ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ

ಬುಧವಾರ, ಜೂನ್ 19, 2019
22 °C
ಕೆಡಿಪಿ ಪ್ರಗತಿ ಪರಿಶೀಲನಾ ಸಭೆ, ಅಧಿಕಾರಿಗಳಿಗೆ ಸಚಿವರು, ಶಾಸಕರ ತರಾಟೆ

ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ

Published:
Updated:
Prajavani

ಚಾಮರಾಜನಗರ: ಚುನಾವಣಾ ಅವಧಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಹಾಗೂ ಇತರ ಶಾಸಕರು ಅಧಿಕಾರಿಗಳ ವಿರುದ್ಧ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ‘ಐದಾರು ತಿಂಗಳಿನಿಂದ ಯಾವುದೇ ಕೆಲಸ ನಡೆದಿಲ್ಲ. ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಜನ ಪ್ರತಿನಿಧಿಗಳು ಏನೂ ಮಾಡುವ ಹಾಗಿರಲಿಲ್ಲ. ಕೆಲಸ ಮಾಡಲು ನಿಮಗೆಲ್ಲ ಏನಾಗಿತ್ತು’ ಎಂದು  ಪ್ರಶ್ನಿಸಿದರು.

ಹನೂರು ಶಾಸಕ ಆರ್‌.ನರೇಂದ್ರ ಕೂಡ ಇದೇ ಮಾತನ್ನು ಪುನರಾವರ್ತಿಸಿದರು. ‘ಅಧಿಕಾರಿಗಳಲ್ಲಿ ಯೋಜನೆಗಳ ಪ್ರಗತಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ.  ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಗೆ ಬಂದಿಲ್ಲ. ಯಾವ ಅಧಿಕಾರಿಗಳಿಗೂ ಉತ್ತರ ಕೊಡುವುದಕ್ಕೂ ಆಗುತ್ತಿಲ್ಲ. ಚುನಾವಣೆಯ ಅವಧಿಯ ಮೂರು ತಿಂಗಳಲ್ಲಿ ಯಾರು ಏನೂ ಕೆಲಸ ಮಾಡಿಲ್ಲ’ ಎಂದು ಅತೃಪ್ತಿ ಹೊರಹಾಕಿದರು.

ಹೊಣೆಗಾರರನ್ನಾಗಿ ಮಾಡಿ: ಕೊಳ್ಳೇಗಾಲ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ ಘಟಕಗಳು) ವಿಚಾರದಲ್ಲೂ ಜನಪ್ರತಿನಿಧಿಗಳು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕೊಳ್ಳೇಗಾಲದ ಮುಡಿಗುಂಡದಲ್ಲಿ ಎರಡು ಘಟಕಗಳು ಕಾರ್ಯನಿರ್ವಹಿಸಿರುವುದನ್ನು ಪ್ರಸ್ತಾಪಿಸಿದ ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌, ‘ನೀರಿನ ಘಟಕಗಳಿದ್ದರೂ ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ. ಕೊಳ್ಳೇಗಾಲ ಮಾತ್ರ ಅಲ್ಲ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಇದೇ ಸಮಸ್ಯೆ ಇದೆ. ಇದರ ಹೊಣೆ ಹೊರುವವರು ಯಾರೂ ಇಲ್ಲ. ಜನರು ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ’ ಎಂದರು.

ಮಧ್ಯಪ್ರವೇಶಿಸಿದ ಆರ್‌.ನರೇಂದ್ರ ಅವರು, ‘ನಾವು ಉದ್ಘಾಟನೆ ಮಾಡಿದ ಶುದ್ಧ ನೀರಿನ ಘಟಕಗಳಲ್ಲಿ ಶೇ 90ರಷ್ಟು ಕಾರ್ಯನಿರ್ವಹಿಸುತ್ತಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಅವರು ಮಾತನಾಡಿ, ‘ಜಿಲ್ಲೆಯಾದ್ಯಂತ ವಿವಿಧ ಸಂಸ್ಥೆಗಳ ಅಡಿಯಲ್ಲಿ 219 ಶುದ್ಧ ನೀರಿನ ಘಟಕಗಳು ಮಂಜೂರಾಗಿವೆ. ಈ ಪೈಕಿ 90 ಘಟಕಗಳು ಸ್ಥಾಪನೆಯಾಗಿ ಕಾರ್ಯಾರಂಭ ಮಾಡಲು ಬಾಕಿ ಇದೆ. ಕೆಲವು ಕಡೆಗಳಲ್ಲಿ ಸಮಸ್ಯೆ ಇರುವುದು ನಿಜ. ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲದರ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಎನ್‌.ಮಹೇಶ್‌ ಅವರು ಮಾತನಾಡಿ, ‘ಇದು ಅತ್ಯಂತ ಗಂಭೀರ ವಿಚಾರ. ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಹೊಣೆಗಾರರು ಯಾರು? ಯಾರು ಆಗದಿದ್ದರೆ, ಜಿಲ್ಲಾಧಿಕಾರಿ ಮತ್ತು ಸಿಇಒ ಅವರನ್ನೇ ಮಾಡಬೇಕಾಗುತ್ತದೆ. ಸಭೆಯಲ್ಲಿ ನಿರ್ಣಯ ಕೈಗೊಂಡು ನಿರ್ದಿಷ್ಟ ದಿನಗಳೊಳಗಾಗಿ ಎಲ್ಲ ಘಟಕಗಳನ್ನು ದುರಸ್ತಿ ಮಾಡಲು ಗಡುವು ನೀಡಬೇಕು’ ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ, ‘ಯಾವ ಇಲಾಖೆಯು ಘಟಕದ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದೆಯೋ ಅದುವೇ ದುರಸ್ತಿ ಮಾಡಬೇಕು. ದುರಸ್ತಿ ಮಾಡುವ ವೆಚ್ಚ ದುಬಾರಿಯಾಗುತ್ತದೆ ಎಂದಾದರೆ, ಹೊಸ ಘಟಕವನ್ನು ಸ್ಥಾಪನೆ ಮಾಡಬಹುದು’ ಎಂದರು.

ಅಂತಿಮವಾಗಿ ಜನಪ್ರತಿನಿಧಿಗಳೆಲ್ಲ ಚರ್ಚೆ ಮಾಡಿ, ಜೂನ್‌ 25ರಂದು ಶುದ್ಧ ನೀರಿನ ಘಟಕಕ್ಕೆ ಸಂಬಂಧಿಸಿದಂತೆಯೇ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿದರು. ಅದರ ಒಳಗೆ ಕಾರ್ಯನಿರ್ವಹಿಸದ ಘಟಕಗಳನ್ನು ದುರಸ್ತಿ ಮಾಡಬೇಕು. ದುರಸ್ತಿ ಆಗದ ಘಟಕಗಳ ಬಗ್ಗೆ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಕೆರೆ ತುಂಬಿಸುವ ಯೋಜನೆ ವಿಳಂಬಕ್ಕೆ ತರಾಟೆ: ಸುತ್ತೂರು ಏತ ಯೋಜನೆ ಮೂಲಕ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನ ವಿಳಂಬ ಆಗುತ್ತಿರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

2019ರ ಮಾರ್ಚ್‌ನಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ಇನ್ನೂ ಆಗಿಲ್ಲ. ಕೆಲವು ಕಡೆ ಪೈಪ್‌ಲೈನ್‌ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ನಿಮಗದ ಕಿರಿಯ ಎಂಜಿನಿಯರ್‌ ಮಹೇಶ್‌ ಅವರು, ‘ಪ್ರವಾಹ ಬಂದಿದ್ದರಿಂದ ಕೊಂಚ ವಿಳಂಬವಾಗಿದೆ. ಡಿಸೆಂಬರ್‌ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ’ ಎಂದು ಸಮಜಾಯಿಷಿ ನೀಡಿದರು. 

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ, ‘ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಯೋಜನೆ ಮುಗಿಸಲು ಕನಿಷ್ಠ ನವೆಂಬರ್‌ ವರೆಗೆ ಸಮಯ ಬೇಕು ಎಂದು ಹೇಳಿದ್ದಾರೆ’ ಎಂದರು.

ಗುಂಡ್ಲುಪೇಟೆಯ ರಾಘವಕೆರೆ ಏತ ಯೋಜನೆ ವಿಳಂಬವಾಗುತ್ತಿರುವುದರ ಬಗ್ಗೆಯೂ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. 

ಕುಡಿಯುವ ನೀರಿನ ಸಮಸ್ಯೆ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸುವಾಗ ಕೊಳ್ಳೇಗಾಲ ಬ್ಲಾಕ್‌ ಅನ್ನು ಪರಿಗಣಿಸದೇ ಇದ್ದುದಕ್ಕೆ ಶಾಸಕ ಎನ್‌.ಮಹೇಶ್‌ ಆಕ್ಷೇಪ ವ್ಯಕ್ತಪಡಿಸಿದರು. 

‘ನಮ್ಮ ಭಾಗದಲ್ಲಿ ಕುಂತೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ. ಯಾವ ವಿಧಾನದಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್ ಅವರನ್ನು ಪ್ರಶ್ನಿಸಿದರು.

‘ಸಮೀಕ್ಷೆ ಮಾಡಿಯೇ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ರವಿಕುಮಾರ್‌ ಹೇಳಿದರು. ಶಾಸಕರು ಇದನ್ನು ಒಪ್ಪಲಿಲ್ಲ. 

ಜಿಲ್ಲಾ ಪಂಚಾಯಿತಿ ಸಿಇಒ ಲತಾಕುಮಾರಿ ಅವರು ಮಾತನಾಡಿ, ‘ಬಾವಿ, ಕೊಳವೆಬಾವಿಗಳಲ್ಲಿರುವ ನೀರಿನ ಲಭ್ಯತೆಯನ್ನು ಪರಿಗಣಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಕನಿಷ್ಠ ಕುಡಿಯುವುದಕ್ಕೆ ತಕ್ಕಷ್ಟು ನೀರಿದ್ದ ಪ್ರದೇಶವನ್ನು ಕೈಬಿಡಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಕೆರೆಗೆ ನೀರು: ಸಚಿವ– ಶಾಸಕ ಜಟಾಪಟಿ

ಕೆರೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮತ್ತು ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರ ನಡುವೆ ಜಟಾಪಟಿ ನಡೆಯಿತು. 

ಉತ್ತೂರು ಕೆರೆಯಿಂದ ಏತ ಯೋಜನೆ ಮೂಲಕ ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಹಾಗೂ ಚಾಮರಾಜನಗರ ತಾಲ್ಲೂಕಿನ ಎರಡು ಕೆರೆಗಳಿಗೆ ನೀರು ತುಂಬಿಸುವ ವಿಚಾರ ಸಭೆಯಲ್ಲಿ ಪ್ರಸ್ತಾಪ ಆಯಿತು. 

ಗುಂಡ್ಲುಪೇಟೆ ತಾಲ್ಲೂಕಿನ ವಡ್ಡೆಗೆರೆ ಗ್ರಾಮದ ಕೆರೆಯಿಂದ ಚಾಮರಾಜನಗರ ತಾಲ್ಲೂಕಿನ ಸುವರ್ಣನಗರ ಕೆರೆ ಹಾಗೂ ಅಲ್ಲಿಂದ ಅರಕಲವಾಡಿ ಕೆರೆಗೆ ನೀರು ಹರಿಸಲು ಪೈಪ್‌ಲೈನ್‌ ಕಾಮಗಾರಿ ಆಗದಿರುವ ಬಗ್ಗೆ ಅಧಿಕಾರಿಗಳನ್ನು ಪುಟ್ಟರಂಗಶೆಟ್ಟಿ ಅವರು ಪ್ರಶ್ನಿಸಿದರು.

ಪೈಪ್‌ಲೈನ್‌ ಮೂಲಕವೇ ನೀರು ಹರಿಸಬೇಕು ಎಂದು ಯೋಜನೆಯಲ್ಲಿ ಹೇಳಿದೆ. ಇನ್ನೂ ಯಾಕೆ ಆರಂಭವಾಗಿಲ್ಲ ಎಂದರು.

ಮಧ್ಯಪ್ರವೇಶಿಸಿದ ನಿರಂಜನ್‌ ಕುಮಾರ್‌ ಅವರು, ‘ವಡ್ಡೆಗೆರೆ ಗ್ರಾಮದ ಕೆರೆವರೆಗೆ ಪೈಪ್‌ಲೈನ್‌ ಕಾಮಗಾರಿ ಮುಗಿದಿದೆ. ಅಲ್ಲಿಗೆ ನೀರು ಹರಿಸಬಹುದು. ಚಾಮರಾಜನಗರ ತಾಲ್ಲೂಕಿನ ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ಹರಿಸುವುದಕ್ಕೆ ಅವಕಾಶ ಇದೆ. ಅದನ್ನು ಮಾಡಬಹುದಲ್ಲವೇ’ ಎಂದು ಪ್ರಶ್ನಿಸಿದರು. 

ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಅದು ಸಾಧ್ಯವೇ ಇಲ್ಲ, ತೆರೆದ ಕಾಲುವೆ ಮೂಲಕ ನೀರು ಹರಿಸಿದರೆ ಜನರು ಕಾಲುವೆಯಿಂದ ತಮ್ಮ ಜಮೀನಿಗೆ ಹರಿಸುವ ಸಾಧ್ಯತೆ ಇದೆ. ಹೀಗಾದರೆ ಕೆರೆಗೆ ನೀರು ತುಂಬುವುದು ಹೇಗೆ? ಇದೇ ಉದ್ದೇಶಕ್ಕೆ ಪೈಪ್‌ಲೈನ್‌ ನಿರ್ಮಿಸಲು ಯೋಜಿಸಲಾಗಿತ್ತು’ ಎಂದರು.

‘ಗುಂಡ್ಲುಪೇಟೆಯ ಹಲವು ಕೆರೆಗಳಿಗೆ ತೆರೆದ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಅಲ್ಲಿ ಆಗಬಹುದು ಎಂದರೆ ಇಲ್ಲಿ ಯಾಗಾಬಾರದು ಎಂದು ಪ್ರಶ್ನಿಸಿದರು. ಕನಿಷ್ಠ ವಡ್ಡೆಗೆರೆ ಗ್ರಾಮದ ಕೆರೆಗಾದರೂ ನೀರು ಹರಿಸಿ’ ಎಂದು ನಿರಂಜನ್‌ ಕುಮಾರ್‌ ಒತ್ತಿ ಹೇಳಿದರು.

‘ಸುವರ್ಣನಗರ ಕೆರೆ ಮತ್ತು ಅರಕಲವಾಡಿ ಕೆರೆವರೆಗೆ ಪೈಪ್‌ಲೈನ್‌ ನಿರ್ಮಿಸುವವರೆಗೆ ನೀರು ಬಿಡಲು ಸಾಧ್ಯವೇ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಖಂಡತುಂಡವಾಗಿ ಹೇಳಿದರು.

ಮಧ್ಯಪ್ರವೇಶಿಸಿದ ಆರ್‌.ನರೇಂದ್ರ ಅವರು, ‘ಇಬ್ಬರ ಆಶಯವೂ ಕೆರೆಗಳಿಗೆ ನೀರು ತುಂಬಿಸುವುದು ಆಗಿದೆ. ಈ ಬಗ್ಗೆ ಬೇರೆ ವೇದಿಕೆಯಲ್ಲಿ ಚರ್ಚೆಯಾಗಲಿ. ನಮಗೆ ಅದರ ತಾಂತ್ರಿಕ ವಿವರಗಳು ಗೊತ್ತಿಲ್ಲ. ಅಧಿಕಾರಿಗಳಿಗೆ ಎಲ್ಲ ತಿಳಿದಿದೆ. ಯೋಜನೆಯ ಅನುಸಾರ ಕಾಮಗಾರಿ ನಡೆಯಲಿ’ ಎಂದು ಚರ್ಚೆಗೆ ಕೊನೆ ಹಾಡಿದರು.

ದೊಡ್ಡಾಣೆಗೆ ಕಚ್ಚಾರಸ್ತೆ: ಒಪ್ಪಿಗೆ

ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೊಡ್ಡಾಣೆ ಗ್ರಾಮದ ಜನರು ಎದುರಿಸುತ್ತಿರುವ ಕುಡಿಯುವ ನೀರು ಹಾಗೂ ಇನ್ನಿತರ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಯಿತು. 

‘ರಸ್ತೆ ಸರಿ ಇಲ್ಲದಿರುವುದರಿಂದ ಬೋರ್‌ವೆಲ್‌ ಯಂತ್ರ ಸೇರಿದಂತೆ ಯಾವುದೇ ವಾಹನಗಳು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯವರು ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರೆ ತಕ್ಷಣ ಅಲ್ಲಿನ ಸಮಸ್ಯೆ ಬಗೆಹರಿಸಬಹುದು. ರಸ್ತೆ ನಿರ್ಮಿಸಲು ಅನುಮತಿ ಕೊಡಬಹುದೇ’ ಎಂದು ಶಾಸಕ ಆರ್‌.ನರೇಂದ್ರ ಅವರು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ವಿ.ಏಡುಕುಂಡಲು ಅವರನ್ನು ಕೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್‌, ‘ಕಚ್ಚಾ ರಸ್ತೆ ನಿರ್ಮಿಸಬಹುದು. ಜಲ್ಲಿ ರಸ್ತೆ ಅಥವಾ ಟಾರು ರಸ್ತೆಯನ್ನು ನಿರ್ಮಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಕಚ್ಚಾ ರಸ್ತೆ ನಿರ್ಮಿಸಿ ಕೊಡುತ್ತೇವೆ’ ಎಂದರು.

‘ನೀವು ನಿರ್ಮಿಸುವುದು ಬೇಡ. ನಾವೇ‌ ನಿರ್ಮಿಸುತ್ತೇವೆ. ಅನುಮತಿ ನೀಡಿದರೆ ಸಾಕು. ಮಹದೇಶ್ವರ ಬೆಟ್ಟದ ಮೂಲಕ ದೊಡ್ಡಾಣೆಗೆ,  ಅಲ್ಲಿಂದ ಮಾರ್ಟಳ್ಳಿವರೆಗೆ ರಸ್ತೆ ನಿರ್ಮಿಸಿದರೆ ಮೂರ್ನಾಲ್ಕು ಹಳ್ಳಿಯವರಿಗೆ ಅನುಕೂಲವಾಗುತ್ತದೆ’ ಎಂದು ನರೇಂದ್ರ ಹೇಳಿದರು.

ನಮ್ಮ ಗ್ರಾಮ ನಮ್ಮ ರಸ್ತೆ ವಿಭಾಗದ ಎಂಜಿನಿಯರ್‌ ಮಾತನಾಡಿ, ‘14.9 ಕಿ.ಮೀ ರಸ್ತೆ ಜಲ್ಲಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಿದ್ದೇವೆ. ಇದಕ್ಕೆ ₹8.78 ಕೋಟಿ ವೆಚ್ಚವಾಗಲಿದೆ’ ಎಂದರು.

ಮಧ್ಯಪ್ರವೇಶಿಸಿದ ಏಡುಕುಂಡಲು, ‘ಜಲ್ಲಿ ರಸ್ತೆ ನಿರ್ಮಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಚ್ಚಾ ರಸ್ತೆ ಮಾತ್ರ ಸಾಧ್ಯವಿದೆ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ನರೇಂದ್ರ ಮಾತನಾಡಿ, ‘ನಮಗೆ ಕಚ್ಚಾ ರಸ್ತೆಯೇ ಸಾಕು. ನಾಳೆಯಿಂದಲೇ ಕೆಲಸ ಆರಂಭಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !