ಭಾನುವಾರ, ನವೆಂಬರ್ 27, 2022
27 °C
ನಗರದಲ್ಲಿ ವಿತರಿಸಲಾದ ಲಸಿಕೆ ಪೈಕಿ ಶೇ80 ಕೋವಿಶೀಲ್ಡ್‌

ಕೋವಿಡ್: 3 ಲಸಿಕೆ ಮಾತ್ರ ಲಭ್ಯ: ವಿಶೇಷ ವರದಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಈವರೆಗೆ ಕೋವಿಡ್‌ ಲಸಿಕೆಯ 2.37 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ. ಈವರೆಗೆ ಆರು ಲಸಿಕೆಗಳನ್ನು ಸಂಶೋಧಿಸಲಾಗಿದ್ದರೂ ವಿತರಿಸಲಾದ ಲಸಿಕೆಯಲ್ಲಿ ಶೇ 80ರಷ್ಟು ಡೋಸ್‌ಗಳು ‘ಕೋವಿಶೀಲ್ಡ್’ ಲಸಿಕೆಯದ್ದೇ ಆಗಿವೆ. 

ನಗರದಲ್ಲಿ 2021ರ ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. 2022ರ ಜ.10ರಿಂದ ಮೂರನೇ ಡೋಸ್ ವಿತರಿಸಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳಾದವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತಿದೆ. 2022ರ ಜನವರಿಯಿಂದ 15ರಿಂದ 18 ವರ್ಷದೊಳಗಿನವರಿಗೆ, 2022ರ ಮಾ.16ರಿಂದ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ವಿತರಿಸಲಾಗುತ್ತಿದೆ. 

ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್, ಕೊರ್ಬೆವ್ಯಾಕ್ಸ್, ಜೈಕೋವ್-ಡಿ ಹಾಗೂ ಕೊವೊವ್ಯಾಕ್ಸ್‌ ಲಸಿಕೆ ಮಾರುಕಟ್ಟೆಗೆ ಪರಿಚಯಿತಗೊಂಡವು. 12 ವರ್ಷಗಳು ಮೇಲ್ಪಟ್ಟ ಎಲ್ಲ ವಯೋಮಾನದವರಿಗೂ ಸರ್ಕಾರಿ ಕೇಂದ್ರಗಳಲ್ಲಿ ಮೊದಲೆರಡು ಡೋಸ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 18ರಿಂದ 59 ವರ್ಷದವರು ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಖಾಸಗಿ ಕೇಂದ್ರಗಳಲ್ಲಿ ಪಡೆಯಬೇಕು. 2022 ಜು.15ರಿಂದ ಸೆ.30ರವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸರ್ಕಾರವು ಉಚಿತವಾಗಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಒದಗಿಸಿತ್ತು. 

ಮೂರು ಲಸಿಕೆಗಳು ಅಲಭ್ಯ: ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ಗಳನ್ನು ಲಸಿಕೆ ತಯಾರಿಕಾ ಕಂಪನಿಗಳು ₹225ಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತಿವೆ. ಸೇವಾ ಶುಲ್ಕ ಸಹಿತ ಒಂದು ಡೋಸ್‌ ಲಸಿಕೆಗೆ ಆಸ್ಪತ್ರೆಗಳು ₹ 386 ಪಾವತಿಸಬೇಕು. 150ಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ಒದಗಿಸಲಾಗುತ್ತಿದ್ದರೂ ಬೆರಳಣಿಕೆಯಷ್ಟು ಕೇಂದ್ರಗಳಲ್ಲಿ ಮಾತ್ರ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಸ್ಪುಟ್ನಿಕ್ ಲಸಿಕೆ ಸದ್ಯ ಲಭ್ಯವಿಲ್ಲ. ಅದೇ ರೀತಿ, ಮಕ್ಕಳಿಗೆ ನೀಡುವ ಜೈಕೋವ್-ಡಿ ಹಾಗೂ ಕೊವೊವ್ಯಾಕ್ಸ್‌ ಲಸಿಕೆಯೂ ನಗರದಲ್ಲಿ ದೊರೆಯುತ್ತಿಲ್ಲ. 

ನಗರದಲ್ಲಿ ಈವರೆಗೆ ವಿತರಿಸಲಾದ ಲಸಿಕೆಯಲ್ಲಿ 1.90 ಕೋಟಿ ಡೋಸ್‌ಗಳು ಕೋವಿಶೀಲ್ಡ್ ಲಸಿಕೆಯದ್ದಾಗಿವೆ. 39.95 ಲಕ್ಷ ಡೋಸ್‌ಗಳು ಕೋವ್ಯಾಕ್ಸಿನ್, 5.36 ಲಕ್ಷ ಡೋಸ್‌ಗಳು ಕೊರ್ಬೆವ್ಯಾಕ್ಸ್ ಹಾಗೂ 95 ಸಾವಿರ ಡೋಸ್‌ಗಳು ಸ್ಪುಟ್ನಿಕ್ ಲಸಿಕೆಯನ್ನು ವಿತರಿಸಲಾಗಿದೆ. 

ಪ್ರಕ್ರಿಯಾ ಆಸ್ಪತ್ರೆ, ಅಪೋಲೊ ಕ್ಲಿನಿಕ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಸಕ್ರಾ ಪ್ರೀಮಿಯಂ ಕ್ಲಿನಿಕ್, ಸುಗುಣಾ, ಮಣಿಪಾಲ್, ಫೋರ್ಟಿಸ್ ಸೇರಿ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಭ್ಯವಿರುವ ಹೆಚ್ಚಿನ ಡೋಸ್‌ಗಳು ಕೋವಿಶೀಲ್ಡ್ ಲಸಿಕೆಯಾಗಿದೆ. ಲಸಿಕೆ ಕಾಯ್ದಿರಿಸುವ ಪೋರ್ಟಲ್‌ನಲ್ಲಿ ಕೋವ್ಯಾಕ್ಸಿನ್ ಲಸಿಕೆಗೆ ಸಂಬಂಧಿಸಿದಂತೆ ನಿಗದಿ ಪಡಿಸಲಾದ ಬಹುತೇಕ ಎಲ್ಲ ಸ್ಲಾಟ್‌ಗಳು ಮುಂಚಿತವಾಗಿಯೇ ಬುಕ್‌ ಆಗುತ್ತಿವೆ. 

 

‘ಲಸಿಕೆ ಪೂರೈಕೆ: ಸಮಸ್ಯೆಯಿಲ್ಲ’

‘ಕೋವಿಡ್ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್ ವಿತರಣೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದ್ದೇವೆ. ಎಲ್ಲ ಲಸಿಕೆಗಳು ಒಂದೇ ರೀತಿಯ ಫಲಿತಾಂಶ ನೀಡುತ್ತವೆ. ಲಭ್ಯತೆ ಅನುಸಾರ ಸರ್ಕಾರ ಪೂರೈಸಿದ ಲಸಿಕೆಯನ್ನು ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಲಸಿಕೆ ಪೂರೈಕೆಯಲ್ಲಿ ಸಮಸ್ಯೆಯಿಲ್ಲ. 18 ವರ್ಷಗಳು ಮೇಲ್ಪಟ್ಟವರಲ್ಲಿ ಹೆಚ್ಚಿನ ಮಂದಿ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಇದರಿಂದಾಗಿ ಆ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು