ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವಳೇ ಕೊಲ್ಲುವುದೇಕೆ?

–ಡಾ.ಪ್ರಭಾ ಚಂದ್ರ
Published 12 ಜನವರಿ 2024, 23:54 IST
Last Updated 12 ಜನವರಿ 2024, 23:54 IST
ಅಕ್ಷರ ಗಾತ್ರ

ಬೆಂಗಳೂರಿನ ತಾಯಿಯೊಬ್ಬಳು, ಗೋವಾದಲ್ಲಿ ಮಗುವನ್ನು ಕೊಂದು, ಚಿತ್ರದುರ್ಗದಲ್ಲಿ ಸೆರೆ ಸಿಕ್ಕ ಪ್ರಕರಣ ಎಲ್ಲರ ಎದೆನಡುಗಿಸಿದೆ. ಆದರೆ ಪೊರೆವ ತಾಯಿಯೊಬ್ಬಳು ತಾನೇ ಮಗುವಿನ ಉಸಿರುಗಟ್ಟಿಸುವುದು ಯಾಕೆ?

ಇಂಥ ಹತ್ಯೆಗಳಿಗೆ ಹಲವಾರು ಕಾರಣಗಳಿವೆ. ತೀರ ಸಾಮಾನ್ಯವಾದುದು altruistic ಹತ್ಯೆ ಅಥವಾ ಆತ್ಮಹತ್ಯೆ ಎಂದು ಹೇಳಬಹುದಾಗಿದೆ. ಇಲ್ಲಿ ತಾಯಿಗೆ ತನ್ನ ಮಗು ಬದುಕುಳಿದರೆ ಬಲು ಕಷ್ಟಪಡಬೇಕಾಗುವುದು ಎಂಬ ಆತಂಕದಿಂದ ಮಗುವನ್ನು ಕೊಲ್ಲಲು ಮುಂದಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ತಾಯಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಮ್ಮ ನಂತರ... ಮಗುವಿನ ಗತಿಯೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿರುತ್ತದೆ. ಇದು ಮಗುವಿನ ಹಿತಾಸಕ್ತಿಯ ದೃಷ್ಟಿಯಿಂದಲೇ ಕೈಕೊಂಡಿರುವ ಕೃತ್ಯ ಎಂದು ಅವರು ಭಾವಿಸಿರುತ್ತಾರೆ; ಅಥವಾ ನಂಬಿರುತ್ತಾರೆ.  ಮಹಿಳೆಯೊಬ್ಬಳು ಆರ್ಥಿಕವಾಗಿ ಕಡುಕಷ್ಟದಲ್ಲಿರುವಾಗ, ಸಾಮಾಜಿಕವಾಗಿ ಒಂಟಿಯಾಗಿರುವ ಭಾವ ಬಂದಾಗ, ಕೌಟುಂಬಿಕವಾಗಿ ದೂರವಾದ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಇಂತಹ ಹತ್ಯೆ ಮತ್ತು ಆತ್ಮಹತ್ಯೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ. 

ಇನ್ನೊಂದು ಕಾರಣವೆಂದರೆ ತೀವ್ರತರವಾದ ಮಾನಸಿಕ ಅಸ್ವಸ್ಥರಾಗಿದ್ದಾಗ, ಸೈಕೋಸಿಸ್‌ನಿಂದ ಬಳಲುತ್ತಿದ್ದರೆ, ರಕ್ಕಸವೊಂದು ತನ್ನ ಮಗುವನ್ನು ದೂರಮಾಡುವುದು ಎಂಬಂಥ ಆತಂಕದಲ್ಲಿರುತ್ತಾರೆ. ಮಗುವು ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದು, ಅದು ಸಾವನ್ನಪ್ಪಬಹುದು, ಅಥವಾ ಅದಕ್ಕೆ ಅಪಾಯವಾಗಬಹುದು ಎಂದೂ ನಂಬಿರುತ್ತಾರೆ. ಇಂಥ ಮಹಿಳೆಯರು ಮಾನಸಿಕ ಆರೋಗ್ಯ ಸರಿ ಇರುವುದಿಲ್ಲ. ತಮ್ಮ ಕ್ರಿಯೆಗಳಿಂದ ಮಗು ಸಾವನ್ನು ಅಪ್ಪಬಹುದು ಎಂಬುದು ತಿಳಿದಿದ್ದರೂ, ಕೆಲವೊಮ್ಮೆ ಅವರ ಭ್ರಾಂತಿಯಿಂದಾಗಿ ಮಗುವಿಗೆ ನ್ಯಾಯ ಸಲ್ಲಿಸಿದ್ದೇವೆ ಎಂದೇ ನಂಬುತ್ತಿರುತ್ತಾರೆ.

 ಮೂರನೆಯದು ಆಕಸ್ಮಿಕವಾಗಿರಬಹುದು. ಮಗುವನ್ನು ಶಿಕ್ಷಿಸುವಾಗ ಮಾರಣಾಂತಿಕ ಏಟು ಬಿದ್ದಿರಬಹುದು. ಸಾವನ್ನಪ್ಪಲಿ ಎಂಬ ಉದ್ದೇಶ ಇಲ್ಲದಿದ್ದಾಗಲೂ, ಮಗುವಿಗೆ ಆದ ತೀವ್ರಗಾಯದಿಂದ, ರಕ್ತಸ್ರಾವದಿಂದಲೂ ಮರಣವಪ್ಪಿರಬಹುದು. 

ಇವೆಲ್ಲಕ್ಕೂ ಮೀರಿದ ದ್ವೇಷಕಾರಣವೂ ಇರುತ್ತದೆ. ಬಾಂಧವ್ಯದಲ್ಲಿ ಸಮಸ್ಯೆಗಳಿದ್ದರೆ, ಸಂಗಾತಿ ಅಥವಾ ಪತಿಯೊಂದಿಗೆ ಕಲಹ, ಕ್ಲೇಷಗಳಿದ್ದರೆ ಮಗುವನ್ನು ಹತ್ಯೆ ಮಾಡಲಾಗುತ್ತದೆ. ವಿಚ್ಛೇದನ ಪ್ರಕರಣಗಳಲ್ಲಿ ಕಸ್ಟಡಿ ಮತ್ತು ಭೇಟಿಯಾಗುವ ಹಕ್ಕುಗಳ ವಿಷಯ ಬಂದಲ್ಲಿ, ಸಂಗಾತಿಯ ನಡವಳಿಕೆಯನ್ನು ದ್ವೇಷಿಸುತ್ತಿದ್ದಲ್ಲಿ ಮಹಿಳೆಯರು ಈ ಕೃತ್ಯಕ್ಕೆ ಇಳಿಯುತ್ತಾರೆ.

 ಮಾನಸಿಕ ಅನಾರೋಗ್ಯದ ಪಾತ್ರ
ಶೇ 30ರಷ್ಟು ಮಹಿಳೆಯರು ತಮ್ಮ ಮಕ್ಕಳನ್ನು ಕೊಂದ ನಂತರ ತಾವೂ ಸಾವಿಗೆ ಶರಣಾಗುತ್ತಾರೆ. ಕೆಲವೊಮ್ಮೆ ಸಾವನ್ನಪ್ಪಲು ತೀರ ಭಯಾನಕ ವಿಧಾನಗಳನ್ನೂ ಅನುಸರಿಸುತ್ತಾರೆ. ಗಂಭೀರ ಸ್ವರೂಪದ ಸೈಕೊಸಿಸ್‌ ಅಥವಾ ತೀವ್ರತರನಾದ ಮಾನಸಿಕ ಒತ್ತಡ, ಡಿಪ್ರೆಶನ್‌ಗಳು, ಶಿಶು ಹತ್ಯೆಯಂಥ ಕೃತ್ಯಕೈಗೊಳ್ಳುವಂತಾಗಿರುತ್ತದೆ. ಪ್ರಸವಾನಂತರದ ಸೈಕೊಸಿಸ್‌ ಸಹ ಶಿಶುಹತ್ಯೆಗೆ ಮೂಲ ಕಾರಣವಾಗಿರುತ್ತದೆ. ಇಂಥ ಪ್ರಕರಣಗಳಲ್ಲಿ ತಾಯಂದಿರು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಸವ ಪೂರ್ವದಲ್ಲಿಯೂ, ಬಳಲಿರುತ್ತಾರೆ. ಮಕ್ಕಳನ್ನು ಹತ್ಯೆ ಮಾಡುವ ತಂದೆಯಲ್ಲಿ ಸಾಮಾನ್ಯವಾಗಿ ಅಪರಾಧಿ ಹಿನ್ನೆಲೆ ಅಥವಾ ಹಿಂಸಾಪ್ರವೃತ್ತಿ ಕಂಡುಬಂದಿರುತ್ತದೆ. ಆದರೆ ತಾಯಂದಿರಲ್ಲಿ ಇದ್ಯಾವುದೂ ಕಂಡು ಬಾರದು. 

 ಈ ಪ್ರವೃತ್ತಿ ಕಂಡು ಬರುವುದಾದರೂ ಹೇಗೆ?

ಮಗು ಹುಟ್ಟಿದ 24 ಗಂಟೆಗಳಲ್ಲಿಯೇ ಮಗುವನ್ನು ಕೊಂದರೆ ಅದಕ್ಕೆ ನವಜಾತ ಶಿಶುಹತ್ಯೆ ಎನ್ನಲಾಗುತ್ತದೆ. ವರ್ಷದ ಒಳಗಿನ ಮಕ್ಕಳನ್ನು ಕೊಂದರೆ ಶಿಶುಹತ್ಯೆ ಎನ್ನಲಾಗುತ್ತದೆ. 1–18 ವರ್ಷಗಳ ಒಳಗಿನ ಮಕ್ಕಳ ಹತ್ಯೆಯನ್ನು ಮಕ್ಕಳ ಹತ್ಯೆಯೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6 ವರ್ಷಗಳಿಗಿಂತ ಒಳಗಿನ ಚಿಣ್ಣರನ್ನೇ ತಾಯಂದಿರು ಹತ್ಯೆ ಮಾಡುತ್ತಾರೆ. ಸಾಮಾನ್ಯವಾಗಿ ಉಸಿರುಕಟ್ಟಿಸಿ ಸಾಯಿಸುವುದು ತಾಯಂದಿರ ವಿಧಾನವಾದರೆ, ತಂದೆ ಆಯುಧಗಳನ್ನು ಬಳಸುತ್ತಾರೆ. ಬಹುತೇಕ ತಾಯಂದಿರು ಸಾಯಿಸುವಾಗ ಮಗುವಿಗೆ ನಿದ್ದೆ ಬರಿಸಿ, ಮಗು ಹೆಚ್ಚು ನರಳದಿರಲಿ ಎಂಬ ಎಚ್ಚರಿಕೆಯನ್ನೂ ತೆಗೆದುಕೊಳ್ಳುತ್ತಾರೆ. ಇಂಥ ಮಾನಸಿಕ ಕಾಯಿಲೆಯಿಂದ ಬಳಲುವ ಹೆಣ್ಣುಮಕ್ಕಳು ಸಾಧಾರಣವಾಗಿ ತಾವು ಸಮಾಧಾನ ಪಡೆಯಲು ಯತ್ನಿಸುವುದಿಲ್ಲ. ತಮ್ಮ ಕೃತ್ಯ ಮರೆಮಾಚುವುದಿಲ್ಲ.  ಯಾಕೆ ಮಾಡಿದರು ಎಂಬುದನ್ನು ಹೇಳದಿದ್ದರೂ ಅಪಾರವಾದ ಅಪರಾಧಿ ಭಾವದಲ್ಲಿ ನರಳುತ್ತಾರೆ.  

 ಇಂಥ ಅಪಾಯಕಾರಿ ಸನ್ನಿವೇಶದಲ್ಲಿರುವ ಮಕ್ಕಳನ್ನು ಗುರುತಿಸಬಹುದೆ?

ಸಾಮಾನ್ಯವಾಗಿ ಇಂಥ ಮಹಿಳೆಯರಲ್ಲಿ ಬಹುತೇಕರು ಅಸಹಾಯಕತನವನ್ನು, ಯಾವುದೇ ನಿರಾಶಾಭಾವ ದಲ್ಲಿ ಮುಳುಗಿರುವುದು, ಸಾಕಷ್ಟು ಬೆಂಬಲ ಇರದೇ ಇರುವ ಸಂದರ್ಭಗಳ ಬಲಿಪಶುಗಳಾಗಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಬೇರ್ಪಡುವಿಕೆ, ವಿಚ್ಛೇದನ ಅಥವಾ ಹಿಂಸಾತ್ಮಕ ಬಾಂಧವ್ಯದಲ್ಲಿರುವುದನ್ನು ತಪ್ಪಿಸಿಕೊಳ್ಳಲು ಈ ಕೃತ್ಯವೆಸಗುತ್ತಾರೆ. ಸಾಮಾಜಿಕ ಬೆಂಬಲವಿಲ್ಲದೆ ಒಬ್ಬಂಟಿಯಾಗದಾಗ ತೀವ್ರತರನಾದ ಒತ್ತಡವನ್ನು ಅನುಭವಿಸುತ್ತಿರುತ್ತಾಳೆ. ಸಾಮಾನ್ಯವಾಗಿ ಮಕ್ಕಳ ಹತ್ಯೆಯೆಸಗುವ ಮಹಿಳೆಯರು ಕೆಲಸದಲ್ಲಿರುವುದಿಲ್ಲ. ಇರಲೊಂದು ಸೂರು ಇರುವುದಿಲ್ಲ. ಇವುಗಳಿಗೆ ಪರ್ಯಾಯವಾಗಿ ಚಟಗಳಿಗೆ ಮೊರೆ ಹೋಗಿರುವ ಸಾಧ್ಯತೆಯೂ ಇರುತ್ತದೆ.

ನಾವಿದನ್ನು ತಡೆಯಬಹುದೆ?

