ಮಂಗಳವಾರ, ಅಕ್ಟೋಬರ್ 15, 2019
28 °C

ದಸರಾ ಮಹೋತ್ಸವಕ್ಕೆ ಪಾರಂಪರಿಕ ನಡಿಗೆ ಮೆರಗು

Published:
Updated:
Prajavani

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವಕ್ಕೆ ಪಾರಂಪರಿಕ ನಡಿಗೆ ಮತ್ತಷ್ಟು ಮೆರಗು ನೀಡಿತು. ದಸರಾ ಮಹೋತ್ಸವದ ನಾಲ್ಕನೇ ದಿನವಾದ ಶುಕ್ರವಾರ ನಗರದ ಜನನ ಮಂಟಪದ ಬಳಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ಅವರು ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ಶ್ರೀವಿಜಯ ಪಾರ್ಶ್ವನಾಥಸ್ವಾಮಿ ಜೈನ ದೇವಾಲಯ, ವೀರಭಧ್ರಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸಲಾಯಿತು. ನಡಿಗೆಯು ಜನನ ಮಂಟಪದಿಂದ ಆರಂಭಗೊಂಡು ಹಳೇ ಖಾಸಗಿ ಬಸ್ ನಿಲ್ದಾಣ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ದೊಡ್ಡ ಅಂಗಡಿ ಬೀದಿ, ರಥದ ಬೀದಿ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದಲ್ಲಿ ಅಂತ್ಯಗೊಂಡಿತು.

ಉಡುಗೆ ತೊಡುಗೆ: ಈ ಬಾರಿ ಪಾರಂಪರಿಕ ಉಡುಗೆಯನ್ನು ತೊಟ್ಟ ಪುರುಷರು ಪಂಜೆ, ಶರ್ಟ್, ಶಲ್ಯ ಧರಿಸಿದ್ದರೆ, ಮಹಿಳೆಯರು ಸೀರೆ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿವಿಧ ಶಾಲಾ– ಕಾಲೇಜು ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸುವ ಮೂಲಕ ಪಾರಂಪರಿಕ ನಡಿಗೆಯ ಅಂದ ಹೆಚ್ಚಿಸಿದರು.  

ತಂದೆಯ ನೆನಪಿಗಾಗಿ ಸ್ಮಾರಕ: ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ‘ಚಾಮರಾಜೇಂದ್ರ ಒಡೆಯರ್ ಅವರು ಚಾಮರಾಜನಗರದಲ್ಲಿ ಜನಿದರು. ಇವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1818 ರಲ್ಲಿ ‘ಅರಿಕುಠಾರ’ ಆಗಿದ್ದ ಗ್ರಾಮವನ್ನು ಚಾಮರಾಜನಗರ ಎಂದು ಹೆಸರು ಬದಲಿಸಿದರು. ಬಳಿಕ 1826 ರಲ್ಲಿ ದೇವಸ್ಥಾನವೊಂದನ್ನು ಕಟ್ಟಿಸಿದನು. ತಂದೆ ಅವರ ನೆನಪಿಗಾಗಿ ಜನನ ಮಂಟಪವನ್ನು ಸ್ಮಾರಕ ಮಾಡಿದರು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ವೈ. ಸೋಮಶೇಖರ್, ಡಿಡಿಪಿಐ ಮಂಜುನಾಥ್, ನಗರಸಭೆ ಆಯುಕ್ತ ರಾಜಣ್ಣ ಇತರರು ಭಾಗವಹಿಸಿದ್ದರು.

Post Comments (+)