ಶನಿವಾರ, ಜನವರಿ 28, 2023
18 °C
ಕೆಲ ಸಂಘ–ಸಂಸ್ಥೆಗಳಿಗೆ ಸರ್ಕಾರದಿಂದ ನೇರವಾಗಿ ಲಕ್ಷಾಂತರ ರೂಪಾಯಿ ಆರ್ಥಿಕ ನೆರವು

ಅರ್ಜಿ ಸಲ್ಲಿಸದಿದ್ದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಕ್ಕಿತು ಅನುದಾನ!

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಸಂಸ್ಕೃತಿಯನ್ನು ಕಟ್ಟಿ, ಬೆಳೆಸುವ ಕಾಯಕದಲ್ಲಿ ನಿರತವಾಗಿರುವ ಸಂಘ–ಸಂಸ್ಥೆಗಳಿಗೆ ಅಲ್ಪ ಆರ್ಥಿಕ ನೆರವಿಗೂ ಹತ್ತಾರು ನಿರ್ಬಂಧ ವಿಧಿಸಿರುವ ಸರ್ಕಾರ, ‘ಪ್ರಭಾವಿ’ ಸಂಘ–ಸಂಸ್ಥೆಗಳಿಗೆ ನೇರವಾಗಿ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಧನಸಹಾಯ’ ಯೋಜನೆಯಡಿ ಆಯ್ಕೆಯಾದ ಸಂಘ–ಸಂಸ್ಥೆಗಳಿಗೆ ಈ ವರ್ಷ ಅನುದಾನದ ಗರಿಷ್ಠ ಮಿತಿಯನ್ನು ₹ 2 ಲಕ್ಷಕ್ಕೆ ಸೀಮಿತಗೊಳಿಸಿದೆ. ಅದೇ ರೀತಿ, ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 3 ಕಾರ್ಯಕ್ರಮಗಳನ್ನು ನಡೆಸಿ, ದಾಖಲೆಗಳನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಇಲಾಖೆಯ ಈ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಕಲಾವಿದರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕೆಲವು ಸಂಘ–ಸಂಸ್ಥೆಗಳು ತಮ್ಮ ಪ್ರಭಾವ ಬಳಸಿ, ಅರ್ಜಿ ಸಲ್ಲಿಸದೆಯೇ ಸರ್ಕಾರದಿಂದ ನೇರವಾಗಿ ಆರ್ಥಿಕ ನೆರವು ಪಡೆದಿವೆ. ಈ ಬಗ್ಗೆ ದಾಖಲಾತಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಧನಸಹಾಯ ನಿಯಮದ ಪ್ರಕಾರ ಶುದ್ಧ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುತ್ತಿರುವ ಸಂಘ–ಸಂಸ್ಥೆಗಳಿಗೆ ಮಾತ್ರ ವಿಶೇಷ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಅಧಿಕಾರ ಸರ್ಕಾರಕ್ಕಿದೆ. ಈ ಅವಕಾಶದಡಿ ನ್ಯೂಯಾರ್ಕ್ ಕನ್ನಡ ಕೂಟದ ಇಂಡಿಯಾ ಡೇ ಪರೇಡ್ ಕಾರ್ಯಕ್ರಮ, ತರಳಬಾಳು ಜಗದ್ಗುರು ಶಾಖಾ ಮಠದ ‘ಶಿವಸಂಧಾನ’ ಕಾರ್ಯಕ್ರಮ, ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ನ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನ ಸೇರಿ ವಿವಿಧ ಸಂಸ್ಥೆಗಳ ಕಾರ್ಯಕ್ರಮಕ್ಕೆ ಸರ್ಕಾರದಿಂದ 2022–23ನೇ ಸಾಲಿಗೆ ₹ 2 ಕೋಟಿವರೆಗೂ ಅನುದಾನ ನೀಡಲಾಗಿದೆ. 

ಮರೆಯಾದ ಪಾರದರ್ಶಕತೆ: ‘ಪ್ರಭಾವ ಬಳಸಿದವರಿಗೆ ಅನುದಾನ ಎಂಬ ವಾತಾವರಣ ನಿರ್ಮಾಣವಾಗಿದೆ. ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ, ಧನಸಹಾಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಆರ್ಥಿಕ ನೆರವಿನ ಖಚಿತತೆ ಇಲ್ಲವಾಗಿದೆ. ಧನಸಹಾಯ ಯೋಜನೆಯಲ್ಲಿ ಪಾರದರ್ಶಕತೆ ಮರೆಯಾಗಿದೆ’ ಎಂದು ಕಲಾವಿದ ಜಯಸಿಂಹ ಎಸ್. ಬೇಸರ ವ್ಯಕ್ತಪಡಿಸಿದರು. 

‘ಸರ್ಕಾರದ ಈ ನಡೆಯಿಂದ ಸಂಘ–ಸಂಸ್ಥೆಗಳು ಧನಸಹಾಯ ಯೋಜನೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿವೆ’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದರು.

---

‘ಧನಸಹಾಯ ನಿರ್ಬಂಧ ಸಡಿಲಿಕೆ’

‘ಧನಸಹಾಯಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಅಂತ್ಯದೊಳಗೆ ಮೂರು ಕಾರ್ಯಕ್ರಮಗಳನ್ನು ನಡೆಸಿ, ದಾಖಲಾತಿ ಸಲ್ಲಿಸಲು ಸಂಘ–ಸಂಸ್ಥೆಗಳಿಗೆ ಸೂಚಿಸಲಾಗಿತ್ತು. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದ್ದರಿಂದ ಇಲಾಖೆ ಸಚಿವರ ಗಮನಕ್ಕೆ ತಂದು, ಚರ್ಚಿಸಲಾಗಿದೆ. ಮೂರು ಕಾರ್ಯಕ್ರಮದ ನಿರ್ಬಂಧ ಸಡಿಲಿಸಿ, ಒಂದು ಕಾರ್ಯಕ್ರಮ ನಡೆಸಿದವರನ್ನೂ ಧನಸಹಾಯಕ್ಕೆ ಪರಿಗಣಿಸಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದು ಇಲಾಖೆ ನಿರ್ದೇಶಕ ಪ್ರಕಾಶ್ ನಿಟ್ಟಾಲಿ ತಿಳಿಸಿದರು.

ಅಧಿಕ ನೆರವು ಪಡೆದ ಸಂಸ್ಥೆಗಳು

ಸಂಸ್ಥೆ; ಆರ್ಥಿಕ ನೆರವು

ತರಳಬಾಳು ಜಗದ್ಗುರು ಶಾಖಾ ಮಠ; ₹ 2 ಕೋಟಿ

ರಾಮಸೇವಾ ಮಂಡಳಿ, ರಾಮಸೇವಾ ಸೆಲೆಬ್ರೆಷನ್ ಟ್ರಸ್ಟ್; ₹ 2 ಕೋಟಿ

ಕರ್ನಾಟಕ ರಕ್ಷಣಾ ವೇದಿಕೆ, ಬೆಂಗಳೂರು; ₹ 1 ಕೋಟಿ

ಕರ್ನಾಟಕ ರಾಜ್ಯೋತ್ಸವ ಸಮಿತಿ(ಖಾಸಗಿ); ₹ 75 ಲಕ್ಷ

ವಿದ್ಯಾರಣ್ಯ ಯುವಕ ಸಂಘ; ₹ 25 ಲಕ್ಷ

ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ;₹10 ಲಕ್ಷ

ವಿಶ್ವಸಂಕೇತಿ ಭಾರತಿ, ಶಿವಮೊಗ್ಗ; ₹5 ಲಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.