ಸೋಮವಾರ, ಡಿಸೆಂಬರ್ 9, 2019
26 °C
ಕೆರೆಗಳ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ ಸಂಸದ ವೀರಪ್ಪ ಮೊಯಿಲಿ ಭರವಸೆ

ಕೆರೆಗೆ ಹರಿಯಲಿದೆ ಎಚ್.ಎನ್ ವ್ಯಾಲಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಗೌರಿಬಿದನೂರು: ಈ ಭಾಗದ ಜನರಿಗೆ ಕೊಟ್ಟ ಮಾತಿನಂತೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಪ್ರಗತಿಯಲ್ಲಿದೆ. ಕೆರೆಗಳಿಗೆ ಎಚ್‌.ಎನ್‌. ವ್ಯಾಲಿ ನೀರು ಶೀಘ್ರ ಹರಿಯಲಿದೆ ಎಂದು ಸಂಸದ ಎಂ. ವೀರಪ್ಪ ಮೊಯಿಲಿ ತಿಳಿಸಿದರು.

ತಾಲ್ಲೂಕಿನ ಮರಳೂರು ಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಮೊದಲ ಹಂತದಲ್ಲಿ ಎಚ್‌.ಎನ್‌. ವ್ಯಾಲಿ ಯೋಜನೆ ನೀರಿನಿಂದ ಕೆರೆ ತುಂಬಿಸುವ ಪ್ರಯತ್ನ ನಡೆಯುತ್ತದೆ. ನಂತರದಲ್ಲಿ ಎತ್ತಿನಹೊಳೆ ಯೋಜನೆ ಯಿಂದಲೂ ಕುಡಿಯಲು ನೀರು ಹರಿಸಲಾಗುವುದು. ಎರಡೂ ಯೋಜನೆಗಳು ಜಿಲ್ಲೆಯ ರೈತರ ಬದುಕಿಗೆ ಹೊಸ ಬೆಳಕನ್ನು ನೀಡಲಿವೆ. ಈ ಭಾಗದ ಕೃಷಿ, ಹೈನುಗಾರಿಕೆ, ರೇಷ್ಮೆ ಅಭಿವೃದ್ಧಿಗೆ ಸಹಕಾರಿ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, 'ಶಾಶ್ವತ ನೀರಿನ ಮೂಲಗಳಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಬೆಂಗಳೂರು ಮತ್ತು ನಾಗವಾರದಿಂದ ಹರಿದು ಬರುವ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧಿಕರಿಸಿ ಕೆರೆಗೆ ತುಂಬಿಸುವ ಕೆಲಸ ನಡೆಯುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣ ವಿಳಂಬವಾಗಿದೆ. ಈ ಯೋಜನೆ ಜಾರಿಯಿಂದ ಈ ಭಾಗದ ರೈತರ  ಬವಣೆಗೆ ತಾತ್ಕಾಲಿಕ ಪರಿಹಾರ ನೀಡಿದಂತಾಗುತ್ತದೆ ಎಂದು ಹೇಳಿದರು.

ಎಚ್.ಎನ್ ವ್ಯಾಲಿ ಯೋಜನೆಗೆ ₹883 ಕೋಟಿ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ 115 ಕಿ.ಮೀ ಪೈಪ್ ಲೈನ್ ಸೇರಿದೆ. ಈಗಾಗಲೇ 70 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, 5 ಕಡೆ ಪಂಪ್‌ಹೌಸ್ ನಿರ್ಮಿಸಲಾಗುತ್ತಿದೆ. ಮಾರ್ಚ್‌ 2019ರೊಳಗೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಎಚ್‌.ಎನ್‌. ವ್ಯಾಲಿ ನೀರನ್ನು ಕೆರೆಗೆ ಹರಿಸುವ ಮುನ್ನ ತಾಲ್ಲೂಕಿನ 8 ಕೆರೆಗಳ ಹೂಳುತ್ತಿ, ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಾಗಲಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಾಗರಾಜ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ನರಸಿಂಹಮೂರ್ತಿ, ಪಿ.ಎನ್.ಪ್ರಕಾಶ್, ಅರುಂಧತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಚಿಕ್ಕೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಎಚ್.ಎನ್.ಪ್ರಕಾಶರೆಡ್ಡಿ, ಹನುಮಂತರೆಡ್ಡಿ, ಅಶ್ವತ್ಥಪ್ಪ, ರಾಮವೇಂದ್ರ ಹನುಮಾನ್, ವೆಂಕಟರವಣ, ಎಂ.ನರಸಿಂಹಮೂರ್ತಿ, ಷಫೀಕ್ ಖಾನ್, ಗೀತಾ ಜಯಂದರ್, ರವಿಂದ್ರನಾಥ್ ತಲವಾಡಿ, ನಾಗ ರಾಜ್, ನರಸಿಂಹಮೂರ್ತಿ, ಲಕ್ಷ್ಮಮ್ಮ ಶ್ರೀನಿವಾಸ್, ಗೋಪಿನಾಥ್, ಸಿ. ನಾಗ ರಾಜ್, ಕೋಟೇಶ್ವರರಾವ್, ಬಿ.ಆರ್. ಶ್ರೀನಿವಾಸಮೂರ್ತಿ, ಸೋಮಯ್ಯ ಭಾಗವಹಿಸಿದ್ದರು.

*
ಎತ್ತಿನಹೊಳ ಹೋಜನೆ ಪ್ರಗತಿಯಲ್ಲಿದ್ದು, ಇನ್ನೆರಡು ವರ್ಷದಲ್ಲಿ ಜಿಲ್ಲೆಯ ರೈತರಿಗೆ ನೀರುಣಿಸಲಾಗುವುದು. ಅದಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ.
-ಎಂ. ವೀರಪ್ಪ ಮೊಯಿಲಿ, ಸಂಸದ

ಪ್ರತಿಕ್ರಿಯಿಸಿ (+)