ಕೌಟುಂಬಿಕ ದೌರ್ಜನ್ಯ ಇರುವ ಮನೆಯ ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು. ಇದೇ ಕಾರಣದಿಂದ ಬೇರ್ಪಡುವಿಕೆ ಅಥವಾ ವಿಚ್ಛೇದನಗಳಾಗುತ್ತಿದ್ದಲ್ಲಿ ಅಂಥ ಕುಟುಂಬದ ಮಕ್ಕಳ ನಡವಳಿಕೆಯನ್ನು ಗಮನಿಸುತ್ತಿರಬೇಕು. ಸಾಮಾನ್ಯವಾಗಿ ಇದನ್ನು ಶಾಲಾ ಶಿಕ್ಷಕಿಯರ ಗಮನಕ್ಕೆ ಬಂದೇ ಬರುತ್ತದೆ. ಇಂಥ ಮಕ್ಕಳು ಮಕ್ಕಳ ಸಂರಕ್ಷಣೆಯ ಸೇವಾ ಸಂಸ್ಥೆಯ ಗಮನದಲ್ಲಿಯೂ ಇರಬೇಕು. ಪಾಲಕರಲ್ಲಿ ಒಬ್ಬರಿಂದ ಹತ್ಯೆಯ ಆತಂಕವನ್ನು ಎದುರಿಸುತ್ತಿರುತ್ತಾರೆ. ಬಹುತೇಕ ತಾಯಂದಿರು, ಹತ್ಯೆ ಮಾಡುವ ಮುನ್ನ ಮಕ್ಕಳ ಕಾಳಜಿ ಮಾಡುವ ಸಾಮಾನ್ಯ ಅಮ್ಮಂದಿರೇ ಆಗಿರುತ್ತಾರೆ. ಆದರೆ ತೀವ್ರತರನಾದ ಒತ್ತಡ ಅವರನ್ನು ಉದ್ವಿಗ್ನರಾಗಿಸುತ್ತದೆ. ಆ ಉದ್ವೇಗ, ಉನ್ಮಾದವಾಗಿ ಯಾವ ಕ್ಷಣದಲ್ಲಿಯಾದರೂ ಸ್ಫೋಟಗೊಳ್ಳಬಹುದು. ಒಂದು ವೇಳೆ ಮಗು ನಿರಂತರವಾಗಿ ಶಾಲೆಗೆ ಬರುವುದನ್ನು ತಪ್ಪಿಸುತ್ತಿದ್ದಲ್ಲಿ, ನಿರ್ಲಕ್ಷಿತ ಮಗುವೆನಿಸಿದ್ದಲ್ಲಿ, ತೂಕದಲ್ಲಿ ವ್ಯತ್ಯಾಸವಾದರೆ ಅಂಥ ಮಗುವನ್ನು ಶಿಕ್ಷಕರು ಪ್ರಶ್ನಿಸಿ, ಮಕ್ಕಳ ಸಂರಕ್ಷಣಾ ಸೇವಾ ಸಂಸ್ಥೆಯ ಗಮನಕ್ಕೆ ತರಬಹುದಾಗಿದೆ.

 ಮಗುವಿನ ಸುಪರ್ದಿಗೆ ಸಂಬಂಧಿಸಿದಂತೆ ಜಗಳಗಳಾಗುತ್ತಿರುವ ಕುಟುಂಬಗಳನ್ನು ಸಾಮಾಜಿಕ ಚೌಕಟ್ಟಿನಲ್ಲಿ ಅಲಕ್ಷಿಸಬಾರದು. ಇಬ್ಬರೂ ಪಾಲಕರ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಬೇಕು. 

ಪ್ರಸವ ನಂತರ ಮಹಿಳೆಯ ಮಾನಸಿಕ ಆರೋಗ್ಯದೆಡೆಗೆ ಗಮನ ನೀಡಬೇಕು. ಮೊದಲ ವರ್ಷವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡು ಬಂದಲ್ಲಿ ಆತ್ಮಹತ್ಯೆ ಮತ್ತು ಶಿಶುಹತ್ಯೆ ಪ್ರವೃತ್ತಿಯ ಕುರಿತು ಕುಟುಂಬಗಳಲ್ಲಿ ಅರಿವು ಮೂಡಿಸಬೇಕು. 

ಮಕ್ಕಳ ಸುರಕ್ಷೆಗೆ ಕುಟುಂಬ, ಸಾಮಾಜ ಹಾಗೂ ಆರೋಗ್ಯ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಿದಲ್ಲಿ,  ಕಾನೂನು ವ್ಯವಸ್ಥೆಗಳೂ ಜಾಗರೂಕವಾಗಿದ್ದಲ್ಲಿ, ಇಂಥ ಹತ್ಯೆಗಳನ್ನು, ಆತ್ಮಹತ್ಯೆಗಳನ್ನೂ ತಡೆಯಬಹುದಾಗಿದೆ.

ಲೇಖಕರು: ನಿಮ್ಹಾನ್ಸ್‌ನಲ್ಲಿ ಮಾನವ ವರ್ತನಾ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT