ಬುಧವಾರ, ಮಾರ್ಚ್ 22, 2023
32 °C
ವೇಣುಗೋಪಾಲಸ್ವಾಮಿ ಜಾತ್ರೆಗೆ ನಾಳೆ ಚಾಲನೆ

ಸುರಪುರ: ಸ್ತಂಭಾರೋಹಣ ವಿಶಿಷ್ಟತೆಯ ಹಾಲೋಕಳಿ ಪರಿಷೆ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಇಲ್ಲಿನ ಗೋಸಲ ವಂಶಸ್ಥ ಅರಸ ರಾಜಾ ಪಿತಾಂಬರ ಬಹಿರಿ ಪಿಡ್ಡನಾಯಕ 1710ರಲ್ಲಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಸ್ಥಾನದ (ಹಾಲೋಕಳಿ) ಜಾತ್ರೆ ಕಳೆದ 3 ಶತಮಾನಗಳಿಂದ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ವಿರಳವಾಗಿ ಕಂಡುಬರುವ ಸ್ತಂಭಾರೋಹಣ ಜಾತ್ರೆಯ ವಿಶೇಷ.

ದೇವಸ್ಥಾನ ವಿಜಯನಗರ ಶೈಲಿಯಲ್ಲಿದೆ. 52 ಮೆಟ್ಟಲು ಹತ್ತಿ ದೇವಸ್ಥಾನ ಕಣ್ತುಂಬಿಕೊಂಡರೆ ಭಕ್ತಿಯ ಭಾವ ತುಂಬುತ್ತದೆ. 64 ಕಂಬಗಳ ಮೇಲೆ ನಿಂತಿರುವ ನವರಂಗ ಆಕರ್ಷಕವಾಗಿದೆ.

ಪಶ್ಚಿಮ ದಿಕ್ಕಿಗೆ ಕಲ್ಯಾಣ ಮಂಟಪ, ನೈಋತ್ಯಕ್ಕೆ ಪಾಕಶಾಲೆ, ಉತ್ತರಕ್ಕೆ ಧಾನ್ಯ ಸಂಗ್ರಹಾಲಯ, ಉತ್ತರ ದ್ವಾರದ ಹತ್ತಿರ ಕಟ್ಟಿರುವ ದೇವರ ವಾಹನಗಳ ಗೃಹ ಕಣ್ಮನ ಸೆಳೆಯುತ್ತವೆ. ಸುಂದರವಾದ ವೇಣುಗೋಪಾಲನ ಮೂರ್ತಿ ಭಕ್ತಿ ಪರವಶರನ್ನಾಗಿಸುತ್ತದೆ.

ಅರಸರು ವೈಷ್ಣವ ಮತಾವಲಂಬಿಗಳು. ಕೃಷ್ಣ ಜಯಂತಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಶ್ರಾವಣ ಮಾಸದ ರೋಹಿಣಿ ನಕ್ಷತ್ರ ಬರುವ ದಿನದಂದು ಜಾತ್ರೆ ನಡೆಸುವ ಪರಂಪರೆ ನಡೆದು ಬಂದಿದೆ.

ದೇಗುಲದ ಕೆಳಗಿನ ಮೈದಾನದಲ್ಲಿ 50 ಅಡಿ ಉದ್ದವಿರುವ ದೊಡ್ಡ ಗಾತ್ರದ 5 ಕಂಬಗಳನ್ನು ನೆಡು ಹಾಕಲಾಗಿರುತ್ತದೆ. ಕಂಬಗಳಿಗೆ ಅರದಾಳ, ಬೆಣ್ಣೆಬಾಳ (ಜಾರುವ ಪದಾರ್ಥಗಳು) ಲೇಪಿಸಿ ನುಣ್ಣಗೆ ಮಾಡಲಾಗಿರುತ್ತದೆ. ಕಂಬಗಳ ತುದಿಯಲ್ಲಿ ನೀರು ತುಂಬಿದ ಮಡಿಕೆಗಳನ್ನು ಇಟ್ಟುಕೊಂಡು ಒಬ್ಬರು ಕೂಡುವಷ್ಟು ಮಂಟಪ ಕಟ್ಟಿರುತ್ತಾರೆ. ಮಂಟಪದ ಕೆಳಭಾಗದಲ್ಲಿ ಹಣ್ಣಿನ ಹೋಳುಗಳನ್ನು ನೇತು ಹಾಕಿರುತ್ತಾರೆ.

ಹಣ್ಣಿನ ಹೋಳುಗಳನ್ನು ಹರಿಯು ಆಚರಣೆ ನೋಡಲು ಸಾವಿರಾರು ಜನರು ಸೇರಿರುತ್ತಾರೆ. ಮರುದಿನ ವಲ್ಲಭಭಾಯಿ ವೃತ್ತದ ಹತ್ತಿರ ಎರಡು ಕಂಬಗಳ ಆರೋಹಣ (ರಣಗಂಬ) ನಡೆಯುತ್ತದೆ.

ಹಾಲೋಕಳಿ: ಹಿಂದೆ ಆಸ್ಥಾನದಲ್ಲಿ ಸಾಷಕ್ಟು ಹೈನುಗಾರಿಕೆ ಇದ್ದರಿಂದ ಚರ್ಮದಿಂದ ತಯಾರಿಸಿದ ವಿಶಿಷ್ಟ ಪಿಚಗಾರಿಯಲ್ಲಿ ಹಾಲನ್ನು ತುಂಬಿ ಜನರಿಗೆ ಮತ್ತು ಸ್ತಂಭಾರೋಹಿಗಳಿಗೆ ಎರಚುತ್ತಿದ್ದರು. ಅದಕ್ಕೆಂದೆ ಈ ಪರಿಷೆಗೆ ‘ಹಾಲೋಕಳಿ’ ಎಂಬ ಅಭಿದಾನ ಬಂದಿದಾನ.

ಅರಸರು ರಾಜಪೋಷಾಕಿನೊಂದಿಗೆ ಅರಮನೆಯಿಂದ ದೇಗುಲದವರೆಗೆ ಬರಿಗಾಲಲ್ಲಿ ಮೆರವಣಿಗೆಯಲ್ಲಿ ನಡೆದು ಜಾತ್ರೆಯಲ್ಲಿ ಭಾಗವಹಿಸುವುದು ವಾಡಿಕೆ. ಕೋವಿಡ್‍ನಿಂದ ಕಳೆದೆರಡು ವರ್ಷ ರಾಜರು ಭಾಗವಹಿಸಿರಲಿಲ್ಲ. ಈ ಬಾರಿ ವತನದಾರರೊಂದಿಗೆ ಅರಸ ಜಾತ್ರೆಗೆ ಚಾಲನೆ ನೀಡುತ್ತಿರುವುದು ವಿಶೇಷ.

ಕಾರ್ಯಕ್ರಮಗಳು: ಆ. 20 ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಮಂಗಳಾರುತಿ, ದೇವರ ದರ್ಶನ, ಸಂಜೆ 6 ಗಂಟೆಗೆ ಉಯ್ಯಾಲ ಸೇವೆ, ರಾತ್ರಿ 8ಕ್ಕೆ ತೀರ್ಥ ವಿನಿಯೋಗ. ಆ. 21 ಸಂಜೆ 5 ಗಂಟೆಗೆ ದೇವರ ಸ್ತಂಭಾರೋಹಣ, ನಂತರ ಪಲ್ಲಕ್ಕಿ ಉತ್ಸವ, ಆ. 22 ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಕುಸ್ತಿ ಪಂದ್ಯಗಳು, ಸಂಜೆ 5 ಗಂಟೆಗೆ ರಣಸ್ತಂಭಾರೋಹಣ.

*
ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ನಮ್ಮ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ಜಾತ್ರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಾತ್ರೆಯಲ್ಲಿ ಅಸಂಖ್ಯೆ ಭಕ್ತರು ಬಾಗವಹಿಸುವುದು ವಿಶೇಷ
-ರಾಜಾ ಕೃಷ್ಣಪ್ಪನಾಯಕ, ರಾಜ ವಂಶಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು