ಮಂಡ್ಯದಿಂದ ಮೊಮ್ಮಕ್ಕಳನ್ನು ಕಣಕ್ಕಿಳಿಸಲ್ಲ: ಎಚ್‌.ಡಿ.ದೇವೇಗೌಡ

7
ಮಂಡ್ಯ ಉಪ ಚುನಾವಣೆ; ಜೆಡಿಎಸ್‌ ವರಿಷ್ಠ ಹೇಳಿಕೆ

ಮಂಡ್ಯದಿಂದ ಮೊಮ್ಮಕ್ಕಳನ್ನು ಕಣಕ್ಕಿಳಿಸಲ್ಲ: ಎಚ್‌.ಡಿ.ದೇವೇಗೌಡ

Published:
Updated:

ತಾಂಬಾ (ವಿಜಯಪುರ): ‘ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೊಮ್ಮಕ್ಕಳನ್ನು ಕಣಕ್ಕಿಳಿಸುವುದಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬುಧವಾರ ಇಲ್ಲಿ ಹೇಳಿದರು.

‘ಮಂಡ್ಯದವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದೇವೆ. ಈ ಬಗ್ಗೆ ಕಾಂಗ್ರೆಸ್‌ ಮುಖಂಡರ ಜತೆಗೂ ಚರ್ಚೆ ನಡೆಸಲಾಗಿದೆ’ ಎಂದು ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

‘ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನವರು ಅಭ್ಯರ್ಥಿ ಅಂತಿಮಗೊಳಿಸಲಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸುವ ಆಲೋಚನೆಯಿದೆ.

ಆದರೆ ಮಧು ಡೆನ್ಮಾರ್ಕ್‌ ಪ್ರವಾಸದಲ್ಲಿದ್ದಾರೆ. ವಿದೇಶದಿಂದ ವಾಪಸ್ಸಾದ ಬಳಿಕ ಅವರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮಗೊಳಿಸಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮುಖಂಡರ ಜತೆಗೂ ಚರ್ಚಿಸಿದ್ದು, ಅಭ್ಯರ್ಥಿಯನ್ನು ಹುಡುಕಿಕೊಳ್ಳಿ ಎಂದು ಹೇಳಿದ್ದೇವೆ’ ಎಂದು ದೇವೇಗೌಡ ತಿಳಿಸಿದರು.

‘ಐದು ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ನಾನೂ, ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಪರಮೇಶ್ವರ, ಸಚಿವ ಡಿ.ಕೆ.ಶಿವಕುಮಾರ, ದಿನೇಶ್‌ ಗುಂಡೂರಾವ್‌ ಗೆಲುವಿನ ಕಾರ್ಯತಂತ್ರ ರೂಪಿಸಿದ್ದೇವೆ.

ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಸರ್ಕಾರದ ಸಾಧನೆ, ಈಗಿನ ಮೈತ್ರಿ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಉಪ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು.

ಸರ್ಕಾರ ಬೀಳಲ್ಲ: ‘ನಿತ್ಯವೂ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತೆ ಎಂದು ಹೇಳಿಕೆ ನೀಡುವವರಿಗೆ, ನ 6ರಂದು ಜನರು ತೀರ್ಪು ನೀಡಲಿದ್ದಾರೆ. ಸರ್ಕಾರ ಸುಭದ್ರವಾಗಿದೆ. ಐದು ಉಪ ಚುನಾವಣೆ ಗೆಲ್ಲುತ್ತೇವೆ. ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಹತ್ತಿಕ್ಕಲು, ದುಷ್ಟಶಕ್ತಿ ತೊಲಗಿಸಲು, ಹಳೆಯದನ್ನು ಮರೆತು ನಾವು ಒಟ್ಟಾಗಿದ್ದೇವೆ’ ಎಂದು ದೇವೇಗೌಡ ನಾಡದೇವಿ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದರು.

‘ರೈತರ ಬ್ಯಾಂಕ್‌ ಸಾಲ ಮನ್ನಾ ಮಾಡಿದ್ರೂ; ಆತ್ಮಹತ್ಯೆ ನಿಂತಿಲ್ಲ. ಹಿಂದೂಸ್ತಾನದ ಯಾವ ರಾಜ್ಯವೂ ಕೈಗೊಳ್ಳದ ಪರಿಣಾಮಕಾರಿ ನಿರ್ಧಾರವನ್ನು ಈಗಿನ ರಾಜ್ಯ ಸರ್ಕಾರ ಕೈಗೊಂಡಿದೆ. ಆದರೂ ಆತ್ಮಹತ್ಯೆ ಮುಂದುವರೆದಿವೆ.

ಇದಕ್ಕೆ ಸಂಪೂರ್ಣ ಇತಿಶ್ರೀ ಹಾಕಲಿಕ್ಕಾಗಿ ‘ಋಣ ಮುಕ್ತ ಕಾಯ್ದೆ’ ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭೇಟಿಯಾಗಿ ನಾನೇ ಚರ್ಚಿಸಿರುವೆ. ರಾಷ್ಟ್ರಪತಿ ಈ ಮಸೂದೆಗೆ ಅಂಕಿತ ಹಾಕಿದರೆ, ಖಾಸಗಿ ಸಾಲಗಾರರ ಕಿರುಕುಳ ತಪ್ಪಲಿದೆ. ರೈತರ ಆತ್ಮಹತ್ಯೆಯೂ ನಿಲ್ಲಲಿದೆ’ ಎಂದು ದೇವೇಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !