ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದಲ್ಲಿ ಗಾಂಧಿ ಬಿಂಬಗಳು...

Last Updated 2 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಸದಾಕಾಲಕ್ಕೂ ಮಾನ್ಯವಾಗುವ ಮಹಾತ್ಮ ಗಾಂಧೀಜಿ ಅವರ ತತ್ವಗಳನ್ನು ರಂಗದ ಮೇಲೆ ಬೆಂಗಳೂರು ಸಮುದಾಯ ಮತ್ತು ನ್ಯಾಷನಲ್ ಕಾಲೇಜು ಅನಾವರಣಗೊಳಿಸಲು ಸಜ್ಜಾಗಿವೆ. ಗಾಂಧಿ 150 ನೆನಪಿನಲ್ಲಿ ಅಕ್ಟೋಬರ್ 3ರಿಂದ 5ರ ತನಕ ಗಾಂಧಿ ಕುರಿತು ನಾಟಕೋತ್ಸವವನ್ನು ಆಯೋಜಿಸಲಾಗಿದ್ದು, ಮೂರು ಭಿನ್ನ ರಂಗ ಪ್ರಯೋಗಗಳು ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲಿವೆ.

ಅ.3ರಂದು ಪ್ರದರ್ಶನವಾಗಲಿರುವ ’ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಬೊಳುವಾರು ಮಹಮ್ಮದ್ ಕುಂಞಿ ಅವರ ಕೃತಿಯನ್ನು ಆಧರಿಸಿದ ರಂಗರೂಪ. ಎನ್.ಆರ್. ವಿಶುಕುಮಾರ ಪರಿಕಲ್ಪನೆಯ ಈ ರಂಗರೂಪವನ್ನು ಡಾ.ಶ್ರೀಪಾದ್ ಭಟ್ ನಿರ್ದೇಶಿಸಿದ್ದಾರೆ. ಸರಳ ರಂಗ ಪರಿಕರಗಳ ಮೂಲಕವೇ ಗಾಂಧೀಜಿ ಅವರ ಸರಳ ಬದುಕನ್ನು ಈ ರಂಗರೂಪ ಕಟ್ಟಿಕೊಡಲಿದೆ. ಅ.4ರಂದು ಪ್ರದರ್ಶನವಾಗಲಿರುವ ‘ಕೊಂದವರಾರು’ ನಾಟಕ ಗಾಂಧೀಜಿ ಬಗ್ಗೆ ಮತ್ತಷ್ಟು ಅಧ್ಯಯನಕ್ಕೆ ಪ್ರೇರಣೆ ನೀಡುವ ಸಂಗತಿಗಳನ್ನು ಒಳಗೊಂಡಿದ್ದರೆ, ಕೊನೆಯ ದಿನ ಅ. 5ರಂದು ಪ್ರದರ್ಶನವಾಗಲಿರುವ ‘ಗಾಂಧಿ; ಅಂಬೇಡ್ಕರ್’ ನಾಟಕ ಎರಡು ಮಹಾನ್ ವ್ಯಕ್ತಿತ್ವಗಳ ಮುಖಾಮುಖಿಯನ್ನು ತೆರೆದಿಡುತ್ತದೆ.

ಗಾಂಧಿ ಬದುಕಿದ್ದರೆ ಅವರಿಗೆ 150 ವರ್ಷವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗಾಂಧಿ 150 ನಾಟಕೋತ್ಸವ ಆಯೋಜಿಸಲಾಗಿದೆ. ಎಲ್ಲಾ ನಾಟಕಗಳು ಎಚ್‌.ಎನ್. ಕಲಾಕ್ಷೇತ್ರದಲ್ಲಿ ಪ್ರದರ್ಶನವಾಗಲಿದ್ದು, ಉಚಿತ ಪ್ರವೇಶವಿದೆ. ಗಾಂಧೀಜಿ ಅವರ ಆಶಯಗಳನ್ನು ರಂಗಭೂಮಿಯಲ್ಲಿ ವಿಶಿಷ್ಟವಾಗಿ ತರುವ ಪ್ರಯತ್ನ ಮಾಡಲಾಗಿದೆ. ಗಾಂಧಿ ತತ್ವಗಳನ್ನು ತಿಳಿಯಲು ನಾಟಕಗಳು ಪೂರಕವಾಗಿವೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸಬೇಕೆಂಬುದು ನಮ್ಮ ಆಶಯ ಎನ್ನುತ್ತಾರೆ ಸಮುದಾಯ ಬೆಂಗಳೂರು ಸಂಘಟನೆಯ ಕಾರ್ಯದರ್ಶಿ ಶಶಿಧರ್.

‘ಇತಿಹಾಸವನ್ನು ಸರಿಯಾಗಿ ತಿಳಿಯಲಾಗದವರು ಇತಿಹಾಸವನ್ನು ಸೃಷ್ಟಿಸಲಾರರು. ಗಾಂಧಿ ಮತ್ತು ಅಂಬೇಡ್ಕರ್ ಭಾರತದ ಇತಿಹಾಸ,ತತ್ವಜ್ಞಾನ, ಧರ್ಮ, ಸಾಮಾಜಿಕ ಪದ್ಧತಿಗಳ ಬಗ್ಗೆ ಸ್ಪಷ್ಟವಾಗಿ ತಮ್ಮ ಸಿದ್ಧಾಂತಗಳನ್ನು ಮಂಡಿಸಿದ ಮಹನೀಯರು. ಇಂದು ಜಗತ್ತೇ ಭಯೋತ್ಪಾದನೆ, ಹಿಂಸೆಯ ಮಾರ್ಗ ಹಿಡಿದಿರುವಾಗ, ಗಾಂಧಿ ಪ್ರತಿಪಾದಿಸಿದ ಅಹಿಂಸಾ ತತ್ವ ಜಾಗತಿಕ ಪೀಡುಗೆಗೆ ದಿವ್ಯೌಷಧವಾಗಿದೆ. ಅಸ್ಪೃಶ್ಯರ ಆಶೋತ್ತರಗಳಿಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಹೋರಾಡಿದರೂ ದೇಶ ಕಟ್ಟುವ ಜೊತೆಗೆ ಹಿಂದೂ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅವರು ಮಂಡಿಸಿದ ವಾದ-ವಿವಾದಗಳ ಸುತ್ತ ರೂಪುಗೊಂಡ ರಂಗ ರೂಪಕವಿದು ಎನ್ನುತ್ತಾರೆ ‘ಗಾಂಧಿ–ಅಂಬೇಡ್ಕರ್’ ನಾಟಕದ ನಿರ್ದೇಶಕ ಸಿ. ಬಸವಲಿಂಗಯ್ಯ.

‘ಭಾರತೀಯ ಚರಿತ್ರೆಯ ಅತಿ ದೊಡ್ಡ ವ್ಯಕ್ತಿತ್ವವಾದ ಮಹಾತ್ಮ ಗಾಂಧೀಜಿ ಅವರನ್ನು ಇಂದಿನ ಯುವಪೀಳಿಗೆ ಗ್ರಹಿಸಿರುವ ಮತ್ತು ಅವರ ನಡುವೆ ಹರಡಿರುವ ಅನೇಕ ಬಗೆಯ ಪೂರ್ವಗ್ರಹಗಳಿಗೆ ‘ಕೊಂದವರಾರು’ ನಾಟಕ ಉತ್ತರವಾಗಿದೆ. ಗಾಂಧೀಜಿ ಬಗ್ಗೆ ಇನ್ನಷ್ಟು ಅಧ್ಯಯನಕ್ಕೆ ಉತ್ತೇಜಿಸುವ ನಾಟಕವಿದು. ಗಾಂಧೀಜಿ ಎಂಬ ಮಹಾನ್ ಚೇತನದ ಕೊಲೆಯ ವಿಚಾರಣೆಯು ಗಾಂಧಿ ಬಗ್ಗೆ ಇರುವ ಮಿಥ್ಯೆಗಳ ವಿಚಾರಣೆಯೂ ಆಗಿದೆ. ಗಾಂಧಿ, ಸಮುದಾಯ, ಪ್ರಸನ್ನ, ಕುವೆಂಪು, ಅಡಿಗ, ಗಾಂಧಿ ಉತ್ಸವ 150, ಭರವಸೆಯ ಹೊಸ ಪೀಳಿಗೆ ಹೀಗೆ ನನ್ನೆಲ್ಲಾ ಅಚ್ಚುಮೆಚ್ಚಿನ ಸಂಗತಿಗಳ ಒಟ್ಟಾರೆ ಮಿಳಿತವೇ ಈ ನಾಟಕ. ನಾಟಕದಲ್ಲಿ ಬರುವ ಶುದ್ಧ ನೈತಿಕತೆಯೊಂದೇ ಈ ಕೊಲೆಗಾರ ಮೇಲೆದ್ದು ಬರದಂತೆ ತಡೆಯಬಲ್ಲ ಅಸ್ತ್ರ ಎಂಬ ನಾಟಕದ ಮಾತುಗಳು ವರ್ತಮಾನದ ಕೊಲ್ಲುವ ಕ್ರಿಯೆಯಲ್ಲಿ ಪಾಲ್ಗೊಂಡು ಅಸ್ತ್ರಗಳಾಗಿ ಬಲಿಪಶುಗಳಾಗಿರುವ ಭಕ್ತ ಸಮೂಹಕ್ಕೂ ತಲುಪಲಿ ಎಂಬುದೇ ಈ ನಾಟಕ ಉದ್ದೇಶ ಎಂಬುದು ‘ಕೊಂದವರಾರು’ ನಾಟಕದ ನಿರ್ದೇಶಕ ಮಾಲತೇಶ್ ಎಚ್.ವಿ ಅವರ ವಿವರಣೆ.

ಗಾಂಧಿ 150–ನಾಟಕೋತ್ಸವ: ಉದ್ಘಾಟನಾ ಸಮಾರಂಭ. ಅತಿಥಿಗಳು–ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಎನ್.ಆರ್. ವಿಶುಕುಮಾರ್, ಡಾ.ಎ.ಎಚ್.ರಾಮರಾವ್, ಪ್ರೊ.ಎಸ್‌.ಎನ್. ನಾಗರಾಜ ರೆಡ್ಡಿ, ಬೊಳುವಾರು ಮಹಮ್ಮದ್ ಕುಂಞ, ಅಗ್ರಹಾರ ಕೃಷ್ಣಮೂರ್ತಿ, ಡಾ.ಎಚ್.ಆರ್.ಕೃಷ್ಣಮೂರ್ತಿ. ಆಯೋಜನೆ–ನ್ಯಾಷನಲ್ ಕಾಲೇಜು, ಸಮುದಾಯ. ಸ್ಥಳ–ಡಾ.ಎಚ್.ಎನ್.ಕಲಾಕ್ಷೇತ್ರ, ಜಯನಗರ. ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT