7

ಬೆಂಗಳೂರಿನ ನೆಲೆ - ಹಿನ್ನೆಲೆ

Published:
Updated:
ಸೆಂಟ್ರಲ್‌ ಕಾಲೇಜು

ವಿಶ್ವಭೂಪಟದಲ್ಲಿ ಬೆಂಗಳೂರು ಮಹತ್ವದ ಸ್ಥಾನ ಪಡೆದಿದೆ. ಭೌಗೋಳಿಕ ಮತ್ತು ಪ್ರಾಕೃತಿಕವಾಗಿ ಆಯಕಟ್ಟಿನ ನೆಲೆಯನ್ನು ಗುರುತಿಸಿ ಹೊಸ ಬೆಂಗಳೂರು ನಿರ್ಮಿಸಿದ ಕೀರ್ತಿ ಯಲಹಂಕ ನಾಡಪ್ರಭು ಹಿರಿಯ ಕೆಂಪೇಗೌಡರದು.

ಬೆಂಗಳೂರಿನ ಭೌಗೋಳಿಕ ವಿಶೇಷತೆ: ಬೆಂಗಳೂರು ದಕ್ಷಿಣ ಭಾರತದ ಭೂಮಧ್ಯ ಭಾಗದಲ್ಲಿರುವ ನಗರ. ಪೂರ್ವ ಮತ್ತು ಪಶ್ಚಿಮ ಕರಾವಳಿಯ ಚೆನ್ನೈ ಮತ್ತು ಮಂಗಳೂರುಗಳ ನಡುವೆ ಒಂದು ಸರಳ ರೇಖೆಯನ್ನು ಎಳೆದರೆ, ಎರಡು ನಗರಗಳ ನಡುವಿನ ಮಧ್ಯದ ಬಿಂದುವಿನಲ್ಲಿ ಬೆಂಗಳೂರಿದೆ. ದಕ್ಷಿಣ ಭಾರತದಲ್ಲಿಯೇ ಅತ್ಯಂತ ಆಯಕಟ್ಟಿನಲ್ಲಿರುವ ನಗರ ಬೆಂಗಳೂರು.

ಭೌಗೋಳಿಕವಾಗಿಯೂ ಎತ್ತರದ ಪ್ರಸ್ತಭೂಮಿಯಲ್ಲಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ ಕೆಲವು ರಾಜಧಾನಿಗಳನ್ನು ಹೊರತುಪಡಿಸಿ, ಉಳಿದ ರಾಜ್ಯಗಳ ರಾಜಧಾನಿಗಳಿಗಿಂತಲೂ ಬೆಂಗಳೂರು ಎತ್ತರದಲ್ಲಿದೆ.

ವಿಶಿಷ್ಟ ಬೆಂಗಳೂರು ದಿಣ್ಣೆ: ಚಿಕ್ಕಬಳ್ಳಾಪುರದ ಉತ್ತರ ದಿಕ್ಕಿನಿಂದ ಆರಂಭವಾಗಿ ಮೇಕೆದಾಟು ಸಮೀಪದವರೆಗೆ ಸಾಗುವ ‘ಉಪ ಜಲವಿಭಜಕ’ ದಿಣ್ಣೆಯೊಂದರ ಮೇಲೆ ಬೆಂಗಳೂರನ್ನು ನಿರ್ಮಿಸಲಾಗಿದೆ. ಈ ‘ಬೆಂಗಳೂರು ದಿಣ್ಣೆ’ ಸಮುದ್ರಮಟ್ಟದಿಂದ 900 ಮೀಟರ್‌ಗೂ ಹೆಚ್ಚು ಎತ್ತರದಲ್ಲಿದೆ. ಇದು ಹೈಗ್ರೌಂಡ್, ಸೆಂಟ್ರಲ್ ಕಾಲೇಜ್‌ ಮಾರ್ಗವಾಗಿ ಅವೆನ್ಯೂ ರಸ್ತೆಯ ಪಕ್ಕದಲ್ಲಿ ಸಾಗಿ ಕೋಟೆ, ಟಿಪ್ಪು ಅರಮನೆ, ಹೆಚ್ಚು ಕಡಿಮೆ ಕೆ.ಆರ್.ರಸ್ತೆಯ ಒಂದು ಬದಿಯಲ್ಲಿಯೇ ಮುಂದುವರೆದು ಬಸವನಗುಡಿ, ಜಯನಗರ, ಬನಶಂಕರಿ ಬಡಾವಣೆಗಳತ್ತ ಸಾಗಿದೆ.

ವಿಶೇಷವೆಂದರೆ, ಬೆಂಗಳೂರು ದಿಣ್ಣೆಯ ಮೇಲೆ ಸುರಿದ ಮಳೆ ನೀರು ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿಯಲ್ಲಿ ಮತ್ತೆ ಒಂದಾಗುತ್ತದೆ! ಸರಳವಾಗಿ ಹೇಳುವುದಾದರೆ, ಸೆಂಟ್ರಲ್ ಕಾಲೇಜಿನ ಕಟ್ಟಡದ ಚಾವಣಿಯೊಂದರ ಮೇಲೆ ಬೀಳುವ ಮಳೆಯ ನೀರು ಪಶ್ಚಿಮಕ್ಕೆ ಹರಿದು ವೃಷಭಾವತಿಯ ಮೂಲಕ ಅರ್ಕಾವತಿ ಸೇರಿ, ಕಾವೇರಿಯಲ್ಲಿ ಸಂಗಮವಾದರೆ; ಪೂರ್ವಕ್ಕೆ ಹರಿಯುವ ನೀರು ಹಲವು ಕೆರೆಗಳನ್ನು ಹಾದು ದಕ್ಷಿಣ ಪಿನಾಕಿನಿ ನದಿ ಸೇರುತ್ತದೆ. ಪಿನಾಕಿನಿಯು ಮುಂದೆ ತಮಿಳುನಾಡಿನಲ್ಲಿ ಪಾಲಾರ್ ನದಿಯಾಗಿ ಹರಿಯುತ್ತದೆ. ಹೀಗೆ ಒಂದೇ ಸೂರಿನಿಂದ ಬೇರ್ಪಟ್ಟ ನೀರನ್ನು ಬಂಗಾಳ ಕೊಲ್ಲಿ ಮತ್ತೆ ಒಂದು ಮಾಡುತ್ತದೆ!

ಪ್ರಾಕೃತಿಕ ವಿಶೇಷತೆ: ಕೆಂಪೇಗೌಡರ ಕಾಲದ ಪೇಟೆ ಮತ್ತು ಕೋಟೆ ಪ್ರದೇಶವು ಬಟ್ಟಲ ತಳದಂತಿರುವ ನೆಲೆ. ಇದರ ಸುತ್ತಲು ಉತ್ತರಕ್ಕೆ ರಾಜಮಹಲ್ ವಿಲಾಸ್, ಹೈಗ್ರೌಂಡ್ ಪ್ರದೇಶ; ದಕ್ಷಿಣಕ್ಕೆ ಬಸವನಗುಡಿ ಗುಡ್ಡ ಮತ್ತು ಬನಶಂಕರಿಯ ದಿಣ್ಣೆ ಆವೃತವಾಗಿದೆ. ಪಶ್ಚಿಮದಲ್ಲಿ ಸುಂಕದಕಟ್ಟೆ, ಹೆಗ್ಗನಹಳ್ಳಿ, ಮಹಾಲಕ್ಷ್ಮಿಪುರ ದಿಣ್ಣೆಗಳೂ, ಪೂರ್ವದಲ್ಲಿ ಲಾಲ್‍ಬಾಗ್ ಮತ್ತು ಬೈರಸಂದ್ರದ ಗುಡ್ಡಗಳು ಸುತ್ತುವರೆದಿವೆ. ಪ್ರಾಕೃತಿಕ ರಕ್ಷಣೆಯ ದೃಷ್ಟಿಯಿಂದಲೇ ಕೆಂಪೇಗೌಡ ಈ ಸ್ಥಳ ಆಯ್ಕೆ ಮಾಡಿರುವಂತೆ ತೋರುತ್ತದೆ.

ಕೊನೆಯದಾಗಿ, ಬೆಂಗಳೂರು ದಿಣ್ಣೆಯು ಪೂರ್ವ ಮತ್ತು ಪಶ್ಚಿಮದಲ್ಲಿ ಸಮತಟ್ಟಾದ ಇಳಿಜಾರನ್ನು ಹೊಂದಿರುವುದರಿಂದ ಅಲ್ಲಲ್ಲಿ ಒಡ್ಡು ಕಟ್ಟಿ ಕೆರೆ ನಿರ್ಮಿಸಿರುವುದನ್ನು ಕಾಣಬಹುದು. ಈ ರೀತಿಯ ಜಲಸಂರಕ್ಷಣೆಯಿಂದಾಗಿ ಕೆರೆಗಳಿರುವವರೆಗೂ ನಗರವಾಸಿಗಳಿಗೆ ನೀರಿನ ಸಮಸ್ಯೆ ಎದುರಾಗಲಿಲ್ಲ. ಈ ಹಿನ್ನೆಲೆಯಿಂದ ನೋಡಿದಾಗ ಬೆಂಗಳೂರು ನಗರ ನಿರ್ಮಾಣಕ್ಕೆ ಗುರುತಿಸಿದ ಸ್ಥಳ ಉದ್ದೇಶಿತ ಆಯ್ಕೆ. ಇದರ ಹಿಂದೆ ಕೆಂಪೇಗೌಡರ ದೂರದರ್ಶಿತ್ವವೂ ಇತ್ತು.

(ಲೇಖಕ ಇತಿಹಾಸ ಉಪನ್ಯಾಸಕ)

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !