‘ಮೀ ಟೂ’ ಸುತ್ತಮುತ್ತ...

7

‘ಮೀ ಟೂ’ ಸುತ್ತಮುತ್ತ...

Published:
Updated:

ಚಿತ್ರರಂಗವೇ ‘ಕಾಮನೆಗಳ ಮಾರುಕಟ್ಟೆ’. ಜಗತ್ತಿನಾದ್ಯಂತ ಸಿನಿಮಾಗಳ ಮೂಲದ್ರವ್ಯವೇ ಪ್ರೇಮ- ಕಾಮ. ಇಲ್ಲಿ ಕಲಾವಿದರ ದೇಹವೇ ಅವರ ಮಾಧ್ಯಮ. ಹೆಣ್ಣಿನ ಅಂಗಾಂಗ, ಸೌಂದರ್ಯ ಮತ್ತು ಒನಪು ಒಯ್ಯಾರಗಳು ಇಲ್ಲಿ ಬಿಕರಿಗಿಟ್ಟ ಸರಕುಗಳು. ಸುಂದರಿಯರು ಹಾಗೂ ಸುಂದರಾಂಗರ ಮೂಲಕ ಪ್ರೇಕ್ಷಕರ ಕನಸುಗಳನ್ನು ಕೆರಳಿಸಿ, ಹುಚ್ಚೆಬ್ಬಿಸಿ, ಶೃಂಗಾರ ರಸದಲ್ಲಿ ಮೀಯಿಸಿ, ಮಾಯಾಲೋಕವನ್ನು ಸೃಷ್ಟಿಸುವುದೇ ಚಿತ್ರದ ಯಶಸ್ಸಿನ ಸೂತ್ರ. ಇದರ ಜೊತೆಗೆ ಚಿತ್ರನಿರ್ಮಿತಿಯ ಲೋಕದ ಸ್ವರೂಪವೇ ಬೇರೆ. ಹೊರಜಗತ್ತಿನ ನಿಯಮಗಳಿಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ತಮ್ಮದೇ ಶೂಟಿಂಗಿನ ದ್ವೀಪ ಸೃಷ್ಟಿಸಿಕೊಳ್ಳುವ ಚಿತ್ರಕರ್ಮಿಗಳು ನಿತ್ಯ ವಿಚಿತ್ರ ಅಭದ್ರತೆ, ಒತ್ತಡಗಳಲ್ಲಿ ಕೆಲಸ ಮಾಡುತ್ತಾರೆ. ಹೂಡಿದ ಕೋಟ್ಯಂತರ ಬಂಡವಾಳದ ಒತ್ತಡ, ನಿರ್ದೇಶಕನಾದವನು ನೂರು ಮಂದಿ ಕಟ್ಟಿಕೊಂಡು ಗದ್ದಲದ ನಡುವೆಯೇ ಸೃಷ್ಟಿಸಿಕೊಳ್ಳಬೇಕಾದ ಸೃಜನಶೀಲ ಏಕಾಂತದ ಒತ್ತಡ, ಅತ್ತ ಕಲಾವಿದರು ಹೆಜ್ಜೆ ಹೆಜ್ಜೆಗೂ ಸೈ ಅನಿಸಿಕೊಳ್ಳಬೇಕಾದ ಒತ್ತಡ... ಶೂಟಿಂಗ್ ಪರಿಸರದ ಈ ವಿಲಕ್ಷಣ ಕ್ಷೋಭೆಯನ್ನು ಪಿ. ಲಂಕೇಶರು ಸೊಗಸಾಗಿ ಹಿಡಿದಿಡುತ್ತಾರೆ (ತಮ್ಮ ಆತ್ಮಕಥನ ‘ಹುಳಿಮಾವಿನ ಮರ’ದಲ್ಲಿ):

‘ಸಿನಿಮಾ ಮೂಲಭೂತವಾಗಿ ನೆರಳು, ಬೆಳಕು, ಕನಸು, ಭ್ರಮೆ, ವಾಸ್ತವಗಳಿಂದ ಕೂಡಿದ ಮಾಧ್ಯಮ. ಅದನ್ನು ಮಾಡುವುದು ನೆರಳು ಬೆಳಕನ್ನು ಬೆರೆಸಿ. ನೋಡುವುದು ಕತ್ತಲ ಕೋಣೆಯಲ್ಲಿ. ಆದರೆ ಸಿನಿಮಾ ಮಾಡುವಾಗ ಲೈಟಿನವರು, ಮೇಕಪ್‍ನವರು, ಕ್ಯಾಮೆರಾದವರು, ನಿರ್ದೇಶಕ, ಧ್ವನಿಮುದ್ರಣದವರು ಎಲ್ಲರೂ ಸಹಕರಿಸಿ, ಗೊತ್ತಾದ ಒಂದು ಕ್ಷಣದಲ್ಲಿ ಅದು ಅಪರೂಪದ ಕ್ಷಣ ಎಂಬಂತೆ- ಚಿತ್ರ ತೆಗೆಯಬೇಕಾಗುತ್ತದೆ. ಚಿತ್ರೀಕರಣವನ್ನು ನೋಡುವ ಪ್ರೇಕ್ಷಕರಿಗೆ ಇದೆಲ್ಲ ದೊಡ್ಡ ಗೋಜಲಾಗಿ ಕಾಣಿಸುವಷ್ಟೇ ಚಿತ್ರದಲ್ಲಿ ಭಾಗವಹಿಸುವವನಿಗೆ ಉಳಿವ ಅಥವಾ ಅಳಿವ ಕ್ಷಣ ಕೂಡ. ಇಲ್ಲಿ ಲೈಟಿನವರ, ರಿಫ್ಲೆಕ್ಟರ್‌ನವರ ಸಹನೆ ಮತ್ತು ಸಹಕಾರದಿಂದ ಕ್ಯಾಮೆರಾಮನ್ ಮತ್ತು ನಿರ್ದೇಶಕರ ಸಾಧನೆ ಸಾಧ್ಯವಾಗುತ್ತದೆ. ಇದರಿಂದಾಗಿ ನಟಿಸುವವರ ಮೇಲೆ ಭಯಂಕರ ಒತ್ತಡ ಇರುತ್ತದೆ. ನಟಿಸತೊಡಗಿದ ನಾಲ್ಕೈದು ದಿನದಲ್ಲಿ ಎಲ್ಲರೂ ಬೇರು ಕಿತ್ತ ಗಿಡಗಳಂತೆ, ಕೊನೆಯುಸಿರು ಎಳೆದುಕೊಳ್ಳುತ್ತಿರುವವರಂತೆ ಅಸಹಾಯಕರಾಗುತ್ತಾರೆ. ಪತಿಗೆ ನಿಷ್ಠಳಾಗಿರುವ, ಎಂದೂ ಪರಪುರುಷನ ಕಡೆ ನೋಡದಿರುವ ಹೆಂಗಸು ಕೂಡ ಧೈರ್ಯ ಕೊಡುವವನಿಗಾಗಿ, ಮನಸ್ಸಿಗೆ ಆಧಾರ ಒದಗಿಸಬಲ್ಲವನಿಗಾಗಿ ಹಂಬಲಿಸತೊಡಗುತ್ತಾಳೆ.

ಸಿನಿಮಾ ರಂಗದ ಪ್ರೇಮ, ವ್ಯಭಿಚಾರದ ಕತೆಗಳಿಗೆ ಆಧಾರ ಇಲ್ಲಿದೆ. ಲಾರೆನ್ಸ್ ಆಲಿವಿಯರ್‌ನನ್ನು ಪ್ರೀತಿಸಿ ಮದುವೆಯಾದ ವಿವಿಯನ್ ಲೈ ಎಂಬ ಅಪ್ಸರೆಯಂಥ ನಟಿಯು ಜಗತ್ತಿನ ಶ್ರೇಷ್ಠ ಪಾತ್ರ ಅಭಿನಯಿಸಿ ತನ್ನ ಅಭಿನಯ ಕಲೆಯ ಶಿಖರ ತಲುಪಲೆಂದು ಆಲಿವಿಯರ್ ತನ್ನ ಪ್ರಭಾವ ಬಳಸಿ ‘ಗಾನ್ ವಿತ್ ದಿ ವಿಂಡ್’ ಚಿತ್ರದ ನಾಯಕಿಯ ಪಾತ್ರ ಕೊಡಿಸಿದ. ವಿವಿಯನ್ ಲೈ ತಾನು ಬಯಸಿದ್ದೆಲ್ಲ ದೊರಕಿತೆಂದು ಹರ್ಷಗೊಂಡು ಅಭಿನಯಿಸತೊಡಗಿದಳು. ಆದರೆ ಮರ್ಲನ್ ಬ್ರಾಂಡೊ ಹೇಳಿದಂತೆ, ಈ ವಿವಿಯನ್ ಲೈ ನಟಿಸತೊಡಗಿದ ಕೆಲವೇ ದಿನಗಳಲ್ಲಿ ಆ ಚಿತ್ರದ ನಾಯಕನಿಂದ ಹಿಡಿದು ದೀಪದ ಹುಡುಗರವರೆಗೆ ಎಲ್ಲರೊಂದಿಗೆ ಮಲಗತೊಡಗಿದಳು. ಇದು ವಿಕಾರವೆನ್ನಿಸಬಹುದು. ಆದರೆ ಚಿತ್ರೀಕರಣದ ಬೆಳಕು, ಕ್ಯಾಮರಾ, ಒತ್ತಡ ಯಾವ ತರಹ ಇರುತ್ತದೆಂದರೆ ಇದು ಮನುಷ್ಯನ ಅಂತರಂಗಕ್ಕೆ ಲಗ್ಗೆ ಹಾಕಿ ಶಕ್ತಿಯನ್ನೆಲ್ಲ ಬಸಿಯುತ್ತದೆ. ಮನುಷ್ಯ ಬದುಕುವುದು ಭ್ರಮೆಗೋ, ವಾಸ್ತವಕ್ಕೋ ಎಂಬ ಪ್ರಶ್ನೆಗಳನ್ನೇ ಗೌಣಗೊಳಿಸಿಬಿಡುತ್ತದೆ. ಟ್ರೂಫೋ ಎಂಬ ಫ್ರೆಂಚ್ ನಿರ್ದೇಶಕ ಇದೇ ವಸ್ತುವನ್ನು ‘ಡೇ ಫಾರ್ ನೈಟ್’ ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಚಿತ್ರಿಸಿದ...’

ಲಂಕೇಶರು ಹೇಳದೆ ಉಳಿಸಿದ್ದನ್ನು ನಾವು ನಮ್ಮ ಚಿತ್ರೀಕರಣದ ಸೆಟ್‍ಗಳಿಗೆ ಭೇಟಿ ಕೊಟ್ಟು, ಕಂಡು ಅರಿಯಬಹುದು. ಭ್ರಮೆ ವಾಸ್ತವಗಳ ಗಡಿ ಗೆರೆಗಳು ಮಬ್ಬಾದ ಅಲ್ಲಿನ ವಾತಾವರಣದಲ್ಲಿ- ಮಡಿಕೇರಿಯ ದಟ್ಟ ಮಂಜಿನಂತೆ- ಮುಸುಕುವುದು ವಿಷಯಾಸಕ್ತಿ ಮಾತ್ರ! ಇನ್ನಾವ ಕ್ಷೇತ್ರದಲ್ಲೂ ಇಂಥ ಸ್ವಚ್ಛಂದ ಲೈಂಗಿಕ ಕಾಲಕ್ಷೇಪವನ್ನು ನೀವು ಕಾಣಲಾರಿರಿ... ಯಾವುದೇ ಶೂಟಿಂಗಿಗೆ ಹೋಗಿ ನೋಡಿ: ಅಲ್ಲಿನ ಕಲಾವಿದರು, ಲೈಟ್ ಬಾಯ್‍ಗಳು, ಪ್ರೊಡಕ್ಷನ್ ಸಿಬ್ಬಂದಿ- ಯಾವ ಗುಂಪಿಗೆ ಹೋಗಿ ನೋಡಿದರೂ ನೂರಕ್ಕೆ ಎಪ್ಪತ್ತೈದು ಭಾಗ ಪೋಲಿ ಜೋಕುಗಳು, ಲೈಂಗಿಕ ಹುರುಪಿನ ಮಾತುಗಾರಿಕೆಗಳೇ ತೇಲಾಡುತ್ತವೆ. ಗಂಡು ಸ್ಟಾರ್‌ಗಳಂತೂ ಹೆಣ್ಣು ಕಲಾವಿದರ ಕಡೆ ಜೊಲ್ಲುಭರಿತ ವಾರೆನೋಟ ಬೀರುತ್ತ ವಯಸ್ಕ ಜೋಕುಗಳನ್ನು ಹರಿಬಿಟ್ಟು ಅರ್ಜಿ ಗುಜರಾಯಿಸುತ್ತಾರೆ. ಅತ್ತ ಹೆಣ್ಣುಮಕ್ಕಳು ಮನಸ್ಸಿದ್ದರೂ, ಇಲ್ಲದಿದ್ದರೂ, ಮುಖದ ಮೇಲೆ ಅನಿವಾರ್ಯ ನಗು ತರಿಸಿಕೊಂಡು ತಮಾಷೆ ಆಸ್ವಾದಿಸುವಂತೆ ಅಭಿನಯಿಸುತ್ತಾರೆ. ಇನ್ನು ಸೆಟ್ ಮೇಲೆ ‘ನಿರ್ದೇಶಕನ ಆಣತಿಯ ಮೇರೆಗೇ’ ಹೀರೋ, ನಾಯಕಿಯನ್ನು ಮುಟ್ಟಿ ತಬ್ಬಿ ಲಲ್ಲೆಗರೆದು ದೇಹಕ್ಕೆ ದೇಹ ಬೆಸೆದು ಪ್ರಣಯದ ಚಿತ್ರಣಕ್ಕೆ ನೆರವಾಗುತ್ತಾನೆ.

ಇಂಥಲ್ಲಿ ಅಭಿನಯಕ್ಕೂ, ಬಲವಂತದ ಅತಿಕ್ರಮಣಕ್ಕೂ ಗೆರೆ ಎಳೆಯುವುದೆಲ್ಲಿ? ಅರ್ಜುನ್ ಸರ್ಜಾ ಈಗ ಮುಂದಿಟ್ಟಿರುವ ವಾದ ಸಹ ಇದೇ ತಾನೇ? ನಿರ್ದೇಶಕ ಹೇಳಿದಂತೆ ಅಭಿನಯಿಸಿದ್ದು ಬಿಟ್ಟರೆ, ತಾನು ಎಂದೂ ಗಡಿ ದಾಟಿಲ್ಲ ಎನ್ನುತ್ತಿದ್ದಾರೆ ಅರ್ಜುನ್.

ಈಗ ಶ್ರುತಿ ಹರಿಹರನ್ ಪ್ರಸಂಗದಲ್ಲಿ (ಮತ್ತು ಆ ಬಗೆಯ ಎಲ್ಲ ಪ್ರಕರಣಗಳಲ್ಲಿ) ‘ನಿಜವಾದ ನಿಜ’ ಅವರಿಬ್ಬರಿಗೆ ಮಾತ್ರ ಗೊತ್ತಿರಲು ಸಾಧ್ಯ. ಆದರೂ ಪ್ರಕರಣಕ್ಕೆ ಯಾವ ಬಗೆಯಲ್ಲೂ ಸಂಬಂಧಪಡದವರು ಅರ್ಜುನ್‍ರಂಥ ‘ದೊಡ್ಡ ತಾರೆ’ಯನ್ನು ಬೆಂಬಲಿಸುವುದು ತಮ್ಮ ಕರ್ತವ್ಯವೆಂದು ಮುನ್ನುಗ್ಗುತ್ತಾರೆ, ಮನಸ್ಸಿಗೆ ಬಂದಂತೆ ಸರ್ಟಿಫಿಕೇಟುಗಳನ್ನು ನೀಡುತ್ತಾರೆ! ಹಾಗೆ ಸರ್ಟಿಫಿಕೇಟ್ ಕೊಡುವ ಅರ್ಹತೆ ಅವರಿಗೆ ಹೇಗೆ ಬಂತು ಎಂದು ಯಾರೂ ಕೇಳುವಂತೆಯೂ ಇಲ್ಲ!

ಅತ್ತ ಚಲನಚಿತ್ರ ವಾಣಿಜ್ಯ ಮಂಡಳಿಯವರು ಈ ‘ವಿವಾದ’ ಬಗೆಹರಿಸಲು ‘ಸಂಧಾನ ಸಭೆ’ ಕರೆಯುತ್ತಾರೆ! ಸಂಧಾನವೇನು? ಇಬ್ಬರೂ ಬಾಯಿ ಮುಚ್ಚಿಕೊಂಡಿರಿ ಅಂತ ಒಪ್ಪಿಸುವುದು! ಏಕೈಕ ಹೆಣ್ಣು ಪ್ರತಿನಿಧಿಯೂ ಇಲ್ಲದ, ಬಹು ಪಾಲು ‘ಮೀ ಟೂ’ ವೀರರೇ ತುಂಬಿಕೊಂಡ ಆ ಸಂಧಾನಕಾರರು ಕೊಡಿಸಬಲ್ಲ ನ್ಯಾಯವಾದರೂ ಎಂಥದ್ದು? ಈಗೆರಡು ವರ್ಷಗಳ ಹಿಂದೆ ಕನ್ನಡದ ಇಬ್ಬರು ನಿರ್ದೇಶಕರು ರಾಜಾರೋಷಾಗಿ ತಮ್ಮ ಲೈಂಗಿಕ ಪರಾಕ್ರಮವನ್ನು ಗುಪ್ತ ಕ್ಯಾಮೆರಾ ಎದುರು ಕೊಚ್ಚಿಕೊಂಡಿದ್ದು ಚಾನಲ್‍ಗಳಲ್ಲಿ ಬಯಲಾಗಿತ್ತು. ‘ಉದ್ದಿಮೆಯ ಮಾನ ಕಾಪಾಡಬೇಕಾದ’ ಚೇಂಬರ್ ಮತ್ತು ಸಂಧಾನಕಾರರು ಆಗ ಎಲ್ಲಿ ಬಚ್ಚಿಟ್ಟುಕೊಂಡಿದ್ದರು?

ಇದು ಕನ್ನಡ ಸಿನಿಮಾ ಉದ್ದಿಮೆಯ ಬಿಕ್ಕಟ್ಟನ್ನು ಬಗೆಹರಿಸುವ ಪರಿ. ಇದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಸಿನಿಮಾ ಮಂದಿಗೆ ಇದು ಬಿಕ್ಕಟ್ಟೇ ಅಲ್ಲ...! ಲೈಂಗಿಕ ಕಟಾಕ್ಷವೆಂಬುದು ತಮ್ಮ ತಾರಾಪಟ್ಟಕ್ಕೆ ಸಲ್ಲಬೇಕಾದ ನ್ಯಾಯಬದ್ಧ ಸವಲತ್ತು ಎಂದೇ ಬಹುತೇಕ ಗಂಡು ಸ್ಟಾರ್‌ಗಳು ನಿಶ್ಚಯಿಸಿಕೊಂಡಿರುವ ‘ಪೌರುಷಮಯ’ ವ್ಯವಸ್ಥೆಯಿದು.

ಅದು ಹೇಗೇ ಆದರೂ, ಈಗಿನಂಥ ಕಗ್ಗಂಟುಗಳಿಗೆ ಮೂಲತಃ ಮನುಷ್ಯ ಸಮಾಜದಲ್ಲಿ ಗಂಡು ಹೆಣ್ಣಿನ ಸ್ಥಾನಮಾನದ ತಾರತಮ್ಯವೇ ಮೂಲ ಎಂದು ಅರ್ಥವಾಗಬೇಕು. ಅದುವರೆಗೆ ಶ್ರುತಿ ಹರಿಹರನ್‌ ಪ್ರಕರಣದಲ್ಲಿ ನಮ್ಮ ಚಿತ್ರೋದ್ಯಮ ಹೊರಹಾಕಿದಂಥ ನಂಜಿನ ಪ್ರತಿಕ್ರಿಯೆಗಳಷ್ಟೇ ಬರಲು ಸಾಧ್ಯ.

‘ನಮಗೆ ಹೆಣ್ಣು ಎಷ್ಟಾದರೂ ಭೋಗದ ವಸ್ತು. ಎಲ್ಲ ಕಾವ್ಯ, ಎಲ್ಲ ಚಿತ್ರಕಲೆ, ಶಿಲ್ಪಕಲೆ, ನಗ್ನ ವೀನಸ್... ಯಾವುದನ್ನೇ ತೆಗೆದುಕೊಳ್ಳಿ- ಹೆಣ್ಣು, ನಮಗೆ- ಗಂಡಸರಿಗೆ- ಸುಖದ ಸಾಧನ ಮಾತ್ರ. ಇದನ್ನು ನೇರಾನೇರವಾಗಿಯಾದರೂ ಹೇಳುತ್ತಾರಾ? ಅದೂ ಇಲ್ಲ. ನಮ್ಮ ಶೂರಾಧಿಶೂರರು ಹೆಣ್ಣಿನ ಮುಂದೆ ಮಂಡಿಯೂರಿ ಕೂತು ‘ನಾವು ಹೆಣ್ಣನ್ನು ಆರಾಧಿಸುತ್ತೇವೆ’ ಅನ್ನಬೇಕು. ಈಗೀಗ ನಾವು ಹೆಣ್ಣನ್ನು ಗೌರವಿಸುತ್ತೇವೆ ಅನ್ನುವವರೂ ಇದ್ದಾರೆ. ಕೆಲವರು ತಾವು ಕೂತಿದ್ದ ಜಾಗ ಬಿಟ್ಟು ಕೊಡುತ್ತಾರೆ, ಕರ್ಚೀಫು ಎತ್ತಿಕೊಡುತ್ತಾರೆ, ಅವಳನ್ನು ಗೌರವದ ಹುದ್ದೆಗಳಲ್ಲಿ ಕೂರಿಸುತ್ತಾರೆ. ಅಷ್ಟಾದರೂ ನಮ್ಮ ಕಣ್ಣಿಗೆ ಅವಳು ಭೋಗದ ವಸ್ತು. ಅವಳ ದೇಹ ನಮ್ಮ ಸುಖದ ನಿತ್ಯ ಸಾಧನ.

ಹೆಣ್ಣಿನ ಗುಲಾಮಗಿರಿಯ ಬೀಜವಿರುವುದೇ ಗಂಡಿನ ಈ ನಿಲುವಿನಲ್ಲಿ- ಹೆಣ್ಣಿರುವುದೇ ನಮ್ಮ ಸುಖಭೋಗಕ್ಕಾಗಿ ಅನ್ನುವ ಧೋರಣೆಯಲ್ಲಿ. ಇಲ್ಲಿ ಸ್ತ್ರೀ ವಿಮೋಚನೆಯ ಮಾತಾಡುವವರೂ ಇದ್ದಾರೆ. ಅವರು ಹೆಣ್ಣಿಗೆ ಸ್ವಾತಂತ್ರ್ಯ ಕೊಡುತ್ತಾರೆ, ಗಂಡಿಗೆ ಸಮಾನವಾದ ಹಕ್ಕುಗಳನ್ನೂ ಕೊಡುತ್ತಾರೆ. ವಿಶ್ವವಿದ್ಯಾಲಯಗಳಲ್ಲಿ, ಕೋರ್ಟು ಕಚೇರಿಗಳಲ್ಲಿ ಹೆಣ್ಣಿಗೆ ಸ್ಥಾನಮಾನ ಕೊಡುತ್ತಾರೆ. ಆದರೂ ಅವಳ ದೇಹ ಗಂಡಿನ ಸುಖಭೋಗಕ್ಕೇ ಮೀಸಲು ಎಂದೇ ಮುಂದುವರೆಯುತ್ತಾರೆ. ಮಾತ್ರವಲ್ಲ, ಅವಳ ತಲೆಗೂ ಅದನ್ನೇ ತುಂಬುತ್ತಾರೆ.

ಸಮಾಜದ ಎದೆ ಬಗೆದು ನೋಡಬಲ್ಲ ದ್ರಷ್ಟಾರ- ಆಧುನಿಕ ಸಾಹಿತ್ಯದ ದಾರ್ಶನಿಕ ಲೇಖಕ ಟಾಲ್‍ಸ್ಟಾಯ್ ತನ್ನ ಕತೆಯೊಂದರಲ್ಲಿ ನೀಡುವ ಚಿತ್ರಣವಿದು. ಆತ ಬರೆಯುವುದು- ‘ಈ ವಸ್ತುಸ್ಥಿತಿಯನ್ನು ಸ್ಕೂಲು ಕಾಲೇಜುಗಳು ಬದಲಿಸಲಾರವು. ಏನಿದ್ದರೂ ಹೆಣ್ಣನ್ನು ಗಂಡು ಕಾಣುವ; ಮತ್ತು ಹೆಣ್ಣು ಸ್ವತಃ ತನ್ನನ್ನು ನೋಡಿಕೊಳ್ಳುವ ದೃಷ್ಟಿ ಬದಲಾದರೆ ಮಾತ್ರ ಏನಾದರೂ ಪರಿವರ್ತನೆ ಕಂಡೀತು. ಇಲ್ಲದಿದ್ದರೆ ಸಾಧ್ಯವಾದಷ್ಟು ಮಂದಿ ಗಂಡಸರನ್ನು ಆಕರ್ಷಿಸುವುದೇ ಪ್ರತಿಯೊಬ್ಬ ಹೆಣ್ಣಿನ ಆದರ್ಶವಾಗುತ್ತದೆ. ಯಾರೋ ಒಬ್ಬಳಿಗೆ ಗಣಿತ ಚೆನ್ನಾಗಿ ಗೊತ್ತು, ಇನ್ನೊಬ್ಬಳು ಸಂಗೀತ ವಾದ್ಯ ನುಡಿಸಬಲ್ಲಳು ಅನ್ನುವುದರಿಂದ ಏನೂ ವ್ಯತ್ಯಾಸವಿಲ್ಲ...

ಗಂಡಸಿನಂತೆ ತನಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲ ಎಂಬುದು ಹೆಣ್ಣಿಗೂ ಗೊತ್ತು. ಹೆಣ್ಣು ಮತ ಚಲಾಯಿಸಬಹುದೋ ಇಲ್ಲವೋ, ನ್ಯಾಯಾಧೀಶ ಹುದ್ದೆಗೇರಬಹುದೋ ಇಲ್ಲವೋ ಅನ್ನುವುದರಲ್ಲಿಲ್ಲ ಅವಳ ಸ್ವಾತಂತ್ರ್ಯದ ಪ್ರಶ್ನೆ. ಮುಖ್ಯ- ಸಂಭೋಗದ ಆಯ್ಕೆಗಳಲ್ಲಿ ಅವಳಿಗೆ ಗಂಡಸಿಗೆ ಸರಿಸಮಾನವಾದ ಸ್ಥಾನ- ಸ್ವಾತಂತ್ರ್ಯಗಳಿಲ್ಲ. ಅಂದರೆ ಗಂಡಿಗಿರುವ ಆಯ್ಕೆ- ನಿರಾಕರಣೆಗಳ ಹಕ್ಕು ಅವಳಿಗಿಲ್ಲ. ಗಂಡು ಆರಿಸಿಕೊಳ್ಳುವಂತೆ ಅವಳು ತನ್ನ ಹಾಸಿಗೆ ಸಂಗಾತಿಯನ್ನು ಆರಿಸಿಕೊಳ್ಳಲಾರಳು ಅಥವಾ ತಿರಸ್ಕರಿಸಲಾರಳು. ಅವಳಿಗೆ ಈ ಆಯ್ಕೆಗಳಿಲ್ಲ ಅಂದ ಮೇಲೆ ಗಂಡಿಗೂ ಇರಬಾರದು. ಆದರೆ ಹಾಗಾಗಿಲ್ಲವಲ್ಲ?’

ಟಾಲ್‍ಸ್ಟಾಯ್ ಸುಮಾರು ನೂರಾ ಇಪ್ಪತ್ತು ವರ್ಷಗಳ ಹಿಂದೆ ಬಣ್ಣಿಸಿದ ಈ ಸ್ಥಿತಿ ಇಂದಿಗೂ ಬದಲಾಗಿಲ್ಲ. ಎಂದು ಬದಲಾಗುವುದೋ ದೇವರೇ ಬಲ್ಲ. ಯಾಕೆಂದರೆ ಶ್ರುತಿ ಹರಿಹರನ್ ದನಿ ಎತ್ತಿದ್ದಕ್ಕೆ ವ್ಯಗ್ರಗೊಂಡ ಕನ್ನಡದ ಬುದ್ಧಿವಂತ ನಿರ್ದೇಶಕನೊಬ್ಬ, ‘ಆಕೆಯೇನು ತಾನು ಪತಿವ್ರತೆ ಎಂದು ಸಾಧಿಸಿ ತೋರಿಸಲು ಹೊರಟಿದ್ದಾಳೆಯೇ?’ ಎಂಬ ಪ್ರಳಯಾಂತಕ ಪ್ರಶ್ನೆ ಮುಂದಿಟ್ಟ! ಪಾತಿವ್ರತ್ಯವೇ ಮೌಲ್ಯವೆಂದು ನಂಬಿಕೊಂಡ ಇಂಥವನ ಮುಂದೆ ಸ್ತ್ರೀ ಸ್ವಾತಂತ್ರ್ಯದ ಕಿನ್ನರಿ ನುಡಿಸಲು ಸಾಧ್ಯವೇ?

ತಾವು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಜಗತ್ತಿನ ಎಷ್ಟೋ ತಾರೆಯರು ವರ್ಷಗಳ ನಂತರ ಹೇಳಿಕೊಂಡಿದ್ದಾರೆ. ತಮಗೆ ಈಗ ನ್ಯಾಯ ಸಿಗಬಹುದು ಎಂದಲ್ಲ, ತಮ್ಮ ಧ್ವನಿ, ತಮ್ಮಂಥ ಅಸಂಖ್ಯ ಅಸಹಾಯಕರಿಗೆ ಎದ್ದು ನಿಲ್ಲುವ, ಮಾತಾಡುವ ಧೈರ್ಯವಾದರೂ ನೀಡಲಿ ಎಂಬ ಕಾರಣಕ್ಕೆ. ‘ಮೀ ಟೂ’ ಅಭಿಯಾನ ಅಮೆರಿಕದಿಂದ ಭಾರತಕ್ಕೆ ಬಂತು. ಹಿಂದಿ ಚಿತ್ರರಂಗದ ತನುಶ್ರೀ ದತ್ತ, ನಾನಾ ಪಾಟೇಕರ್ ವಿರುದ್ಧ ಬಾಯಿ ಬಿಟ್ಟರು. ಅದರಿಂದಲೇ ಶ್ರುತಿ ಹರಿಹರನ್‍ರಿಗೂ ದನಿಯೆತ್ತುವ ಧೈರ್ಯ ಬಂತು. ಅವರ ಪ್ರಕರಣ ಹೇಗೆ ಕೊನೆಗೊಳ್ಳುವುದೋ ಗೊತ್ತಿಲ್ಲ. ಆದರೆ ಅವರಿಂದ ಮತ್ತಷ್ಟು ಹೆಣ್ಣುಮಕ್ಕಳಿಗೆ ಬಾಯಿ ಬಂದರೆ ಅದೂ ಸಾಧನೆಯೇ.

ಕಡೆಯಲ್ಲಿ, ‘ಪಿಂಕ್’ ಎಂಬ ಮನೋಜ್ಞ ಹಿಂದಿ ಚಿತ್ರದಲ್ಲಿ ಲೈಂಗಿಕ ಅತಿಕ್ರಮಣಕ್ಕೆ ಒಳಗಾದ ಹೆಣ್ಣುಮಕ್ಕಳ ಪರ ವಕೀಲನ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ತನ್ನ ವಾದದ ಕೊನೆಯಲ್ಲಿ ಹೇಳುವ ಈ ಮಾತುಗಳು ಮನನಯೋಗ್ಯವಾಗಿವೆ: ‘No No your honour. NO ಎನ್ನುವುದು ಕೇವಲ ಒಂದು ಶಬ್ದವಲ್ಲ. ಅದೊಂದು ಸಂಪೂರ್ಣ ವಾಕ್ಯ. ಅದಕ್ಕೆ ಯಾವುದೇ ತರ್ಕ, ಸ್ಪಷ್ಟೀಕರಣ, ವಿವರಣೆ, ಅಥವಾ ವ್ಯಾಖ್ಯಾನದ ಅಗತ್ಯವಿಲ್ಲ. ‘ಬೇಡ’ ಎಂದರೆ ‘ಬೇಡ’ ಎಂದೇ ಅರ್ಥ. ನನ್ನ ಕಕ್ಷಿದಾರರು (ಅತಿಕ್ರಮಣಕ್ಕೆ ಒಳಗಾದ ಹೆಣ್ಣುಮಕ್ಕಳು) ‘NO’ ಎಂದರು. ‘NO ಎಂದರೆ No ಎಂದೇ ಅರ್ಥ’ ಎನ್ನುವುದು ಈ ಹುಡುಗರಿಗೆ (ಅತಿಕ್ರಮಣಕಾರರಿಗೆ) ಗೊತ್ತಾಗಬೇಕು. ಹುಡುಗಿ ಕೇವಲ ಪರಿಚಿತಳಿರಬಹುದು, ಸ್ನೇಹಿತೆಯೋ, ಗರ್ಲ್ ಫ್ರೆಂಡೋ ಆಗಿರಬಹುದು, ಅಥವಾ ಸೆಕ್ಸ್ ವರ್ಕರ್ ಆಗಿರಲಿ, ಇಲ್ಲವೇ ಸ್ವಂತ ಹೆಂಡತಿಯೇ ಆಗಿರಲಿ, No means no. no ಅಂದಾಗ ಯಾರೇ ಆದರೂ ಅಷ್ಟಕ್ಕೇ ನಿಲ್ಲಬೇಕು...’

‘ಮೀ ಟೂ’ ಅಭಿಯಾನ ಶಾಂತಗೊಳ್ಳಬೇಕಾದರೆ, ಈ ಮಾತುಗಳು ಗಂಡು ಕುಲದ ಎದೆಗಿಳಿಯಬೇಕು. 
ಲೇಖಕರು, ಚಿತ್ರ ನಿರ್ದೇಶಕರು

***
ಕಾರಣಾಂತರದಿಂದ ಈ ವಾರ ‘ಅವರವರ ಭಾವಕ್ಕೆ’ ಅಂಕಣ ಪ್ರಕಟವಾಗಿಲ್ಲ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !