯನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಂದ್ರಯ್ಯ ಮತ್ತು ಅವರ ಮಕ್ಕಳು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರು ಬೆದರಿಕೆ ಹಾಕಿ ಹಲ್ಲೆ ನಡೆಸಿರುವುದೇ, ಘಟನೆಗೆ ಕಾರಣವಾಗಿದೆ. ಅಪರಾಧಿಗಳಿಗೆ ಶಿಕ್ಷೆ ನೀಡಬೇಕಾದ ತಾಲ್ಲೂಕಿನ ಪೊಲೀಸರು ರಕ್ಷಣೆಗೆ ನಿಂತಿರುವುದು ಖಂಡನೀಯ ಎಂದರು.

ತಾಲ್ಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಜನಪ್ರತಿನಿಧಿಗಳು ಯತ್ನಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾಗಲಿದೆ ಎಂದರು.

ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಹುಲಿಯೂರುದುರ್ಗ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರ ದೌರ್ಜನ್ಯದ ಜತೆಗೆ ಪೊಲೀಸರ ನಿರ್ಲಕ್ಷವೂ ಘಟನೆಗೆ ಕಾರಣವಾಗಿದೆ. ಚಂದ್ರಯ್ಯ ಅವರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಆರೋಪಿಗಳು ಗ್ರಾಮದಲ್ಲಿ ಓಡಾಡುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಜೆಡಿಎಸ್ ಮುಖಂಡ ಡಾ.ಬಿ.ಎನ್. ರವಿ ಆರೋಪಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್. ಬಲರಾಂ, ಮುಖಂಡರಾದ ಹುಲಿಯೂರುದುರ್ಗದ ನಟರಾಜು, ದೇವರಾಜು, ತರಿಕೆರೆ ಪ್ರಕಾಶ್, ಚಂದ್ರಯ್ಯನ ಮಗ ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT