ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಅಂಗಳದಲ್ಲಿ ಔಷಧೀಯ ವನ

Last Updated 11 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ಕೋಲಾರದ ಎಸ್‌.ಎನ್‌.ಆರ್. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಂಗಳದಲ್ಲಿ ಪುಟ್ಟದೊಂದು ವನವಿದೆ. ವನದಲ್ಲಿರುವ ಪ್ರತಿ ಗಿಡಕ್ಕೂ ಒಂದೊಂದು ಫಲಕ ಹಾಕಲಾಗಿದೆ. ಫಲಕದಲ್ಲಿ ಗಿಡದ ಸಾಮಾನ್ಯ ಹೆಸರು, ಸಸ್ಯ ಶಾಸ್ತ್ರೀಯ ಹೆಸರು, ಉಪಯೋಗವನ್ನು ಬರೆಯಲಾಗಿದೆ.

ಪ್ರತಿ ಗಿಡಕ್ಕೂ ಕಬ್ಬಿಣದ ಮೆಷ್‌ನಿಂದ ರಕ್ಷಣೆ ಒದಗಿಸಿದ್ದಾರೆ. ನೀರು ಹಾಕಲು ಪಾತಿ ಮಾಡಿದ್ದಾರೆ. ಪ್ರತಿ ಗಿಡಕ್ಕೂ ಮುಚ್ಚಿಗೆ ಮಾಡಿ, ತೇವಾಂಶ ರಕ್ಷಣೆ ಮಾಡಿದ್ದಾರೆ. ಅವುಗಳಿಗೆ ನಿತ್ಯ ನೀರು ಪೂರೈಸಿ ಆರೈಕೆ ಮಾಡುತ್ತಾರೆ.

ಏನಿದು ಆಸ್ಪತ್ರೆಯಲ್ಲಿ ವನ ಮಾಡಿರುವುದು. ಇದೇನು ಉದ್ಯಾನವೇ? ಎನ್ನಿಸುತ್ತಿದೆಯಲ್ಲವೇ. ನಿಜ, ಅದು ಆಸ್ಪತ್ರೆಯ ಆವರಣದಲ್ಲಿರುವ ಔಷಧೀಯ ವನ. ಅದರಲ್ಲಿರುವುದು ಆಯುರ್ವೇದ ಚಿಕಿತ್ಸೆಗೆ ಬಳಸುವಂತಹ ಔಷಧೀಯ ಗುಣವುಳ್ಳ ಸಸ್ಯಗಳು. ಈ ಔಷಧ ವನದ ಹಿಂದಿನ ರೂವಾರಿ ಆಯುಷ್ ವೈದ್ಯಾಧಿಕಾರಿ ಡಾ. ಸರಸ್ವತಿ ನಾವಳ್ಳಿ. ಅವರಿಗೆ ನೆರವಾದವರು ಆಸ್ಪತ್ರೆಯ ಸಿಬ್ಬಂದಿ.

ಒಂದೂವರೆ ವರ್ಷದ ಹಿಂದೆ ಸರಸ್ವತಿಯವರಿಗೆ ಈ ಔಷಧೀಯ ವನ ಬೆಳೆಸುವ ಐಡಿಯಾ ಹೊಳೆಯಿತು. ಈ ಕುರಿತು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗೆ ಚರ್ಚಿಸಿದರು. ಅವರ ಸಹಕಾರದೊಂದಿಗೆ ಸ್ಥಳೀಯ ಹಾಗೂ ಬೆಂಗಳೂರಿನಲ್ಲಿರುವ ನರ್ಸರಿಗಳನ್ನು (ಸಸಿಮಡಿಗಳನ್ನು ) ಸಂಪರ್ಕಿಸಿ, 50ಕ್ಕೂ ಹೆಚ್ಚು ಜಾತಿಯ ಅಪರೂಪದ ಔಷಧೀಯ ಸಸ್ಯಗಳನ್ನು ಖರೀದಿಸಿ ತಂದು, ಆಸ್ಪತ್ರೆ ಆವರಣದಲ್ಲಿ ನಾಟಿ ಮಾಡಿಸಿದರು. ಗಿಡ ಬೆಳೆಸಲು ಕೆಲವು ಕಡೆ ಆಸ್ಪತ್ರೆಯಲ್ಲಿ ಲಭ್ಯವಿದ್ದ ನಿರುಪಯುಕ್ತ ವಸ್ತುಗಳನ್ನು ಬಳಸಲಾಗಿದೆ. ಅನುಪಯುಕ್ತ ಮುರಿದ ಕಬ್ಬಿಣದ ಕುರ್ಚಿ ಮತ್ತು ಟೇಬಲ್ ವಸ್ತುಗಳನ್ನು ಬಳಸಿ ಸಸಿಗಳಿಗೆ ರಕ್ಷಾಕವಚಗಳನ್ನು ಮಾಡಿದ್ದಾರೆ.

ಇಷ್ಟೆಲ್ಲ ಆರೈಕೆಯಿಂದಾಗಿ ಆಸ್ಪತ್ರೆಯ ಅಂಗಳದಲ್ಲಿ ಪೈಕಿ ಲೋಳೆಸರ, ಅಶ್ವಗಂಧ, ಗೋರಂಟಿ, ತುಳಸಿ, ಕೆಂಪುಹೊನ್ನು, ದಾಸವಾಳ, ಸದಾಬಾಹರ್, ನಿಂಬೆ, ಕರಿಬೇವು, ವಿಟಮಿನ್ ಅಂಶವಿರುವ ಸಸ್ಯಗಳು.. ಹೀಗೆ ಹಲವು ಜಾತಿಯ ಔಷಧೀಯ ಸಸ್ಯಗಳು ಗಿಡಗಳಾಗಿ ಬೆಳೆದು ನಿಂತಿವೆ. ‘ಆಸ್ಪತ್ರೆಗೆ ಬರುವ ರೋಗಿಗಳಿಗೆ, ಆಯುರ್ವೇದ ಚಿಕಿತ್ಸೆ ಕೊಡುವ ಜತೆಗೆ, ಈ ಔಷಧೀಯ ಸಸ್ಯಗಳನ್ನು ಪರಿಚಯಿಸುವುದು ಈ ವನದ ಉದ್ದೇಶ’ ಎನ್ನುತ್ತಾರೆ ಡಾ.ಸರಸ್ಪತಿ ನಾವಳ್ಳಿ. ಅಂದ ಹಾಗೆ, ಗೋರಂಟಿಯನ್ನು ಸೌಂದರ್ಯವರ್ಧಕ ಹಾಗೂ ಕೂದಲು ಆರೈಕೆಗೆ ಬಳಕೆ ಮಾಡುತ್ತಾರೆ. ಅಶ್ವಗಂಧ ನರರೋಗ ಚಿಕಿತ್ಸೆಗೆ ಬಳಸುತ್ತಾರೆ. ಸುಟ್ಟ ಗಾಯದ ಚಿಕಿತ್ಸೆಗೆ ಲೋಳೆಸರ ಬಳಸಲಾಗುತ್ತಾರೆಂದು, ಗಿಡಗಳ ಮೇಲೆ ತೂಗು ಹಾಕಿರುವ ಫಲಕಗಳಲ್ಲಿದೆ.

ಎರೆಗೊಬ್ಬರದ ಸಹಕಾರ
ಆರ್ಯುವೇದ ಸಸ್ಯ ಉದ್ಯಾನವನ ಬೆಳೆಸುವ ಆಲೋಚನೆ ಬಂದಾಗ, ಗಿಡ ಬೆಳೆಸಲು ಗೊಬ್ಬರ ಎಲ್ಲಿಂದ ತರುವುದು ಎಂಬ ಚಿಂತನೆ ಹುಟ್ಟಿತು. ಆಗ ನೆರವಾಗಿದ್ದೆ ಎರೆಹುಳು ಗೊಬ್ಬರ ತಯಾರಿಕೆ. ಎಲ್ಲಿಂದಲೋ ಎರೆಗೊಬ್ಬರ ತರುವ ಬದಲು, ಆಸ್ಪತ್ರೆಯಲ್ಲೇ ಗೊಬ್ಬರ ತಯಾರಿಕೆ ಘಟಕ ಮಾಡಬಹುದಲ್ಲಾ ಎಂಬ ಯೋಚನೆ ಬಂತು. ಆಗಿನ ಸರ್ಜನ್ ಡಾ. ಎಚ್. ಆರ್. ಶಿವಕುಮಾರ್, ಎರೆಗೊಬ್ಬರ ಘಟಕ ಸ್ಥಾಪನೆಗೆ ಆಸಕ್ತಿ ತೋರಿದರು. ವೈದ್ಯಾಧಿಕಾರಿ ಡಾ. ಹೇಮಾ ಭಾಸ್ಕರ್ ಎರೆಹುಳುಗಾಗಿ ಹುಡುಕಾಟ ನಡೆಸಿದರು. ಕೃಷಿ ಇಲಾಖೆ ನೆರವಿನಿಂದ ಬಂಗಾರಪೇಟೆ ರೈತರೊಬ್ಬರು ಎರೆಹುಳು ಪೂರೈಸಿದರು. ಆಸ್ಪತ್ರೆಯ ನೀರು ಪೂರೈಕೆಗೆ ಬಳಸಲಾಗುತ್ತಿದ್ದ ಹಳೇ ನಿರುಪಯುಕ್ತ ಫೈಬರ್ ಡ್ರಮ್‍ನಲ್ಲಿ ಎರೆಹುಳು ಬಿಟ್ಟು, ಗೊಬ್ಬರ ತಯಾರಿಸಲಾಗುತ್ತಿದೆ. ಈಗ ಆಸ್ಪತ್ರೆಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯುವುದರ ಜತೆಗೆ, ಗಿಡ ಬೆಳೆಸುವುದಕ್ಕೆ ಆಗುವ ಜೈವಿಕ ಗೊಬ್ಬರವೂ ಅಲ್ಲೇ ತಯಾರಾಗುತ್ತಿದೆ.

ಈ ಎರೆಹುಳು ಘಟಕಕ್ಕೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ತಯಾರಿಸುವ ಅಡುಗೆಯ ಉಳಿಕೆ ತ್ಯಾಜ್ಯವೇ ಕಚ್ಚಾವಸ್ತು. ಜತೆಗೆ ತರಕಾರಿ ಸಿಪ್ಪೆ, ಆಸ್ಪತ್ರೆ ಅಂಗಳದಲ್ಲಿನ ತರಗೆಲೆಗಳೇ ಎರೆಹುಳುಗಳಿಗೆ ಆಹಾರ. ‘ಇಷ್ಟು ಸಾಕಾಗುತ್ತದಾ’ ಎಂದು ಕೇಳಬೇಡಿ. ಏಕೆಂದರೆ, ನಿತ್ಯ ಆಸ್ಪತ್ರೆಯಲ್ಲಿ 400 ಕ್ಕೂ ಹೆಚ್ಚು ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಮೂರು ಹೊತ್ತು ಊಟ, ತಿಂಡಿ ತಯಾರಾಗಬೇಕು. ಇದಕ್ಕಾಗಿ ಕನಿಷ್ಠ ನಿತ್ಯ 50 ಕೆ.ಜಿ.ಯಷ್ಟು ತರಕಾರಿ ಬಳಕೆಯಾಗುತ್ತದೆ. ‘ಪ್ರತಿ ನಿತ್ಯ 5 ಕೆಜಿ ಜೈವಿಕ ತ್ಯಾಜ್ಯ ಸಂಗ್ರಹವಾಗುತ್ತದೆ. ಮೊದಲು ಈ ತ್ಯಾಜ್ಯ ತಿಪ್ಪೆ ಪಾಲಾಗುತ್ತಿತ್ತು. ಈಗ ಅದು ಗೊಬ್ಬರದ ಘಟಕ ಸೇರಿ, ಈ ಔಷಧೀಯ ಗಿಡಗಳಿಗೆ ಆಹಾರವಾಗುತ್ತಿದೆ. ಇದರಿಂದ ಒಂದು ಕಡೆ ತ್ಯಾಜ್ಯ ವಿಲೇವಾರಿ ಆಯಿತು. ಇನ್ನೊಂದು ಕಡೆ ಹೊರಗಿನಿಂದ ಗಿಡಗಳಿಗೆ ಗೊಬ್ಬರ ತರುವುದು ತಪ್ಪಿತು. ಉತ್ಕೃಷ್ಟ ನೈಸರ್ಗಿಕ ಗೊಬ್ಬರವೂ ಲಭ್ಯವಾಯಿತು’ ಎನ್ನುವುದು ಆಸ್ಪತ್ರೆ ಸಿಬ್ಬಂದಿ ಲೆಕ್ಕಾಚಾರ.

ರಾಷ್ಟ್ರೀಯ ಮಾನ್ಯತೆ

ಕೋಲಾರದ ಎಸ್‌.ಎನ್‌.ಆರ್. ಸರ್ಕಾರಿ ಜಿಲ್ಲಾಸ್ಪತ್ರೆ ಹಲವು ಹೊಸ ಆವಿಷ್ಕಾರ ಮತ್ತು ಪ್ರಯೋಗಗಳಿಗೆ ಖ್ಯಾತಿ ಪಡೆದಿದೆ. ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುಚ್ಚಿ ಓಡಾಡಬೇಕು ಎಂದು ಹೇಳುವಾಗ, ಈ ಆಸ್ಪತ್ರೆ ಅಂಗಳದಲ್ಲಿ ಔಷಧೀಯ ವನ ನಿರ್ಮಾಣ ಮಾಡಿ, ವಾತಾವರಣವನ್ನೂ ಶುಚಿಯಾಗಿಡುವ ಪ್ರಯತ್ನ ಮಾಡಿದೆ. ಇಂಥ ಪ್ರಯೋಗಗಳಿಗಾಗಿಯೇ ಕಳೆದ ವರ್ಷ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದ ನಿರ್ವಹಣೆಗಾಗಿ ಈ ಆಸ್ಪತ್ರೆಗೆ ರಾಷ್ಟ್ರೀಯ ಮಾನ್ಯತೆ ದೊರೆತಿದೆ.‌

ಪ್ರಮುಖ ಸಸಿಗಳು

ಅಶ್ವಗಂಧ : ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ರಕ್ತದೊತ್ತಡ ಕಡಿಮೆ ಮಾಡುತ್ತದೆ

ಲೋಳೆಸರ: ಸುಟ್ಟ ಗಾಯ, ಕೂದಲು ಬೆಳವಣಿಗೆ ಚಿಕಿತ್ಸೆಗೆ ಬಳಸಲಾಗುವುದು.

ಕರೆ ಮದ್ದಿನ ಗಿಡ : ನರಗಳ ದೌರ್ಬಲ್ಯ, ನಿದ್ರಾಹೀನತೆ ಚಿಕಿತ್ಸೆಗೆ ಬಳಸಲಾಗುವುದು.

ನಂದಿ ಬಟ್ಟಲು: ಹಲ್ಲು ನೋವು, ಬೇದಿ ಉಪಶಮನಕ್ಕೆ ಬಳಸಲಾಗುವುದು.

ದುಂಡು ಮಲ್ಲಿಗೆ: ಗಾಯಗಳ ಚಿಕಿತ್ಸೆಗೆ ಬಳಸಲಾಗುವುದು.

ಅಜವಾನ (ಓಂ ಗಿಡ): ಹೊಟ್ಟೆ ನೋವು ಅಜೀರ್ಣ ಶಮನಕ್ಕೆ ಬಳಕೆ ಮಾಡಲಾಗುವುದು.

ದಾಸವಾಳ : ಕೂದಲು ಬೆಳವಣಿಗೆಗೆ ಬಳಸಲಾಗುವುದು.

ಮೆಣಸು : ಶೀತ, ಕೆಮ್ಮು ನಿವಾರಣೆಗೆ ಬಳಸಲಾಗುವುದು.

ದಾಳಿಂಬೆ : ಅತಿಸಾರ ನಿವಾರಣೆಗೆ ಬಳಸಲಾಗುವುದು.

ಬ್ರಹ್ಮ ಕಮಲ : ನಂಜು ನಿವಾರಣೆಗೆ ಬಳಸಲಾಗುವುದು.

ಕೆಂಪು ಹೊನ್ನು : ಅಸ್ತಮಾ ಮತ್ತು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬಳಕೆ.

ಕಣಗಲಿ: ಬಾಹ್ಯ ಉಪಯೋಗಕ್ಕೆ ಬಳಸಲಾಗುವುದು.

ನುಗ್ಗೆ ಗಿಡ: ರಕ್ತ ವೃದ್ದಿಗೆ ಬಳಸಲಾಗುವುದು.

ಬಾಳೆ ಗಿಡ: ಮಲಬದ್ದತೆ ನಿವಾರಣೆ ಮಾಡುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT