ಮಂಗಳವಾರ, ಮಾರ್ಚ್ 2, 2021
26 °C
ಕಾಕಡ ಕೊಂಚ ದುಬಾರಿ, ದ್ರಾಕ್ಷಿ, ಸಪೋಟಾ ಇಳಿಕೆ, ಮೊಟ್ಟೆ ಬೆಲೆ ಏರಿಕೆ

ಧಾರಣೆ ಏರಿಳಿತ, ಗ್ರಾಹಕರಿಗೆ ಇಲ್ಲ ಹೊಡೆತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹೊಸ ವಾರಾರಂಭದಲ್ಲಿ ತರಕಾರಿ, ಹೂವು, ಹಣ್ಣು ಮತ್ತು ಮಾಂಸದ ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಳಿತವಾಗಿದೆ. ಗ್ರಾಹಕರಿಗೆ ಹೊರೆಯಾಗುವಷ್ಟು ದರ ಯಾವ ವಸ್ತುವಿಗೂ ಇಲ್ಲ.

ದಿಢೀರ್‌ ಕುಸಿತ ಕಂಡಿದ್ದ ಟೊಮೆಟೊ ಬೆಲೆ ಮೇಲೇರಿಲ್ಲ, ಕೆಜಿ ಬೀನ್ಸ್‌ ₹20ರಷ್ಟು ತುಟ್ಟಿಯಾಗಿದೆ. ಬಹುತೇಕ ಎಲ್ಲ ಹೂವುಗಳ ಬೆಲೆ ಯಥಾಸ್ಥಿಯಲ್ಲಿದ್ದರೆ, ಕಾಕಡದ ಧಾರಣೆ ₹80ರಿಂದ ₹130ರಷ್ಟು ಏರಿಕೆಯಾಗಿದೆ. ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆ, ಜಿಲೇಬಿ ಮೀನು ತುಟ್ಟಿಯಾದರೆ, ಪಾಪ್ಲೆಟ್‌ ಮೀನು ಕೊಂಚ ಅಗ್ಗವಾಗಿದೆ. ಹಣ್ಣುಗಳ ಮಾರುಕಟ್ಟೆಯಲ್ಲಿ ದ್ರಾಕ್ಷಿ, ಸಪೋಟಾಗಳ ಬೆಲೆಯಲ್ಲಿ  ಇಳಿಕೆಯಾಗಿದೆ.

ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್‌ ಬಿಟ್ಟರೆ ಬೇರೆ ಕಾಯಿಪಲ್ಲೆಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಹಾಪ್‌ಕಾಮ್ಸ್‌ ಸೇರಿದಂತೆ ವಿವಿಧ ಕಡೆಗಳಲ್ಲಿ ಸೋಮವಾರ ₹1 ಕೆಜಿ ಬೀನ್ಸ್‌ಗೆ ₹40ರಿಂದ ₹50 ರಷ್ಟಿತ್ತು. ಹೋದ ವಾರ ₹30 ಇತ್ತು. ಕಳೆದವಾರ ಏಕಾಏಕಿ ಅರ್ಧದಷ್ಟು ಕುಸಿತ ಕಂಡಿದ್ದ ಟೊಮೆಟೊ ಬೆಲೆ ಚೇತರಿಸಿಕೊಂಡಿಲ್ಲ. ಕೆಜಿಗೆ ₹8ರಿಂದ ₹10 ಬಿಕರಿಯಾಗುತ್ತಿದೆ. ಈರುಳ್ಳಿ ಕೂಡ ₹10–₹15 ನಡುವೆ ಮಾರಾಟ ಆಗುತ್ತಿವೆ. ಕ್ಯಾರೆಟ್‌, ಮೂಲಂಗಿ, ಸೌತೆಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ದರವೂ ಕೈಗೆಟುಕುವಂತಿದೆ. ತೆಂಗಿನಕಾಯಿ ದರ (ಒಂದರ) ₹5 ಹೆಚ್ಚಾಗಿದೆ.

ಹೂವುಗಳ ಮಾರುಕಟ್ಟೆಯಲ್ಲಿ ಕಾಕಡ ದುಬಾರಿಯಾಗಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೋದವಾರ ಒಂದು ಕೆಜಿ ಕಾಕಡಕ್ಕೆ ₹120–₹160ರೆವರೆಗೆ ದರ ಇತ್ತು. ಈ ವಾರ ₹200–₹250ರೆವರೆಗೆ ಇದೆ. 

ಶುಭ ಸಮಾರಂಭಗಳು ಹೆಚ್ಚು ಹೆಚ್ಚು ನಡೆಯುತ್ತಿರುವುದರಿಂದ ಕಾಕಡ ಹಾಗೂ ಇತರ ಹೂವುಗಳಿಗೆ ಬೇಡಿಕೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು. ಚೆಂಡು ಹೂವು, ಕನಕಾಂಬರ, ಸೇವಂತಿಗೆ, ಗುಲಾಬಿ ಸೇರಿದಂತೆ ಬೇರೆ ಯಾವ ಹೂವುಗಳ ಬೆಲೆಯಲ್ಲೂ ವ್ಯತ್ಯಾಸ ಆಗಿಲ್ಲ.

ಹಣ್ಣುಗಳ ಪೈಕಿ ದ್ರಾಕ್ಷಿ ಹಾಗೂ ಸಪೋಟಾದ ಬೆಲೆ ಇಳಿಕೆ ಕಂಡಿದೆ.  ಕಳೆದ ವಾರ ಕೆಜಿಗೆ ₹100–₹120ರಷ್ಟಿದ್ದ ದ್ರಾಕ್ಷಿ ಈ ವಾರ ₹80ರಿಂದ ₹100ಕ್ಕೆ ಮಾರಾಟವಾಗುತ್ತಿದೆ. ಸಪೋಟಾದ ಬೆಲೆ ₹60ರಿಂದ ₹40ಕ್ಕೆ ಇಳಿದಿದೆ. ಬಿಸಿಲಿನ ಆಯಾಸ ನೀಗಿಸುವ ಕಲ್ಲಂಗಡಿ ಬೆಲೆಯಲ್ಲಿ ₹5 ಹೆಚ್ಚಳ ಕಂಡಿದೆ.

ಮೊಟ್ಟೆ ದುಬಾರಿ, ಚಿಕನ್‌–ಮಟನ್‌ ಯಥಾಸ್ಥಿತಿ

ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ. 100 ಮೊಟ್ಟೆಗೆ ₹456 ಇದೆ. ಕಳೆದ ವಾರ ₹435 ಇತ್ತು. ಚಿಕನ್‌ ಹಾಗೂ ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮೀನುಗಳ ಪೈಕಿ ಪಾಪ್ಲೆಟ್‌ ಬೆಲೆ ₹50ರಷ್ಟು ಇಳಿಕೆಯಾಗಿದ್ದರೆ ಜಿಲೇಬಿ ಬೆಲೆ ₹50ರಷ್ಟು ಹೆಚ್ಚಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು