‘ಪ್ರೀತಿಗಿಂತ ಭವಿಷ್ಯ ಮುಖ್ಯವಲ್ಲವೇ?’

7

‘ಪ್ರೀತಿಗಿಂತ ಭವಿಷ್ಯ ಮುಖ್ಯವಲ್ಲವೇ?’

Published:
Updated:
Deccan Herald

ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳೇ ನನ್ನ ಭವಿಷ್ಯ ಎಂದುಕೊಂಡು ಬದುಕುತ್ತಿದ್ದೇನೆ. ಪ್ರೇಮಲೋಕದಲ್ಲಿ ತೇಲುತ್ತಾ ಭವಿಷ್ಯದ ದಾರಿಯನ್ನು ಮರೆಯುತ್ತಿದ್ದೇನೆ. ಆದರೆ ಈಗ ನನಗೆ ನನ್ನ ಭವಿಷ್ಯದ ಚಿಂತೆ ಕಾಡುತ್ತಿದೆ. ನನ್ನನ್ನೇ ನಂಬಿಕೊಂಡ ಮನೆಯವರಿಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆ ಆವರಿಸುತ್ತಿದೆ. ನಾನು ನನ್ನ ಗುರಿಯನ್ನು ತಲುಪುವವರೆಗೂ ಅವಳನ್ನು ಮರೆಯಬೇಕು ಎಂದುಕೊಂಡಿದ್ದೇನೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.
– ಯೋಗೇಶ್, ವಿಜಯಪುರ

ನೀವು ಪ್ರೀತಿಸುತ್ತಿರುವ ಹುಡುಗಿಗೆ ನಿಮ್ಮ ಪ್ರೀತಿಯ ಬಗ್ಗೆ ತಿಳಿದಿದೆಯೆ? ಅವರೂ ನಿಮ್ಮನ್ನು ಪ್ರೀತಿಸುತ್ತಿದ್ದಾರಾ? ಇವನ್ನು ಇಲ್ಲಿ ತಿಳಿಸಿಲ್ಲ. ಅದೇನೇ ಇರಲಿ, ಈಗ ನಿಮ್ಮ ಮುಂದೆ ಕೆಲವು ಗುರಿಗಳಿವೆ. ಮೊದಲು ಅದರತ್ತ ಗಮನ ಹರಿಸಿ. ಓದಿನ ಮೇಲೆ ಗಮನ ಹರಿಸಲು ಪ್ರಯತ್ನಿಸಿ ಮತ್ತು ಗುರಿಯ ಮೇಲೆ ಲಕ್ಷ್ಯವಿರಲಿ. ನೀವು ಪ್ರೀತಿಸುತ್ತಿರುವ ಹುಡುಗಿಯ ನೆನಪು ನಿಮ್ಮ ಓದಿಗೆ ಅಡ್ಡಿ ಮಾಡಬಾರದು. ಅದರ ಬದಲು ಅವರ ನೆನಪನ್ನೇ ಸ್ಫೂರ್ತಿಯಾಗಿ ತೆಗೆದುಕೊಳ್ಳಿ. ನೀವು ಗುರಿಯನ್ನು ಮುಟ್ಟಿದ ಮೇಲೆ ನಿಮ್ಮ ಹುಡುಗಿ ನಿಮ್ಮನ್ನು ಪ್ರೀತಿಸುತ್ತಿದ್ದರೆ ಅಥವಾ ನಿಮ್ಮ ಜೀವನಸಂಗಾತಿಯಾಗಲು ಬಯಸಿದರೆ ಮಾತ್ರ ಅವರ ಬಳಿಗೆ ಮರಳುತ್ತೇನೆ ಎಂದುಕೊಂಡು ನಿಮಗೆ ನೀವೇ ಚಾಲೆಂಜ್ ಹಾಕಿಕೊಳ್ಳಿ. ನಿಮ್ಮಿಂದ ಮಾತ್ರ ನಿಮ್ಮ ಮನಸ್ಸನ್ನು ಸುಂದರವಾಗಿಸಿಕೊಳ್ಳಲು ಸಾಧ್ಯ ಮತ್ತು ಓದಿನ ಮೇಲೆ ಗಮನ ಹರಿಸಲು ಸಾಧ್ಯ. ನಿಮ್ಮ ದಿನಚರಿಯಲ್ಲಿ ವ್ಯಾಯಾಮ ಹಾಗೂ ಧ್ಯಾನಕ್ಕೂ ಕೆಲವು ಸಮಯ ಮೀಸಲಿಡಿ. ಇದರಿಂದ ನಿಮ್ಮ ಆರೋಗ್ಯ ಹಾಗೂ ಗಮನ ಹೆಚ್ಚಲು ಸಹಕಾರಿಯಾಗುತ್ತದೆ. 

ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದೇನೆ. ನನಗೆ ಕಲವೊಂದು ದಿನಗಳಿಂದ ಸಣ್ಣ ಸಣ್ಣ ವಿಷಯಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತಲೆನೋವು ಕೂಡ ಶುರುವಾಗಿದೆ. ಈ ಸಮಸ್ಯೆಯಿಂದ ಹೊರ ಬರಲು ಏನು ಮಾಡಬೇಕು?

– ನವೀನ್ ಕುಮಾರ್, ಕಾಮಾಕ್ಷಿಪಾಳ್ಯ

ನೀವು ಎಲ್ಲಾ ಸಣ್ಣ ಪುಟ್ಟ ವಿಷಯಕ್ಕೂ ಅತಿಯಾಗಿ ಚಿಂತಿಸುವುದೇ ನಿಮ್ಮ ಸಮಸ್ಯೆಯ ಮೂಲವಾಗಿದೆ. ಒಮ್ಮೆ ನೀವು ಸಣ್ಣ ವಿಷಯದ ಬಗ್ಗೆ ಅತಿಯಾಗಿ ಯೋಚಿಸಿದರೆ, ಅದು ನಿಮಗೇ ತಿಳಿಯದಂತೆ ಅದೇ ವಿಷಯದ ಮೇಲೆ ಇನ್ನೂ ಅತಿಯಾಗಿ ಆಲೋಚಿಸುವಂತೆ ಮಾಡುತ್ತದೆ. ಆ ಕಾರಣದಿಂದಲೇ ನಿಮ್ಮ ಮನಸ್ಸಿನಲ್ಲಿ ಅನೇಕ ಯೋಚನೆಗಳು ಮುತ್ತಿಕೊಂಡು ತಲೆನೋವಿಗೆ ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡುವ ಮೊದಲು ನಿಮ್ಮ ಫಿಟ್‌ನೆಸ್‌ನ ಮೇಲೆ ಗಮನ ಹರಿಸಿ. ಅದಕ್ಕಾಗಿ ನೀವು ಕೆಲವು ಕಠಿಣ ವ್ಯಾಯಾಮ ಹಾಗೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಇದರಿಂದ ನೀವು ಆರೋಗ್ಯವಾಗಿಯೂ, ಇಡೀ ದಿನ ಉಲ್ಲಸಿತರಾಗಿಯೂ ಇರಬಹುದು. ಒಂದು ಕ್ಷಣಕ್ಕೆ ಒಂದೇ ವಿಷಯವನ್ನು ಆರಿಸಿಕೊಳ್ಳಿ. ಅದನ್ನು ಗುರುತಿಸಿ ಮತ್ತು ಇನ್ನೊಂದು ಯೋಚನೆ ನಿಮ್ಮ ತಲೆಯಲ್ಲಿ ಸುಳಿಯುವ ಮೊದಲು ಹಳೆಯದನ್ನು ಪರಿಹರಿಸಿಕೊಳ್ಳಿ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ಹಾಗಾಗಿ ಯಾವುದನ್ನು ದೊಡ್ಡದು ಮಾಡಬೇಡಿ. ಈಗಿನಿಂದ ನಿಮ್ಮ ಪ್ರಾಶಸ್ತ್ಯ ಏನಿದ್ದರೂ ಓದುವುದು ಮತ್ತು ಒಳ್ಳೆಯ ಕೆಲಸ ಪಡೆದುಕೊಳ್ಳುವುದು ಆಗಿರಲಿ. ಹಾಗಾಗಿ ಅದರ ಮೇಲೆ ಗಮನ ಹರಿಸಿ. ಅತಿಯಾದ ಯೋಚನೆ ಒತ್ತಡಕ್ಕೆ ಕಾರಣವಾಗುತ್ತದೆ. ಯಾವಾಗ ನಿಮ್ಮ ಮನಸ್ಸಿಗೆ ಕಿರಿಕಿರಿ ಎನ್ನಿಸುವುದೋ ಆಗ ನಿಮ್ಮ ಗಮನವನ್ನು ಬೇರೆಡೆಗೆ ಹರಿಸಿ. ಹೊರಗಡೆ ತಿರುಗಾಡಲು ಹೋಗಿ ಅಥವಾ ಕೆಲ ಹೊತ್ತು ಆಟವಾಡಿ, ನಿಮಗೆ ಆತ್ಮೀಯರು ಎನ್ನಿಸಿದವರ ಜೊತೆ ಮಾತನಾಡಿ. ಅದರಿಂದ ನಿಮಗೆ ಸಹಾಯವಾಗುತ್ತದೆ.

ನನಗೆ ಮೊದಲು ನೆನಪಿನ ಶಕ್ತಿ ಚೆನ್ನಾಗಿತ್ತು. ಹಳೆಯದೆಲ್ಲ ಈಗಲೂ ಚೆನ್ನಾಗಿ ನೆನಪಿದೆ. ಆದರೆ ಈಗಿನದೆಲ್ಲ ಮರೆತು ಹೋಗುತ್ತಿದೆ. ಅಲ್ಲಿ ಕೇಳಿದ್ದು ಅಲ್ಲೇ ಮರೆತು ಹೋಗುತ್ತದೆ. ಈ ನಡುವೆ ತಲೆನೋವು ಬರುತ್ತಿದೆ. ಸರಿಯಾಗಿ ನಿದ್ದೆ ಬರುತ್ತಿಲ್ಲ. ನಾನು ಮೊದಲು ತುಂಬ ಚುರುಕಾಗಿದ್ದೆ. ತುಂಬ ಮಾತನಾಡುತ್ತಿದ್ದೆ. ನಾನು ಮೊದಲಿನಂತಾಗಲೂ ಏನು ಮಾಡಬೇಕು. ದಯವಿಟ್ಟು ತಿಳಿಸಿ.

– ಹೆಸರು, ಊರು ಬೇಡ

ನೀವು ಇಲ್ಲಿ ನಿಮ್ಮ ವಯಸ್ಸು ಹಾಗೂ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ತಿಳಿಸಿಲ್ಲ. ಆದರೂ ನೆನಪಿನ ಶಕ್ತಿ ಎನ್ನುವುದು ನಮ್ಮ ಆಸಕ್ತಿಯ ವಿಷಯದ ಮೇಲೂ ಅವಲಂಬಿಸಿದೆ. ನೀವು ಓದುತ್ತಿರುವ ಅಥವಾ ಕೇಳುತ್ತಿರುವ ವಿಷಯದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದಾದರೆ ಅದು ನಿಮ್ಮ ಮನಸ್ಸಿನಲ್ಲಿ ದಾಖಲುಗೊಳ್ಳುವುದಿಲ್ಲ. ಆ ವಿಷಯವನ್ನು ನೀವು ಕೇಳುತ್ತೀರಿ, ಪ್ರತಿಕ್ರಿಯಿಸುತ್ತೀರಿ ಮತ್ತು ಹಾಗೇ ಮರೆತುಬಿಡುತ್ತೀರಿ. ಆದರೆ ನಿಮಗೆ ಆಸಕ್ತಿ ಇರುವ ವಿಷಯದಲ್ಲೂ ಈ ರೀತಿ ಆಗುತ್ತಿದ್ದರೆ ನಿಮ್ಮ ದಿನಚರಿಯಲ್ಲಿ ಯೋಗ, ವ್ಯಾಯಾಮ ಹಾಗೂ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಮಾತ್ರ ನಿಮ್ಮ ಗಮನಶಕ್ತಿ ಹೆಚ್ಚಿ, ನೆನಪಿನ ಸಾಮರ್ಥ್ಯ ಹೆಚ್ಚಲು ಸಾಧ್ಯವಾಗುತ್ತದೆ. ಅದೆಲ್ಲವನ್ನು ಮಾಡಿದ ಮೇಲೂ ನಿಮ್ಮಲ್ಲಿ ಅನೇಕ ಗೊಂದಲಗಳು ಇದ್ದರೆ ಉತ್ತಮ ವೈದ್ಯರನ್ನು ಕಂಡು ನಿಮ್ಮ ತೊಂದರೆಗಳನ್ನು ಅವರ ಬಳಿ ಹಂಚಿಕೊಳ್ಳುವುದು ಉತ್ತಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !