ಗುರುವಾರ , ಡಿಸೆಂಬರ್ 3, 2020
20 °C
ಎನ್‌ಕೌಂಟರ್‌ನಲ್ಲಿ ಹತರಾದ ಜೈಷ್‌–ಎ–ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರು

ಜಮ್ಮು–ಕಾಶ್ಮೀರ: ಚುನಾವಣೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿದ್ದ ಉಗ್ರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಭದ್ರತಾ ಪಡೆಗಳ ಜತೆ ಗುರುವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರು ಉಗ್ರರು ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚುನಾವಣೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿದ್ದರು ಎನ್ನುವುದು ಗೊತ್ತಾಗಿದೆ.

ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ನಾಗ್ರೊಟಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೈಷ್‌–ಎ–ಮೊಹಮ್ಮದ್‌ ಸಂಘಟನೆಯ ನಾಲ್ವರು ಉಗ್ರರು ಹತ್ಯೆಗೀಡಾಗಿದ್ದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪ್ರಕ್ರಿಯೆಯನ್ನು ಹಾಳುಗೆಡವಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದ ಭಾರತದ ಒಳಗೆ ನುಸುಳುವಂತೆ ಉಗ್ರರಿಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿದೆ. ಆದರೆ, ಜಮ್ಮು ಪೊಲೀಸರು ಮತ್ತು ಭದ್ರತಾ ಪಡೆಗಳು ಕಟ್ಟೆಚ್ಚರವಹಿಸಿದ್ದರಿಂದ ಉಗ್ರರ ನುಸುಳುವಿಕೆಯನ್ನು ತಡೆಯಲಾಗಿದೆ. ಈ ನಾಲ್ವರು ಉಗ್ರರು ಚುನಾವಣೆ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿದ್ದರು’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

‘ಗಡಿ ನಿಯಂತ್ರಣ ರೇಖೆಯಾಚೆಗೆ ಸದ್ಯ ಸುಮಾರು 250 ಉಗ್ರರಿರಬಹುದು ಎನ್ನುವ ಮಾಹಿತಿ ಇದೆ. ಪಾಕಿಸ್ತಾನದ ಷಡ್ಯಂತ್ರವನ್ನು ವಿಫಲಗೊಳಿಸಲು ಭದ್ರತಾ ಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲಿವೆ. ಉಗ್ರರು ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡುವ ಸಾಧ್ಯತೆಗಳಿದ್ದವು. ಆಗಸ್ಟ್‌ 15, ಜನವರಿ 26, ಗಣ್ಯರ ಭೇಟಿ ಅಥವಾ ಚುನಾವಣೆಗಳ ಸಂದರ್ಭದಲ್ಲಿ ಉಗ್ರರ ದಾಳಿಯ ಸಾಧ್ಯತೆಗಳಿರುತ್ತವೆ. ಆದರೆ, ಯಾವುದೇ ರೀತಿ ಪರಿಸ್ಥಿತಿ ಎದುರಿಸಲು ಭದ್ರತಾ ಪಡೆಗಳು ಸನ್ನದ್ಧವಾಗಿದೆ. ನಾವು ಅಭ್ಯರ್ಥಿಗಳಿಗೆ ಭದ್ರತೆಯನ್ನು ಒದಗಿಸಿದ್ದೇವೆ. ಅಭ್ಯರ್ಥಿಗಳು ಈಗ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಹೀಗಾಗಿ, ಯಾರೂ ಭಯಪಡಬೇಕಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಆದರೆ, ಪ್ರತಿಯೊಬ್ಬ ಅಭ್ಯರ್ಥಿಗೂ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಯಾವುದೇ ಅಭ್ಯರ್ಥಿ ಪ್ರಚಾರಕ್ಕೆ ತೆರಳಿದಾಗ ಭದ್ರತೆಯನ್ನು ದುಪ್ಪಟ್ಟುಗೊಳಿಸಲಾಗುತ್ತದೆ. ಜತೆಗೆ, ಆಯಾ ಪ್ರದೇಶದಲ್ಲೂ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು