ಬುಧವಾರ, ಜೂನ್ 3, 2020
27 °C

ಮೋಡಗಳ ನಾಡಿನಲ್ಲಿ

ತಿಪಟೂರು ಎಸ್.ಲೀಲಾ Updated:

ಅಕ್ಷರ ಗಾತ್ರ : | |

Prajavani

ಮೇಘಾಲಯ ರಾಜ್ಯದ ‘ಶಿಲ್ಲಾಂಗ ಯೂತ್ ಹಾಸ್ಟೆಲ್’ ಚಾರಣ ಆಯೋಜಿಸಿದ್ದಾರೆ ಎಂದ ಕೂಡಲೇ, ಮನಸ್ಸು ಮೋಡಗಳ ನಾಡಿನಲ್ಲಿ ಚಾರಣಕ್ಕೆ ಹೊರಡಲು ಅಣಿಯಾಯಿತು. ‘ಭಾರತದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ. ನಿಸರ್ಗ ಸೌಂದರ್ಯದ ತವರು...’ ಹೀಗೆ ಆ ರಾಜ್ಯದ ಬಗ್ಗೆ ಏನೇನೋ ಕುತೂಹಲ ಕಾಡುತ್ತಿದ್ದ, ನನಗೆ ಈ ಚಾರಣ ಅತ್ಯಂತ ಖುಷಿಯ ಪಯಣವಾಗಿತ್ತು. ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಚಾರಣ ಮಾಡಿ ಅನುಭವಿದ್ದ ನನಗೆ, ಮಲೆಗಳ ನಾಡಿನ ಚಾರಣಕ್ಕೆ ಗೆಳತಿಯರೊಂದಿಗೆ ಹೊರಡಲು ಸಿದ್ಧಳಾದೆ.

ಬೆಂಗಳೂರಿನಿಂದ ವಿಮಾನದಲ್ಲಿ ಶಿಲ್ಲಾಂಗ್‌ ತಲುಪಿದೆ. ಅಲ್ಲಿಂದ ಯೂತ್ ಹಾಸ್ಟೆಲ್‌ಗೆ ಬಂದಾಗ ಸಂಜೆ 6 ಗಂಟೆ. ನೋಂದಣಿ ಪ್ರಕ್ರಿಯೆ ನಂತರ ಸ್ವಾಗತ ಸಮಾರಂಭ. ರಾಜ್ಯದ ವಿವಿಧ ಭಾಗಗಳಿಂದ ಬಂದ ಎಲ್ಲ ಚಾರಣಿಗರ ಪರಿಚಯವಾಯಿತು. ಒಟ್ಟು ನಾಲ್ಕು ದಿನಗಳ ಚಾರಣ.

ಮೊದಲ ದಿನ; ಗಮ್ಮತ್ತಿನ ನಡಿಗೆ

ಮಾವ್ಫಲಾಂಗ್ (Mawphlang) ನಿಂದ ಲೈತ್ರಯಂಗ್ವಿ (Laitrayngew) ಸುಮಾರು 16 ಕಿಲೋಮೀಟರ್ ದೂರದ ಚಾರಣ. ಡೇವಿಡ್ ಸ್ಕಾಟ್‍ಟ್ರೆಲ್ ಎಂಬ ದಾರಿ. ಈ ದಾರಿ ವಿಶ್ವಸಂಸ್ಥೆಯಿಂದ ಐತಿಹಾಸಿಕ ಪಥ ಎಂಬ ಹೆಸರು ಪಡೆದಿದೆ. ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ನದಿಗಳು, ಜಲಪಾತಗಳು, ಹುಲ್ಲುಗಾವಲುಗಳಿಂದ ತುಂಬಿದ ದಾರಿಯಲ್ಲಿ  ಬೆನ್ನಿಗಂಟಿಸಿಕೊಂಡ ಭಾರವಾದ ಚೀಲದೊಡನೆ ಎಚ್ಚರಿಕೆಯಿಂದ ಕಾಲಿಡುತ್ತಾ ಸಾಗುತ್ತಿದ್ದೆವು. ಸೂರ್ಯ ನೆತ್ತಿ ಸುಡುತ್ತಿದ್ದರೂ ನಿಸರ್ಗದ ಸೌಂದರ್ಯದ ನಡುವೆ, ಅದರ ಅರಿವೇ ಇರಲಿಲ್ಲ.

ಕಣಿವೆಗಳನ್ನು ದಾಟಿದರೆ, ಸೇತುವೆಗಳು ಸಿಗುತ್ತಿದ್ದವು. ಅವುಗಳನ್ನು ದಾಟುತ್ತಿದ್ದರೆ, ಹಚ್ಚ ಹಸಿರಿನ ಬೆಟ್ಟಗಳು ಎದುರಾ ಗುತ್ತಿದ್ದವು. ದಿನವಿಡೀ ಕಾಡಿನಲ್ಲಿ ಕಡಿದಾದ ಇಳಿಜಾರು. ಮತ್ತೆ ಕೆಲವು ಕಡೆ ಸಮತಟ್ಟಾದ ಪ್ರದೇಶ. ಎಲ್ಲಿ ನೋಡಿದರೂ ಹಸಿರುಮಯ. ಇಂಥ ಪ್ರದೇಶದಲ್ಲಿ ಮೊದಲನೇ ದಿನದ ಚಾರಣ ಅಂತ್ಯವಾದಾಗ ರಾತ್ರಿ ಸುಮಾರು 8 ಗಂಟೆ. ರಾತ್ರಿ ವಾಸ್ತವ್ಯಕ್ಕೆ ಒಂದು ಶಾಲೆಯಲ್ಲಿ ವ್ಯವಸ್ಥೆಯಾಗಿತ್ತು. ಯೂತ್ ಹಾಸ್ಟೆಲ್ ಸಿಬ್ಬಂದಿ ತಯಾರಿಸಿದ ಊಟ ಮಾಡಿ ಮಲಗಿದ್ದು ಮಾತ್ರ ಗೊತ್ತು; ಎಚ್ಚರವಾದಾಗ ಮುಂಜಾನೆ 3.30. ಇಲ್ಲಿ ಸೂರ್ಯೋದಯ ಬೆಳಿಗಿನ ಜಾವ 3.30ಕ್ಕೆ. ಆದರೆ, ಸೂರ್ಯಾಸ್ತ ಸುಮಾರು ಸಂಜೆ 4 ಗಂಟೆಗೆ.

