ಶುಕ್ರವಾರ, ಫೆಬ್ರವರಿ 26, 2021
28 °C

ಉದ್ಘಾಟನೆಗೂ ಮುನ್ನ ಕಳೆಗಟ್ಟಿದ ಕಡಲೆಕಾಯಿ ಪರಿಷೆ

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

Deccan Herald

ನಗರದ ಬಹುಮುಖ್ಯ ಆಕರ್ಷಣೆಗಳಲ್ಲಿ ಬಸವನಗುಡಿಯ ಕಡಲೆಕಾಯಿ ಪರಿಷೆಯೂ ಒಂದು. ಕಳೆದ ವರ್ಷ ಅದ್ಧೂರಿಯಾಗಿ ನಡೆದಿದ್ದ ಈ ಪರಿಷೆ ಈಗ ಮತ್ತೆ ಬಂದಿದ್ದು, ಕಡಲೆಕಾಯಿ ಪ್ರಿಯರಿಗೆ ಸಂತಸವನ್ನೂ ಹೊತ್ತು ತಂದಿದೆ. ಸೋಮವಾರದಿಂದ ಮೂರು ದಿನಗಳವರೆಗೆ ಈ ಪರಿಷೆ ನಡೆಯಲಿದೆ.

ಬೆಳಿಗ್ಗೆ 10ಕ್ಕೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಿದ ಬಳಿಕ ಗಣಪತಿ ಮೂರ್ತಿಗೂ ಅದೇ ರೀತಿ ಅಭಿಷೇಕ ಮಾಡಲಾಗುತ್ತದೆ. ಗಣಪನ ಪೂರ್ತಿಯನ್ನು ಬೆಣ್ಣೆ ಹಾಗೂ ಕಡಲೆಕಾಯಿಯಿಂದ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆ ಸಮಯದಲ್ಲಿ ದೇಗುಲದಲ್ಲಿರುವ ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಪರಿಷೆ ನಡೆಯುವ ದಿನಾಂಕ ನಿಗದಿಯಾದ ಕೂಡಲೇ ಕಡಲೆಕಾಯಿ ವ್ಯಾಪಾರಿಗಳು ಬಸವನಗುಡಿ ದೊಡ್ಡಗಣಪತಿ ದೇವಾಲಯದತ್ತ ಮುಖ ಮಾಡಿದ್ದು, ಮಾರಾಟಕ್ಕೆ ಸ್ಥಳಗಳನ್ನು ಗುರುತಿಸಿಕೊಂಡು ಅಲ್ಲೇ ಹಲವು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಇನ್ನು ಪರಿಷೆಯ ಸುದ್ದಿ ತಿಳಿದ ಬಳಿಕ ಕಡಲೆಕಾಯಿ ಪ್ರಿಯರು ವಾರದಿಂದ ಇತ್ತ ಕಾಲಿಟ್ಟು ಬಡವರ ಬಾದಾಮಿಯ ರುಚಿಯನ್ನು ಸವಿಯುತ್ತಿದ್ದಾರೆ.

ಭಾನುವಾರ ರಜೆ ದಿನವಾದ್ದರಿಂದ ಬೆಳಿಗ್ಗೆಯಿಂದಲೇ ಪರಿಷೆಯಲ್ಲಿ ಸಾಕಷ್ಟು ಜನ ಸೇರಿದ್ದರು. ವಾಯು ವಿಹಾರಕ್ಕೆಂದು ಬೆಳಿಗ್ಗೆ ಹೊರಗೆ ಬಂದಿದ್ದ ಕೆಲವರು ಪರಿಷೆಯಲ್ಲಿ ಒಂದು ಸುತ್ತು ಹಾಕಿ, ದೂರದಿಂದಲೇ ದೇವರಿಗೆ ಕೈಮುಗಿದು ಕಡಲೆಕಾಯಿ ತಿಂದು, ಕೈಯಲ್ಲಿ ಅವುಗಳನ್ನು ಹಿಡಿದು ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದಶ್ಯಗಳು ಕಂಡುಬಂದವು.

ಬೆಳಿಗ್ಗೆ 10.30ರ ಸುಮಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡಗಣಪತಿ ದೇವಸ್ಥಾನಕ್ಕೆ ಭಕ್ತರು ಬರತೊಡಗಿದರು. ಗಣಪನ ದರುಶನ ಮಾಡಿ, ಕಳೆಗಟ್ಟಿದ ಪರಿಷೆಯಲ್ಲೆಲ್ಲ ಒಂದು ಸುತ್ತು ಹಾಕಿ ಕೊನೆಯಲ್ಲಿ ಕೈಯಲ್ಲಿ ಕಡಲೆಕಾಯಿ ತುಂಬಿದ ಪೇಪರ್‌ ಕವರ್‌ಗಳನ್ನು ಹಿಡಿದು ಸಾಗುತ್ತಿದ್ದರು.

ದೇಗುಲ ಸುತ್ತಮುತ್ತಲಿನ ರಸ್ತೆಗಳನ್ನು ಆವರಿಸಿರುವ ಕಡಲೆಕಾಯಿಗಳು, ಇಲ್ಲಿನ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಆವರಿಸಿವೆ. ಪಾದಚಾರಿ ಮಾರ್ಗಗಳಲ್ಲಿ ಕಡಲೆಕಾಯಿ ಜೊತೆ ಕಡಲೆಪುರಿ, ಮಕ್ಕಳ ಆಟಿಕೆ ಸಾಮಗ್ರಿಗಳೂ ಸೇರಿದಂತೆ ಹಲವಾರು ರೀತಿಯ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿತ್ತು.

‘ಪರಿಷೆಗೆ ಬಂದವರು ಕಡಲೆಕಾಯಿ ಕೊಳ್ಳಲೇಬೇಕು. ಅದು ಸಂಪ್ರದಾಯ’ ಎಂಬ ಮಾತು ಇಲ್ಲಿ ಜನಜನಿತ. ಹೀಗಾಗಿಯೇ, ಇಲ್ಲಿಗೆ ಬಂದವರು ಕನಿಷ್ಠ ಒಂದು ಸೇರಿನಷ್ಟಾದರೂ ಕಾಯಿಯನ್ನು ಕೊಂಡು ಹೋಗುತ್ತಾರೆ.

‌ವ್ಯಾಪಾರದ ಭರಾಟೆಯೂ ಜೋರು

ಈ ಪರಿಷೆಯ ಪ್ರಮುಖ ಆಕರ್ಷಣೆ ಕಡೆಲೆಕಾಯಿ. ಪರಿಷೆಗೆ ಕಾಲಿಟ್ಟೊಡನೆ ಕಡಲೆಕಾಯ್ ಕಾಡಲೆಕಾಯ್ ಅನ್ನೋ ಸದ್ದು ಕಿವಿಗೆ ಅಪ್ಪಳಿಸುತ್ತಿರುತ್ತದೆ. ಎಲ್ಲೆಂದರಲ್ಲಿ ಕಣ್ಣಿಗೆ ಕಾಣುವುದೂ ಸಹ ಅದೇ.

ಪರಿಷೆಯಲ್ಲಿ ತರಹೇವಾರಿ ಕಡಲೆಕಾಯಿ ಕಾಣುತ್ತವೆ. ಬಣ್ಣ ಹಾಗೂ ಗಾತ್ರ ಆಧರಿಸಿ ಹಸಿ ಕಾಯಿ ಹಾಗೂ ಹುರಿದ ಕಾಯಿಗೆ ಪ್ರತ್ಯೇಕವಾದ ಬೆಲೆಯನ್ನು ವ್ಯಾಪಾರಿಗಳು ನಿಗದಿ ಪಡಿಸುತ್ತಾರೆ. ಗಿಡ್ಡ, ಮಧ್ಯಮ ಹಾಗೂ ದೊಡ್ಡ ಗಾತ್ರದ ಕಡಲೆಕಾಯಿಗಳು ಗ್ರಾಹಕರ ಕಣ್ಣುಗಳನ್ನು ಕುಕ್ಕುತ್ತಿದ್ದವು.

ಗ್ರಾಹಕರು ಕಡಲೆಕಾಯಿ ಅಂಗಡಿಗಳಿಗೆ ಹೋಗಿ ‘ಎಷ್ಟಪ್ಪಾ ಕಡಲೆಕಾಯಿ’ ಎನ್ನುವುದು, ಅದಕ್ಕೆ ಪ್ರತಿಯಾಗಿ ‘ಎಷ್ಟು ಬೇಕಮ್ಮ ನಿಮಗೆ, ತಗೊಳ್ಳಿ ಕಡಿಮೆ ಬೆಲೆಗೆ ಹಾಕ್ಕೊಡ್ತೀನಿ’ ಅನ್ನೋ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿದ್ದವು. ಹಸಿ ಕಡಲೆಕಾಯಿಯ ಬೆಲೆ ಸೇರಿಗೆ ₹ 25ಕ್ಕೆ ಮಾರಾಟವಾಗುತ್ತಿದ್ದರೆ, ಹುರಿದ ಹಸಿ ಕಡಲೆಕಾಯಿ ₹ 30 ಹಾಗೂ ಹುರಿದ ಒಣಗಿದ (ಗಡಮ್) ಕಡಲೆಕಾಯಿ ₹ 25 ಇದೆ.

ಕೋಲಾರ, ಮಾಲೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳು ಪರಿಷೆಯಲ್ಲಿ ಡೇರೆ ಹಾಕಿದ್ದಾರೆ. ಕೆಲವು ವ್ಯಾಪಾರಿಗಳು ನಡುರಸ್ತೆಯಲ್ಲಿ ಟಾರ್ಪಲ್‌ಗಳನ್ನು ಹಾಕಿಕೊಂಡಿದ್ದರು. ಇದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಹಾಗಾಗಿ, ಸ್ಥಳದಲ್ಲಿದ್ದ ಪೊಲೀಸರು ಅವುಗಳನ್ನು ತೆರವುಗೊಳಿಸಿದರು. ಸುಮಾರು 5ರಿಂದ 6 ಲಕ್ಷಕ್ಕೂ ಅಧಿಕ ಮಂದಿ ಸೇರುವ ಈ ಪರಿಷೆಗೆ ಪೊಲೀಸರು ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದಾರೆ.

‘1976ರಿಂದ ತಪ್ಪದೆ ಈ ಪರಿಷೆಗೆ ಬಂದು ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಇಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಿಂದೆ ಕಡಲೆಕಾಯಿ ಬೆಲೆಯೂ ಕಡಿಮೆ ಇತ್ತು, ಬರುತ್ತಿದ್ದ ಜನರೂ ಅಷ್ಟಕ್ಕಷ್ಟೇ. ಆದರೆ, ನಾನು ಗಮನಿಸಿದಂತೆ 10 ವರ್ಷಗಳಿಂದ ಈ ಪರಿಷೆಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ. ಇಲ್ಲಿದ್ದಷ್ಟು ದಿನವೂ ಭರ್ಜರಿ ವ್ಯಾಪಾರವಾಗುತ್ತದೆ’ ಎನ್ನುತ್ತಾರೆ ಮಾಲೂರಿನ ವ್ಯಾಪಾರಿ ನಾಗರಾಜು.

‘ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೂ ಕಡಲೆಕಾಯಿ ಬೆಲೆ ದುಬಾರಿಯಾಗಿದೆ. ಮೂಟೆ ಕಾಯಿಗೆ ಕಳೆದ ವರ್ಷ ₹ 2,500 ಆಸುಪಾಸಿನಲ್ಲಿತ್ತು. ಈ ಬಾರಿ ಮೂಟೆ ಕಡಲೆಕಾಯಿಗೆ ಬೆಲೆ ₹ 3,000 ದಾಟಿದೆ’ ಎನ್ನುತ್ತಾರೆ ಅವರು.

‘ನನಗೆ ಬುದ್ಧಿಬಂದಾಗಿನಿಂದಲೂ ಇಲ್ಲಿ ವ್ಯಾಪಾರಕ್ಕೆಂದು ಅಪ್ಪನೊಂದಿಗೆ ಬರುತ್ತೇನೆ. ಪರಿಷೆಯಿದ್ದಷ್ಟು ದಿನ ಇಲ್ಲೇ ಇದ್ದು, ವ್ಯಾಪಾರ ಮಾಡುತ್ತೇನೆ. ಬಿಡುವಾದಗಲೆಲ್ಲ ಇಡೀ ಪರಿಷೆಯನ್ನು ಒಂದು ಸುತ್ತು ಹಾಕಿಕೊಂಡು ಬರುತ್ತೇನೆ. ನೋಡಿದ ಬಹುತೇಕ ಪರಿಷೆ ಅಥವಾ ಜಾತ್ರೆಗಳಲ್ಲಿ ಈ ಪರಿಷೆ ವಿಶೇಷವಾದದ್ದು. ಪರಿಷೆಗೆ ಬರುವ ಬಹುತೇಕರು ಕಡಲೆಕಾಯಿ ರುಚಿ ನೋಡದೇ ಹೋಗುವುದಿಲ್ಲ’ ಎನ್ನುತ್ತಾರೆ ವ್ಯಾಪಾರಿ ಪುಷ್ಪಾ. 

ಬಹುತೇಕ ಮರೆಯಾದ ಪ್ಲಾಸ್ಟಿಕ್

ಪ್ರತಿವರ್ಷ ಈ ಪರಿಷೆಯಲ್ಲಿ ಪ್ಲಾಸ್ಟಿಕ್‌ ಕವರ್‌ಗಳು ರಾಜಾಜಿಸುತ್ತಿದ್ದವು. ಪರಿಷೆ ಸೇರುತ್ತಿದ್ದಂತೆ ಈ ಬಾರಿಯೂ ವ್ಯಾಪಾರಿಗಳು ಪ್ಲಾಸ್ಟಿಕ್‌ ಕವರ್‌ಗಳನ್ನು ಬಳಸುತ್ತಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡು ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಜಾಥಾ ನಡೆಸಿದ್ದರು. ಅಷ್ಟಾದರೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದ್ದರಿಂದ ಬಿಬಿಎಂಪಿ ಸಿಬ್ಬಂದಿಯ ಜೊತೆಗೂಡಿ ಕಾಲೇಜಿನ ವಿದ್ಯಾರ್ಥಿಗಳು ಅಂಗಡಿಗಳಿಂದ ಪ್ಲಾಸ್ಟಿಕ್ ಕವರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಹೀಗಾಗಿ, ಬಹುತೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳು ಭಾನುವಾರ ಬೆಳಿಗ್ಗೆಯಿಂದಲೇ ಮಾಯವಾಗಿದ್ದವು.

ಬೆಳಿಗ್ಗೆ 10ಕ್ಕೆ ಉದ್ಘಾಟನೆ

ಈ ಪರಿಷೆಯನ್ನು ಸೋಮವಾರ ಬೆಳಿಗ್ಗೆ 10ಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದು, ಮುಜರಾಯಿ ಇಲಾಖೆ ಸಚಿವ ರಾಜಶೇಖರ್ ಬಸವರಾಜ್ ಪಾಟೀಲ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಶಾಸಕ ಉದಯ್ ಬಿ. ಗರುಡಾಚಾರ್, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಪುಟ್ಟಣ್ಣ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.