ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುರುಷೋತ್ತಮನ ಪ್ರಸಂಗ’ ಸಿನಿಮಾ ವಿಮರ್ಶೆ: ನೇರಕಥೆಯ ದುಬೈ ಪ್ರಸಂಗ

Published 2 ಮಾರ್ಚ್ 2024, 4:04 IST
Last Updated 2 ಮಾರ್ಚ್ 2024, 4:04 IST
ಅಕ್ಷರ ಗಾತ್ರ

ಸಿನಿಮಾ: ಪುರುಷೋತ್ತಮನ ಪ್ರಸಂಗ 

ನಿರ್ದೇಶನ: ದೇವದಾಸ್‌ ಕಾಪಿಕಾಡ್‌ 

ನಿರ್ಮಾಣ: ವಿ. ರವಿಕುಮಾರ್ 

ತಾರಾಗಣ: ಅಜಯ್ ಪೃಥ್ವಿ, ರಿಷಿಕಾ ನಾಯಕ್‌, ದೀಪಿಕಾ, ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಜ್ಯೋತಿಷ್ ಶೆಟ್ಟಿ ಮತ್ತಿತರರು 

ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ‘ದುಬೈ’ ಮೋಹ ಕೊಂಚ ಹೆಚ್ಚೇ ಇದೆ. ಇಲ್ಲಿನ ಊರುಗಳಲ್ಲಿ ಕನಿಷ್ಠ ನಾಲ್ಕೈದು ಮಂದಿಯಾದರೂ ದುಬೈನಲ್ಲಿ ದುಡಿಯುವವರು ಸಿಗುತ್ತಾರೆ. ಹೀಗೆ ದುಬೈಗೆ ಹೋದವರು ಎರಡು ವರ್ಷದ ಬಳಿಕ ಮರಳಿ ಊರಿನಲ್ಲಿಯೇ ಇದ್ದ ಹೆಂಚಿನ ಮನೆಯನ್ನು ಟೆರೇಸ್‌ ಮನೆಯಾಗಿ ಪುನರ್‌ನಿರ್ಮಾಣ ಮಾಡಿದ್ದೂ ಇದೆ. ಇದು ಆ ಊರಿನ ಮತ್ತಷ್ಟು ಯುವಕರಿಗೆ ‘ದುಬೈ’ ಆಸೆ ತರಿಸಿದ್ದೂ ಇದೆ. ಈ ಸರಳವಾದ ವಿಷಯದ ಸುತ್ತವೇ ಕಥೆ ಹೆಣೆದು ಸಿನಿಮಾ ರೂಪ ಕೊಟ್ಟಿದ್ದಾರೆ ದೇವದಾಸ್‌ ಕಾಪಿಕಾಡ್‌.

ದಕ್ಷಿಣ ಕನ್ನಡದ ಬ್ಯಾಕ್‌ಡ್ರಾಪ್‌ನಲ್ಲಿ ಸಿನಿಮಾದ ಕಥೆಯಿದೆ. ಡಿಗ್ರಿ ಪೂರ್ಣಗೊಳಿಸಿರುವ ‘ಪುರುಷೋತ್ತಮ’ನಿಗೆ ದುಬೈನಲ್ಲಿ ಕೆಲಸ ಮಾಡುವ ಕನಸು. ಕನಸಿನಲ್ಲಿಯೂ ಮಂಗಳೂರನ್ನೇ ದುಬೈ ಮಾಡಿದವನು ಆತ. ಇದ್ದ ಕೆಲಸವನ್ನೂ ಬಿಟ್ಟು ದುಬೈನಲ್ಲಿ ಕೆಲಸಕ್ಕಾಗಿ ಏಜೆಂಟ್‌ ಮೂಲಕ ಅರ್ಜಿ ಹಾಕುತ್ತಾನೆ. ಮಗನ ಆಸೆಗೆ ಜೊತೆಯಾಗುವ ತಂದೆ, ಮಗಳ ಮದುವೆಗೆ ತೆಗೆದಿಟ್ಟ ₹7 ಲಕ್ಷವನ್ನು ಏಜೆಂಟ್‌ಗೆ ನೀಡುತ್ತಾನೆ. ತನ್ನ ಕನಸನ್ನೇ ಆದ್ಯತೆಯಾಗಿಸಿಕೊಂಡ ಪುರುಷೋತ್ತಮ ಪ್ರೇಯಸಿಯನ್ನು ಬಿಟ್ಟು ದುಬೈಗೆ ಹಾರುತ್ತಾನೆ. ಕನಸಿನಲ್ಲಿ ಕಂಡ ದುಬೈನ ವಾಸ್ತವವೇನು, ಅಕ್ಕನ ಮದುವೆ ಏನಾಗುತ್ತದೆ? ಈ ಹಾದಿಯಲ್ಲಿ ಪುರುಷೋತ್ತಮನ ಪಯಣವೇ ಚಿತ್ರದ ಮುಂದಿನ ಕಥೆ.    

ತುಳುವಿನಲ್ಲಿ ಹತ್ತಾರು ನಾಟಕಗಳು, ಜೊತೆಗೆ ಒಂಬತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ದೇವದಾಸ್‌ ಕಾಪಿಕಾಡ್‌ ಅವರ ನಿರ್ದೇಶನದ ಮೊದಲ ಕನ್ನಡ ಚಿತ್ರವಿದು. ಹಾಸ್ಯವೇ ದೇವದಾಸ್‌ ಕಾಪಿಕಾಡ್‌ ಅವರ ಅಸ್ತ್ರ. ನಿರ್ದೇಶಕನಾಗಷ್ಟೇ ಅಲ್ಲದೆ, ನಟನೆ, ಹಾಡುಗಾರಿಕೆಯಲ್ಲೂ ಅವರದ್ದು ಮೇಲುಗೈ. ‘ವೆಂಕಟ ಇನ್‌ ಸಂಕಟ’ ಸಿನಿಮಾದಲ್ಲಿ ಇದನ್ನು ಕಾಣಬಹುದು. ಆದರೆ ಈ ಸಿನಿಮಾದಲ್ಲಿ ಹಾಸ್ಯವೆಂಬ ಅಸ್ತ್ರದ ಬಳಕೆ ಕಡಿಮೆಯಿದೆ. ಅಲ್ಲೊಂದು ಇಲ್ಲೊಂದು ಹಾಸ್ಯಮಿಶ್ರಿತ ಸಂಭಾಷಣೆಗಳನ್ನು ಹೊರತುಪಡಿಸಿದರೆ, ಶೀರ್ಷಿಕೆಗೆ ತಕ್ಕಂತೆ ಸಿನಿಮಾದಲ್ಲಿ ಯಾವುದೇ ಪ್ರಸಂಗವಿಲ್ಲ. ನಗು ಉಕ್ಕಿಬರುವಂತಹ ದೃಶ್ಯಗಳಿಲ್ಲ. ಮಂಗಳೂರಿನಲ್ಲೇ ದುಬೈಯನ್ನು ಅದ್ಭುತವಾಗಿ ಸೃಷ್ಟಿಸಿದ ಸಿನಿಮಾದ ಆರಂಭಿಕ ದೃಶ್ಯಗಳು ಸಿನಿಮಾದ ಮೇಲೆ ಭರವಸೆ ಮೂಡಿಸಿದರೂ ಇದನ್ನು ಸಿನಿಮಾದುದ್ದಕ್ಕೂ ಉಳಿಸಿಕೊಳ್ಳುವಲ್ಲಿ ನಿರ್ದೇಶಕರು ವಿಫಲರಾಗುತ್ತಾರೆ. ಕೆಲವೆಡೆ ದೃಶ್ಯಗಳು ಬಹಳ ಕೃತಕವಾಗಿ ಎಳೆದಾಡಿದಂತೆ ಕಾಣಿಸುತ್ತವೆ. ಕ್ಲೈಮ್ಯಾಕ್ಸ್‌ ಕಥೆ ಹೆಣಿಗೆಯಲ್ಲಿ ಮತ್ತಷ್ಟು ಗಟ್ಟಿತನವಿರಬೇಕಿತ್ತು. ತಮ್ಮ ನೆಚ್ಚಿನ ಜಾನರ್‌ ಬಿಟ್ಟು ಬಹಳ ನೇರವಾಗಿ ಕಥೆಯನ್ನು ಹೆಣೆಯುತ್ತಾ ಸಾಗಿದ್ದಾರೆ ನಿರ್ದೇಶಕ. ಹೀಗಾಗಿ ಇಡೀ ಸಿನಿಮಾ ದಶಕದ ಹಿಂದಿನ ಸಿನಿಮಾ ಶೈಲಿಯಲ್ಲಿದೆ.    

ಸಿನಿಮಾ ಕರಾವಳಿ ಭಾಗದ ಕಥೆಯಾಗಿದ್ದು, ಆ ಮಣ್ಣಿನ ಸೊಗಡನ್ನು ಇನ್ನಷ್ಟು ಸೆರೆಹಿಡಿಯಬೇಕಿತ್ತು. ಸಿನಿಮಾದುದ್ದಕ್ಕೂ ಮಂಗಳೂರು ಕನ್ನಡದ ಬಳಕೆ ಸೊಗಸಾಗಿದೆ. ಅಜಯ್‌, ರಿಷಿಕಾ ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಉಳಿದೆಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಡುಗಳ ಸಾಹಿತ್ಯ ಸೆಳೆಯುವಂತಿದ್ದು, ನಕುಲ್‌ ಅಭಯಂಕರ್‌ ಸಂಗೀತವೂ ಇಂಪಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT