ಶನಿವಾರ, ನವೆಂಬರ್ 23, 2019
17 °C
ಭವಿಷ್ಯದಲ್ಲಿ ನೆರೆಯನ್ನು ಎದುರಿಸಲು ಶಾಶ್ವತ ಪರಿಹಾರೋಪಾಯಗಳು ಏನು?

ಧರೆಗೆ ನೆರೆ: ಬದುಕಾಯ್ತು ಹೊರೆ

Published:
Updated:

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು

ಬಸವಣ್ಣನ ಈ ವಚನವು ನೆರೆಪೀಡಿತರಿಗೂ ಅನ್ವಯವಾ ಗುತ್ತದೆ. ನೆರೆಯಿಂದ ತುಂಬಿದ ಧರೆಯು ಸಂತ್ರಸ್ತರ ಬದುಕನ್ನು ಸಂಕಷ್ಟದ ಸ್ಥಿತಿಗೆ ದೂಡಿದೆ. ಕೃಷ್ಣೆಯ ಒಡಲು ತನ್ನ ಉಪನದಿಗಳೊಂದಿಗೆ ಉಕ್ಕಿ ಹರಿದಾಗ ಜನರ ಬಾಳು ಅಕ್ಷರಶಃ ನರಕವಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಎರಡು ಸಲ ಪ್ರವಾಹದ ಹೊಡೆತ. ಅದರ ತೀವ್ರತೆ ಹೆಚ್ಚು ತಟ್ಟಿರುವುದು ಮಧ್ಯಮ, ಕೆಳಮಧ್ಯಮ ಕೃಷಿಕರು, ರೈತ ಕೂಲಿಕಾರ್ಮಿಕರು ಮತ್ತು ಅಂಗಡಿ ಮುಂಗಟ್ಟುಗಳನ್ನು ಹೊಂದಿರುವವರಿಗೆ. ನೆರೆ ಬಂದಾಗ ಎದುರಾಗುವ ಸಮಸ್ಯೆ ಒಂದು ಬಗೆಯದಾದರೆ, ನೆರೆ ಇಳಿದಾಗಿನ ಸಂಕಷ್ಟಗಳು ಇನ್ನೂ ಭೀಕರ. ಅರೆಬಿದ್ದ, ಸಂಪೂರ್ಣ ಬಿದ್ದ ಮನೆಗಳು, ಕಾಳುಕಡ್ಡಿಯ ಕೊಳೆ, ಕೆಸರು, ಕೊಚ್ಚೆ ನೀರು ಮತ್ತು ಅದರ ದುರ್ಗಂಧವು ರೋಗರುಜಿನಗಳಿಗೆ ಆಹ್ವಾನ ಕೊಟ್ಟಂತೆ.

ಉತ್ತರ ಕರ್ನಾಟಕದಲ್ಲಿ ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಲಕ್ಷಲಕ್ಷ ಎಕರೆಯಲ್ಲಿನ ಬೆಳೆ ನಾಶವಾಗಿದೆ. ವಿಶೇಷವಾಗಿ ಆರ್ಥಿಕ ಬೆಳೆ ನಾಶವಾಗಿದೆ. ರೈತನ ತಟ್ಟೆಯೊಳಗಿನ ವರ್ಷದ ಅನ್ನವನ್ನೇ ಈ ಭೀಕರ ನೆರೆ ಕಿತ್ತುಕೊಂಡಿದೆ. ನಿರಾಶ್ರಿತರ ತಾಣದಲ್ಲಿ ಸಮಸ್ಯೆಗಳು ಬೆಳೆಯುತ್ತಾ ಸಾಗಿವೆ. ಕುಡಿಯುವ ನೀರು, ತಿನ್ನುವ ಅನ್ನಕ್ಕೆ ಕೊರತೆ. ರೋಗರುಜಿನಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಲಭ್ಯತೆ. ರಾಮದುರ್ಗ ತಾಲ್ಲೂಕಿನ ಸುರೇಬಾನದ ನಾಲ್ಕು ವರ್ಷದ ಮಗುವೊಂದು ಜ್ವರದಿಂದ ಬಳಲುತ್ತಿತ್ತು. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅಸುನೀಗಿತು.

ಪ್ರವಾಹ ಪೀಡಿತರ ಸಂಕಷ್ಟಕ್ಕೆ ಜಾತಿ– ಮತ, ಕೋಮು ಮತ್ತು ಉತ್ತರ– ದಕ್ಷಿಣವೆನ್ನದೇ ಎಲ್ಲವನ್ನೂ ಮೀರಿ ಮಾನವ ಕುಲವು ಒಂದೆಡೆ ಮಿಡಿದಿದೆ. ಮನುಷ್ಯ ಕಾಳಜಿ ಯಿಂದ ಪರಿಹಾರ ಹರಿದು ಬಂದಿದೆ. ನೌಕರ ವರ್ಗವು ಒಂದು ದಿನದ ಸಂಬಳವನ್ನು ನೀಡಿದೆ. ಸಂಘ ಸಂಸ್ಥೆಗಳು ಮುಂದೆ ಬಂದು ನೆರವಿನ ಹಸ್ತ ಚಾಚಿವೆ. ಮುಸ್ಲಿಂ ಸಮುದಾಯದವರು ಪಕ್ಕದ ಕೊಲ್ಹಾಪುರದಲ್ಲಿ ಮುಸ್ಲಿಂ ಬೋರ್ಡಿಂಗ್‌ನಲ್ಲಿ ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಿ ದರು. ಆಗ ಈದ್‌ ಹಬ್ಬವಿತ್ತು. ತಮ್ಮ ವೆಚ್ಚ ಕಡಿತಗೊಳಿಸಿ ಆ ಹಣವನ್ನು ಸಂತ್ರಸ್ತರಿಗೆ ನೀಡಿದರು. ಹಬ್ಬದೂಟವನ್ನು ಅವರ ಜತೆ ಮಾಡಿದರು. ಇದು ನಿಜದ ಭಾರತ.

ಆದರೆ, ಚುನಾವಣೆಯಲ್ಲಿ ಮತ ಗಳಿಕೆಗಾಗಿ ಹಣದ ಹೊಳೆ ಹರಿಸಿದವರು, ಹೆಂಡ, ಮನೆಬಳಕೆ ವಸ್ತುಗಳ ಆಮಿಷ ಒಡ್ಡಿದವರು ಒಬ್ಬರೂ ತಮ್ಮ ಜೇಬಿನಿಂದ ಬಿಡಿಕಾಸನ್ನೂ ನೀಡಿದ ನಿದರ್ಶನ ಇಲ್ಲ. ಸರ್ಕಾರದ ಭರವಸೆಗಳ ಮಧ್ಯೆಯೇ ನಿರಾಶ್ರಿತರು ಶೆಡ್‍ಗಳಲ್ಲಿ ಕಾಲ ನೂಕುತ್ತಿದ್ದಾರೆ. ಸಂತ್ರಸ್ತರ ನೋವನ್ನು ಹಂಚಿಕೊಳ್ಳಲು ಬಂದ ಹಿರಿಯ ಸಚಿವರೊಬ್ಬರು, ಗಾಯದ ಮೇಲೆ ಬರೆ ಎಳೆದಂತೆ ‘ಹತ್ತು ಸಾವಿರ ಕೊಟ್ಟದ್ದೇ ಜಾಸ್ತಿಯಾಯಿತು...’ ಅಂತ ಒರಟು ಮಾತನಾಡಿ ಹೋದರು. ಸಂತ್ರಸ್ತರ ಕಣ್ಣೀರು ಒರೆಸಲು ಬಂದವರು ಸಾಂತ್ವನ ನೀಡಬೇಕೇ ವಿನಾ ಬಿರುಮಾತು ಆಡುವುದಲ್ಲ. ಹೀಗೆ ಸಂವೇದನಾಶೀಲತೆಯನ್ನು ಕಳೆದುಕೊಂಡರೆ ಹೇಗೆ? ನಮ್ಮ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಬಾಗಿಲು ಬಡಿದು ಪರಿಹಾರ ದೊರಕಿಸಲು ಎಡತಾಕುತ್ತಿದ್ದಾರೆ. ಎರಡೂ ಕಡೆ ಒಂದೇ ಪಕ್ಷದ ಸರ್ಕಾರಗಳಿವೆ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷವನ್ನು ಬೆಂಬಲಿಸಿದವರು ಹಾಗೂ ವಿಧಾನಸಭೆಗೆ ಅದೇ ಪಕ್ಷದ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಆರಿಸಿ ಕಳಿಸಿದ ಪ್ರಜೆಗಳು ಸಹ ಇದೇ ಸಂತ್ರಸ್ತರೇ. ಆದರೆ ಅವರಿಗೆ ಈಗ ಪ್ರಭುವಿನ ಕರುಣೆಗಾಗಿ ಕಾಯುವ ಸ್ಥಿತಿ! 

ಇನ್ನೊಂದೆಡೆ, ಮಾನವೀಯ ಪ್ರಜ್ಞೆ ಸತ್ತು ಹೋಗಿದೆ. ನಿಸರ್ಗದ ಭಾರಿ ಹೊಡೆತದ ಮಧ್ಯೆಯೂ ಅವನು ಜಾಗೃತಗೊಂಡಿಲ್ಲ. ಮೇಘ ಮುನಿದು ಎಲ್ಲವನ್ನೂ ಉಡುಗಿಸಿಬಿಟ್ಟರೂ ನಮ್ಮೊಳಗಿನ ಜಾತಿ, ಮತಾಂಧತೆಯ ಅಹಂಕಾರ ತೊಲಗಿಲ್ಲ. ಸಂಸದರನ್ನೇ ಊರೊಳಗೆ ಬರಗೊಡದ ಮಾನಸಿಕತೆಯ ಇಂದಿನ ಸ್ಥಿತಿಯಲ್ಲಿ ಬೇರೇನು ನಿರೀಕ್ಷಿಸಬೇಕು? ಇಂಥ ಚಿಕ್ಕಪುಟ್ಟ ಪ್ರಸಂಗಗಳು ನಿರಾಶ್ರಿತರ ಶಿಬಿರಗಳಲ್ಲೂ ಕಂಡುಬಂದಿರುವುದು ವರದಿಯಾಗಿದೆ. ಇದು ದುರದೃಷ್ಟಕರ.

ಸರ್ಕಾರದ ವ್ಯವಸ್ಥೆಯು ನಿರಾಶ್ರಿತರಿಗೆ ವಸತಿ ಕಲ್ಪಿಸಿಕೊಟ್ಟಿದೆ. ನೆರೆಯಿಂದ ಮನೆಗಳು ಮುಳುಗತೊಡಗಿದಾಗ ನಿರಾಶ್ರಿತರಾಗಿ ಶಾಲೆಗಳಲ್ಲಿ ಉಳಿಯುವ ಪರಿಸ್ಥಿತಿ ಬಂತು. ಹಾಗೆ ನೆರೆಗೆ ತುತ್ತಾದವು ಹೆಚ್ಚಿನವು ದಲಿತ ಕೇರಿಗಳೇ. ದುರಂತವೆಂದರೆ, ದಲಿತರು ಇರುವ ಶೆಡ್‍ಗಳಿಗೆ ಮಡಿವಂತಿಕೆ ಮನಃಸ್ಥಿತಿಯ ಪ್ರಬಲ ಕೋಮಿನ ಸಂತ್ರಸ್ತರು ಬರಲು ನಿರಾಕರಿಸಿದ್ದು! ಅವರು ತಮ್ಮ ವ್ಯವಸ್ಥೆಯನ್ನು ಸ್ವಂತ ಶಕ್ತಿಯಿಂದ ಮಾಡಿಕೊಂಡರಂತೆ. ಅಂದರೆ, ಮೇಲುಕೀಳಿನ ಮನೋರೋಗವು ಇನ್ನೂ ಎಷ್ಟು ಆಳ ವಾಗಿ ಬೇರೂರಿದೆ ಎನ್ನಲು ಇದಕ್ಕಿಂತ ಕೀಳುಮಟ್ಟದ ಪುರಾವೆ ಬೇಕಿಲ್ಲ. ನೆರೆಗೆ ತುತ್ತಾಗಿ ಆಸ್ತಿ, ಮನೆಮಠ, ಆಪ್ತೇಷ್ಟರನ್ನು ಕಳೆದುಕೊಂಡು ದುಃಖಿತರಾದರೂ ಇವರ ಇಂಥ ನಿಲುವಿಗೆ ಏನನ್ನಬೇಕು?

ರೂಢಿಗತವಾದ ಗಂಜಿ ಕೇಂದ್ರದ ಹೆಸರನ್ನು ಕಾಳಜಿ ಕೇಂದ್ರವೆಂದು ಬದಲಿಸಲಾಯಿತು. ಒಳ್ಳೆಯದು. ಆದರೆ ಇಲ್ಲಿ ಆಹಾರ ಸೇವನೆಯಲ್ಲೂ ತರತಮಗಳು ಕಂಡು ಬರುತ್ತಿವೆ. ಇನ್ನೂ ಭೀಕರವೆಂದರೆ, ಮನೆ ಕಳೆದು
ಕೊಂಡವರಲ್ಲಿ ಬಡ ಕೃಷಿಕೂಲಿಗಳು, ಕಡಿಮೆ ಹೊಲಗದ್ದೆ ಹೊಂದಿದವರ ವಾಸ್ತವ್ಯದ ಸಮಸ್ಯೆ. ಮಕ್ಕಳಿಗೆ ಶಾಲೆಯ ಪಾಠ ತಪ್ಪುತ್ತಿದೆ. ಶೆಡ್ ಹಾಕಿದ್ದಲ್ಲಿ ವಿದ್ಯುತ್‌, ನೀರು, ಶೌಚಾಲಯದಂತಹ ಮೂಲ ಸೌಕರ್ಯಗಳ ಕೊರತೆ. ಸ್ವಾಭಾವಿಕವಾಗಿ ನದಿದಂಡೆಯ ಬೆಳೆಗಳಲ್ಲಿ ಕಬ್ಬು ಪ್ರಧಾನ. ಇದರೊಟ್ಟಿಗೆ ಉಳಿದ ಆರ್ಥಿಕ ಬೆಳೆಗಳ ನಾಶದ ಸರ್ವೆ ಆಗಬೇಕಾಗಿರುವುದು ಮುಖ್ಯ. ಕೇಂದ್ರದ ತಂಡಗಳು ಬಂದುಹೋಗಿವೆ. ತಕ್ಕ ಪರಿಹಾರಕ್ಕೆ ಕಾಯ್ದು ಕುಳಿತ ಸಂತ್ರಸ್ತರಿಗೆ ಪರಿಹಾರ ಸಿಗಬೇಕಿದೆ. ಆದರೆ ಎಂದು? ಇದುವರೆಗೆ ಹಾನಿಯ ನಿಖರ ಅಂದಾಜು ಸಿಕ್ಕಿಲ್ಲ. ಕಬ್ಬು, ಬಾಳೆ, ಹತ್ತಿ ಮುಂತಾದ ಆರ್ಥಿಕ ಬೆಳೆಗಳ ಅಂದಾಜು ಹಾನಿಯ ಲೆಕ್ಕವು ದೊರೆತಿಲ್ಲ.

ಇದರ ನಡುವೆ ಕೆಲ ಸ್ತುತ್ಯರ್ಹ ನೆರವುಗಳ ಕ್ರಮಗಳು. ಮನೆ ಕಳೆದುಕೊಂಡವನಿಗೆ ಬಾಡಿಗೆ ಹಣ ₹ 5 ಸಾವಿರ ನೀಡಲಾಗುತ್ತಿದೆ. ಮನೆ ದುರಸ್ತಿಗೆ ₹ 1 ಲಕ್ಷ ಹಾಗೂ ಮನೆ ಕಟ್ಟಿಸಿಕೊಳ್ಳಲು ₹ 5 ಲಕ್ಷ ಕೊಡಲಾಗುತ್ತಿದೆ. ಕೇವಲ ರೈತ ಮಾತ್ರ ನೆರೆಯ ಸಂಕಷ್ಟಕ್ಕೆ ಈಡಾಗಿದ್ದಾನೆ ಅಂತಲ್ಲ. ಒಂದು ಹಳ್ಳಿಯ ಬದುಕಿನ ಸಂಕೋಲೆಯೇ ಕಳಚಿದೆ. ಆಯಗಾರರ ವ್ಯವಸ್ಥೆಯ ಸಾಮಾಜಿಕ ನೆಲೆಯಲ್ಲಿ ಮಡಿವಾಳನ ಅಂಗಡಿಯ ಬಟ್ಟೆಗಳೆಲ್ಲ ಕೊಳಚೆಯಾಗಿ ನಾಶವಾಗಿವೆ. ಬಟ್ಟೆ ಅಂಗಡಿಯವನು, ಕಿರಾಣಿ ಅಂಗಡಿಯವನು, ಬಹೂಪಯೋಗಿ ವಸ್ತುಗಳ ಮಾರಾಟದ ಶಾಪಿಂಗ್ ಕೇಂದ್ರಗಳು, ನೇಕಾರ, ಕಂಬಾರ, ಕುಂಬಾರ- ಹೀಗೆ ಒಂದು ಗ್ರಾಮ ವ್ಯವಸ್ಥೆಯೇ ಕುಸಿದಿದೆ. ಇವೆಲ್ಲವನ್ನೂ ಪುನರ್‌ಸೃಷ್ಟಿಸುವ ಕಾರ್ಯವಾಗಬೇಕಾದ ತುರ್ತು ಇದೆ. ಅದು ಸಹ ವೈಜ್ಞಾನಿಕವಾಗಿ. ಹಾಗಾದರೆ ನೆರವು ಎಷ್ಟು? ಹೇಗೆ? ಅದರ ಸ್ವರೂಪ ಎಂಥದ್ದು? ಪ್ರಶ್ನೆಗಳು ಹುಟ್ಟಿ
ಕೊಳ್ಳುತ್ತವೆ.

ಐದು ಎಕರೆ ಕಬ್ಬು ನಾಶವಾದ ಚಿಕ್ಕ ರೈತ ‘ನನ್ನ ಬಾಳು ಹೆಂಗಪ್ಪಾ?’ ಅಂತ ಎದೆಗುಂದಿ ರಕ್ತದೊತ್ತಡ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ. ಪ್ರವಾಹದ ಹೊಡೆತದ ಹಾನಿಯ ಆಘಾತ ತಾಳಲಾಗದೆ ರಾಮದುರ್ಗ ಕಡೆಯ ಒಬ್ಬ ನೇಕಾರ ಆತ್ಮಹತ್ಯೆಗೆ ಶರಣಾದ. ಇವು ಕೆಲವು ಉದಾಹರಣೆಗಳಷ್ಟೆ. ಮನೆ ಕಳೆದುಕೊಂಡ, ಜಮೀನಿಲ್ಲದ ರೈತ ಕೂಲಿಕಾರ್ಮಿಕರ ಬವಣೆ ಭಿನ್ನ. ಅವರ ಕೈಗೆ ಕೆಲಸವಿಲ್ಲ. ಇನ್ನೂ ಜಮೀನಿಗೆ ಹದವಿಲ್ಲ. ಪರಿಹಾರ ಒಂದು ಪೈಸೆಯೂ ದೊರೆತಿಲ್ಲ. ಹೀಗಿದ್ದಾಗ ಸಂತ್ರಸ್ತರ ಭವಿಷ್ಯ ಮತ್ತು
ಬದುಕು ಹೇಗೆ? ಭವಿಷ್ಯದಲ್ಲಿ ಭೀಕರ ನೆರೆಯನ್ನು ಸಮರ್ಥವಾಗಿ ಎದುರಿಸಲು ಶಾಶ್ವತ
ಪರಿಹಾರೋಪಾಯಗಳು ಏನು? ಇಂತಹ ಪ್ರಶ್ನೆಗಳಿಗೆಲ್ಲ
ಉತ್ತರ ಕಂಡುಕೊಳ್ಳುವುದು ವರ್ತಮಾನದ ತುರ್ತು.

ಲೇಖಕ: ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ಪ್ರತಿಕ್ರಿಯಿಸಿ (+)