ಎರಡನೇ ದಿನ; ಜಲಪಾತಗಳ ದರ್ಶನ

ಬೆಳಗಿನ ಉಪಹಾರದ ನಂತರ ಎರಡನೇ ದಿನದ ಚಾರಣಕ್ಕೆ ಸಿದ್ಧವಾದೆವು. ಈ ದಿನ ಲೈತ್ರಯಂಗ್ವಿದಿಂದ ಶೋರಾ ಎಂಬಲ್ಲಿವರೆಗೆ ಸುಮಾರು 14 ಕಿ.ಮೀ ದೂರದ ಚಾರಣ. ಮೂರ್ನಾಲ್ಕು ಜಲಪಾತಗಳು ಕಾಣುತ್ತವೆ(Lyngksaiar falls, dainthlen falls, weisawdong falls) ಎಂದು, ಅವುಗಳ ಹೆಸರನ್ನು ಹೇಳಿದ ಲಕ್ಕಿ. ಆದರೆ, ಹೆಸರು ಉಚ್ಛರಿಸುವುದೇ ಕಷ್ಟವಾಗುತ್ತಿತ್ತು. ಮಳೆಗಾಲ ಮುಗಿದಿದ್ದರಿಂದ ಎಲ್ಲ ಜಲಪಾತಗಳು ಜೀವತುಂಬಿ ನಗುನಗುತ್ತಾ ನಮ್ಮನ್ನು ಸ್ವಾಗತಿಸಿದವು. ಬೆಟ್ಟದಿಂದ ಹರಿದು ಬರುವ ನೀರು ಕೊರೆದು ಕಣಿವೆಗಳನ್ನು ನಿರ್ಮಿಸಿ ಆಳಕ್ಕೆ ಬೀಳುತ್ತ ತಮ್ಮ ವೈಭವದ ದರ್ಶನ ಮಾಡಿಸುತ್ತಿದ್ದವು. ನೋಹಕಲಿಕಾಯ ಜಲಪಾತವು ವಿಶ್ವದಲ್ಲೇ ನಾಲ್ಕನೇ ಎತ್ತರದ ಜಲಪಾತವೆಂದು ಹೆಸರಾಗಿದೆ. 1100 ಅಡಿ ಎತ್ತರದಿಂದ ಧುಮುಕುವ ಇದರ ರುದ್ರ ರಮಣೀಯ ಸೌಂದರ್ಯ ಬೆರಗುಗೊಳಿಸುತ್ತದೆ. ಕೆಲವು ಜಲಪಾತಗಳ ಸೌಂದರ್ಯ ಸವಿಯಲು ಕಡಿದಾದ ಮೆಟ್ಟಲುಗಳಲ್ಲಿ, ಇಳಿಜಾರು ಜಾಗಗಳಲ್ಲಿ ಮರದ ಬೇರು ಬಿಳಲುಗಳನ್ನು ಹಿಡಿದು ಸಾಗಬೇಕು.

ದಟ್ಟ ಅಡವಿಯ ಮಧ್ಯ ನೀರಿನ ಅಬ್ಬರದ ಶಬ್ದ ಬಿಟ್ಟರೆ, ಬೇರೇನು ಕೇಳಿಸದು. ಜಲಪಾತವನ್ನು ವೀಕ್ಷಿಸುತ್ತಾ ಕುಳಿತ ನಮಗೆ, ಸಮಯ ಹೋದದ್ದೇ ತಿಳಿಯಲಿಲ್ಲ. ‘ಲಕ್ಕಿ’ ಬಂದು ಉಳಿದ ಚಾರಣದ ದಾರಿ ದೂರವಿದೆ ಎಂದಾಗ ಮನಸಿಲ್ಲದ ಮನಸಿನಿಂದ ಮುಂದಿನ ಜಲಪಾತದ ಕಡೆಗೆ ನಡೆಯತೊಡಗಿದೆವು. ಎರಡನೇ ದಿನದ ಚಾರಣ ಮುಗಿದಾಗ ಸಂಜೆ 6.30. ಆದರೆ ಅಲ್ಲಿ ರಾತ್ರಿಯಾಗಿತ್ತು. ಉಳಿದುಕೊಳ್ಳಲು ಡಾನ್‍ಬಾಸ್ಕೊ ಕ್ರೈಸ್ತ ಮಂದಿರದಲ್ಲಿ ವ್ಯವಸ್ಥೆಯಾಗಿತ್ತು.

ಮೂರನೇ ದಿನ; ಲಿವಿಂಗ್ ಸೇತುವೆ

ಮೂರನೇ ದಿನದ ಚಾರಣ ‘ಸೋಹ್ರಾ ಇಂದ ಟೈರ್ನಾ’ ವರೆಗೆ ಸುಮಾರು 16 ಕಿ.ಮೀ ದೂರದ್ದು. ಕಡಿದಾದ ದಾರಿ, ಇಳಿಜಾರು ಪ್ರದೇಶ, ಇಡೀ ಚಾರಣದಲ್ಲಿ ಮೂರನೇ ದಿನದ ಚಾರಣ ಬಹಳ ಕಷ್ಟಕರ. ಕಾಡು ಮೇಡುಗಳಲ್ಲಿ ನಿರ್ಮಿಸಿದ ಮೆಟ್ಟಿಲುಗಳನ್ನು ಹತ್ತಿ ಇಳಿದು ಸಾಗಬೇಕು.

ಸೂರ್ಯನ ಬೆಳಕು ಒಳಗೆ ನುಸುಳುವಷ್ಟು ದಟ್ಟ ಅರಣ್ಯ, ಜಲಪಾತಗಳು, ಲಿವಿಂಗ್ ರೋಟ್ ಸೇತುವೆಗಳಿದ್ದವು. ಆಲದ ಮರದ ಬೇರುಗಳನ್ನು ನೂರಾರು ವರ್ಷಗಳಿಂದ ಬಗ್ಗಿಸಿ, ಸೇರಿಸಿ ಸೇತುವೆಯ ಆಕಾರಕ್ಕೆ ತರಲಾಗಿರುತ್ತದೆ. ಈ ಜೀವಂತ ಸೇತುವೆಯ ಮೇಲೆ ನಡೆದಾಡಬಹುದು. ಸೇತುವೆಯ ಎದುರು ಜಲಪಾತ, ಕೆಳಭಾಗದಲ್ಲಿ ಹರಿಯುವ ನೀರು ನೋಡುತ್ತಾ ನಿಂತ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಮತ್ತೆ ‘ಲಕ್ಕಿ’ ಇನ್ನೂ ಮುಂದೆ ಮೂರು ಸಾವಿರ ಮೆಟ್ಟಿಲುಗಳಿ‌ವೆ ಎಂದು ಎಚ್ಚರಿಸಿದಾಗ ಸಂಜೆ 4 ಗಂಟೆ. ಆಗಲೇ ಸೂರ್ಯ ಮುಳುಗುವ ಹೊತ್ತು. ಟಾರ್ಚ್ ಬೆಳಕಿನಲ್ಲಿ ದಟ್ಟ ಕಾಡಿನಲ್ಲಿ ಟೈರ್ನಾ ಎಂಬ ಹಳ್ಳಿಯನ್ನು ತಲುಪಿದಾಗ ರಾತ್ರಿ 9 ಗಂಟೆ. ಎಲ್ಲರೂ ಆಯಾಸಗೊಂಡಿದ್ದರಿಂದ ಬಹಳ ಬೇಗ ನಿದ್ರೆಗೆ ಜಾರಿದೆವು.

ನಾಲ್ಕನೇ ದಿನ; ಗುಹೆಗಳ ದರ್ಶನ

ಚಾರಣದ ಕೊನೆಯ ದಿನ ಟೈರ್ನಾದಿಂದ ಮಾವ್ಸ್‌ಮಾಯ್‌ ಕೇವ್‌ವರೆಗೆ ಸುಮಾರು 10 ಕಿ.ಮೀ ಚಾರಣ. ವಿಶ್ವ ವಿಖ್ಯಾತ ಗುಹೆಗಳನ್ನು ಈ ಚಾರಣದಲ್ಲಿ ನೋಡಿದವು. ಒಂದಕ್ಕಿಂತ ಒಂದು ವಿಸ್ಮಯವಾದ ಗುಹೆಗಳು. ಈ ಗುಹೆಗಳು ಸುಣ್ಣದ ಕಲ್ಲು, ಮರಳುಗಲ್ಲುಗಳಿಂದ ನಿರ್ಮಿತವಾಗಿವೆ. ಬೆಟ್ಟಗಳ ಕಣಿವೆಯಲ್ಲಿ ಚಿತ್ರ ವಿಚಿತ್ರ ಆಕಾರದ ಗುಹೆಗಳಿವೆ. ಇವು ಕ್ಯಾಲಮೈಟ್ ಸುಣ್ಣದ ಕಲ್ಲುಗಳಿಂದ ಕಟ್ಟಿದ್ದಾರೆ. ಕೆಲವು ಗುಹೆಗಳ ಒಳಗೆ ಹೋಗುವುದಂತೂ ಸಾಹಸದ ಕೆಲಸ. ಮತ್ತೊಂದು ಗುಹೆ ವಿಶಾಲವಾದ ಚಾವಣಿ ಹೊಂದಿದ್ದು, ಗುಹೆಯ ಒಳಭಾಗದಲ್ಲಿ ಸಮುದ್ರ ಜೀವಿಗಳ ಪಳೆಯುಳಿಕೆಗಳು ಕಂಡವು. ಭಯಂಕರ, ವಿಚಿತ್ರ ಅನುಭವವನ್ನು ನೀಡುವ ಈ ಚಾರಣ ಎಲ್ಲರ ಮನಸ್ಸನ್ನು ಸೂರೆಗೊಂಡಿತ್ತು.

ಈ ಚಾರಣದ ಕೇಂದ್ರಬಿಂದು ಎಂದರೆ ಲಕ್ಕಿ ಮತ್ತು ‘ಸ್ಪಾಟ್‍ಲ್ಯಾಂಡ್’ ಎಂಬ ಉತ್ಸಾಹಿ ಮಾರ್ಗದರ್ಶಕರು. ಇಡೀ ಚಾರಣಿಗರಿಗೆ ಉತ್ಸಾಹ ತುಂಬುವುದರ ಜೊತೆಗೆ ಮಾರ್ಗದರ್ಶನ ನೀಡಿದರು. ನಾಲ್ಕೂ ದಿನಗಳ ಚಾರಣ ಮುಗಿದ ನಂತರ ಭಾರವಾದ ಮನಸ್ಸಿನಿಂದ ಮೋಡಗಳ ನಾಡಿಗೆ ವಿದಾಯ ಹೇಳಿ ಸವಿ ನೆನಪುಗಳೊಂದಿಗೆ ಸ್ನೇಹಿತರನ್ನು ಬೀಳ್ಕೊಟ್ಟು ಹಿಂತಿರುಗಿದೆವು.

 ಹೋಗುವುದು ಹೇಗೆ?

ರಾಜಧಾನಿ ಶಿಲ್ಲಾಂಗ್ ಅನ್ನು ಭಾರತದ ಸ್ಕಾಟ್‌ಲೆಂಡ್‌ ಎನ್ನುತ್ತಾರೆ. ಅಲ್ಲಿ ಅತಿಯಾದ ಚಳಿಯೂ ಇಲ್ಲ, ಸುರಿಯುವ ಮಂಜೂ ಇಲ್ಲ. ಹವಾ ನಿಯಂತ್ರಿತ ವಾತಾವರಣವಿರುವ ರಾಜ್ಯ.

ಮಾರ್ಚ್ ಮತ್ತು ಏಪ್ರಿಲ್‍ಗಳಲ್ಲಿ ಆಹ್ಲಾದಕರ ವಾತಾವರಣ. ಉಷ್ಣತೆ ಕನಿಷ್ಠ 28 ಡಿಗ್ರಿ, ಗರಿಷ್ಠ 34 ಡಿಗ್ರಿ. ಮೇ ಅಂತ್ಯದಲ್ಲಿ ಪ್ರಾರಂಭವಾಗುವ ಮಳೆ ಅಕ್ಟೋಬರ್‌ವರೆಗೆ ಇರುತ್ತದೆ.

ಯೂತ್‌ಹಾಸ್ಟೆಲ್ ಅಸೋಸಿಯೇಷನ್ ಸದಸ್ಯರಾಗಿದ್ದರೆ, ಇಲ್ಲಿ ಆಯೋಜಿಸುವ ಚಾರಣಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಆ ಸಮಯದಲ್ಲಿ ಹೆಸರು ನೋಂದಾಯಿಸಿಕೊಂಡು, ಚಾರಣಕ್ಕೆ ತೆರಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.