ಎರಡು ದಶಕಗಳ ಹಿಂದಿನ ಮಾತು. ಆ ಊರಿನ ಹೆಸರು ಕೇಳಿದೊಡನೆ ಜನರು ಬೆಚ್ಚಿ ಬೀಳುತ್ತಿದ್ದರು. ಪೊಲೀಸರು ಕೂಡ ಗಡಗಡ ನಡುಗುತ್ತಿದ್ದರು. ಅಲ್ಲಿ ಏನು ನಡೆಯುತ್ತಿದೆ ಎಂಬುದೇ ನಿಗೂಢವಾಗಿರುತ್ತಿತ್ತು. ಪತ್ರಿಕೆಗಳಲ್ಲಿ ಮಾತ್ರ ರೋಚಕ ಸುದ್ದಿಗಳು ಪ್ರಕಟವಾಗುತ್ತಿದ್ದವು! ಕಾಲು ಶತಮಾನ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಸಿಂಹಸ್ವಪ್ನವಾಗಿದ್ದ ಕಾಡುಗಳ್ಳ ವೀರಪ್ಪನ್‍ನ ತವರು ಗೋಪಿನಾಥಂನ ಆಗಿನ ಸ್ಥಿತಿ ಇದು.

ರಾಜ್ಯದ ಗಡಿಯ ಚಾಮರಾಜನಗರದಿಂದ 144 ಕಿ.ಮೀ. ದೂರದಲ್ಲಿ ಹಸಿರುಡುಗೆ ತೊಟ್ಟ ವಿಶಾಲ ಕಾನನದ ನಡುವೆ ಕಾಸಿನಗಲ ಕಂಗೊಳಿಸುವ ಪ್ರಕೃತಿ ಸಿರಿಯ ಈ ಕುಗ್ರಾಮ, ಕಾಡುಗಳ್ಳನ ಕಾರ್ಯವೈಖರಿಯಿಂದ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗ ವೀರಪ್ಪನ್ ಇಲ್ಲ, ಗುಂಡಿನ ಸದ್ದೂ ಇಲ್ಲ. ಅವನ ಹಾವಳಿಯ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕಾಣದೆ ನಿಂತ ನೀರಾಗಿದ್ದ ಗೋಪಿನಾಥಂ, ಕಳೆದ ಒಂದು ದಶಕದಲ್ಲಿ ಸಾಕಷ್ಟು ಬದಲಾಗಿದೆ. ಗುಡಿಸಲುಗಳು ತಾರಸಿ ಮನೆಗಳಾಗಿವೆ. ಊರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ.

ವೀರಪ್ಪನ್‌ನ ಹುಟ್ಟೂರು ಎಂಬುದನ್ನು ಬದಿಗೊತ್ತಿ ನೋಡಿದರೂ, ಗೋಪಿನಾಥಂ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಹಚ್ಚ ಹಸುರಿನ ಸುಂದರ ಪ್ರವಾಸಿ ತಾಣ. ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಂದ ಇದನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಸುತ್ತಲೂ ಕೋಟೆಯಂತೆ ಆವರಿಸಿರುವ ಕುರುಚಲು ಕಾಡಿನ ಬೆಟ್ಟಗುಡ್ಡಗಳು, ಪೂರ್ವಕ್ಕೆ ಗಡಿ ಕೊರೆದಂತೆ ಹರಿಯುವ ಕಾವೇರಿ ನದಿ, ಊರಿಗೆ ಸುಂದರ ಹಿನ್ನೆಲೆಯನ್ನು ಒದಗಿಸಿವೆ. ಇಲ್ಲಿಯ ಬೆಟ್ಟಗಳು ಚಾರಣಕ್ಕೆ ಹೇಳಿಮಾಡಿಸಿದಂತಿದ್ದು, ಆಸಕ್ತರು ಆಗಾಗ ಚಾರಣ ಕೈಗೊಳ್ಳುತ್ತಾರೆ.

ಗೋಪಿನಾಥಂನ ಮುಖ್ಯ ಆಕರ್ಷಣೆಯೆಂದರೆ ಊರಿನ ಪಶ್ಚಿಮಕ್ಕೆ ಬೆಟ್ಟಗಳ ಬುಡದಲ್ಲಿ ನಿರ್ಮಾಣಗೊಂಡಿರುವ ವಿಶಾಲವಾದ ಜಲಾಶಯ. ಮಳೆಗಾಲದಲ್ಲಿ ಬೆಟ್ಟಗಳಿಂದ ಹರಿದು ಬರುವ ನೀರು ಜಲಾಶಯವನ್ನು ತುಂಬಿಕೊಳ್ಳುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿ ಜಲಾಶಯದಲ್ಲಿ ದೋಣಿಯಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಜಲಾಶಯದ ಉತ್ತರಕ್ಕೆ ಅರಣ್ಯ ಇಲಾಖೆಯ ನಿರೀಕ್ಷಣಾ ಬಂಗಲೆ ಹಾಗೂ ಗೋಪಿನಾಥಂ ಮಿಸ್ಟರಿ ಟ್ರೇಲ್ಸ್ ಕ್ಯಾಂಪ್ ಇದ್ದು, ಪರಿಸರ ಪ್ರವಾಸೋದ್ಯಮದ ಒಂದು ಭಾಗವಾಗಿ ಇಲ್ಲಿ ಪ್ರವಾಸಿಗರಿಗೆ ಚಾರಣವನ್ನು ಏರ್ಪಡಿಸಲಾಗುತ್ತದೆ.

ಜಲಾಶಯದ ದಕ್ಷಿಣ ತುದಿಯಲ್ಲಿ ತಮಿಳುನಾಡು ಶೈಲಿಯ ಬೃಹದಾಕಾರದ ಮುನೀಶ್ವರ ವಿಗ್ರಹ ನಮ್ಮ ಗಮನ ಸೆಳೆಯುತ್ತದೆ. 1980ರಲ್ಲಿ ಜಲಾಶಯ ನಿರ್ಮಾಣಗೊಂಡಾಗ ಸ್ಥಾಪಿಸಲಾದ ಈ ವಿಗ್ರಹವನ್ನು ಸ್ಥಳೀಯರು ‘ಡ್ಯಾಂ ಮುನೀಶ್ವರ’ ಎಂದು ಕರೆಯುತ್ತಾರೆ. ಆತ ಜಲಾಶಯವನ್ನು ಕಾಯುತ್ತಾನೆ ಎಂಬುದು ಅವರ ನಂಬಿಕೆ. ವೀರಪ್ಪನ್ ಆಗಾಗ ಇಲ್ಲಿ ಪೂಜೆ-ಪುನಸ್ಕಾರ ಮಾಡುತ್ತಿದ್ದನೆಂದು ಪ್ರತೀತಿ. ಗ್ರಾಮದ ಕೃಷಿಭೂಮಿಗೆ ನೀರುಣಿಸುವ ಈ ಜಲಾಶಯ, ನಿರ್ಮಾಣದ ಹಂತದಲ್ಲಿದ್ದಾಗ, ರಾತ್ರಿ ವೇಳೆ ಸುರಿದ ಭೀಕರ ಮಳೆಗೆ ಕಟ್ಟೆಯೊಡೆದು 47 ಜನರನ್ನು ಬಲಿ ತೆಗೆದುಕೊಂಡಿತ್ತು.

ಜಲಾಶಯಕ್ಕೆ ಹೋಗುವ ಮಾರ್ಗದಲ್ಲೇ ಅರಣ್ಯಕ್ಕೆ ಹೊಂದಿಕೊಂಡಂತೆ ವೀರಪ್ಪನ್‍ಗೆ ಸೇರಿದ ಜಮೀನು ಇದ್ದು, ಬಹಳ ವರ್ಷಗಳಿಂದ ಕೃಷಿ ಮಾಡದೆ ಪಾಳುಬಿದ್ದು ಕಾಡು ಬೆಳೆದು ನಿಂತಿದೆ. ಅದೇ ಜಮೀನಿನಲ್ಲಿ ವೀರಪ್ಪನ್ ತನ್ನ ಮನೆದೇವರಿಗೆ 1979ರಲ್ಲಿ ಕಟ್ಟಿಸಿದ ಪೆರುಮಾಳ್ (ಸುಬ್ರಹ್ಮಣ್ಯ) ಗುಡಿಯಿದೆ. ದೇವಸ್ಥಾನದ ಎದುರಿಗೆ ಸುಂದರವಾದ ಗರುಡಗಂಬವಿದ್ದು, ಅದರ ಪಾದದಲ್ಲಿ ‘ವೀರಪ್ಪನ್ ಉಭಯಂ’ ಎಂದು ತಮಿಳಿನಲ್ಲಿ ಆತ ತನ್ನ ಹೆಸರು ಕೆತ್ತಿಸಿರುವುದನ್ನು ಈಗಲೂ ಕಾಣಬಹುದು. ಗೋಪಿನಾಥಂಗೆ ಬರುವವರು ಈ ದೇವಸ್ಥಾನಕ್ಕೆ ಭೇಟಿ ನೀಡಲು ಮರೆಯುವುದಿಲ್ಲ.

ಊರೊಳಗೆ, ವೀರಪ್ಪನ್‍ನಿಂದ ಹತರಾಗುವ ಮುನ್ನ ಅರಣ್ಯಾಧಿಕಾರಿ ಶ್ರೀನಿವಾಸ್ ಸ್ವಂತ ಹಣದಿಂದ ನಿರ್ಮಿಸಿದ ಸುಂದರವಾದ ಮಾರಿಯಮ್ಮನ್ ದೇವಸ್ಥಾನವಿದ್ದು, ನಿತ್ಯವೂ ಪೂಜೆ ನಡೆಯುತ್ತದೆ. ದಕ್ಷ ಅಧಿಕಾರಿಯಾಗಿದ್ದ ಅವರು ಗೋಪಿನಾಥಂನಲ್ಲೇ ನೆಲೆಸಿ ಜನಪರ ಕೆಲಸಗಳನ್ನು ಮಾಡುತ್ತಾ ಗ್ರಾಮಸ್ಥರ ವಿಶ್ವಾಸ ಗಳಿಸಿದ್ದರು. ವೀರಪ್ಪನನ್ನು ಮನವೊಲಿಸಿ ಶರಣಾಗಿಸುವ ಪ್ರಯತ್ನ ಮಾಡಿದ್ದರು. ಜನರು ಈಗಲೂ ಅವರ ಗುಣಗಾನ ಮಾಡುತ್ತಾರೆ.

ಗೋಪಿನಾಥಂನಲ್ಲಿ ಪಾಳೆಯಗಾರರ ಕಾಲಕ್ಕೆ ಸೇರಿದ ಪ್ರಾಚೀನ ಕೋಟೆಯಿದೆ. ಇಟ್ಟಿಗೆಗಳಿಂದ ನಿರ್ಮಾಣವಾಗಿರುವ ಈ ಕೋಟೆ ಶಿಥಿಲಾವಸ್ಥೆಯಲ್ಲಿದ್ದರೂ ಊರಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ. ಕೋಟೆ ಸಂಪೂರ್ಣ ಅಳಿದು ಹೋಗುವ ಮುನ್ನ ಅದನ್ನು ರಕ್ಷಿಸಬೇಕಿದೆ. ಹೊಲಗದ್ದೆಗಳಲ್ಲಿ ಅಲ್ಲಲ್ಲೇ ಕಂಡು ಬರುವ ಹೆಂಚಿನ ಮನೆಗಳು, ಬಾಳೆ, ತೆಂಗು ಮತ್ತು ತಾಟಿಮರಗಳ ತೋಟಗಳು ಹಳ್ಳಿ ಪರಿಸರಕ್ಕೆ ಮೆರುಗು ನೀಡುತ್ತವೆ.

ಗೋಪಿನಾಥಂ ಭೇಟಿಗೆ ಪ್ರತ್ಯೇಕ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿಲ್ಲ. ಇದು ಮಲೆಮಹದೇಶ್ವರ ಬೆಟ್ಟದಿಂದ ಹೊಗೇನಕಲ್‍ಗೆ ಹೋಗುವ ಮಾರ್ಗದಲ್ಲಿದ್ದು, ಪ್ರವಾಸಿಗರು ಮಾರ್ಗದ ಮಧ್ಯೆ ಇಳಿದು ಇಲ್ಲಿ ಸುತ್ತಾಡಿ ಹೋಗಬಹುದು. ಕೊಳ್ಳೇಗಾಲದಿಂದ 105 ಕಿ.ಮೀ. ಹಾಗೂ ಮಲೆಮಹದೇಶ್ವರ ಬೆಟ್ಟದಿಂದ 35 ಕಿ.ಮೀ. ದೂರದಲ್ಲಿರುವ ಗೋಪಿನಾಥಂಗೆ, ಕರ್ನಾಟಕ ಸಾರಿಗೆ ಹಾಗೂ ಖಾಸಗಿ ಬಸ್‍ಗಳ ಸೌಲಭ್ಯವಿದೆ. ಬೆಂಗಳೂರಿನಿಂದ ನೇರ ಹೊಗೇನಕಲ್ ಬರುವವರಿಗೆ ಅಲ್ಲಿಂದ 13 ಕಿ.ಮೀ. ದೂರವಷ್ಟೆ.

ಬೇಸಿಗೆ ಹೊರತುಪಡಿಸಿ ಎಲ್ಲಾ ಕಾಲಗಳಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಕಾಡುಗಳ್ಳನ ವೀರಪ್ಪನ್‌ನ ಕರಾಳ ಹೆಜ್ಜೆ ಗುರುತುಗಳು ಗೋಪಿನಾಥಂನ ಇತಿಹಾಸದಲ್ಲಿ ಶಾಶ್ವತವಾಗುಳಿದು, ಅಲ್ಲಿ ಓಡಾಡುವ ಹೊತ್ತು ಪ್ರತಿ ಕ್ಷಣವೂ ಅವನ ನೆನಪುಗಳು ನಮ್ಮನ್ನು ಕಾಡದೆ ಬಿಡುವುದಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.