ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ವೃತ್ತದ ಗಡಿಯಾರ ಗೋಪುರಕ್ಕೆ ಮರುಹುಟ್ಟು

Last Updated 7 ಮೇ 2014, 19:30 IST
ಅಕ್ಷರ ಗಾತ್ರ

ಹಿಂದಿನ ಕಾಲದಲ್ಲಿ ಎಲ್ಲರಿಗೂ ಹೊತ್ತು ಗೊತ್ತಾಗುತ್ತಿದ್ದದ್ದು ಸೂರ್ಯನ ನಡೆಯ ಮೇಲೆ. ಹೊಸ ಆವಿಷ್ಕಾರವಾಗಿದ್ದ ಗಡಿಯಾರಗಳು ಚಾಲ್ತಿಗೆ ಬಂದ ಬಳಿಕ ಅವು ಮೊದ ಮೊದಲು ದುಬಾರಿಯಾಗಿದ್ದವು. ಗೋಡೆ ಗಡಿಯಾರ, ಕೈಗಡಿಯಾರಗಳು ಬಂದ ಮೇಲೂ ಅದನ್ನು ಹೊಂದುವವರ ಸಂಖ್ಯೆ ಅಷ್ಟೇನೂ ಹೆಚ್ಚಾಗಿ ಇರಲಿಲ್ಲ. ಇದಕೆಂದೇ ಸಾರ್ವಜನಿಕರಿಗಾಗಿ ದೊಡ್ಡ ದೊಡ್ಡ ಊರುಗಳಲ್ಲಿ ಕ್ಲಾಕ್ ಟವರ್‌ಗಳು (ಗಡಿಯಾರ ಗೋಪುರಗಳು) ಮೇಲೆದ್ದವು.

ಬೆಂಗಳೂರನ್ನು ಬ್ರಿಟಿಷರು ಆಡಳಿತ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡ ನಂತರ ಕಟ್ಟಿದ ಬಹಳಷ್ಟು ಕಟ್ಟಡಗಳಲ್ಲಿ ಗಡಿಯಾರಗಳನ್ನು ಅಳವಡಿಸುವ ಪರಿಪಾಠವಿತ್ತು. ಶೈಕ್ಷಣಿಕ ಕೇಂದ್ರಗಳಲ್ಲಿ ಗಡಿಯಾರ ಗೋಪುರಗಳು ಕಾಯಂ ಆಗಿದ್ದವು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಅರಸರಾಗಿದ್ದ ಸಂದರ್ಭದಲ್ಲಿ ಹಲವಾರು ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಭದ್ರಾವತಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಿರ್ವಹಣೆಯಲ್ಲಿ ಕೊಂಚ ಏರುಪೇರು ಉಂಟಾದಾಗ ಅದನ್ನು ಸರಿಪಡಿಸುವಂತೆ ರಾಜರು ಅಪೇಕ್ಷಿಸಿದ್ದು, ಪ್ರಸಿದ್ಧ ಎಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ ಅವರಿಗೆ ಆ ಜವಾಬ್ದಾರಿ ವಹಿಸಲಾಯಿತು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ ವಿಶ್ವೇಶ್ವರಯ್ಯನವರಿಗೆ ಮಹಾರಾಜರು ನಗದು ಇನಾಮು ಕೊಟ್ಟರು.

ಆದರೆ ಸರ್.ಎಂ.ವಿ ಅವರು ಈ ಹಣದಿಂದ ವೃತ್ತಿ ಕೌಶಲವನ್ನು ಕಲಿಸುವ ಸಂಸ್ಥೆಯೊಂದನ್ನು ಆರಂಭಿಸಲು ಮಹಾರಾಜರಿಗೆ ಅಹವಾಲು ಸಲ್ಲಿಸಿದರು! ಇದರ ಫಲವಾಗಿಯೇ ಇಂದು ಬೆಂಗಳೂರು ಕೃಷ್ಣ ರಾಜೇಂದ್ರ ವೃತ್ತದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸಿಲ್ವರ್ ಜ್ಯುಬಿಲಿ ತಾಂತ್ರಿಕ ಮಹಾ ವಿದ್ಯಾಲಯ ಇರುವುದು. ಏಳೆಂಟು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಈ ಸಂಸ್ಥೆ ತಯಾರು ಮಾಡಿದೆ. ಈ ಶೈಕ್ಷಣಿಕ ಸಂಸ್ಥೆಗಾಗಿ ಬೃಹತ್ ಕಟ್ಟಡ ನಿರ್ಮಾಣಗೊಂಡಾಗ ಅದರಲ್ಲೊಂದು ಆಕರ್ಷಕ ಗಡಿಯಾರ ಗೋಪುರವೂ ಇತ್ತು. ೧೯೩೦ರ ದಶಕದಲ್ಲಿ ತಲೆಎತ್ತಿದ ಗೋಪುರದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗಡಿಯಾರಗಳಿದ್ದವು!

ಅಠಾರ ಕಚೇರಿ, ವಿಧಾನಸೌಧ, ರಾಜ ಭವನ, ನ್ಯೂ ಪಬ್ಲಿಕ್ ಆಫೀಸ್ ಕಚೇರಿಗಳಿಗೆ ಹೋಗುವರೆಲ್ಲರೂ ಈ ವೃತ್ತವನ್ನು ಹಾದು ಹೋಗಲೇಬೇಕು. ಹೀಗಾಗಿ ಇಲ್ಲಿನ ಗಡಿಯಾರ ಗೋಪುರದ ಪ್ರಯೋಜನ ಬಹಳಷ್ಟು ಮಂದಿಗೆ ಲಭಿಸುತ್ತಿತ್ತು. ವಿದ್ಯಾರ್ಥಿಗಳಿಗಂತೂ ಸಮಯದ ಎಷ್ಟೆಂದು ತಿಳಿಯುವುದು ತೀರಾ ಅಗತ್ಯವಾಗಿತ್ತು.

ಮಳೆ/ಗಾಳಿ ಬಿಸಿಲಿಗೆ ಮೈಯೊಡ್ಡಿ ನಿಂತು ನಿರಂತರವಾಗಿ ಸಮಯ ತೋರಿಸುತ್ತಿದ್ದ ಈ ಗಡಿಯಾರಗಳನ್ನು ವಿದೇಶದಿಂದ ತಯಾರಿಸಿ ತರಿಸಲಾಗಿತ್ತು. ಕೆ.ಆರ್.ವೃತ್ತದಂತೆ ಈ ಗಡಿಯಾರಗಳೂ ಅನೇಕ ಬಗೆಯ ಸ್ಥಿತ್ಯಂತರಗಳನ್ನು ಕಂಡವು. ಆರಂಭದಲ್ಲಿ ಸಣ್ಣಪುಟ್ಟ ರಿಪೇರಿ ಮಾಡುವ ನುರಿತ ಸಿಬ್ಬಂದಿ ಇದ್ದರು. ಬಹಳ ಹಳೆಯದಾಗಿರುವ ಈ ಗಡಿಯಾರಗಳು ಈಚಿನ ವರ್ಷಗಳಲ್ಲಿ ರಿಪೇರಿ ಮಾಡಲಾಗದಷ್ಟು ಕೆಟ್ಟುಹೋಗಿವೆ. ಜೊತೆಗೆ ಹಿಂದೆ ಈ ಗಡಿಯಾರಗಳಿಂದಲೇ ಸಮಯವನ್ನು ಗೊತ್ತುಮಾಡಿಕೊಂಡು ಹೋಗುವ ಜರೂರತ್ತು ಇರುವ ಜನರೂ ಈಗಿಲ್ಲ. ಈಗ ಕೈಗಡಿಯಾರ, ಮೊಬೈಲ್‌ಗಳಲ್ಲೂ ಸಮಯ ತಿಳಿದುಕೊಳ್ಳಬಹುದು. ಇದರತ್ತ ತಲೆಎತ್ತಿ ನೋಡುವ ಜನರು ಅಪರೂಪ. ಪಾರಂಪರಿಕವಾದ ಈ ಗಡಿಯಾರಗಳತ್ತ ಎಲ್ಲರೂ ಅವಜ್ಞೆ ತೋರಿದರು. ಆದರೆ ಹಿರಿಯ ರಂಗಭೂಮಿ ಕಲಾವಿದ ಆರ್. ಮಹದೇವಪ್ಪ ೨೦೦೭ರಿಂದ ಸಂಬಂಧಪಟ್ಟ ಇಲಾಖೆಗಳಿಗೆಲ್ಲಾ ಮನವಿ ಪತ್ರಗಳನ್ನು ಸಲ್ಲಿಸಲು ಪ್ರಾರಂಭಿಸಿ, ನಿರಂತರವಾಗಿ ಕಚೇರಿಗಳಿಗೆ ಅಲೆದಾಡಲು ಶುರುಮಾಡಿದರು.

ಹಿರಿಯ ನಾಗರಿಕರ ತಂಡವನ್ನು ರಚಿಸಿಕೊಂಡ ಮಹದೇವಪ್ಪ ಲೋಕೋಪಯೋಗಿ ಇಲಾಖೆಯ ಸೂಪರಿಂಟೆಂಡೆಂಡ್ ಕಚೇರಿಗೆ ಪ್ರತಿ ಎರಡು ದಿನಕ್ಕೊಮ್ಮೆ ಭೇಟಿ ಕೊಟ್ಟು ಕೆ.ಆರ್.ವೃತ್ತದ ಗಡಿಯಾರಗಳನ್ನು ದುರಸ್ತಿ ಮಾಡಲು ಒತ್ತಾಯಿಸಲಾರಂಭಿಸಿದಾಗ ಕೊನೆಗೂ ಸರ್ಕಾರ ಮಣಿಯಿತು. ಗಡಿಯಾರ ಗೋಪುರದ ದುರಸ್ತಿ ಕಾಮಗಾರಿ ಹಾಗೂ ನಾಲ್ಕು ಹೊಸ ಗಡಿಯಾರ ಅಳವಡಿಸಲು ಸರ್ಕಾರ ಒಪ್ಪಿಕೊಂಡಿದೆ. ಸುದೀರ್ಘ ಹೋರಾಟಕ್ಕೆ ಮಾನ್ಯತೆ ಸಿಕ್ಕಿದ್ದರೂ ನೀತಿ ಸಂಹಿತೆಯಿಂದ ಇಲ್ಲಿ ಹೊಸ ಗಡಿಯಾರಗಳನ್ನು ಕಾಣುವುದು ಕೊಂಚ ತಡವಾಗಿದೆ. ಈಗಂತೂ ಗಡಿಯಾರವೂ ಕಾಣದಷ್ಟು ಗಿಡಮರಗಳು ತುಂಬಿಹೋಗಿವೆ. ೧೯೩೮ರಲ್ಲಿ ಅಳವಡಿಸಲಾಗಿದ್ದ ಗಡಿಯಾರಗಳ ಜಾಗದಲ್ಲಿ ಸದ್ಯದಲ್ಲೆ ನವನವೀನ ಗಡಿಯಾರಗಳು ಕಾಣಿಸಿಕೊಳ್ಳಲಿವೆ.

ಇದ್ದರೂ ಇಲ್ಲದಂತಿದ್ದು ಬೃಹತ್ ಗಡಿಯಾರಗಳಿಗೆ ಮರುಜೀವ ಬರುವುದರ ಜೊತೆಗೆ ಮಹಾನಗರದ ಪಾರಂಪರಿಕ ಸ್ಥಳವೊಂದು ಸಾರ್ವಜನಿಕರ ಗಮನ ಸೆಳೆಯಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT